ದ್ರಾವಿಡ ನೆಲದಲ್ಲಿ ವಿಜಯಾರಂಭ: ತಮಿಳುನಾಡು ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ದಳಪತಿ! 
ದೇಶ

ದ್ರಾವಿಡ ನೆಲದಲ್ಲಿ ವಿಜಯಾರಂಭ: ತಮಿಳುನಾಡು ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ದಳಪತಿ! Vijay Oath Taking

ಚೆನ್ನೈ: ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ ಇಂದು ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ದಿನವಾಗಿದೆ. ದಶಕಗಳ ಕಾಲ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳ ನಡುವೆ ಹಂಚಿಹೋಗಿದ್ದ ತಮಿಳುನಾಡಿನ ಅಧಿಕಾರ ಚುಕ್ಕಾಣಿ ಇಂದು ಅಧಿಕೃತವಾಗಿ ಬದಲಾಗುತ್ತಿದೆ. ಟಿವಿಕೆ ಪಕ್ಷದ ಸ್ಥಾಪಕ ಅಧ್ಯಕ್ಷ, ಜನಪ್ರಿಯ ನಟ ಚಂದ್ರಶೇಖರ್ ಜೋಸೆಫ್ ವಿಜಯ್(Vijay Oath Taking) ತಮಿಳುನಾಡಿನ 9ನೇ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಚೆನ್ನೈನ ಜವಾಹರಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಈ ಭವ್ಯ ಸಮಾರಂಭದಲ್ಲಿ ವಿಜಯ್ ಅವರಿಗೆ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣವಚನ ಬೋಧಿಸಿದ್ದಾರೆ.

ಪದಾರ್ಪಣೆಯಲ್ಲೇ ದಾಖಲೆ ಬರೆದ ಟಿವಿಕೆ!

ತಮ್ಮ ಚೊಚ್ಚಲ ವಿಧಾನಸಭಾ ಚುನಾವಣೆಯಲ್ಲೇ ತಮಿಳುನಾಡು ವೆಟ್ರಿ ಕಳಗಂ (TVK) ಪಕ್ಷವು 108 ಸ್ಥಾನಗಳನ್ನು ಗೆಲ್ಲುವ ಮೂಲಕ ಅಭೂತಪೂರ್ವ ದಾಖಲೆ ನಿರ್ಮಿಸಿದೆ. ಒಟ್ಟು 234 ಸದಸ್ಯ ಬಲದ ವಿಧಾನಸಭೆಯಲ್ಲಿ ಬಹುಮತಕ್ಕೆ 118 ಸ್ಥಾನಗಳ ಅಗತ್ಯವಿದ್ದು, ವಿಜಯ್ ನೇತೃತ್ವದ ಮೈತ್ರಿಕೂಟಕ್ಕೆ ಒಟ್ಟು 121 ಶಾಸಕರ ಬೆಂಬಲವಿದೆ.
ಶನಿವಾರ ಸಂಜೆ ರಾಜಭವನದಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಿದ್ದ ವಿಜಯ್, ತಮ್ಮ ಬೆಂಬಲಿಗ ಶಾಸಕರ ಪಟ್ಟಿಯನ್ನು ಸಲ್ಲಿಸಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದರು. ಈ ಮೈತ್ರಿಕೂಟದಲ್ಲಿ ಟಿವಿಕೆ ಹೊರತಾಗಿ ಈ ಕೆಳಗಿನ ಪಕ್ಷಗಳು ಬೆಂಬಲ ಸೂಚಿಸಿವೆ.
ಟಿವಿಕೆ: 108 ಶಾಸಕರು
ಕಾಂಗ್ರೆಸ್: 05 ಶಾಸಕರು
ಸಿಪಿಐ (CPI): 02 ಶಾಸಕರು
ಸಿಪಿಐ-ಎಂ (CPI-M): 02 ಶಾಸಕರು
ವಿಸಿಕೆ (VCK): 02 ಶಾಸಕರು
ಐಯುಎಂಎಲ್ (IUML): 02 ಶಾಸಕರು

1967ರ ನಂತರದ ಮೊದಲ ಐತಿಹಾಸಿಕ ಬದಲಾವಣೆ

1967ರಿಂದ ಈವರೆಗೆ ತಮಿಳುನಾಡಿನ ಆಡಳಿತವು ಕೇವಲ ಎರಡು ಪ್ರಮುಖ ದ್ರಾವಿಡ ಪಕ್ಷಗಳ (ಡಿಎಂಕೆ ಮತ್ತು ಎಐಎಡಿಎಂಕೆ) ನಡುವೆ ಸುತ್ತುತ್ತಿತ್ತು. ಆದರೆ ಇಂದು ವಿಜಯ್ ಸಿಎಂ ಆಗಿ ಅಧಿಕಾರ ವಹಿಸಿಕೊಳ್ಳುವ ಮೂಲಕ ಈ ಪದ್ಧತಿಯನ್ನು ಮುರಿದಿದ್ದಾರೆ. ತಮ್ಮನ್ನು ತಾವು "ಪರ್ಯಾಯ ದ್ರಾವಿಡ ರಾಜಕಾರಣದ" ಧ್ವನಿ ಎಂದು ಬಿಂಬಿಸಿಕೊಂಡಿದ್ದ ವಿಜಯ್, ಭ್ರಷ್ಟಾಚಾರ ಮುಕ್ತ ಮತ್ತು ಜನಪರ ಆಡಳಿತದ ಭರವಸೆ ನೀಡಿದ್ದಾರೆ.

ಜನಪ್ರಿಯತೆಯಿಂದ ಜನಸೇವೆಯತ್ತ...

ಸಿನಿಮಾ ರಂಗದಲ್ಲಿ ದಳಪತಿಯಾಗಿ ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದಿದ್ದ ವಿಜಯ್, ಈಗ ತಮಿಳುನಾಡಿನ ಆಡಳಿತ ಚುಕ್ಕಾಣಿ ಹಿಡಿಯುವ ಮೂಲಕ ಹೊಸ ಸವಾಲನ್ನು ಎದುರಿಸಲು ಸನ್ನದ್ಧರಾಗಿದ್ದಾರೆ. ನಮ್ಮ ಗುರಿ ಭಾಷಣವಲ್ಲ, ಆಡಳಿತ ಎಂಬ ಘೋಷಣೆಯೊಂದಿಗೆ ಅಧಿಕಾರಕ್ಕೆ ಬರುತ್ತಿರುವ ವಿಜಯ್ ಅವರ ಈ ಇನಿಂಗ್ಸ್ ಮೇಲೆ ಇಡೀ ದೇಶದ ಕಣ್ಣಿದೆ,(ಏಜೆನ್ಸೀಸ್​).