Delhi Politics | ಪಾಲಿಕೆ ಚುನಾವಣೆಗೂ ಮುನ್ನ ಬಿಜೆಪಿಗೆ ವಿಲೀನಗೊಂಡ 16 ಕೌನ್ಸಿಲರ್‌ಗಳು! 
ದೇಶ

ಪಾಲಿಕೆ ಚುನಾವಣೆಗೂ ಮುನ್ನ ಬಿಜೆಪಿಗೆ ವಿಲೀನಗೊಂಡ 16 ಕೌನ್ಸಿಲರ್‌ಗಳು!...ಇದು ಜನರಿಗೆ ಮಾಡಿದ ದ್ರೋಹ ಎಂದ ಆಪ್​ ನಾಯಕ | Delhi Politics

ನವದೆಹಲಿ: ಆಮ್ ಆದ್ಮಿ ಪಕ್ಷದ (AAP) ಬಂಡಾಯ ಬಣವಾದ ಇಂದ್ರಪ್ರಸ್ಥ ವಿಕಾಸ್ ಪಾರ್ಟಿಯ (IVP) 16 ಕೌನ್ಸಿಲರ್‌ಗಳು ಶುಕ್ರವಾರ ದೆಹಲಿಯಲ್ಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಮತ್ತು ರಾಜ್ಯಾಧ್ಯಕ್ಷ ಹರ್ಷ ಮಲ್ಹೋತ್ರಾ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾದರು.
ಈ ನಡೆಯು ದೆಹಲಿ ಮಹಾನಗರ ಪಾಲಿಕೆಯಲ್ಲಿ (MCD) ಬಿಜೆಪಿಯ ಸ್ಥಾನವನ್ನು ಬಲಪಡಿಸುವ ನಿರೀಕ್ಷೆಯಿದೆ. ಆದರೆ, ಈ ಪಕ್ಷಾಂತರಗಳು ಪಾಲಿಕೆಯ ಮೇಲಿನ ನಿಯಂತ್ರಣವನ್ನು ಉಳಿಸಿಕೊಳ್ಳಲು ಬಿಜೆಪಿ ಬಹುಕಾಲದಿಂದ ನಡೆಸಿದ ಯೋಜಿತ ತಂತ್ರದ ಭಾಗವಾಗಿದೆ ಎಂದು ಎಎಪಿ ಆರೋಪಿಸಿದೆ.

ಸಿಎಂ ರೇಖಾ ಗುಪ್ತಾ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆ

ಐವಿಪಿ ಕೌನ್ಸಿಲರ್‌ಗಳನ್ನು ಬಿಜೆಪಿಗೆ ಸ್ವಾಗತಿಸಿದ ಮುಖ್ಯಮಂತ್ರಿ ರೇಖಾ ಗುಪ್ತಾ, ದೆಹಲಿಯ ಅಭಿವೃದ್ಧಿಯನ್ನು ಮನಸ್ಸಿನಲ್ಲಿಟ್ಟುಕೊಂಡು ಅವರು ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ಹೇಳಿದರು. ಇದು ಅವರ ವಾರ್ಡ್‌ಗಳಲ್ಲಿ ಅಭಿವೃದ್ಧಿಯನ್ನು ವೇಗಗೊಳಿಸುವ ಉತ್ತಮ ದಾರಿಯಾಗಿದ್ದು, ನಗರದ ಅಭಿವೃದ್ಧಿಯೇ ದೆಹಲಿ ಸರ್ಕಾರದ ಮೊದಲ ಆದ್ಯತೆ ಎಂದರು. ಐವಿಪಿ ಕೌನ್ಸಿಲರ್‌ಗಳ ಸೇರ್ಪಡೆಯು ಎಂಸಿಡಿಯಲ್ಲಿ ಬಿಜೆಪಿಯನ್ನು ಮತ್ತಷ್ಟು ಬಲಪಡಿಸುತ್ತದೆ ಮತ್ತು ಅವರವರ ಪಾಲಿಕೆ ವಾರ್ಡ್‌ಗಳಲ್ಲಿ ನಾಗರಿಕ ಕಾಮಗಾರಿಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.

ಐವಿಪಿ ರೂಪುಗೊಂಡಿದ್ದು ಹೇಗೆ..?

ದೆಹಲಿ ಬಿಜೆಪಿ ಅಧ್ಯಕ್ಷ ಹರ್ಷ ಮಲ್ಹೋತ್ರಾ ಮಾತನಾಡಿ, ಎಎಪಿ ನೇತೃತ್ವದ ಮೇಯರ್ ಆಡಳಿತದಲ್ಲಿ ಅಭಿವೃದ್ಧಿಯ ಕೊರತೆಯನ್ನು ಕಂಡ ನಂತರ ಮುಕೇಶ್ ಗೋಯಲ್ ಮತ್ತು ಹೇಮಚಂದ್ ಗೋಯಲ್ ನೇತೃತ್ವದ ಕೌನ್ಸಿಲರ್‌ಗಳು ಸುಮಾರು ಒಂದೂವರೆ ವರ್ಷದ ಹಿಂದೆ ಇಂದ್ರಪ್ರಸ್ಥ ವಿಕಾಸ್ ಪಾರ್ಟಿಯನ್ನು ಸ್ಥಾಪಿಸಿದರು ಎಂದು ಹೇಳಿದರು. ಅಲ್ಲದೆ, ಎಲ್ಲಾ 16 ಐವಿಪಿ ಕೌನ್ಸಿಲರ್‌ಗಳು ತಮ್ಮ ಪಕ್ಷವನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಿದ ನಂತರ ಅಧಿಕೃತವಾಗಿ ಬಿಜೆಪಿ ಸದಸ್ಯರಾಗಿದ್ದಾರೆ ಎಂದು ತಿಳಿಸಿದರು.

ಆಪ್​ ನಾಯಕರು ಹೇಳಿದ್ದೇನು...?

ಈ ವಿಲೀನಕ್ಕೆ ಪ್ರತಿಕ್ರಿಯಿಸಿದ ಎಎಪಿ ದೆಹಲಿ ಘಟಕದ ಅಧ್ಯಕ್ಷ ಸೌರಭ್ ಭಾರದ್ವಾಜ್, ದೆಹಲಿ ಮಹಾನಗರ ಪಾಲಿಕೆಯ ಮೇಲಿನ ನಿಯಂತ್ರಣವನ್ನು ಕಾಯ್ದುಕೊಳ್ಳಲು ಬಿಜೆಪಿಯೇ ಆಮ್​ ಆದ್ಮಿ ಸದಸ್ಯರಿಂದ ಪಕ್ಷಾಂತರಗಳನ್ನು ಮಾಡಿಸಿದೆ ಎಂಬ ತಮ್ಮ ಪಕ್ಷದ ಅನೇಕ ದಿನಗಳ ವಾದವನ್ನು ಈ ಬೆಳವಣಿಗೆಯು ನಿಜಗೊಳಿಸಿದೆ. ಬಿಜೆಪಿಗೆ ವಿಲೀನಗೊಳ್ಳುವ ಮೊದಲು ಎಎಪಿ ತೊರೆಯಲು ಕೌನ್ಸಿಲರ್‌ಗಳನ್ನು ಪ್ರಚೋದಿಸುವಲ್ಲಿ ಬಿಜೆಪಿಯ ಪಾತ್ರವನ್ನು ಮುಚ್ಚಿಡಲು ಐವಿಪಿ ರಚನೆಯು ಕೇವಲ ಒಂದು ನೆಪವಾಗಿತ್ತು ಎಂದು ಭಾರದ್ವಾಜ್​ ಆರೋಪಿಸಿದರು.
ಈ ಬೆಳವಣಿಗೆಯಿಂದ ನಮಗೆ ಯಾವುದೇ ಆಶ್ಚರ್ಯವಾಗಿಲ್ಲ. ಪಕ್ಷಾಂತರಗಳನ್ನು ಮಾಡಿಸುವ ಮತ್ತು ಹಿಂಬಾಗಿಲಿನ ಮೂಲಕ ಎಂಸಿಡಿ ನಿಯಂತ್ರಣವನ್ನು ಉಳಿಸಿಕೊಳ್ಳುವ ಈ ಸಂಪೂರ್ಣ ಕಾರ್ಯಾಚರಣೆಯ ಹಿಂದೆ ಬಿಜೆಪಿಯೇ ಇದೆ ಎಂಬುದು ನಮಗೆ ಮೊದಲ ದಿನದಿಂದಲೇ ತಿಳಿದಿತ್ತು. ಆಪ್​​ ತೊರೆದ ಕೌನ್ಸಿಲರ್‌ಗಳು ದೆಹಲಿಯ ಮತದಾರರ ತೀರ್ಪಿಗೆ ದ್ರೋಹ ಬಗೆದಿದ್ದಾರೆ ಎಂದು ಭಾರದ್ವಾಜ್ ಆರೋಪಿಸಿದರು.
ದೆಹಲಿಯ ಜನ ಬಿಜೆಪಿಯ ವಿರುದ್ಧ ಮತ ಚಲಾಯಿಸುವ ಮೂಲಕ ಇವರನ್ನು ಗೆಲ್ಲಿಸಿದ್ದರು, ಆದರೆ ಅವರು ಈಗ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. 17 ವರ್ಷಗಳ ಬಿಜೆಪಿ ಆಡಳಿತದಲ್ಲಿ ಭ್ರಷ್ಟಾಚಾರ ಮತ್ತು ದುರಾಡಳಿತದಿಂದ ನಾಗರಿಕ ಸೇವೆಗಳು ಹಾಳಾಗಿದ್ದರಿಂದ ದೆಹಲಿ ನಿವಾಸಿಗಳು ಎಂಸಿಡಿಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಿದ್ದರು ಎಂದು ಆಪ್​ ನಾಯಕ ದೂರಿದ್ದಾರೆ. ಎಂಸಿಡಿಯ ಕಾರ್ಯವೈಖರಿಗೆ ಸಂಬಂಧಿಸಿದ ವಿಷಯಗಳಲ್ಲಿ ಧ್ವನಿ ಎತ್ತುವುದನ್ನು ಆಮ್​ ಆದ್ಮಿ ಮುಂದುವರಿಸುತ್ತದೆ ಮತ್ತು ಮತದಾರರ ತೀರ್ಪಿಗೆ ಆದ ದ್ರೋಹಕ್ಕೆ ದೆಹಲಿಯ ಜನರೇ ತಕ್ಕ ಉತ್ತರ ನೀಡಲಿದ್ದಾರೆ ಎಂದು ಭಾರದ್ವಾಜ್​ ತಿಳಿಸಿದರು(ಏಜೆನ್ಸೀಸ್​​).