Abhishek Banerjee | ಟಿಎಂಸಿ ಸಂಸದ ಹಾಗೂ ಮಮತಾ ಬ್ಯಾನರ್ಜಿ ಸೋದರಳಿಯ ಅಭಿಷೇಕ್ ಬ್ಯಾನರ್ಜಿ 
ದೇಶ

ಅಭಿಷೇಕ್ ಬ್ಯಾನರ್ಜಿಗೆ ಬಿಜೆಪಿ ಹೊಸ ಶಾಕ್...43 ಆಸ್ತಿಗಳ ಪಟ್ಟಿ ರಿಲೀಸ್ ಮಾಡಿದ ಸಿಎಂ ಸುವೇಂದು ಪಡೆ; ಕಟ್ಟುಕಥೆ ಎಂದ ಟಿಎಂಸಿ | Abhishek Banerjee

ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್ (TMC) ನಡುವಿನ ರಾಜಕೀಯ ಸಮರ ತಾರಕಕ್ಕೇರಿದ್ದು, ಟಿಎಂಸಿ ಸಂಸದ ಹಾಗೂ ಮಮತಾ ಬ್ಯಾನರ್ಜಿ ಸೋದರಳಿಯ ಅಭಿಷೇಕ್ ಬ್ಯಾನರ್ಜಿ (Abhishek Banerjee) ಕುಟುಂಬಸ್ಥರು ಮತ್ತು ಸಹಚರರಿಗೆ ಜಂಟಿಯಾಗಿ ಸೇರಿದ್ದೆನ್ನಲಾದ 43 ಆಸ್ತಿಗಳ ಪಟ್ಟಿಯನ್ನು ಬಂಗಾಳ ಬಿಜೆಪಿ ಬಿಡುಗಡೆ ಮಾಡಿದೆ.
ಮುಖ್ಯಮಂತ್ರಿ ಸುವೇಂದು ಅಧಿಕಾರಿ ನೇತೃತ್ವದ ನೂತನ ಬಿಜೆಪಿ ಸರ್ಕಾರವು ಈ ಆಸ್ತಿಗಳ ಮಾಲೀಕತ್ವದ ವಿವರಗಳ ಬಗ್ಗೆ ಸಮಗ್ರ ತನಿಖೆ ನಡೆಸಲು ನಿರ್ದೇಶಿಸಿದೆ ಎಂದು ಮೂಲಗಳು ತಿಳಿಸಿವೆ. ಟಿಎಂಸಿ ನಿಯಂತ್ರಣದಲ್ಲಿರುವ ಕೋಲ್ಕತ್ತಾ ಮಹಾನಗರ ಪಾಲಿಕೆ ಅಭಿಷೇಕ್ ಬ್ಯಾನರ್ಜಿಗೆ ಸಂಬಂಧಿಸಿದ 17 ಆಸ್ತಿಗಳಿಗೆ ನೋಟಿಸ್ ಜಾರಿ ಮಾಡಿದ ಮರುದಿನವೇ ಬಿಜೆಪಿ ಈ ಪಟ್ಟಿಯನ್ನು ಬಿಡುಗಡೆಗೊಳಿಸಿದೆ.
ಕೋಲ್ಕತ್ತಾದ ಐಷಾರಾಮಿ ಪ್ರದೇಶಗಳಲ್ಲಿರುವ ಈ ಆಸ್ತಿಗಳ ಮಾಲೀಕರ ಮೊಬೈಲ್ ಸಂಖ್ಯೆಗಳನ್ನು ಸಹ ಪಟ್ಟಿಯಲ್ಲಿ ನೀಡಲಾಗಿದ್ದು, ಇವುಗಳನ್ನು ಪಾಲಿಕೆಯ ಡೇಟಾಬೇಸ್‌ನಿಂದಲೇ ಪಡೆಯಲಾಗಿದೆ ಎಂದು ಹೇಳಲಾಗುತ್ತಿದೆ.

ಸಾಯನಿ ಘೋಷ್ ಆಸ್ತಿ ವಿವಾದ: ಸಂಸದೆ ಕಡಕ್ ವಾರ್ನಿಂಗ್

ಬಿಜೆಪಿ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಸಾಯನಿ ಘೋಷ್ ಎಂಬುವವರ ಹೆಸರಿನಲ್ಲಿ ಜಂಟಿ ಮಾಲೀಕತ್ವದ ಆಸ್ತಿಯೊಂದು ಉಲ್ಲೇಖವಾಗಿದೆ. ಇದು ಜಾಧವ್‌ಪುರ ಲೋಕಸಭಾ ಕ್ಷೇತ್ರದ ಟಿಎಂಸಿ ಸಂಸದೆ ಸಾಯೋನಿ ಘೋಷ್ ಇರಬಹುದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ಆರಂಭವಾಗಿತ್ತು.
ಆದರೆ ಈ ವಿವಾದವನ್ನು ಆರಂಭದಲ್ಲೇ ಚಿವುಟಿ ಹಾಕಿರುವ ಸಂಸದೆ ಸಾಯೋನಿ ಘೋಷ್, ತಮಗೂ ಆ ಆಸ್ತಿಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅದು ಯಾರು ಎಂದು ನನಗೆ ಗೊತ್ತಿಲ್ಲ, ಆದರೆ ರಾಜಕೀಯದಿಂದ ಯಾವುದೇ ಅನಿರೀಕ್ಷಿತ ಲಾಭ ಗಳಿಸದ, ಸಾಮಾನ್ಯ ಹಿನ್ನೆಲೆಯಿಂದ ಬಂದ ಸಾಯೋನಿ ಘೋಷ್ ಖಂಡಿತಾ ನಾನಲ್ಲ. ಯಾವುದೇ ಆಧಾರವಿಲ್ಲದೆ ನನ್ನ ಹೆಸರಿಗೆ ಮಸಿ ಬಳಿಯಲು ಯತ್ನಿಸುತ್ತಿರುವವರು ತಕ್ಷಣ ನಿಲ್ಲಿಸಿ, ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಈ ಘೋಷ್ ಯಾರ ಬೆದರಿಕೆಗೂ ಬಗ್ಗಲ್ಲ ಎಂದು ಟ್ವೀಟ್ ಮಾಡಿದ್ದಾರೆ.

ಇದು ಬಿಜೆಪಿಯ ಸುಳ್ಳು ಕಟ್ಟುಕಥೆ ಎಂದು ಟಿಎಂಸಿ ತಿರುಗೇಟು

ಈ ಪಟ್ಟಿ ಸುಳ್ಳು, ಇದನ್ನು ಯಾರು ಕೂಡ ನಂಬಲು ಸಾಧ್ಯವಿಲ್ಲ ಎಂದಿರುವ ಟಿಎಂಸಿ, ಕನಿಷ್ಠ ಪತ್ರಿಕೋದ್ಯಮದ ನೈತಿಕತೆ ಇರುವ ಯಾರೇ ಆದರೂ ಆ ವಿಳಾಸಗಳಿಗೆ ಭೇಟಿ ನೀಡಿ ಅಥವಾ ಫೋನ್ ನಂಬರ್‌ಗಳಿಗೆ ಕರೆ ಮಾಡಿ ಸತ್ಯಾಸತ್ಯತೆಯನ್ನು ಪರಿಶೀಲಿಸಬಹುದು. ಕೇವಲ ಬಿಜೆಪಿ ನೀಡುವ ಸುಳ್ಳು ಕಥೆಗಳನ್ನು ಪ್ರಚಾರ ಮಾಡಬೇಡಿ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಮಾಜಿ ಟಿಎಂಸಿ ಸಂಸದ ಸಾಕೇತ್ ಗೋಖಲೆ ಮಾತನಾಡಿ, ಇದು ಕೇವಲ ವೆಬ್‌ಸೈಟ್‌ನಿಂದ ಹೆಸರುಗಳ ಆಧಾರದ ಮೇಲೆ ಹುಡುಕಲಾದ ತಪ್ಪು ಮಾಹಿತಿ. ಇಡೀ ಕೋಲ್ಕತ್ತಾದಲ್ಲಿ ಅಭಿಷೇಕ್ ಬ್ಯಾನರ್ಜಿ ಹೆಸರಿನ ಒಬ್ಬರೇ ವ್ಯಕ್ತಿ ಇದ್ದಾರೆಯೇ? ಎಂದು ಪ್ರಶ್ನಿಸಿದ್ದಾರೆ. 2024ರ ಲೋಕಸಭಾ ಚುನಾವಣೆಯ ಅಫಿಡವಿಟ್‌ನಲ್ಲಿ ಅಭಿಷೇಕ್ ಬ್ಯಾನರ್ಜಿ 2.3 ಕೋಟಿ ರೂಪಾಯಿ ಮೌಲ್ಯದ ಚರ ಆಸ್ತಿ, 36 ಲಕ್ಷ ರೂಪಾಯಿ ಸಾಲ ಹಾಗೂ 1.4 ಕೋಟಿ ರೂಪಾಯಿ ವಾರ್ಷಿಕ ಆದಾಯವನ್ನು ಘೋಷಿಸಿಕೊಂಡಿದ್ದರು ಎಂಬುದನ್ನು ಇಲ್ಲಿ ಗಮನಿಸಬೇಕು.

ಬೆನ್ನಿಗ ಬಿದ್ದ ಸುವೇಂದು; ಮನೆ ಕೆಡವಿದರೂ ಬಗ್ಗಲ್ಲ ಎಂದ ಅಭಿಷೇಕ್

ಅಭಿಷೇಕ್ ಬ್ಯಾನರ್ಜಿ ಅವರ ಲೀಪ್ಸ್ ಅಂಡ್ ಬೌಂಡ್ಸ್ ಕಂಪನಿ ಹೆಸರಿನಲ್ಲಿ 14 ಆಸ್ತಿಗಳು, ಅವರ ಸ್ವಂತ ಹೆಸರಿನಲ್ಲಿ 4 ಮತ್ತು ಅವರ ತಂದೆಯ ಹೆಸರಿನಲ್ಲಿ 6 ಆಸ್ತಿಗಳು ನೋಂದಣಿಯಾಗಿವೆ ಎಂದು ಮುಖ್ಯಮಂತ್ರಿ ಸುವೇಂದು ಅಧಿಕಾರಿ ಮಂಗಳವಾರ ಆರೋಪಿಸಿದ್ದರು. ಭ್ರಷ್ಟಾಚಾರದಲ್ಲಿ ತೊಡಗಿರುವ ಪ್ರತಿಯೊಬ್ಬರನ್ನೂ ಸರ್ಕಾರ ಜೈಲಿಗೆ ಕಳುಹಿಸಲಿದೆ ಎಂದು ಸಿಎಂ ಎಚ್ಚರಿಕೆ ನೀಡಿದ್ದರು.
ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಅಭಿಷೇಕ್ ಬ್ಯಾನರ್ಜಿ, ಅವರು ಏನು ಬೇಕಾದರೂ ಮಾಡಲಿ, ನನ್ನ ಮನೆಗೇ ನೋಟಿಸ್ ನೀಡಲಿ ಅಥವಾ ಅದನ್ನು ಧ್ವಂಸಗೊಳಿಸಲಿ. ನಾನು ಯಾವುದಕ್ಕೂ ತಲೆಬಾಗುವುದಿಲ್ಲ. ಏನೇ ಆದರೂ ಬಿಜೆಪಿಯ ವಿರುದ್ಧದ ನನ್ನ ಹೋರಾಟ ಮುಂದುವರಿಯುತ್ತದೆ ಎಂದು ಸವಾಲು ಹಾಕಿದ್ದಾರೆ. ಹರೀಶ್ ಮುಖರ್ಜಿ ರಸ್ತೆಯಲ್ಲಿರುವ ಅಭಿಷೇಕ್​ರ ಶಾಂತಿನಿಕೇತನ ನಿವಾಸ ಸೇರಿದಂತೆ 17 ಕಟ್ಟಡಗಳಲ್ಲಿ ಅನಧಿಕೃತ ನಿರ್ಮಾಣ ನಡೆದಿದೆ ಎಂದು ಆರೋಪಿಸಿ, 7 ದಿನಗಳ ಒಳಗೆ ಅವುಗಳನ್ನು ತೆರವುಗೊಳಿಸುವಂತೆ ಕೋಲ್ಕತ್ತಾ ಪಾಲಿಕೆ ಈಗಾಗಲೇ ನೋಟಿಸ್ ನೀಡಿದೆ.
ಹಿಂದಿನ ಮಮತಾ ಬ್ಯಾನರ್ಜಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಬೃಹತ್ ಪ್ರಮಾಣದ ಅಕ್ರಮಗಳ ಸುತ್ತ ಬಿಜೆಪಿ ಸರ್ಕಾರ ತನಿಖೆಯನ್ನು ತೀವ್ರಗೊಳಿಸುತ್ತಿರುವುದರಿಂದ ಬಂಗಾಳದ ರಾಜಕೀಯ ಹೈವೋಲ್ಟೇಜ್ ಕಣವಾಗಿ ಮಾರ್ಪಟ್ಟಿದೆ(ಏಜೆನ್ಸೀಸ್​).