ನವದೆಹಲಿ: ಬಿಜೆಪಿ ಸೇರ್ಪಡೆಗೊಂಡಿರುವ ರಾಘವ್ ಚಡ್ಡಾ ಸೇರಿ ಏಳು ಮಂದಿ ಆಪ್(AAP) ರಾಜ್ಯಸಭಾ ಸಂಸದರನ್ನು ಅನರ್ಹಗೊಳಿಸುವಂತೆ ಕೋರಿ ರಾಜ್ಯಸಭಾ ಸಭಾಪತಿಗೆ ಪಕ್ಷವು ಪತ್ರ ಬರೆಯಲಿದೆ ಎಂದು ಶನಿವಾರ(ಏ. 25) ಆಪ್ ನಾಯಕ ಸಂಜಯ್ ಸಿಂಗ್ ಹೇಳಿದ್ದಾರೆ.
ಈ ಕುರಿತು ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಅವರು, ಏಳು ಸಂಸದರು ಬಿಜೆಪಿಗೆ ಸೇರ್ಪಡೆಗೊಂಡ ಕ್ರಮ ಸಂಪೂರ್ಣವಾಗಿ ಸಂವಿಧಾನಬಾಹಿರ ಮತ್ತು ಕಾನೂನುಬಾಹಿರ ಎಂದು ಕರೆದಿದ್ದು, ಅವರನ್ನು ತಕ್ಷಣದಿಂದಲೇ ರಾಜ್ಯಸಭೆಯಿಂದ ಅನರ್ಹಗೊಳಿಸುವಂತೆ ಪತ್ರೆ ಬರೆಯಲಾಗುವುದು ಎಂದು ತಿಳಿಸಿದ್ದಾರೆ.
ಪಕ್ಷಾಂತರ ನಿಷೇಧ ಕಾನೂನು ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ಯಾವುದೇ ರೀತಿಯ ವಿಭಜನೆ ಅಥವಾ ಬಣವನ್ನು ಸೃಷ್ಟಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳುತ್ತದೆ. ಮೂರನೇ ಎರಡರಷ್ಟು ಬಹುಮತವಿದ್ದರೂ ಸಹ, ಅದಕ್ಕೆ ಯಾವುದೇ ಕಾನೂನು ಮಾನ್ಯತೆ ಇಲ್ಲ ಎಂದಿದ್ದಾರೆ.
ಒಂದು ವೇಳೆ ರಾಜ್ಯಸಭೆ ಅಥವಾ ಲೋಕಸಭೆಯಲ್ಲಿ ಮೂರನೇ ಎರಡರಷ್ಟು ಬಹುಮತವಿದ್ದರೂ, ಪಕ್ಷಾಂತರ ನಿಷೇಧ ಕಾನೂನು ಅಥವಾ ಸಂವಿಧಾನದ ಹತ್ತನೇ ವೇಳಾಪಟ್ಟಿ ಯಾವುದೇ ರೀತಿಯ ವಿಭಜನೆ, ಒಡೆದ ಬಣ ಅಥವಾ ಗುಂಪನ್ನು ಗುರುತಿಸುವುದಿಲ್ಲ ಎಂದು ಸಿಂಗ್ ಪ್ರತಿಪಾದಿಸಿದ್ದಾರೆ.
ಶುಕ್ರವಾರ(ಏ. 24) ಸುದ್ದಿಗೋಷ್ಠಿ ನಡೆಸಿದ್ದ ಸಂಸದ ರಾಘವ್ ಚಡ್ಡಾ, ಸಂವಿಧಾನದ ಪ್ರಕಾರ ಒಂದು ಪಕ್ಷದ ಒಟ್ಟು ಸಂಸದರಲ್ಲಿ ಮೂರನೇ ಎರಡರಷ್ಟು ಸಂಸದರು ಇನ್ನೊಂದು ಪಕ್ಷದೊಂದಿಗೆ ವಿಲೀನಗೊಳ್ಳಬಹುದು. ನಾನು, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್, ಹರ್ಭಜನ್ ಸಿಂಗ್, ರಾಜಿಂದರ್ ಗುಪ್ತಾ, ವಿಕ್ರಮ್ ಸಾಹ್ನಿ ಹಾಗೂ ಸ್ವಾತಿ ಮಲಿವಾಲ್ ಅವರು ಆಪ್ ತೊರೆದು ಬಿಜೆಪಿ ಸೇರಲಿದ್ದೇವೆ ಎಂದು ಘೋಷಣೆ ಮಾಡಿದ್ದರು. ಬಳಿಕ ಅದೇ ದಿನ ಸಂಜೆ ಬಿಜೆಪಿ ಸೇರ್ಪಡೆಗೊಂಡಿದ್ದರು (ಏಜೆನ್ಸೀಸ್).