AAP Crisis | ಸಂಸದ ರಾಘವ್ ಚಡ್ಡಾ ಮತ್ತು ತಂಡ
AAP Crisis: ಆಮ್ ಆದ್ಮಿ ಪಕ್ಷದ (ಆಪ್) ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ಗೆ ಒಂದು ಕಾಲದಲ್ಲಿ ನಿಷ್ಠೆಯ ಸಂಕೇತವಾಗಿ ಕಂಡ ಅದೇ ಕೈಗಳು, ಇಂದು ದ್ರೋಹದ ಸಂಕೇತ ಪರಿಣಮಿಸಿವೆ. 2024ರಲ್ಲಿ ಅಬಕಾರಿ ನೀತಿ ಪ್ರಕರಣದಲ್ಲಿ ಜಾಮೀನು ಪಡೆದು ಹೊರಬಂದ ಬಳಿಕ, ಕೇಜ್ರಿವಾಲ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಆ ಸಮಯದಲ್ಲಿ ಸಂಸದ ಅಶೋಕ್ ಮಿತ್ತಲ್ ಅವರು ಮಂಡಿ ಹೌಸ್ ಬಳಿಯ ತಮ್ಮ ಅಧಿಕೃತ ಬಂಗಲೆಯಾದ 5 ಫಿರೋಜ್‌ಶಾ ರಸ್ತೆಯಲ್ಲಿ ಕೇಜ್ರಿವಾಲ್ ಮತ್ತು ಅವರ ಕುಟುಂಬಕ್ಕೆ ಆತಿಥ್ಯ ನೀಡಿದ್ದರು. ಸುಮಾರು ಒಂದು ವರ್ಷಕ್ಕೂ ಹೆಚ್ಚು ಕಾಲ ಕೇಜ್ರಿವಾಲ್ ತಮ್ಮ ಸಹೋದ್ಯೋಗಿಯ ಮನೆಯಲ್ಲೇ ನೆಲೆಸಿದ್ದರು.
ಇಂದು ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿದ್ದು, ಬೆಳಿಗ್ಗೆ ಕೇಜ್ರಿವಾಲ್ ಮಿತ್ತಲ್ ಅವರ ಮನೆಯಿಂದ ಹೊರಬಂದು ಲೋಧಿ ಎಸ್ಟೇಟ್‌ನಲ್ಲಿರುವ ಕೇಂದ್ರ ಸರ್ಕಾರ ಹಂಚಿಕೆ ಮಾಡಿದ ಹೊಸ ಬಂಗಲೆಗೆ ಸ್ಥಳಾಂತರಗೊಂಡರು. ಕೇಜ್ರಿವಾಲ್ ಹೊಸ ಮನೆಗೆ ಹೋದ ಕೆಲವೇ ಗಂಟೆಗಳಲ್ಲಿ, ತಮಗೆ ಆಶ್ರಯ ನೀಡಿದ್ದ ಅಶೋಕ್ ಮಿತ್ತಲ್ ಅವರೇ ಬಿಜೆಪಿಗೆ ಸೇರ್ಪಡೆಯಾಗುವ ಮೂಲಕ ಕೇಜ್ರಿವಾಲ್ಗೆ ಬಿಗ್ ಶಾಕ್ ನೀಡಿದರು. ಮಿತ್ತಲ್ ಜೊತೆಗೆ ರಾಘವ್ ಛಡ್ಡಾ, ಸ್ವಾತಿ ಮಲಿವಾಲ್, ಹರ್ಭಜನ್ ಸಿಂಗ್, ಸಂದೀಪ್ ಪಾಠಕ್, ರಾಜಿಂದರ್ ಗುಪ್ತಾ ಮತ್ತು ವಿಕ್ರಮ್ ಸಾಹ್ನಿ ಕೂಡ ಎಎಪಿ ತೊರೆದು ಬಿಜೆಪಿ ಸೇರಿದರು.
ಬಂಡಾಯಕ್ಕೆ ಕಾರಣವಾದ ಬೆಳವಣಿಗೆಗಳು...
ಪಕ್ಷದೊಳಗೆ ಕಳೆದ ಕೆಲವು ತಿಂಗಳುಗಳಿಂದ ಉದ್ವಿಗ್ನತೆ ಮಡುಗಟ್ಟಿತ್ತು. ಏಪ್ರಿಲ್ 2 ರಂದು ರಾಘವ್ ಛಡ್ಡಾರನ್ನು ರಾಜ್ಯಸಭೆಯ ಉಪ ನಾಯಕನ ಸ್ಥಾನದಿಂದ ವಜಾಗೊಳಿಸಿ, ಅವರ ಬದಲಿಗೆ ಅಶೋಕ್ ಮಿತ್ತಲ್ರನ್ನು ನೇಮಿಸಿದಾಗಲೇ ಬಿರುಕು ಸ್ಪಷ್ಟವಾಗಿತ್ತು. ಪಕ್ಷವು ತನ್ನನ್ನು ಮೌನಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಛಡ್ಡಾ ಆಪ್ತರ ಬಳಿ ಅಳಲು ತೋಡಿಕೊಂಡಿದ್ದರು.
ರಾಘವ್ ಛಡ್ಡಾ ಒಬ್ಬಂಟಿಯಾಗಿ ರಾಜೀನಾಮೆ ನೀಡಿದ್ದರೆ ಪಕ್ಷಾಂತರ ವಿರೋಧಿ ಕಾನೂನಿನಡಿ ಸದಸ್ಯತ್ವ ಕಳೆದುಕೊಳ್ಳುತ್ತಿದ್ದರು. ಆದರೆ, ಮೂರನೇ ಎರಡರಷ್ಟು ಸದಸ್ಯರು ಒಟ್ಟಾಗಿ ವಿಲೀನಗೊಂಡ ಕಾರಣ ಅವರು ಅನರ್ಹತೆಯಿಂದ ಬಚಾವಾಗಿದ್ದಾರೆ. ಇನ್ನು ಸ್ವಾತಿ ಮಲಿವಾಲ್ ವಿಷಯದಲ್ಲಿ ಈ ಬೆಳವಣಿಗೆ ಅನಿರೀಕ್ಷಿತವೇನಲ್ಲ. 2024ರ ಮೇ ತಿಂಗಳಲ್ಲಿ ಕೇಜ್ರಿವಾಲ್ ನಿವಾಸದಲ್ಲೇ ನಡೆದ ಹಲ್ಲೆ ಆರೋಪದ ಬಳಿಕ ಆಪ್ನೊಂದಿಗೆ ಅವರ ಸಂಬಂಧ ಹದಗೆಟ್ಟಿತ್ತು.
ಕೇಜ್ರಿವಾಲ್ ಕೊನೆಯ ಪ್ರಯತ್ನ!..
ಈ ಬಿಕ್ಕಟ್ಟನ್ನು ತಡೆಯಲು ಅರವಿಂದ್ ಕೇಜ್ರಿವಾಲ್ ಅಂತಿಮ ಹಂತದ ಪ್ರಯತ್ನ ನಡೆಸಿದ್ದರು. ಪಕ್ಷದಲ್ಲಿ ಸಂತೋಷವಾಗಿಲ್ಲದಿದ್ದರೆ ಈಗಲೇ ರಾಜೀನಾಮೆ ನೀಡಿ, ಮುಂದಿನ ಅವಧಿಯಲ್ಲಿ ನಿಮಗೆ ಮತ್ತೆ ಟಿಕೆಟ್ ನೀಡಲಾಗುವುದು ಎಂಬ ಭರವಸೆಯನ್ನೂ ಸಂಸದರಿಗೆ ನೀಡಿದ್ದರು ಎನ್ನಲಾಗಿದೆ. ಈ ಬಗ್ಗೆ ಚರ್ಚಿಸಲು ಶುಕ್ರವಾರ ಸಂಜೆ ಸಂಸದರ ಸಭೆಯನ್ನು ಕರೆದಿದ್ದರು. ಆದರೆ, ಕೇಜ್ರಿವಾಲ್ ಸಭೆ ಆರಂಭಿಸುವ ಗಂಟೆಗಳ ಮೊದಲೇ ಸಂಸದರು ತಮ್ಮ ನಿರ್ಗಮನವನ್ನು ಅಧಿಕೃತವಾಗಿ ಘೋಷಿಸಿದ್ದರಿಂದ ಆ ಸಭೆ ನಡೆಯಲೇ ಇಲ್ಲ. ದೆಹಲಿ ರಾಜಕೀಯದಲ್ಲಿ ಇದೊಂದು ಅತ್ಯಂತ ಆಘಾತಕಾರಿ ಮತ್ತು ನಾಟಕೀಯ ಬೆಳವಣಿಗೆಯಾಗಿ ದಾಖಲಾಗಿದೆ(ಏಜೆನ್ಸೀಸ್).