ನವದೆಹಲಿ: ಇತ್ತೀಚೆಗೆ ಭಾರತೀಯ ಜನತಾ ಪಕ್ಷಕ್ಕೆ ಪಕ್ಷಾಂತರಗೊಂಡ ರಾಘವ್ ಚಡ್ಡಾ ಸೇರಿ 7 ಸದಸ್ಯರನ್ನು ರಾಜ್ಯಸಭೆಯಿಂದ ಅನರ್ಹಗೊಳಿಸುವಂತೆ ಕೋರಿ ಆಮ್ ಆದ್ಮಿ ಪಕ್ಷದ(AAP) ಹಿರಿಯ ನಾಯಕ ಮತ್ತು ಸಂಸದ ಸಂಜಯ್ ಸಿಂಗ್ ಭಾನುವಾರ(ಏ. 26) ರಾಜ್ಯಸಭಾ ಸಭಾಪತಿ ಸಿ.ಪಿ. ರಾಧಾಕೃಷ್ಣನ್ ಅವರಿಗೆ ದೂರು ನೀಡಿದ್ದಾರೆ.
ನಿರ್ದಿಷ್ಠ ಪಕ್ಷದಿಂದ ಆಯ್ಕೆಯಾಗಿ ಇನ್ನೊಂದು ಪಕ್ಷಕ್ಕೆ ಸೇರ್ಪಡೆಗೊಳ್ಳುವುದು ಸಂವಿಧಾನ ವಿರೋಧಿ ಕೃತ್ಯ. ಪ್ರಜಾಪ್ರಭುತ್ವದ ಮಾನದಂಡಗಳನ್ನು ಎತ್ತಿಹಿಡಿಯಲು ಏಳು ಮಂದಿಯ ಸದಸ್ಯತ್ವವನ್ನು ರದ್ದುಗೊಳಿಸುವಂತೆ ಎಎಪಿ ಒತ್ತಾಯಿಸಿದೆ.
ರಾಜ್ಯಸಭಾ ಸಭಾಪತಿಗೆ ದೂರು ನೀಡಿದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಸಂಜಯ್ ಸಿಂಗ್, ಏಳು ಸದಸ್ಯರ ಬಿಜೆಪಿ ಸೇರ್ಪಡೆಯೂ ಪಕ್ಷಾಂತರ ವಿರೋಧಿ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಈ ಪಕ್ಷಾಂತರ ವಿಶೇಷವಾಗಿ ಪಂಜಾಬ್‌ನಲ್ಲಿ ಜನರ ಜನಾದೇಶಕ್ಕೆ ದ್ರೋಹ ಬಗೆಯುತ್ತದೆ. ಈ ಸದಸ್ಯರು ನಿರ್ದಿಷ್ಟವಾಗಿ ಎಎಪಿ ಟಿಕೆಟ್‌ನಲ್ಲಿ ಆಯ್ಕೆಯಾಗಿದ್ದಾರೆ ಮತ್ತು ಬಿಜೆಪಿಗೆ ಹೋಗುವುದು ಸಂವಿಧಾನದ ವಿರುದ್ಧದ ಕೃತ್ಯವಾಗಿದೆ ಎಂದು ಬಣ್ಣಿಸಿದ್ದಾರೆ.
ಸಾಂವಿಧಾನಿಕ ನಿಬಂಧನೆಯು ಒಂದು ಪಕ್ಷದ ಮೂರನೇ ಎರಡರಷ್ಟು ಸಂಸದರು ಅನರ್ಹತೆಯನ್ನು ಎದುರಿಸದೆ ಮತ್ತೊಂದು ಪಕ್ಷದೊಂದಿಗ ವಿಲೀನಗೊಳ್ಳಲು ಅವಕಾಶ ನೀಡುತ್ತದೆ ಎಂಬ ರಾಘವ್ ಚಡ್ಡಾ ಅವರ ಹೇಳಿಕೆಯನ್ನು ತಿರಸ್ಕರಿಸಿರುವ ಸಂಜಯ್ ಸಿಂಗ್, ಹಿರಿಯ ವಕೀಲ ಕಪಿಲ್ ಸಿಬಲ್ ಮತ್ತು ಮಾಜಿ ಲೋಕಸಭಾ ಪ್ರಧಾನ ಕಾರ್ಯದರ್ಶಿ ಸೇರಿದಂತೆ ಸಾಂವಿಧಾನಿಕ ತಜ್ಞರೊಂದಿಗೆ ಪಕ್ಷವು ಸಮಾಲೋಚಿಸಿದೆ. ಅವರು ಕಾನೂನಿನ ಅಡಿಯಲ್ಲಿ ಅನರ್ಹತೆಗೆ ಗುರಿಯಾಗುತ್ತಾರೆ ಎಂದು ಹೇಳಿದ್ದಾರೆ.
ಶುಕ್ರವಾರ(ಏ. 24) ಎಎಪಿ ಸಂಸದರಾದ ರಾಘವ್ ಛಡ್ಡಾ, ಅಶೋಕ್ ಮಿತ್ತಲ್, ಸಂದೀಪ್ ಪಾಠಕ್, ಹರ್ಭಜನ್ ಸಿಂಗ್, ರಾಜೇಂದ್ರ ಗುಪ್ತಾ, ವಿಕ್ರಮ್ ಸಾಹ್ನಿ ಹಾಗೂ ಸ್ವಾತಿ ಮಲಿವಾಲ್ ಅವರು ಆಪ್ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿಯಲ್ಲಿ ಸೇರ್ಪಡೆಗೊಂಡರು. ಸಾಂವಿಧಾನಿಕ ನಿಬಂಧನೆಯು ಒಂದು ಪಕ್ಷದ ಮೂರನೇ ಎರಡರಷ್ಟು ಸಂಸದರು ಅನರ್ಹತೆಯನ್ನು ಎದುರಿಸದೆ ಮತ್ತೊಂದು ಪಕ್ಷದೊಂದಿಗ ವಿಲೀನಗೊಳ್ಳಲು ಅವಕಾಶ ನೀಡುತ್ತದೆ ಎಂದು ತಮ್ಮ ಪಕ್ಷಾಂತರವನ್ನು ರಾಘವ್ ಚಡ್ಡಾ ಸಮರ್ಥಿಸಿಕೊಂಡಿದ್ದರು (ಏಜೆನ್ಸೀಸ್).