ಚೆನ್ನೈ: ತಮಿಳುನಾಡು ಚುನಾವಣೆಯ ಬಳಿಕ ರಾಜಕೀಯದಲ್ಲಿ ಅನಿರೀಕ್ಷಿತ ಬೆಳವಣಿಗೆ ನಡೆಯುತ್ತಿದ್ದು, ಸಿಎಂ ವಿಜಯ್ ಅವರನ್ನು ಬೆಂಬಲಿಸಿದ ಹಿನ್ನೆಲೆ ಅಮ್ಮ ಮಕ್ಕಳ್ ಮುನ್ನೇತ್ರ ಕಳಗಂ ಪಕ್ಷದಿಂದ ಗೆದ್ದಿದ್ದ ಏಕೈಕ ಶಾಸಕನನ್ನು ಮಂಗಳವಾರ(ಮೇ 12) ಪಕ್ಷದಿಂದ ಹೊರ ಹಾಕಿ ಮುಖ್ಯಸ್ಥ ಟಿಟಿವಿ ದಿನಕರನ್(TTV Dinakaran) ಆದೇಶ ಹೊರಡಿಸಿದ್ದಾರೆ.
ತಮಿಳುನಾಡಿನಲ್ಲಿ ಹೊಸ ಸರ್ಕಾರ ರಚಿಸಿರುವ ನಟ ದಳಪತಿ ವಿಜಯ್, ನಾಳೆ ವಿಧಾನಸಭೆಯಲ್ಲಿ ತಮ್ಮ ಸಂಖ್ಯಾಬಲವನ್ನು ತೋರಿಸಬೇಕಾಗಿದೆ. ಇಂದು ಸದನದಲ್ಲಿ ಮಾತನಾಡಿದ್ದ ಎಎಂಎಂಕೆ ಶಾಸಕ ಕಾಮರಾಜ್, ವಿಜಯ್ ಅವರನ್ನು ಹೊಗಳಿ ಬೆಂಬಲ ನೀಡಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆ ಪಕ್ಷದ ಶಿಸ್ತನ್ನು ಉಲ್ಲಂಘಿಸಿದ್ದಾರೆ ಮತ್ತು ಪ್ರತಿಸ್ಪರ್ಧಿ ಪಕ್ಷವನ್ನು ಬೆಂಬಲಿಸಿದ್ದಾರೆ ಎಂದು ತಮ್ಮ ಏಕೈಕ ಶಾಸಕನನ್ನು ದಿನಕರನ್ ಹೊರ ಹಾಕಿದ್ದಾರೆ.
ಈ ಹಿಂದೆ ಶಾಸಕ ಕಾಮರಾಜ್ ಟಿವಿಕೆ ಬೆಂಬಲ ನೀಡಿದ್ದಾರೆ ಎಂಬ ಹಿನ್ನೆಲೆ, ಸ್ಪಷ್ಟೀಕರಣ ನೀಡಿದ್ದ ದಿನಕರನ್, ಆಕ್ಷೇಪ ವ್ಯಕ್ತಪಡಿಸಿ ನಮ್ಮ ಪಕ್ಷವೂ ಟಿವಿಕೆಗೆ ಬೆಂಬಲ ನೀಡಲ್ಲ ಎಂದು ಘೋಷಣೆ ಮಾಡಿದ್ದರು. ಆದರೆ, ಟಿವಿಕೆ ಕಾಮರಾಜ್ ಸ್ವಯಂಪ್ರೇರಣೆಯಿಂದ ಬೆಂಬಲ ವ್ಯಕ್ತಪಡಿಸಿ ಪತ್ರವನ್ನು ನೀಡಿದ್ದಾರೆ ಮತ್ತು ಅದಕ್ಕೆ ವೀಡಿಯೊ ಪುರಾವೆಗಳಿವೆ ಎಂದು ವಿಡಿಯೋ ಬಿಡುಗಡೆ ಮಾಡಿತ್ತು.
ಆದಾಗ್ಯೂ, ದಿನಕರನ್ ಪತ್ರ ಮತ್ತು ವೀಡಿಯೊವನ್ನು ನಕಲಿ ಎಂದು ತಳ್ಳಿಹಾಕಿ, ವಿಜಯ್ ಅವರ ಟಿವಿಕೆ ಪಕ್ಷವು ರಾಜ್ಯಪಾಲರನ್ನು ದಾರಿ ತಪ್ಪಿಸುತ್ತಿದೆ ಮತ್ತು AI ತಂತ್ರಜ್ಞಾನವನ್ನು ಬಳಸಿಕೊಂಡು ವೀಡಿಯೊಗಳನ್ನು ರಚಿಸಿದೆ ಎಂದು ಆರೋಪಿಸಿದ್ದರು. ಈ ಬಗ್ಗೆ ಕಾನೂನು ಹೋರಾಟ ನಡೆಸುವುದಾಗಿ ಹೇಳಿದ್ದರು (ಏಜೆನ್ಸೀಸ್).