4 ಲಕ್ಷದ ಚಿನ್ನಾಭರಣವಿದ್ದ ಬ್ಯಾಗ್‌ ಕದ್ದ ಬೀದಿ ನಾಯಿ 
ದೇಶ

4 ಲಕ್ಷದ ಚಿನ್ನಾಭರಣವಿದ್ದ ಬ್ಯಾಗ್‌ ಕದ್ದು ಓಡಿದ ಬೌ..ಬೌ.. ! ಸಿಸಿಟಿವಿಯಲ್ಲಿ ಸರೆಯಾಯ್ತು ‘ಕಳ್ಳ’ ನಾಯಿಯ ಕೈವಾಡ | The Thief Dog

ಪ್ರಮುಖ ಮುಖ್ಯಾಂಶಗಳು

  • 4 ಲಕ್ಷದ ಚಿನ್ನಾಭರಣವಿದ್ದ ಬ್ಯಾಗ್‌ ಕದ್ದ ಬೀದಿ ನಾಯಿ
  • ಬ್ಯಾಗ್‌ನ್ನು ಬಾಯಿಯಲ್ಲಿ ಕಚ್ಚಿಕೊಂಡು ಓಡಿದ ಖದೀಮ ಡಾಗ್​
  • ಜಿಲ್ಲಾ ಆಸ್ಪತ್ರೆಯ ಸರ್ಜಿಕಲ್ ವಾರ್ಡ್‌ನಲ್ಲಿ ವಿಚಿತ್ರ ಘಟನೆ

The Thief Dog

: ಆಸ್ಪತ್ರೆಯಲ್ಲಿ ರೋಗಿಗಳು ತಮ್ಮ ವಸ್ತುಗಳನ್ನ ಎಷ್ಟೇ ಜಾಗರೂಕತೆಯಿಂದ ಇಟ್ಟುಕೊಂಡ್ರೂ ಸಾಲದು. ಅದರಲ್ಲೂ ಚಿನ್ನಾಭರಣದಂತಹ ಬೆಲೆಬಾಳುವ ವಸ್ತುಗಳಿದ್ರೆ ಇನ್ನೂ ಹೆಚ್ಚಿನ ಎಚ್ಚರಿಕೆ ಬೇಕಾಗುತ್ತೆ. ಆದ್ರೆ

ಮಧ್ಯಪ್ರದೇಶದ

ಮಂದಸೌರ್‌ನಲ್ಲಿ ನಡೆದ ಈ ಘಟನೆ ಮಾತ್ರ ಎಲ್ಲರನ್ನೂ ಅಚ್ಚರಿಗೊಳಿಸಿದೆ. ಬರೋಬ್ಬರಿ 4 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣಗಳಿದ್ದ ಬ್ಯಾಗ್‌ ಅನ್ನು ಬೀದಿ ನಾಯಿಯೊಂದು ಬಾಯಲ್ಲಿ ಕಚ್ಚಿಕೊಂಡು ಎಸ್ಕೇಪ್ ಆಗಿದೆ.

ಬ್ಯಾಗ್‌ನಲ್ಲಿ ಏನಿತ್ತು?

ಮಂದಸೌರ್ ಜಿಲ್ಲಾ ಆಸ್ಪತ್ರೆಯ ಸರ್ಜಿಕಲ್ ವಾರ್ಡ್‌ನಲ್ಲೇ ಈ ವಿಚಿತ್ರ ಘಟನೆ ನಡೆದಿದೆ. ಆಸ್ಪತ್ರೆಗೆ ದಾಖಲಾಗಿದ್ದ ರೋಗಿಯೊಬ್ಬರ ಸಂಬಂಧಿ ಮಹಿಳೆ ತಮ್ಮ ಹಾಸಿಗೆಯ ಪಕ್ಕದಲ್ಲೇ ಬ್ಯಾಗ್ ಇಟ್ಟಿದ್ದರು. ಆ ಬ್ಯಾಗ್‌ನಲ್ಲಿ ಬರೋಬ್ಬರಿ 4 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣಗಳ ಜೊತೆಗೆ 2,000 ರೂ. ನಗದು ಇತ್ತು. ಇದೇ ವೇಳೆ ವಾರ್ಡ್‌ಗೆ ಬಂದ ಬೀದಿ ನಾಯಿಯೊಂದು ಏಕಾಏಕಿ ಆ ಬ್ಯಾಗ್‌ನ್ನು ಬಾಯಲ್ಲಿ ಕಚ್ಚಿಕೊಂಡು ಅಲ್ಲಿಂದ ಓಡಿದೆ.

ತಿಂಡಿ ವಾಸನೆಗೆ ಬಂದ ನಾಯಿ?


ಪೊಲೀಸರ ಪ್ರಕಾರ, ಬ್ಯಾಗ್‌ನಲ್ಲಿ ಆಭರಣಗಳ ಜೊತೆಗೆ ತಿಂಡಿ-ತಿನಿಸುಗಳೂ ಇದ್ದವು. ಆಹಾರದ ವಾಸನೆಗೆ ಆಕರ್ಷಿತವಾದ ನಾಯಿ, ಬ್ಯಾಗ್‌ನೊಳಗೆ ತಿಂಡಿ ಇರಬಹುದು ಎಂದು ಭಾವಿಸಿ ಅದನ್ನು ಬಾಯಿಯಲ್ಲಿ ಕಚ್ಚಿಕೊಂಡು ಓಡಿರುವ ಸಾಧ್ಯತೆ ಇದೆ. ಬ್ಯಾಗ್ ನಾಪತ್ತೆಯಾಗಿರುವುದು ಗೊತ್ತಾದ ತಕ್ಷಣ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.

ಸಿಸಿಟಿವಿಯಿಂದ ಸಿಕ್ಕ ಸುಳಿವು

ಪೊಲೀಸರು ಆಸ್ಪತ್ರೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಅಚ್ಚರಿಯ ಸಂಗತಿ ಬೆಳಕಿಗೆ ಬಂದಿದೆ. ನಾಯಿಯೇ ಬ್ಯಾಗ್‌ ಅನ್ನು ಹೊತ್ತೊಯ್ದಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಬಳಿಕ ಪೊಲೀಸರು ಸಿಸಿಟಿವಿ ವಿಡಿಯೋ ಆಧರಿಸಿ ನಾಯಿ ಹೋದ ದಾರಿಯನ್ನು ಪತ್ತೆಹಚ್ಚಿದ್ದಾರೆ. ಆಸ್ಪತ್ರೆ ಆವರಣದ ಬಳಿಯೇ ಬ್ಯಾಗ್ ಪತ್ತೆಯಾಗಿದ್ದು, ಅದರಲ್ಲಿದ್ದ ಚಿನ್ನ, ಬೆಳ್ಳಿ ಆಭರಣಗಳು ಹಾಗೂ 2,000 ರೂ. ನಗದು ಇದ್ದವು.
ಬಳಿಕ ಪೊಲೀಸರು ಎಲ್ಲ ವಸ್ತುಗಳನ್ನು ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ. ಸದ್ಯ ಈ ವಿಲಕ್ಷಣ ಘಟನೆಯ ಸಿಸಿಡಿವಿ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆಸ್ಪತ್ರೆಯಲ್ಲಿ ಕಳ್ಳತನ ಮಾಡಿದ್ದು ಮನುಷ್ಯನಲ್ಲ, ನಾಯಿ. ಎಂದು ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.