ಜಗತ್ತು 2027ರಲ್ಲಿ ಹವಾಮಾನದ ಮತ್ತೊಂದು ಕಠಿಣ ಪರೀಕ್ಷೆ ಎದುರಿಸಲು ಸಜ್ಜಾಗಬೇಕಿದೆ. ಪೆಸಿಫಿಕ್ ಸಾಗರದಲ್ಲಿ ರೂಪುಗೊಳ್ಳುತ್ತಿರುವ ಪ್ರಬಲ ಹವಾಮಾನ ವಿದ್ಯಮಾನವು ಜಾಗತಿಕ ತಾಪಮಾನವನ್ನು ಮತ್ತಷ್ಟು ಹೆಚ್ಚಿಸಲಿದೆ. ಇದರ ಪರಿಣಾಮವಾಗಿ ಕೆಲವು ದೇಶಗಳಲ್ಲಿ ಬರ, ಹೀಟ್ ವೇವ್ ಮತ್ತು ಕಾಡ್ಗಿಚ್ಚು ತೀವ್ರಗೊಂಡರೆ, ಇನ್ನು ಕೆಲವು ಕಡೆ ಅತಿವೃಷ್ಟಿ ಹಾಗೂ ಪ್ರವಾಹದ ಅಪಾಯ ಹೆಚ್ಚಲಿದೆ. ಕೃಷಿ, ಆಹಾರ ಭದ್ರತೆ, ವಿದ್ಯುತ್ ಪೂರೈಕೆ ಮತ್ತು ಜನರ ಆರೋಗ್ಯದ ಮೇಲೂ ಇದು ಪರಿಣಾಮ ಬೀರುವ ಸಾಧ್ಯತೆ ಇದೆ. ಹವಾ ಮಾನದ ಈ ವೈಪರೀತ್ಯಗಳನ್ನು ಎದುರಿಸಲು ಜಗತ್ತು ಎಷ್ಟರ ಮಟ್ಟಿಗೆ ಸಿದ್ಧವಾಗಿದೆ ಎಂಬುದೇ ಈಗಿನ ಪ್ರಮುಖ ಪ್ರಶ್ನೆ.
ಹವಾಮಾನ ಬದಲಾಗುತ್ತಿದೆ ಎಂಬುದು ಇತ್ತೀಚಿನವರೆಗೂ ವಿಜ್ಞಾನಿಗಳ ಎಚ್ಚರಿಕೆಯ ರೂಪದಲ್ಲಿ ಮಾತ್ರ ಇತ್ತು. ಆದರೀಗ ಅದು ವಾಸ್ತವದ ಸ್ವರೂಪ ಪಡೆದುಕೊಂಡಿದೆ. ಒಂದೆಡೆ ವಿಪರೀತ ಬಿಸಿಲಿದ್ದರೆ, ಮತ್ತೊಂದೆಡೆ ಭಾರಿ ಮಳೆ; ಒಂದೆಡೆ ತೀವ್ರ ಬರಗಾಲವಿದ್ದರೆ ಇನ್ನೊಂದೆಡೆ ಪ್ರವಾಹ; ಇದೆಲ್ಲವನ್ನೂ ಈಗಾಗಲೇ ನಾವೆಲ್ಲ ಕಾಣತೊಡಗಿದ್ದೇವೆ. ಮಳೆಗಾಲದಲ್ಲೇ ಬೇಸಿಗೆಯಂತಹ ಬಿರುಬಿಸಿಲು ಈ ವರ್ಷವೇ ನಮ್ಮ ಅನುಭವಕ್ಕೆ ಬರತೊಡಗಿದೆ. ಈ ನಡುವೆ 2027ರ ಹವಾಮಾನದ ಬಗ್ಗೆ ಹೊಸ ಆತಂಕ ಎದುರಾಗಿದೆ. ಪೆಸಿಫಿಕ್ ಸಾಗರದಲ್ಲಿ ರೂಪುಗೊಳ್ಳುತ್ತಿರುವ ಎಲ್ ನಿನೊ ವಿದ್ಯಮಾನವು ಜಾಗತಿಕ ತಾಪಮಾನವನ್ನು ಇನ್ನಷ್ಟು ಹೆಚ್ಚಿಸಲಿದೆ ಎಂಬ ಮುನ್ಸೂಚನೆ ಇದಕ್ಕೆ ಕಾರಣ. ಅದರರ್ಥ ಜಗತ್ತಿನೆಲ್ಲೆಡೆ ಬರಗಾಲ ಅಥವಾ ಪ್ರವಾಹ ಖಚಿತ ಎಂದಲ್ಲ. ಅದರ ಪರಿಣಾಮಗಳು ಪ್ರದೇಶ, ಋತುಮಾನ ಮತ್ತು ಸ್ಥಳೀಯ ಹವಾಮಾನ ಪರಿಸ್ಥಿತಿಗೆ ಅನುಗುಣವಾಗಿ ಬದಲಾಗುತ್ತವೆ. ಈಗಾಗಲೇ ಹೆಚ್ಚಿರುವ ಅಪಾಯಗಳಿಗೆ ಎಲ್ ನಿನೊ ಮತ್ತಷ್ಟು ಅಪಾಯಗಳನ್ನು ಸೇರಿಸಬಹುದು ಎಂಬುದು ವಿಜ್ಞಾನಿಗಳು ನೀಡುತ್ತಿರುವ ಎಚ್ಚರಿಕೆ. ಭಾರತದ ಮಟ್ಟಿಗೆ ಮುಂಗಾರು ಮಳೆ, ಕೃಷಿ ಉತ್ಪಾದನೆ, ಕುಡಿಯುವ ನೀರು ಮತ್ತು ವಿದ್ಯುತ್ ಬೇಡಿಕೆ ಪ್ರಮುಖ ಸಮಸ್ಯೆಗಳಾಗಲಿವೆ. ವಿಜ್ಞಾನಿಗಳ ಮುನ್ಸೂಚನೆಗಳನ್ನು ಸುದ್ದಿಯಾಗಿ ನೋಡಿ ಸುಮ್ಮನಾಗದೆ, ಸಂಭವನೀಯ ಸಂಕಷ್ಟವನ್ನು ಎದುರಿಸಲು ಸಿದ್ಧತೆ ಮಾಡಿಕೊಳ್ಳುವುದು ಅಗತ್ಯ.
ಸಾಗರದೊಳಗೆ ಕುದಿಎಸರು!:
ಜಗತ್ತಿನ ಹವಾಮಾನ ವಿಜ್ಞಾನಿಗಳ ಗಮನ ಈಗ ಪೆಸಿಫಿಕ್ ಸಾಗರದ ಮೇಲೆ ನೆಟ್ಟಿದೆ. ಏಕೆಂದರೆ, ಅಲ್ಲಿ ನಡೆಯುವ ತಾಪಮಾನದ ಬದಲಾವಣೆ ಸಾವಿರಾರು ಕಿಲೋಮೀಟರ್ ದೂರದಲ್ಲಿರುವ ಪ್ರದೇಶಗಳ ಮಳೆ ಮತ್ತು ತಾಪಮಾನದ ಮೇಲೂ ಪರಿಣಾಮ ಬೀರಬಲ್ಲದು. ಸಾಮಾನ್ಯ ಪರಿಸ್ಥಿತಿಯಲ್ಲಿ ಪೆಸಿಫಿಕ್ ಸಾಗರದ ಮೇಲ್ಮೈಯಲ್ಲಿ ಬೀಸುವ ಮಾರುತಗಳು ಬೆಚ್ಚಗಿನ ನೀರನ್ನು ಪಶ್ಚಿಮದ ಕಡೆಗೆ ತಳ್ಳುತ್ತವೆ. ಇದರಿಂದ ಇಂಡೋನೇಷ್ಯಾ ಮತ್ತು ಆಸ್ಟ್ರೇಲಿಯಾದ ಸಮೀಪ ಬೆಚ್ಚಗಿನ ನೀರು ಸಂಗ್ರಹವಾಗುತ್ತದೆ. ದಕ್ಷಿಣ ಅಮೆರಿಕದ ಪಶ್ಚಿಮ ಕರಾವಳಿಯ ಸಮೀಪ ತಂಪನೆ ನೀರು ಮೇಲಕ್ಕೆ ಬರುತ್ತದೆ. ಆದರೆ ಎಲ್ ನಿನೊ ವೇಳೆ ಇದರಲ್ಲಿ ಬದಲಾವಣೆಯಾಗುತ್ತದೆ. ಮಾರುತಗಳು ದುರ್ಬಲಗೊಳ್ಳುತ್ತವೆ. ಸಾಗರದ ಮಧ್ಯ ಮತ್ತು ಪೂರ್ವ ಭಾಗಗಳನ್ನು ಬೆಚ್ಚಗಿನ ನೀರು ವ್ಯಾಪಿಸಿಕೊಳ್ಳುತ್ತದೆ. 2026ರ ಅ. 8ರಂದು ವಿಶ್ವ ಹವಾಮಾನ ಸಂಸ್ಥೆ ಪ್ರಕಟಿಸಿದ ಮುನ್ಸೂಚನೆಯ ಪ್ರಕಾರ, ಪೆಸಿಫಿಕ್ ಸಾಗರದ ಮಧ್ಯ ಮತ್ತು ಪೂರ್ವ ಭಾಗಗಳ ಮೇಲ್ಮೈ ತಾಪಮಾನ ಅಕ್ಟೋಬರ್ನಿಂದ ಡಿಸೆಂಬರ್ವರೆಗಿನ ಅವಧಿಯಲ್ಲಿ ದಾಖಲೆ ಮಟ್ಟ ತಲುಪುವ ಸಾಧ್ಯತೆಯಿದೆ. ಅದರಿಂದಾಗಿ ಡಿಸೆಂಬರ್ ವೇಳೆಗೆ ಎಲ್ ನಿನೊ ಗರಿಷ್ಠ ಸ್ಥಿತಿಗೆ ತಲುಪಬಹುದು. ಸಾಗರದೊಳಗಿನ ತಾಪಮಾನದ ಏರಿಕೆಯ ಪರಿಣಾಮವಾಗಿ ಭೂಮಿಯ ಮೇಲೆ ಮಳೆಯ ಹಂಚಿಕೆ ಮತ್ತು ಬಿಸಿಗಾಳಿಯ ಪ್ರಮಾಣ ಬದಲಾಗುತ್ತವೆ. ಹಾಗಾಗಿಯೇ 2027ರ ಹವಾಮಾನ ಆತಂಕ ಹೆಚ್ಚಿಸಿದೆ.
ದಾಖಲೆ ಬಿಸಿಯ ವರ್ಷ?
ಮಾನವ ಚಟುವಟಿಕೆಗಳಿಂದ ಹೊರಸೂಸುವ ಹಸಿರುಮನೆ ಅನಿಲಗಳು ಭೂಮಿಯ ವಾತಾವರಣದಲ್ಲಿ ಶಾಖವನ್ನು ಹಿಡಿದಿಡುತ್ತವೆ. ಇದರಿಂದ ದೀರ್ಘಕಾಲೀನ ಜಾಗತಿಕ ತಾಪಮಾನ ಹೆಚ್ಚುತ್ತಿದೆ. ಈ ‘ಬೆಂಕಿ’ಗೆ ಎಲ್ ನಿನೊ ಮತ್ತಷ್ಟು ‘ತುಪ್ಪ’ ಸುರಿಯಲಿದೆ. ಹಿಂದಿನ ಕೆಲವು ಪ್ರಬಲ ಎಲ್ ನಿನೊಗಳ ಅವಧಿಯಲ್ಲಿ ಜಾಗತಿಕ ತಾಪಮಾನ ದಾಖಲೆ ಮಟ್ಟದಲ್ಲಿ ಏರಿತ್ತು. 2015-16ರ ಎಲ್ ನಿನೊ ಹಾಗೂ 2023-24ರ ಹವಾಮಾನ ಪರಿಸ್ಥಿತಿಗಳು ಇದಕ್ಕೆ ಪ್ರಮುಖ ಉದಾಹರಣೆಗಳು. ಆದರೆ ಪ್ರತಿಯೊಂದು ಅವಧಿಯ ತೀವ್ರತೆ ಮತ್ತು ಪರಿಣಾಮ ಒಂದೇ ರೀತಿಯಾಗಿರುವುದಿಲ್ಲ. ಇತ್ತೀಚೆಗೆ ಅಮೆರಿಕದ ಹವಾಮಾನ ಮುನ್ಸೂಚನಾ ಕೇಂದ್ರ ಪ್ರಕಟಿಸಿದ ವರದಿ ಪ್ರಕಾರ, 2027ರ ಜನವರಿಯಿಂದ ಮಾರ್ಚ್ವರೆಗಿನ ಅವಧಿಯಲ್ಲಿ ಎಲ್ ನಿನೊ ಅತ್ಯಂತ ಪ್ರಬಲವಾಗಿರಲಿದೆ. ಆದರೆ, ಜಾಗತಿಕ ಸರಾಸರಿ ತಾಪಮಾನ 2027ರಲ್ಲಿ ಯಾವ ಮಟ್ಟ ತಲುಪಲಿದೆ ಎಂಬುದನ್ನು ಎಲ್ ನಿನೊದ ಬಲವೊಂದರಿಂದಲೇ ನಿರ್ಧರಿಸಲಾಗದು. ವಾತಾವರಣದಲ್ಲಿನ ಹಸಿರುಮನೆ ಅನಿಲಗಳ ಪ್ರಮಾಣ, ಸಾಗರಗಳ ಉಷ್ಣಾಂಶ ಮತ್ತು ಇತರ ನೈಸರ್ಗಿಕ ಹವಾಮಾನ ಪ್ರಕ್ರಿಯೆಗಳೂ ಪ್ರಭಾವ ಬೀರುತ್ತವೆ. ಹೀಗಾಗಿ 2027ರಲ್ಲಿ ಬಿಸಿಗಾಳಿಯ ಅಪಾಯ ಹೆಚ್ಚುವ ಸಾಧ್ಯತೆ ಇದೆ ಎನ್ನುವುದು ವೈಜ್ಞಾನಿಕವಾಗಿ ಸರಿ. ಆದರೆ ವರ್ಷವಿಡೀ ಎಲ್ಲೆಡೆ ದಾಖಲೆ ಮಟ್ಟದ ಬಿಸಿಲು ಇರುತ್ತದೆ ಎಂದೇನಲ್ಲ.
ಒಂದೆಡೆ ಬರ, ಮತ್ತೊಂದೆಡೆ ಪ್ರವಾಹ
ಹವಾಮಾನ ವೈಪರೀತ್ಯದ ವೈಚಿತ್ರ್ಯೆಂದರೆ, ಒಂದೇ ಸಮಯದಲ್ಲಿ ಜಗತ್ತಿನ ಒಂದು ಭಾಗ ಬರದಿಂದ ತತ್ತರಿಸುತ್ತಿದ್ದರೆ ಮತ್ತೊಂದು ಭಾಗ ಪ್ರವಾಹವನ್ನು ಎದುರಿಸುತ್ತದೆ. ಮಳೆಯ ಹಂಚಿಕೆಯಲ್ಲಿಯೂ ವ್ಯತ್ಯಾಸ ಉಂಟಾಗುತ್ತದೆ. ಕೆಲವು ಪ್ರದೇಶಗಳಲ್ಲಿ ಮಳೆ ಕಡಿಮೆಯಾಗಿ ಜಲಾಶಯಗಳು ಬತ್ತಿಹೋಗುತ್ತವೆ. ಇನ್ನು ಕೆಲವು ಕಡೆ ಅಲ್ಪಾವಧಿಯಲ್ಲಿ ಭಾರಿ ಮಳೆ ಸುರಿಯುತ್ತದೆ. ಮಣ್ಣು ತೇವವಾಗಿದ್ದರೆ ಅಥವಾ ನಗರಗಳಲ್ಲಿ ನೀರು ಹರಿದುಹೋಗುವ ವ್ಯವಸ್ಥೆ ಸಮರ್ಪಕವಾಗಿಲ್ಲದಿದ್ದರೆ ಪ್ರವಾಹದ ಹಾನಿ ಹೆಚ್ಚುತ್ತದೆ. ಇಲ್ಲಿ ಮತ್ತೊಂದು ಅಂಶ ಗಮನಿಸಬೇಕು. ಬೆಚ್ಚಗಿನ ವಾತಾವರಣವು ಹೆಚ್ಚಿನ ತೇವಾಂಶವನ್ನು ಹಿಡಿದಿಡಬಲ್ಲದು. ಸೂಕ್ತ ವಾತಾವರಣ ನಿರ್ವಣವಾದಾಗ ಈ ತೇವಾಂಶವೇ ತೀವ್ರ ಮಳೆಯ ರೂಪದಲ್ಲಿ ಸುರಿಯುತ್ತದೆ. ಆದರೆ ಎಲ್ ನಿನೊ ಇರುವುದರಿಂದಲೇ ಪ್ರತಿಯೊಂದು ಪ್ರದೇಶದಲ್ಲೂ ಅತಿವೃಷ್ಟಿ ಉಂಟಾಗುತ್ತದೆ ಎಂದು ಹೇಳಲಾಗದು. ಪ್ರವಾಹದ ಅಪಾಯ ಕಡಿಮೆ ಮಾಡಲು ನದಿಪಾತ್ರಗಳ ನಿರ್ವಹಣೆ, ಮಳೆನೀರು ಹರಿದುಹೋಗುವ ವ್ಯವಸ್ಥೆ, ಮುನ್ನೆಚ್ಚರಿಕೆ ಮತ್ತು ಅಪಾಯದ ಪ್ರದೇಶಗಳಿಂದ ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸುವ ಯೋಜನೆಗಳು ಮುಖ್ಯ.
ಭಾರತದ ಪಾಲಿಗೆ ಮುಂಗಾರು ದೊಡ್ಡ ಪ್ರಶ್ನೆ
ಭಾರತದಲ್ಲಿ ಕೃಷಿ, ಕುಡಿಯುವ ನೀರು, ಗ್ರಾಮೀಣ ಆರ್ಥಿಕತೆ ಮುಂತಾದವೆಲ್ಲವೂ ಮುಂಗಾರು ಮಳೆಯ ಮೇಲೆಯೇ ಅವಲಂಬಿತವಾಗಿವೆ. ಹೀಗಾಗಿ ಎಲ್ ನಿನೊ ಎಂದಾಕ್ಷಣ ರೈತರಲ್ಲಿ ಆತಂಕ ಮೂಡುತ್ತದೆ. ಭಾರತದ ಹವಾಮಾನ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, 1950ರಿಂದ ಗುರುತಿಸಲಾದ 16 ಎಲ್ ನಿನೊ ವರ್ಷಗಳ ಪೈಕಿ ಏಳು ವರ್ಷಗಳಲ್ಲಿ ಭಾರತದ ಮುಂಗಾರು ಮಳೆ ಸಾಮಾನ್ಯಕ್ಕಿಂತ ಕಡಿಮೆಯಾಗಿತ್ತು. ಎಲ್ ನಿನೊದ ಪರಿಣಾಮವು ಮುಂಗಾರಿನ ಉತ್ತರಾರ್ಧದಲ್ಲಿ, ವಿಶೇಷವಾಗಿ ಸೆಪ್ಟೆಂಬರ್ ಮಳೆಯ ಸಂದರ್ಭದಲ್ಲಿ ಹೆಚ್ಚು ಸ್ಪಷ್ಟವಾಗುತ್ತದೆ. ಇದರಿಂದ ಎಲ್ ನಿನೊ ಉಂಟಾದಾಗಲೆಲ್ಲ ಭಾರತದಲ್ಲಿ ಬರಗಾಲ ಖಚಿತ ಎಂಬ ನಿರ್ಧಾರಕ್ಕೆ ಬರಬಾರದು. ಭಾರತೀಯ ಮಹಾಸಾಗರದ ತಾಪಮಾನ, ಮಾರುತಗಳ ಚಲನೆ ಮತ್ತು ಇತರ ಹವಾಮಾನ ಅಂಶಗಳು ಮಳೆಯ ಪ್ರಮಾಣವನ್ನು ಬದಲಾಯಿಸಬಲ್ಲವು. ಮುಂಗಾರು ಮಳೆ ಕಡಿಮೆಯಾದರೆ ಮಳೆಆಧಾರಿತ ಕೃಷಿ ಸಂಕಷ್ಟಕ್ಕೆ ಸಿಲುಕುತ್ತದೆ. ಬಿತ್ತನೆ ವಿಳಂಬವಾಗುತ್ತದೆ. ಕೆಲವು ಬೆಳೆಗಳಿಗೆ ಅಗತ್ಯವಾದ ತೇವಾಂಶ ದೊರೆಯದೆ ಇಳುವರಿ ಕುಸಿಯುತ್ತದೆ. ಜಲಾಶಯಗಳಿಗೆ ನೀರಿನ ಒಳಹರಿವು ಕಡಿಮೆಯಾಗಿ ಕುಡಿಯುವ ನೀರು ಮತ್ತು ನೀರಾವರಿ ವ್ಯವಸ್ಥೆಯ ಮೇಲೆ ಒತ್ತಡ ಹೆಚ್ಚುತ್ತದೆ.
ಆಹಾರ ಭದ್ರತೆಯ ಸವಾಲು
ಬಿಸಿಲು ಮತ್ತು ಒಣ ಹವಾಮಾನ ದೀರ್ಘಕಾಲ ಮುಂದುವರಿದರೆ ಕಾಡ್ಗಿಚ್ಚಿನ ಅಪಾಯ ಹೆಚ್ಚುತ್ತದೆ. ಒಣಗಿದ ಹುಲ್ಲು, ಎಲೆಗಳು ಮತ್ತು ಸಸ್ಯಗಳು ಬೆಂಕಿ ಹರಡಲು ಕಾರಣವಾಗುತ್ತವೆ. ಬೆಂಕಿ ನಿಯಂತ್ರಣ ತಪ್ಪಿದರೆ ಅರಣ್ಯ ಸಂಪತ್ತು, ವನ್ಯಜೀವಿಗಳು, ವಸತಿ ಪ್ರದೇಶಗಳು ಮತ್ತು ಮಾನವ ಜೀವಕ್ಕೆ ಅಪಾಯ ಉಂಟಾಗಬಹುದು. ಕಾಡ್ಗಿಚ್ಚಿನ ಹೊಗೆ ದೂರದ ಪ್ರದೇಶಗಳಿಗೂ ಹರಡಿ ಉಸಿರಾಟದ ಸಮಸ್ಯೆ ಹೆಚ್ಚಾಗುತ್ತದೆ. ಅರಣ್ಯ ನಾಶದಿಂದ ಪರಿಸರ ಹಾನಿಯಾಗುವುದರ ಜತೆಗೆ ಮಣ್ಣಿನ ಗುಣಮಟ್ಟ ಮತ್ತು ಜೀವವೈವಿಧ್ಯದ ಮೇಲೂ ಪರಿಣಾಮ ಬೀರುತ್ತದೆ. ಇದೇ ರೀತಿ ಬರದಿಂದ ಕೃಷಿ ಉತ್ಪಾದನೆ ಕುಸಿದರೆ ಆಹಾರ ಭದ್ರತೆ ಹಳಿ ತಪ್ಪುತ್ತದೆ. ಬೆಳೆಗಳ ಪೂರೈಕೆ ಕಡಿಮೆಯಾಗಿ ಆಹಾರ ಪದಾರ್ಥಗಳ ಬೆಲೆ ಹೆಚ್ಚುತ್ತದೆ. ಕೃಷಿ ಉತ್ಪನ್ನಗಳ ಮೇಲೆ ಅವಲಂಬಿತವಾಗಿರುವ ಕೈಗಾರಿಕೆಗಳು ಮತ್ತು ಗ್ರಾಮೀಣ ಉದ್ಯೋಗಕ್ಕೂ ಹೊಡೆತ ಬೀಳುತ್ತದೆ. ಹವಾಮಾನದ ಪರಿಣಾಮಗಳನ್ನು ಮುಂಚಿತವಾಗಿ ಅಂದಾಜಿಸಿ ಧಾನ್ಯ ಸಂಗ್ರಹ, ಬೆಳೆ ವಿಮೆ, ನೀರಿನ ಸಮರ್ಪಕ ಬಳಕೆ ಮತ್ತು ರೈತರಿಗೆ ಸಮಯೋಚಿತ ಮಾಹಿತಿ ಒದಗಿಸುವುದು ಇಂತಹ ಕ್ರಮಗಳನ್ನು ಕೈಗೊಂಡರೆ ಸಂಕಷ್ಟದ ತೀವ್ರತೆ ತಗ್ಗಬಹುದು.
ಸಿದ್ಧತೆ ಎಷ್ಟಿದೆ?
ಹವಾಮಾನ ವೈಪರೀತ್ಯವನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯವಿಲ್ಲ. ಆದರೆ ಅದರ ಪರಿಣಾಮದಿಂದ ಉಂಟಾಗುವ ಜೀವಹಾನಿ ಮತ್ತು ಆರ್ಥಿಕ ನಷ್ಟವನ್ನು ಕಡಿಮೆ ಮಾಡಲು ಸಾಧ್ಯವಿದೆ. ಅದಕ್ಕಾಗಿ ವೈಜ್ಞಾನಿಕ ಮುನ್ಸೂಚನೆಗಳನ್ನು ಆಧರಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿರ್ಧಾರಗಳನ್ನು ಕೈಗೊಳ್ಳಬೇಕಾಗುತ್ತದೆ. ಕೃಷಿ, ನೀರಾವರಿ, ಆರೋಗ್ಯ, ವಿದ್ಯುತ್ ಮತ್ತು ವಿಪತ್ತು ನಿರ್ವಹಣಾ ಇಲಾಖೆಗಳ ನಡುವೆ ಸಮನ್ವಯ ಹೆಚ್ಚಾಗ ಬೇಕು. ರೈತರಿಗೆ ಬೆಳೆ ಆಯ್ಕೆ ಮತ್ತು ಬಿತ್ತನೆ ಸಮಯದ ಕುರಿತು ಮುಂಚಿತ ವಾಗಿ ಮಾಹಿತಿ ನೀಡಬೇಕು. ಬರಗಾಲದ ಸಾಧ್ಯತೆ ಇರುವ ಪ್ರದೇಶಗಳಲ್ಲಿ ನೀರಿನ ಮಿತಬಳಕೆಗೆ ಆದ್ಯತೆ ನೀಡಬೇಕು. ಪ್ರವಾಹದ ಅಪಾಯವಿರುವೆಡೆ ಚರಂಡಿ ವ್ಯವಸ್ಥೆ ಮತ್ತು ನೀರು ಹರಿಯುವ ಮಾರ್ಗಗಳನ್ನು ಸರಿಪಡಿಸಬೇಕು. ಕಾಡ್ಗಿಚ್ಚಿನ ಸಾಧ್ಯತೆ ಇರುವಲ್ಲಿ ತುರ್ತು ಪ್ರತಿಕ್ರಿಯೆ ತಂಡಗಳನ್ನು ಸಿದ್ಧವಾಗಿಡಬೇಕು. ಜಾಗತಿಕ ಮಟ್ಟದಲ್ಲಿ ಹವಾಮಾನ ಬದಲಾವಣೆ ತಗ್ಗಿಸಲು ಹಸಿರುಮನೆ ಅನಿಲಗಳ ಹೊರಸೂಸುವಿಕೆ ಕಡಿಮೆ ಮಾಡುವ ಪ್ರಯತ್ನಕ್ಕೆ ವೇಗ ನೀಡಬೇಕು. ನವೀಕರಿಸಬಹುದಾದ ಇಂಧನ ಬಳಕೆ, ಅರಣ್ಯ ಸಂರಕ್ಷಣೆ ಮತ್ತು ಸುಸ್ಥಿರ ಕೃಷಿಯಿಂದ ದೀರ್ಘಕಾಲೀನ ಪರಿಹಾರ ಸಾಧ್ಯ. ಎಲ್ ನಿನೊದ ಪರಿಣಾಮಗಳು 2027ರಲ್ಲಿಯೂ ಮುಂದುವರಿಯುವ ಸಾಧ್ಯತೆ ಹೆಚ್ಚಾಗಿರುವುದರಿಂದ, ಮುಂದಿನ ತಿಂಗಳುಗಳಲ್ಲಿ ವೈಜ್ಞಾನಿಕ ಮುನ್ಸೂಚನೆಗಳ ಮೇಲೆ ಕಣ್ಣಿಡುವುದು ಮುಖ್ಯ. ಹವಾಮಾನ ಬದಲಾವಣೆಯ ವೇಗಕ್ಕೆ ತಕ್ಕಂತೆ ಸಿದ್ಧತೆಯ ವೇಗವೂ ಬದಲಾದರೆ ಮಾತ್ರ ಮನುಕುಲಕ್ಕೆ ಉಳಿಗಾಲ.