18 ವರ್ಷ ದಾಟಿದ್ರೆ ಇನ್ಮುಂದೆ ಸಿಗಲ್ಲ ಆಧಾರ್ ಕಾರ್ಡ್! ಬಾಂಗ್ಲಾ ನುಸುಳುಕೋರರಿಗೆ ಅಸ್ಸಾಂ ಸಿಎಂ ಹಿಮಂತ ಶಾಕ್​! 
ದೇಶ

18 ವರ್ಷ ದಾಟಿದ್ರೆ ಇನ್ಮುಂದೆ ಸಿಗಲ್ಲ ಆಧಾರ್ ಕಾರ್ಡ್! ಬಾಂಗ್ಲಾ ನುಸುಳುಕೋರರಿಗೆ ಅಸ್ಸಾಂ ಸಿಎಂ ಹಿಮಂತ ಶಾಕ್​! Himanta Biswa Sarma

ಗುವಾಹಟಿ: ಅಕ್ರಮ ನುಸುಳುಕೋರರಿಗೆ ಬ್ರೇಕ್ ಹಾಕಲು ಅಸ್ಸಾಂ ಸರ್ಕಾರ ಅತ್ಯಂತ ಮಹತ್ವದ ಮತ್ತು ಕಠಿಣ ನಿರ್ಧಾರವೊಂದನ್ನು ತಗೆದುಕೊಂಡಿದೆ. ರಾಜ್ಯದಲ್ಲಿ ಇನ್ಮುಂದೆ 18 ವರ್ಷ ಮೇಲ್ಪಟ್ಟ ನಾಗರಿಕರಿಗೆ ಸಾಮಾನ್ಯ ಪ್ರಕ್ರಿಯೆಯಡಿ ಹೊಸ ಆಧಾರ್ ಕಾರ್ಡ್‌ಗಳನ್ನು ನೀಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಶನಿವಾರ ನಡೆದ ಸಚಿವ ಸಂಪುಟ ಸಭೆಯ ಬಳಿಕ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ(Himanta Biswa Sarma) ಈ ದೊಡ್ಡ ನಿರ್ಧಾರವನ್ನು ಪ್ರಕಟಿಸಿದ್ದಾರೆ.
ಬಾಂಗ್ಲಾದೇಶದಿಂದ ಬರುವ ಅಕ್ರಮ ವಲಸಿಗರು ಯಾವುದೇ ಕಾರಣಕ್ಕೂ ಭಾರತದ ಈ ಪ್ರಮುಖ ಗುರುತಿನ ಚೀಟಿಯನ್ನು ಪಡೆದುಕೊಳ್ಳದಂತೆ ತಡೆಯುವುದೇ ಈ ಕಠಿಣ ನಿಯಮದ ಮುಖ್ಯ ಉದ್ದೇಶ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದ್ದಾರೆ. ಸರ್ಕಾರದ ಈ ದಿಢೀರ್ ನಿರ್ಧಾರ ಇಡೀ ದೇಶದ ಗಮನ ಸೆಳೆದಿದೆ.

ಡಿಸಿ ಪ್ರಸ್ತಾವನೆ ಹಾಗೂ ಕಠಿಣ ತನಿಖೆಯ ಬಳಿಕವಷ್ಟೇ ಆಧಾರ್!

ಹೊಸ ನಿಯಮದ ಪ್ರಕಾರ, 18 ವರ್ಷ ದಾಟಿದ ಯಾವುದೇ ವ್ಯಕ್ತಿ ಇನ್ಮುಂದೆ ನೇರವಾಗಿ ಆಧಾರ್ ಕೇಂದ್ರಗಳಿಗೆ ಹೋಗಿ ಕಾರ್ಡ್ ಪಡೆಯಲು ಸಾಧ್ಯವಿಲ್ಲ. ಒಂದು ವೇಳೆ ವಿಶೇಷ ಸಂದರ್ಭಗಳಲ್ಲಿ ಆಧಾರ್ ಕಾರ್ಡ್ ಅತ್ಯಗತ್ಯವಾಗಿದ್ದರೆ, ಸಂಬಂಧಪಟ್ಟ ಜಿಲ್ಲೆಯ ಜಿಲ್ಲಾಧಿಕಾರಿಗಳು (DC) ಈ ಕುರಿತು ರಾಜ್ಯ ಸರ್ಕಾರಕ್ಕೆ ವಿಶೇಷ ಪ್ರಸ್ತಾವನೆಯನ್ನು ಸಲ್ಲಿಸಬೇಕಾಗುತ್ತದೆ.
ಜಿಲ್ಲಾಧಿಕಾರಿಗಳಿಂದ ಬಂದ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರವು ತೀವ್ರ ತನಿಖೆಗೆ ಒಳಪಡಿಸಲಿದೆ. ಅರ್ಜಿ ಸಲ್ಲಿಸಿದ ವ್ಯಕ್ತಿ ನಿಜಕ್ಕೂ ಭಾರತದ ಸಿಟಿಜನ್ ಹೌದೇ, ಆತನ ಹಿನ್ನೆಲೆ ಏನು ಎಂಬುದನ್ನು ಕೂಲಂಕಷವಾಗಿ ಪರಿಶೀಲಿಸಿದ ಬಳಿಕವಷ್ಟೇ ಆಧಾರ್ ಕಾರ್ಡ್ ನೀಡಲು ಅನುಮತಿ ನೀಡಲಾಗುತ್ತದೆ. ಈ ಪ್ರಕ್ರಿಯೆಯು ಅತ್ಯಂತ ಜಟಿಲವಾಗಿರಲಿದ್ದು, ನುಸುಳುಕೋರರು ವ್ಯವಸ್ಥೆಯ ಕಣ್ಣು ತಪ್ಪಿಸಿ ನಕಲಿ ದಾಖಲೆ ಸೃಷ್ಟಿಸುವುದನ್ನು ಇದು ತಡೆಯಲಿದೆ.

ಶೇ. 100 ರಷ್ಟು ಗಡಿ ದಾಟಿದ ಆಧಾರ್; ಸಿಎಂ ಕಳವಳ

ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಆಧಾರ್ ಕಾರ್ಡ್ ಹೊಂದಿರುವವರ ಸಂಖ್ಯೆ ಒಟ್ಟು ಜನಸಂಖ್ಯೆಗಿಂತಲೂ ಹೆಚ್ಚಾಗಿರುವುದು (ಶೇ. 100 ಕ್ಕಿಂತ ಹೆಚ್ಚು) ಮುಖ್ಯಮಂತ್ರಿ ಹಿಮಂತ ಅವರ ಆತಂಕಕ್ಕೆ ಕಾರಣವಾಗಿದೆ. ಕೆಲವು ಜಿಲ್ಲೆಗಳಲ್ಲಿ ಆಧಾರ್ ವ್ಯಾಪ್ತಿ ಮಿತಿ ಮೀರಿದೆ. ಅಲ್ಲದೆ, ಜನಸಂಖ್ಯೆಗಿಂತ ಹೆಚ್ಚು ಕಾರ್ಡ್‌ಗಳು ಹೇಗೆ ಸೃಷ್ಟಿಯಾದವು. ಹೆಚ್ಚುವರಿ ಆಧಾರ್ ಕಾರ್ಡ್ ಪಡೆದಿರುವ ಆ ಅಜ್ಞಾತ ವ್ಯಕ್ತಿಗಳು ಯಾರು ಎಂಬುದನ್ನು ನಾವು ಪತ್ತೆಹಚ್ಚಬೇಕಾಗಿದೆ ಎಂದು ಸಿಎಂ ಶರ್ಮಾ ಹೇಳಿದ್ದಾರೆ. ಯಾವುದೇ ಒಬ್ಬ ಅಕ್ರಮ ಬಾಂಗ್ಲಾ ಪ್ರಜೆಗೂ ಅಸ್ಸಾಂನಲ್ಲಿ ನೆಲೆ ನಿಲ್ಲಲು ಆಧಾರ್ ಅಸ್ತ್ರ ಸಿಗಬಾರದು ಎಂಬ ನಿಟ್ಟಿನಲ್ಲಿ ಈ ಬಿಗಿ ಕ್ರಮ ಅನಿವಾರ್ಯವಾಗಿತ್ತು ಎಂದು ಸಮರ್ಥಿಸಿಕೊಂಡಿದ್ದಾರೆ.

ಬುಡಕಟ್ಟು ಸಮುದಾಯಗಳಿಗೆ ಸದ್ಯ ವಿನಾಯಿತಿ; ಅಪ್ರಾಪ್ತರಿಗೆ ನಿಯಮ ಬದಲಿಲ್ಲ

ರಾಜ್ಯದ ಚಹಾ ತೋಟದ ಕಾರ್ಮಿಕರ ಸಮುದಾಯಗಳು ಮತ್ತು ಪರಿಶಿಷ್ಟ ಪಂಗಡದ (ST) ಜನರಿಗೆ ಸದ್ಯದ ಮಟ್ಟಿಗೆ ಈ ನಿಯಮದಿಂದ ವಿನಾಯಿತಿ ನೀಡಲಾಗಿದೆ. ಈ ಸಮುದಾಯಗಳಲ್ಲಿ ಇಂದಿಗೂ ಹಲವರು ಆಧಾರ್ ಕಾರ್ಡ್ ಹೊಂದಿಲ್ಲದೇ ಇರುವುದರಿಂದ ಅವರಿಗೆ ಈ ವಿನಾಯಿತಿ ನೀಡಲಾಗಿದ್ದು, ಇದು ಕೂಡ ಸೀಮಿತ ಅವಧಿಗೆ ಮಾತ್ರ ಇರಲಿದೆ. 2027ರ ಏಪ್ರಿಲ್ 1 ರಿಂದ ಈ ವಿನಾಯಿತಿಯೂ ಮುಕ್ತಾಯವಾಗಲಿದ್ದು, ಆ ಬಳಿಕ ಅಲ್ಲಿಯೂ 18 ವರ್ಷ ಮೇಲ್ಪಟ್ಟವರಿಗೆ ಆಧಾರ್ ವಿತರಣೆ ಬಂದ್ ಆಗಲಿದೆ.
ಆದರೆ, 18 ವರ್ಷದೊಳಗಿನ ಮಕ್ಕಳು ಮತ್ತು ಹದಿಹರೆಯದವರಿಗೆ ಹೊಸ ಆಧಾರ್ ಕಾರ್ಡ್ ನೀಡುವ ಪ್ರಕ್ರಿಯೆ ಎಂದಿನಂತೆ ಮುಂದುವರಿಯಲಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಅಸ್ಸಾಂನಲ್ಲಿ ನುಸುಳುವಿಕೆ ತಡೆಯಲು ಇನ್ಮುಂದೆ ಆಧಾರ್ ನಿಯಮಗಳು ದೇಶದಲ್ಲೇ ಅತ್ಯಂತ ಕಠಿಣವಾಗಿರಲಿವೆ ಎಂಬ ಮುನ್ಸೂಚನೆ ಸಿಕ್ಕಿದೆ,(ಏಜೆನ್ಸೀಸ್​).