Raghav Chadha | ಎಎಪಿ ಸಂಸದ ರಾಘವ್ ಚಡ್ಡಾ 
ದೇಶ

ಕೇಜ್ರಿವಾಲ್ ಸೈಡ್‌ಲೈನ್‌ಗೆ ಛಡ್ಡಾ ಸ್ಕ್ರಿಪ್ಟ್ ಚೇಂಜ್; ಸೈಲೆಂಟ್ ಆಗಿದ್ದುಕೊಂಡೇ ಆಪ್ ಧೂಳೀಪಟ ಮಾಡಿದ 22 ದಿನಗಳ ರಿವೇಂಜ್​ ಸ್ಟೋರಿ ಇಲ್ಲಿದೆ! | Raghav Chadha

Raghav Chadha: ಆಮ್ ಆದ್ಮಿ ಪಕ್ಷದ ಇತಿಹಾಸದಲ್ಲೇ ಅತ್ಯಂತ ಕರಾಳ ಮತ್ತು ಆಘಾತಕಾರಿ ದಿನಗಳಲ್ಲಿ ಏಪ್ರಿಲ್ 24 ದಾಖಲಾಗಿದ್ದು, ರಾಜ್ಯಸಭೆಯ ಉಪ ನಾಯಕ ಸ್ಥಾನದಿಂದ ಕೆಳಗಿಳಿಸಲ್ಪಟ್ಟಾಗ ರಾಘವ್ ಛಡ್ಡಾ ವಹಿಸಿದ್ದ ಆ ನಿಗೂಢ ಮೌನ, ಬಿರುಗಾಳಿಯ ಮುನ್ಸೂಚನೆಯಾಗಿತ್ತು. ಕೇವಲ 22 ದಿನಗಳ ಅಂತರದಲ್ಲಿ ಛಡ್ಡಾ ಎಎಪಿಗೆ ನೀಡಿದ ಹೊಡೆತ ಅರವಿಂದ್ ಕೇಜ್ರಿವಾಲ್​​ರ ಕಟ್ಟಿದ್ದ ಗೋಪುರವನ್ನೇ ಅಲುಗಾಡಿಸಿದೆ.
ರಾಘವ್ ಛಡ್ಡಾ ಒಬ್ಬರೇ ಪಕ್ಷ ಬಿಟ್ಟಿದ್ದರೆ ಪಕ್ಷಾಂತರ ವಿರೋಧಿ ಕಾನೂನಿನಡಿ ಸದಸ್ಯತ್ವ ಕಳೆದುಕೊಳ್ಳುತ್ತಿದ್ದರು, ಆದರೆ, ಈ ಸಂದರ್ಭದಲ್ಲಿ ಒಬ್ಬ ರಾಜಕೀಯ ಪಂಡಿತನಂತೆ ಯೋಚಿಸಿದ ಅವರು, ರಾಜ್ಯಸಭೆಯ 10 ಆಪ್​ ಸಂಸದರಲ್ಲಿ 7 ಮಂದಿಯನ್ನು (ಅಶೋಕ್ ಮಿತ್ತಲ್, ಸಂದೀಪ್ ಪಾಠಕ್, ಹರ್ಭಜನ್ ಸಿಂಗ್, ಸ್ವಾತಿ ಮಲಿವಾಲ್, ರಾಜಿಂದರ್ ಗುಪ್ತಾ ಮತ್ತು ವಿಕ್ರಮ್ ಸಾಹ್ನಿ) ಒಗ್ಗೂಡಿಸಿ ಬಿಜೆಪಿಯೊಂದಿಗೆ ವಿಲೀನ ಘೋಷಿಸಿದರು. ಸಂವಿಧಾನದ ಪ್ರಕಾರ, ಮೂರನೇ ಎರಡರಷ್ಟು ಸದಸ್ಯರು ವಿಲೀನಗೊಂಡರೆ ಅನರ್ಹತೆಯಿಂದ ರಕ್ಷಣೆ ಸಿಗುತ್ತದೆ ಎಂಬ ಕಾನೂನನ್ನು ಇಲ್ಲಿ ಬಳಸಿಕೊಂಡಿದ್ದಾರೆ.

ಡ್ಡಾರ 22 ದಿನಗಳ ರಿವೇಂಜ್​ ಸ್ಟೋರಿ

ಏಪ್ರಿಲ್ 2: ರಾಘವ್ ಛಡ್ಡಾರನ್ನು ರಾಜ್ಯಸಭೆಯಲ್ಲಿ ಪಕ್ಷದ ಉಪ ನಾಯಕ ಸ್ಥಾನದಿಂದ ತೆಗೆದುಹಾಕಿ ಅಶೋಕ್ ಮಿತ್ತಲ್ ಹೆಸರನ್ನು ಪ್ರಸ್ತಾಪಿಸಲಾಯಿತು. ಇದು ಆಂತರಿಕ ಬಿರುಕಿನ ಮೊದಲ ಸಂಕೇತವಾಗಿತ್ತು.
ಏಪ್ರಿಲ್ 15: ಛಡ್ಡಾರನ್ನು ಬದಲಿಸಿದ್ದ ಮಿತ್ತಲ್​ಗೆ ಸಂಬಂಧಿಸಿದ ಪಂಜಾಬ್ ವಿಶ್ವವಿದ್ಯಾಲಯದ ಮೇಲೆ ಇಡಿ ದಾಳಿ ನಡೆಸಿತು. ಇದು ಒತ್ತಡದ ತಂತ್ರ ಎಂದು ವ್ಯಾಖ್ಯಾನಿಸಲಾಯಿತು.
ಏಪ್ರಿಲ್ 17: ಎಎಪಿ ತನ್ನ ಭದ್ರತೆಯನ್ನು ಹಿಂತೆಗೆದುಕೊಂಡ ಬೆನ್ನಲ್ಲೇ, ಕೇಂದ್ರ ಸರ್ಕಾರ ಛಡ್ಡಾಗೆ Z-ವರ್ಗದ ಭದ್ರತೆ ನೀಡಿತು. ಇಲ್ಲಿಂದಲೇ ಬಿಜೆಪಿಯೊಂದಿಗೆ ಛಡ್ಡಾ ಸಂಪರ್ಕದ ಊಹಾಪೋಹಗಳು ದಟ್ಟವಾದವು.
ಏಪ್ರಿಲ್ 24(ನಿರ್ಣಾಯಕ ದಿನ): ಮಧ್ಯಾಹ್ನ 12 ಗಂಟೆ: ವಿಲೀನದ ವಾಸನೆ ಗ್ರಹಿಸಿದ ಎಎಪಿ, ಛಡ್ಡಾ ವಿರುದ್ಧ ಸಚಿವ ಸ್ಥಾನದ ಆಮಿಷದ ಆರೋಪ ಮಾಡಿತು.
ಮಧ್ಯಾಹ್ನ 1 ಗಂಟೆ: ಅರವಿಂದ್ ಕೇಜ್ರಿವಾಲ್ ಅಶೋಕ್ ಮಿತ್ತಲ್​ರ ಮನೆಯನ್ನು ಖಾಲಿ ಮಾಡಿದರು.
ಮಧ್ಯಾಹ್ನ 3:30: ಛಡ್ಡಾ, ಮಿತ್ತಲ್ ಮತ್ತು ಪಾಠಕ್ ಜೊತೆಗೂಡಿ ಪತ್ರಿಕಾಗೋಷ್ಠಿ ನಡೆಸಿ ಬಿಜೆಪಿಯೊಂದಿಗೆ ವಿಲೀನ ಘೋಷಿಸಿದರು.

ಅಶೋಕ್ ಮಿತ್ತಲ್ ಮತ್ತು ಸಂದೀಪ್ ಪಾಠಕ್ ಉಪಸ್ಥಿತಿಯ ಮಹತ್ವ

ಛಡ್ಡಾ ಬದಲಿಗೆ ಯಾರನ್ನು ಉಪ ನಾಯಕನನ್ನಾಗಿ ನೇಮಿಸಲಾಗಿತ್ತೋ, ಅದೇ ಅಶೋಕ್ ಮಿತ್ತಲ್ ಛಡ್ಡಾ ಪಕ್ಕದಲ್ಲಿ ನಿಂತಿದ್ದು ಎಎಪಿಗೆ ಬಿದ್ದ ಅತಿದೊಡ್ಡ ಮರ್ಮಾಘಾತ. ಛಡ್ಡಾ ಅವರಿಗೆ ಮಾತನಾಡಲು ಸಮಯ ನೀಡದಂತೆ ಎಎಪಿ ರಾಜ್ಯಸಭಾ ಅಧ್ಯಕ್ಷರಿಗೆ ಪತ್ರ ಬರೆದಿತ್ತು. ಈ ನಡೆ ಮತ್ತಷ್ಟು ಕೆರಳಿಸುವಂತೆ ಮಾಡಿತು. ಪ್ರಧಾನಿ ಮೋದಿ ವಿರುದ್ಧ ಮಾತನಾಡಲು ಛಡ್ಡಾ ಹೆದರುತ್ತಿದ್ದಾರೆ ಎಂಬ ಎಎಪಿ ನಾಯಕರ ಆರೋಪವೇ ಈಗ ಸಂಸದನ ಪಾಲಿಗೆ ಬಿಜೆಪಿ ಸೇರಲು ದಾರಿಯಾಯಿತು.
ಎಎಪಿ ಈ ಬಿಕ್ಕಟ್ಟನ್ನು ನಿಭಾಯಿಸಿದ ರೀತಿ ಉತ್ತಮವಾಗಿರಲಿಲ್ಲ. ನಾಯಕತ್ವದ ಪಾತ್ರದಿಂದ ತೆಗೆದುಹಾಕುವುದು ಮತ್ತು ಸಾರ್ವಜನಿಕವಾಗಿ ಟೀಕಿಸುವುದು ಛಡ್ಡಾರನ್ನು ಪಕ್ಷದಿಂದ ಮತ್ತಷ್ಟು ದೂರ ತಳ್ಳಿತು. ಪ್ರಿಯಾಂಕಾ ಕಕ್ಕರ್ ಅವರಂತಹ ವಕ್ತಾರರು ಛಡ್ಡಾ ಬಿಜೆಪಿ ಸಂಪರ್ಕದಲ್ಲಿದ್ದಾರೆ ಎಂದು ಘೋಷಿಸಿದರೂ, ಅದನ್ನು ತಡೆಯುವಲ್ಲಿ ಹಿರಿಯ ನಾಯಕರು ವಿಫಲವಾದರು.

ಮುಂದಿನ ನಡೆ ಏನು..?

ರಾಷ್ಟ್ರೀಯ ಮಟ್ಟದಲ್ಲಿ ಅಸ್ತಿತ್ವಕ್ಕೆ ಧಕ್ಕೆ: ರಾಜ್ಯಸಭೆಯಲ್ಲಿ ಕೇವಲ ಮೂವರು ಸದಸ್ಯರಿಗೆ ಸೀಮಿತವಾಗಿರುವ ಎಎಪಿ, ಸಂಸತ್ತಿನಲ್ಲಿ ತನ್ನ ಪ್ರಬಲ ಧ್ವನಿಯನ್ನು ಕಳೆದುಕೊಂಡಿದೆ.
ಪಂಜಾಬ್ ರಾಜಕೀಯ: ಪಂಜಾಬ್‌ನಲ್ಲಿ ಎಎಪಿ ಸರ್ಕಾರಕ್ಕೆ ತಕ್ಷಣದ ಅಪಾಯವಿಲ್ಲದಿದ್ದರೂ, ಹರ್ಭಜನ್ ಸಿಂಗ್​ರಂತಹ ಜನಪ್ರಿಯ ವ್ಯಕ್ತಿಯ ನಿರ್ಗಮನವು ಪಕ್ಷದ ವರ್ಚಸ್ಸಿಗೆ ಧಕ್ಕೆ ತರಬಹುದು.
ಆಪರೇಷನ್ ಕಮಲ: ಆಪ್​ ಇದನ್ನು ವಿಧ್ವಂಸಕ ಕೃತ್ಯ ಎಂದು ಕರೆಯುತ್ತಿದ್ದರೂ, ಆಂತರಿಕ ಅಸಮಾಧಾನವನ್ನು ನಿರ್ವಹಿಸುವಲ್ಲಿ ಹೈಕಮಾಂಡ್ ವಿಫಲವಾಗಿದೆ ಎಂಬುದು ಸ್ಪಷ್ಟ.
ಒಟ್ಟಾರೆಯಾಗಿ, ರಾಘವ್ ಛಡ್ಡಾ ತಮ್ಮ ಹಿಂಬಡ್ತಿಗೆ ಕೇವಲ ಪ್ರತಿಕ್ರಿಯೆ ನೀಡಲಿಲ್ಲ, ಬದಲಿಗೆ ಆಪ್​ನ ರಾಷ್ಟ್ರೀಯ ರಾಜಕೀಯದ ಚಿತ್ರಣವನ್ನೇ ಬದಲಿಸಿಬಿಟ್ಟರು. ಇದು ಕೇವಲ ಬಂಡಾಯವಲ್ಲ, ಕೇಜ್ರಿವಾಲ್ ಸಾಮ್ರಾಜ್ಯದ ಮೇಲಿನ ಅತಿದೊಡ್ಡ ಸರ್ಜಿಕಲ್ ಸ್ಟ್ರೈಕ್ ಎಂದರೆ ಅತಿಶಯೋಕ್ತಿಯಾಗಲಾರದು(ಏಜೆನ್ಸೀಸ್​​).