ಬಿಜೆಪಿ-ಅಕಾಲಿ ದಳ ದೋಸ್ತಿಗೆ ಆಪ್, ಕಾಂಗ್ರೆಸ್ ಆಕ್ಷೇಪ 
ದೇಶ

ಬಿಜೆಪಿ-ಅಕಾಲಿ ದಳ ದೋಸ್ತಿಗೆ ಆಪ್, ಕಾಂಗ್ರೆಸ್ ಆಕ್ಷೇಪ: ಮತ್ತೆ ಮುನ್ನೆಲೆಗೆ ಬಂದ ರೈತ ಹೋರಾಟದ ವಿವಾದ! | BJP-Akali Dal Alliance

ಚಂಡೀಗಢ: ಮುಂಬರುವ 2027ರ ಪಂಜಾಬ್ ವಿಧಾನಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಶಿರೋಮಣಿ ಅಕಾಲಿ ದಳ ಮತ್ತೆ ಮೈತ್ರಿ (BJP-Akali Dal Alliance) ಮಾಡಿಕೊಂಡಿದ್ದು ರಾಜ್ಯ ರಾಜಕಾರಣದಲ್ಲಿ ದೊಡ್ಡ ಸಂಘರ್ಷಕ್ಕೆ ನಾಂದಿ ಹಾಡಿದೆ. ಈ ಬೆಳವಣಿಗೆಯ ಸಮಯ ಮತ್ತು ಉದ್ದೇಶಗಳನ್ನು ಪ್ರಶ್ನಿಸಿರುವ ಆಮ್ ಆದ್ಮಿ ಪಕ್ಷ ಹಾಗೂ ಕಾಂಗ್ರೆಸ್ ನಾಯಕರು ವಾಗ್ದಾಳಿ ನಡೆಸಿದ್ದಾರೆ.

2020ರ ಸೆಪ್ಟೆಂಬರ್‌ನಲ್ಲಿ ಬೇರೆಯಾಗಿದ್ದ ಬಿಜೆಪಿ-ಅಕಾಲಿ ದಳ ಮಂಗಳವಾರ ತಮ್ಮ ಮೈತ್ರಿಯನ್ನು ಮರುಸ್ಥಾಪಿಸುವ ನಿರ್ಧಾರವನ್ನು ಘೋಷಿಸಿವೆ. 2007ರಿಂದ 2017ರವರೆಗೆ ಒಂದು ದಶಕ ಕಾಲ ಪಂಜಾಬ್‌ನಲ್ಲಿ ಒಟ್ಟಾಗಿ ಆಡಳಿತ ನಡೆಸಿದ್ದ ಈ ಎರಡು ಪಕ್ಷಗಳ ದೋಸ್ತಿ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬದಲಾವಣೆಯ ಸಂಕೇತವಾಗಿದೆ. ಈ ಘೋಷಣೆಗೆ ಪ್ರತಿಕ್ರಿಯಿಸಿರುವ ಆಪ್ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್, ಅಧಿಕಾರದಾಸೆಗಾಗಿ ಬಿಜೆಪಿ ಪದೇ ಪದೇ ರಾಜಕೀಯ ಮಿತ್ರರನ್ನು ಬದಲಾಯಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಕೆಲವೊಮ್ಮೆ ಅವರು ಒಂದಾಗುತ್ತಾರೆ, ಕೆಲವೊಮ್ಮೆ ಬೇರ್ಪಡುತ್ತಾರೆ ಮತ್ತು ಮತ್ತೆ ಒಂದಾಗುತ್ತಾರೆ. ನಮ್ಮ ಮೈತ್ರಿ ಇರುವುದು ಪಂಜಾಬ್ ಜನತೆಯೊಂದಿಗೆ. ನಾವು ರಾಜ್ಯದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದೇವೆ ಎಂದು ಕೇಜ್ರಿವಾಲ್ ಹೇಳಿದ್ದಾರೆ. ಭಗವಂತ್ ಮಾನ್ ನೇತೃತ್ವದ ಸರ್ಕಾರದ ಸಾಧನೆಯನ್ನು ಸಮರ್ಥಿಸಿಕೊಂಡ ಅವರು, ದಶಕಗಳಿಂದ ಪಂಜಾಬ್ ಅನ್ನು ಕಾಡುತ್ತಿದ್ದ ಸಮಸ್ಯೆಗಳನ್ನು ಬಗೆಹರಿಸಲು ಆಪ್ ಕೆಲಸ ಮಾಡುತ್ತಿದೆ ಎಂದರು. ಕಳೆದ ಐದು ವರ್ಷಗಳ ಸರ್ಕಾರದ ಕೆಲಸವನ್ನು ಮತದಾರರು ಗಮನಿಸಿದ್ದು, ಸಾಧನೆಯ ಆಧಾರದ ಮೇಲೆ ಜನ ತೀರ್ಪು ನೀಡಲಿದ್ದಾರೆ ಎಂದು ತಿಳಿಸಿದರು.

ಎಸ್‌ಎಡಿ ಮತ್ತು ಬಿಜೆಪಿ ವಿರುದ್ಧ ಕಿಡಿಕಾರಿದ ಕೇಜ್ರಿವಾಲ್, ಕೇಂದ್ರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ನಡೆದ ರೈತ ಹೋರಾಟವನ್ನು ನೆನಪಿಸಿದರು. ಪ್ರತಿಭಟನೆಯ ವೇಳೆ 700ಕ್ಕೂ ಹೆಚ್ಚು ರೈತರು ಮೃತಪಟ್ಟಿರುವುದನ್ನು ಪಂಜಾಬ್ ಜನತೆ ಮರೆತಿಲ್ಲ ಎಂದು ಆರೋಪಿಸಿದ ಅವರು, ಹಿಂದಿನ ಎಸ್‌ಎಡಿ ಸರ್ಕಾರದ ಅವಧಿಯಲ್ಲಿ ನಡೆದಿದ್ದ ಗುರುಗ್ರಂಥ ಸಾಹಿಬ್ ಅಪವಿತ್ರ ಪ್ರಕರಣಗಳು ಹಾಗೂ ರಾಜ್ಯದಲ್ಲಿ ಮಾದಕವಸ್ತು ಸಮಸ್ಯೆ ಬೆಳೆಯಲು ಅವಕಾಶ ನೀಡಿದ್ದರ ಕುರಿತು ಪ್ರಶ್ನಿಸಿದರು.

ಚುನಾವಣೆಯಲ್ಲಿ ಮೈತ್ರಿಯ ಪ್ರಭಾವವನ್ನು ತಳ್ಳಿಹಾಕಿದ ಆಪ್ ಶಾಸಕ ಜರ್ನೈಲ್ ಸಿಂಗ್, ಎರಡು ಸೊನ್ನೆಗಳು ಸೇರಿದರೂ ಸೊನ್ನೆಯೇ ಆಗುತ್ತವೆ ಎಂದು ಬಿಜೆಪಿ-ಎಸ್‌ಎಡಿ ಮೈತ್ರಿಯನ್ನು ವ್ಯಂಗ್ಯವಾಡಿದರು. ತಮ್ಮ ಆಡಳಿತದ ದಾಖಲೆಯ ಆಧಾರದ ಮೇಲೆ ಮತ ಕೇಳುತ್ತಿರುವ ಏಕೈಕ ಪಕ್ಷ ಆಪ್ ಆಗಿದ್ದು, ಜನರು ಕೆಲಸ ಮೆಚ್ಚಿ ಬೆಂಬಲ ನೀಡಲಿದ್ದಾರೆ ಎಂದರು.

ಬಾದಲ್ ಕುಟುಂಬದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

ಬಿಜೆಪಿ-ಎಸ್‌ಎಡಿ ಮರುಸೇರ್ಪಡೆಯನ್ನು ಕಾಂಗ್ರೆಸ್ ಕೂಡ ಕಟುವಾಗಿ ಟೀಕಿಸಿದೆ. ಬೇರ್ಪಟ್ಟ ನಂತರವೂ ಉಭಯ ಪಕ್ಷಗಳು ಬಹಿರಂಗವಾಗಿ ಒಪ್ಪಿಕೊಳ್ಳುವುದಕ್ಕಿಂತ ಹೆಚ್ಚಿನ ಆಪ್ತ ಸಂಬಂಧ ಹೊಂದಿದ್ದವು ಎಂದು ಕಾಂಗ್ರೆಸ್ ಸಂಸದ ಹಾಗೂ ಪಂಜಾಬ್ ನಾಯಕ ಅಮರಿಂದರ್ ಸಿಂಗ್ ರಾಜಾ ವಾರಿಂಗ್ ಆರೋಪಿಸಿದ್ದಾರೆ. ಪ್ರಮುಖ ಕಾನೂನುಗಳ ಮತದಾನದ ವೇಳೆ ಬಿಜೆಪಿಗೆ ಬೆಂಬಲ ನೀಡಿ, ಪಂಜಾಬ್‌ಗೆ ಮರಳಿ ಬಿಜೆಪಿ ವಿರೋಧಿಗಳಂತೆ ಬಿಂಬಿಸಿಕೊಳ್ಳುವ ಮೂಲಕ ಸುಖ್‌ಬೀರ್ ಬಾದಲ್ ಮತ್ತು ಹರ್‌ಸಿಮ್ರತ್ ಕೌರ್ ಬಾದಲ್ ಜನರನ್ನು ವಂಚಿಸಿದ್ದಾರೆ ಎಂದು ಅವರು ದೂರಿದರು.

ಕಾಂಗ್ರೆಸ್ ಶಾಸಕ ಹಾಗೂ ಮಾಜಿ ಸಚಿವ ಭರತ್ ಭೂಷಣ್ ಆಶು ಅವರು, ಈ ಮರುಸೇರ್ಪಡೆ ಬಹಳ ದಿನಗಳಿಂದ ನಡೆಯುತ್ತಿದ್ದ ನಾಟಕವಾಗಿದ್ದು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಉಭಯ ಪಕ್ಷಗಳನ್ನು ಕಾಂಗ್ರೆಸ್ ಸೋಲಿಸಲಿದೆ ಎಂದರು. ಶಾಸಕ ಸುಖ್‌ಪಾಲ್ ಸಿಂಗ್ ಖೈರಾ ಮಾತನಾಡಿ, ಮೂರು ಕಪ್ಪು ಕೃಷಿ ಕಾಯ್ದೆಗಳ ವಿರುದ್ಧದ ರೈತ ಹೋರಾಟದಿಂದಾಗಿ 2020-21ರಲ್ಲಿ ಮೈತ್ರಿ ಮುರಿದುಕೊಂಡಿದ್ದನ್ನು ನೆನಪಿಸಿ, ಈಗ ಮತ್ತೆ ಒಂದಾಗುತ್ತಿರುವುದಕ್ಕೆ ಪಂಜಾಬ್‌ನಲ್ಲಿ ನಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಲಿದೆ ಎಂದರು. ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಪ್ರಗತ್ ಸಿಂಗ್ ಅವರು ಈ ಮೈತ್ರಿಯನ್ನು ಅವಕಾಶವಾದಿ ರಾಜಕಾರಣ ಮತ್ತು ಪಂಜಾಬ್ ಜನತೆಗೆ ಮಾಡಿದ ದ್ರೋಹ ಎಂದು ಕರೆದಿದ್ದಾರೆ.

2020ರಲ್ಲಿ ಬಿಜೆಪಿ-ಎಸ್‌ಎಡಿ ಮೈತ್ರಿ ಮುರಿದುಬಿದ್ದಿದ್ದೇಕೆ?

2007ರಿಂದ 2017ರವರೆಗೆ ಪಂಜಾಬ್‌ನಲ್ಲಿ ಜಂಟಿಯಾಗಿ ಆಡಳಿತ ನಡೆಸಿದ್ದ ಬಿಜೆಪಿ ಮತ್ತು ಎಸ್‌ಎಡಿ, ಕೇಂದ್ರ ಸರ್ಕಾರವು ಮೂರು ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ಜಾರಿಗೆ ತಂದ ನಂತರ 2020ರ ಸೆಪ್ಟೆಂಬರ್‌ನಲ್ಲಿ ಒಡಕು ಉಂಟಾಗಿತ್ತು. ಕಾಯ್ದೆಗಳನ್ನು ವಿರೋಧಿಸಿ ಎಸ್‌ಎಡಿ ಎನ್‌ಡಿಎ ಮೈತ್ರಿಕೂಟದಿಂದ ಹೊರಬಂದಿತ್ತು ಮತ್ತು ಆಗ ಕೇಂದ್ರ ಸಚಿವೆಯಾಗಿದ್ದ ಹರ್‌ಸಿಮ್ರತ್ ಕೌರ್ ಬಾದಲ್ ರಾಜೀನಾಮೆ ನೀಡಿದ್ದರು. ದೇಶಾದ್ಯಂತ ದೀರ್ಘಕಾಲ ನಡೆದ ರೈತರ ಪ್ರತಿಭಟನೆಗಳ ಬಳಿಕ ಕೇಂದ್ರ ಸರ್ಕಾರ ಆ ಕಾಯ್ದೆಗಳನ್ನು ಹಿಂಪಡೆದಿತ್ತು(ಏಜೆನ್ಸೀಸ್​).