Aaditya Thackeray 
ದೇಶ

'ನಿರ್ಲಜ್ಜರು, ಕೃತಘ್ನರು ಮತ್ತು ಭ್ರಷ್ಟರು'; ಆರು ಬಂಡಾಯ ಸಂಸದರ ವಿರುದ್ಧ ಆದಿತ್ಯ ಠಾಕ್ರೆ ಕೆಂಡ..Aaditya Thackeray

ಪ್ರಮುಖ ಮುಖ್ಯಾಂಶಗಳು

  • ಶಿವಸೇನೆ (ಯುಬಿಟಿ)ಯಲ್ಲಿ ಆರು ಸಂಸದರು ಬಂಡಾಯದ ಹಾದಿಯಲ್ಲಿ
  • ಮುಂದಿನವಾರ ಏಕನಾಥ ಶಿಂಧೆ ಪಕ್ಷಕ್ಕೆ ಸೇರ್ಪಡೆಗೊಳ್ಳುವ ಸಾಧ್ಯತೆ
  • ಬಂಡಾಯ ಸಂಸದರ ವಿರುದ್ಧ ಕಿಡಿಕಾರಿದ ಮಾಜಿ ಸಚಿವ ಆದಿತ್ಯ ಠಾಕ್ರೆ
ಮುಂಬಯಿ: ಉದ್ಧವ್​​ ಠಾಕ್ರೆ ನೇತೃತ್ವದ ಶಿವಸೇನೆಯ(ಯುಬಿಟಿ) ಆರು ಸಂಸದರು ಪಕ್ಷದ ಸಭೆಗೆ ಗೈರಾಗುವ ಮೂಲಕ ಬಂಡಾಯದ ಮುನ್ಸೂಚನೆ ನೀಡಿದ್ದಾರೆ. ಮುಂದಿನವಾರ ಆಡಳಿತ ರೂಢ ಏಕನಾಥ್​ ಶಿಂಧೆಯವರ ಶಿವಸೇನೆಗೆ ಪಕ್ಷಾಂತರಗೊಳ್ಳುವ ಸಾಧ್ಯತೆ ಇದೆ ಎನ್ನುವ ಚರ್ಚೆಗಳು ಮಹಾರಾಷ್ಟ್ರದ ರಾಜಕೀಯದಲ್ಲಿ ಜೋರಾಗಿದೆ. ಇನ್ನು ಈ ಬಗ್ಗೆ ಆದಿತ್ಯ ಠಾಕ್ರೆ(Aaditya Thackeray)ಕಿಡಿಕಾರಿದ್ದು, ಆ ಆರು ಸಂಸದರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಯುಬಿಟಿಯಲ್ಲಿ ಉಂಟಾಗಿರುವ ಬಿರುಕು ಬಗ್ಗೆ ಹಾಗೂ ಪಕ್ಷಾಂತರದ ಮುನ್ಸೂಚನೆ ಬಗ್ಗೆ ಮಾತನಾಡಿದ ಅವರು, ಮಹಾರಾಷ್ಟ್ರ ಇದನ್ನು ಸಹಿಸೋದಿಲ್ಲ. ಇದೊಂದು ಕೊಳಕು ರಾಜಕೀಯದ ಅಘಾತಕಾರಿ ಉದಾಹರಣೆ ಎಂದು ಆದಿತ್ಯ ಠಾಕ್ರೆ ಕಿಡಿಕಾರಿದ್ದಾರೆ.

ಹೆಸರು, ಗೌರವ ಮಾರಿಕೊಂಡವರು

ಏಕನಾಥ ಶಿಂಧೆ ಅವರ ಪಕ್ಷಕ್ಕೆ ಸೇರ್ಪಡೆಯಾಗುವ 6 ಬಂಡಾಯ ಸಂಸದರ ವಿರುದ್ಧ ಕಿಡಿಕಾರಿದ ಮಾಜಿ ಸಚಿವ ಆದಿತ್ಯ ಠಾಕ್ರೆ, ನಿರ್ಲಜ್ಜರು, ಕೃತಘ್ನರು ಮತ್ತು ಭ್ರಷ್ಟರು ಎಂದು ಜಡಿದಿದ್ದಾರೆ. ಆರು ಸಂಸದರು ತಮ್ಮ ಮೇಲಿನ ಗೌರವ, ತಮಗಿದ್ದ ಖ್ಯಾತಿ ಮತ್ತು ಕುಟುಂಬದ ಹೆಸರನ್ನು ಪಕ್ಕಕ್ಕಿಟ್ಟು ನಿರ್ಲಜ್ಜೆಯಿಂದ ತಮ್ಮನ್ನು ತಾವು ಮಾರಿಕೊಂಡಿದ್ದಾರೆ. 2024ರ ಲೋಕಸಭೆಯಲ್ಲಿ ನಮಗೆ ಮತ ಹಾಕಿ ಗೆಲ್ಲಿಸಿದ ಬೆಂಬಲಿಗರಿಗೆ ಮೋಸ ಮಾಡುತ್ತಿದ್ದಾರೆ ಎಂದು ಗುಡುಗಿದರು.

ಸಭೆಗೆ ಹಾಜರಾಗದೆ ಬಂಡಾಯ

ಗುರುವಾರ(ಜೂ.18)ರಂದು ಉದ್ಧವ್​ ಠಾಕ್ರೆ ನೇತೃತದಲ್ಲಿ ಆಯೋಜಿಸಿದ್ದ ಸಭೆಗೆ ಹಾಜರಾಗಬೇಕು ಎಂದು ವಿಪ್​ ಜಾರಿಯಾದರೂ ಸಹ ಆರು ಮಂದಿ ಸಂಸದರು ಗೈರಾಗಿದ್ದರು. ಒಂಬತ್ತು ಸಂಸದರಲ್ಲಿ ಅರವಿಂದ್​ ಸಾವಂತ್​, ಅನಿಲ್​ ದೇಸಾಯಿ, ರಾಜಭಾವು ವಾಜೆ ಭಾಗವಹಿಸಿ ಬೆಂಬಲ ಕೊಟ್ಟಿದ್ದರೆ. ಮಿಕ್ಕವರು ಗೈರಾಗಿದ್ದರು, ಆ ಮೂಲಕ ಪಕ್ಷದ ಮೇಲಿನ ವೈಮನಸ್ಸಿನ ಬಗ್ಗೆ ಹೊರಹಾಕಿದ್ದರು.

ಮುಂದಿನ ವಾರ ಪಕ್ಷಾಂತರ ಅಧಿಕೃತ?

ಸಭೆಗೆ ಗೈರಾಗಿದ್ದವರಿಗೆ ಕಾರಣ ಕೇಳಿ ನೋಟಿಸ್​ ನೀಡಲಾಗಿದೆ. ಏಳು ದಿನದಲ್ಲಿ ಈ ಬಗ್ಗೆ ಉತ್ತರಿಸದೇ ಹೋದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅರವಿಂದ್​ ಸಾವಂತ್​ ಹೇಳಿದರು. ಈ ಮಧ್ಯೆ ಬಂಡಾಯವೆದ್ದ ಸಂಸದರನ್ನು ಗುರುವಾರವೇ ಜೈಪುರಕ್ಕ ಸ್ಥಳಾಂತರಗೊಳಿಸಲಾಗಿದೆ. ಇವರು ಮುಂದಿನವಾರ ಅಧಿಕೃತವಾಗಿ ಏಕನಾಥ ಶಿಂಧೆ ಬಣ ಸೇರಲಿದ್ದಾರೆ ಎನ್ನಲಾಗಿದೆ. ಆದರೆ, ಓಮ್ರಾಜೆ ನಿಂಬಾಳ್ಕರ್ ಪುಣೆಯಲ್ಲೇ ಉಳಿದಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ.

ಶೋಕಾಸ್ ನೋಟಿಸ್ ಜಾರಿ

ಬಂಡಾಯ ಸಂಸದರ ಬಗ್ಗೆ ಮಾತನಾಡಿದ ಅರವಿಂದ್​ ಸಂವಾತ್​​ ಪಕ್ಷದ ಸಭೆಗೆ ಗೈರು ಹಾಜರಾಗುವ ಮೂಲಕ ದ್ರೋಹ ಬಗೆದಿದ್ದಾರೆ. ಎನ್​ಸಿಪಿ ನಾಯಕ ಶರದ್​ ಪವಾರ್​ ಅವರನ್ನು ಸಂಪರ್ಕಿಸಿ ಭಿನ್ನಮತೀಯರು ಪ್ರತಿನಿಧಿಸುವ ಕ್ಷೇತ್ರಗಳಲ್ಲಿ ಪ್ರತಿಭಟನೆ ಆಯೋಜಿಸುವಂತೆ ಸೂಚನೆ ಕೊಟ್ಟಿದ್ದಾರ4ಎ. ಅಲ್ಲದೆ, ಅವರು ಈ ಹೋರಾಟದಲ್ಲಿ ಭಾಗಿಯಾಗುವ ಬಗ್ಗೆ ಭರವಸೆ ಕೊಟ್ಟಿದ್ದಾರೆ ಎಂದರು.
ಬಂಡಾಯ ಸಂಸದರ ವಿರುದ್ಧ ಅಭಿಯಾನ ಆರಂಭಿಸಲು ನಿರ್ಧರಿಸಲಾಗಿದ್ದು, ಇದಕ್ಕೆ 'ಆಪರೇಷನ್ ತುಡ್ವಾ' ಎಂದು ಹೆಸರಿಡಲಾಗಿದೆ ಎನ್ನಲಾಗಿದೆ. ಜೈಪುರಕ್ಕೆ ಸಂಸದರನ್ನು ಸ್ಥಳಾಂತಿರಿಸುವ ಮುನ್ನ 10 ಕೋಟಿ ರೂ ಪಡೆದಿದ್ದಾರೆ ಎಂದು ಆರೋಪಿಸಿದರು, (ಏಜೆನ್ಸೀಸ್).