ಶಂಖ್​ ಏರ್​ಲೈನ್ಸ್ ಸ್ಥಾಪಕ ಶ್ರವಣ್ ಕುಮಾರ್ ವಿಶ್ವಕರ್ಮ 
ದೇಶ

ಟೆಂಪೋ ಚಾಲಕನೊಬ್ಬ ಹೊಸ ವಿಮಾನಯಾನ ಸಂಸ್ಥೆ ಶಂಖ್​​ ಏರ್​ಲೈನ್ಸ್ ಕಟ್ಟಿದ್ದೇಗೆ? ಯಾರು ಈ ಶ್ರವಣ್​ಕುಮಾರ್? ಇಲ್ಲಿದೆ ಕಂಪ್ಲೀಟ್ ಮಾಹಿತಿ | Shankh Airlines

ಪ್ರಮುಖ ಮುಖ್ಯಾಂಶಗಳು

  • ಇಂಡಿಗೋ ವಿಮಾನಯಾನ ಸಂಸ್ಥೆಯಿಂದಾದ ಬಿಕ್ಕಟ್ಟಿನಿಂದ ಎಚ್ಚೆತ್ತುಕೊಂಡ ಕೇಂದ್ರ
  • ಮೂರು ಹೊಸ ವಿಮಾನಯಾನ ಸಂಸ್ಥೆಗಳಿಗೆ ಮಾರುಕಟ್ಟೆಗೆ ಪ್ರವೇಶಿಸಲು ಎನ್​ಓಸಿ
  • ಶಂಖ್ ಏರ್, ಅಲ್ ಹಿಂದ್ ಏರ್ ಮತ್ತು ಫ್ಲೈಎಕ್ಸ್‌ಪ್ರೆಸ್ ಏರ್​ಲೈನ್ಸ್​​ ಸಂಸ್ಥೆಗಳಿಗೆ ಎನ್​ಓಸಿ
  • ಟೆಂಪೋ ಚಾಲಕನಾಗಿದ್ದ ಶಂಖ್​ ಏರ್​ಲೈನ್ಸ್​ ಸ್ಥಾಪಕ ಶ್ರವಣ್​ಕುಮಾರ್ ವಿಶ್ವಕರ್ಮ
ನವದೆಹಲಿ: ಸರಿಯಾಗಿ ಇಂದಿಗೆ ಒಂದು ತಿಂಗಳ ಹಿಂದೆ ದೇಶದ ಹಲವು ಏರ್​ಪೋರ್ಟ್​ಗಳಲ್ಲಿ ಇಂಡಿಗೋ ವಿಮಾನಯಾನ ಸಂಸ್ಥಯು ತನ್ನ ವಿಮಾನಗಳ ಹಾರಾಟ ವ್ಯತ್ಯಯ ಮತ್ತು ರದ್ದುಗೊಳಿಸಿ ದೇಶದ ವಿಮಾನಯಾನ ಪ್ರಯಾಣಿಕರನ್ನು ಸಂಕಷ್ಟಕ್ಕೆ ದೂಡಿತ್ತು. ಇದು ಕೇಂದ್ರ ಸರ್ಕಾರದ ಏಕಸ್ವಾಮ್ಯದ ಪ್ರತಿಫಲ ಎಂದು ವಿರೋಧ ಪಕ್ಷಗಳು ಟೀಕಿಸಿದ್ದವು.
ಇಂಡಿಗೋ ವಿಮಾನಯಾನ ಸಂಸ್ಥೆಯಿಂದಾದ ಬಿಕ್ಕಟ್ಟಿನಿಂದ ಎಚ್ಚೆತ್ತುಕೊಂಡಿರುವ ಕೇಂದ್ರ ವಿಮಾನಯಾನ ಸಚಿವಾಲಯ, ದೇಶದ ಎರಡೇ ವಿಮಾನಯಾನ ಸಂಸ್ಥೆಗಳ ಮೇಲಿನ ಅವಲಂಬನೆ ಕಡಿಮೆ ಮಾಡಲು ಹೊಸ ವಿಮಾನಯಾನ ಸಂಸ್ಥೆಗಳಿಗೆ ಭಾರತೀಯ ವಾಯುಯಾನ ಮಾರುಕಟ್ಟೆಗೆ ಪ್ರವೇಶಿಸಲು ಅನುವು ಮಾಡಿಕೊಟ್ಟಿದ್ದು, ಮೂರು ಹೊಸ ಏರ್​ಲೈನ್ಸ್​ಗಳಿಗೆ ಎನ್​ಓಸಿ ನೀಡಿದೆ. ಶಂಖ್ ಏರ್, ಅಲ್ ಹಿಂದ್ ಏರ್ ಮತ್ತು ಫ್ಲೈಎಕ್ಸ್‌ಪ್ರೆಸ್ ಸಂಸ್ಥೆಗಳು ಎನ್​ಓಸಿ ಪಡೆದಿದ್ದು, ಈ ವರ್ಷ ಹಾರಾಟ ಆರಂಭಿಸುವ ಸಾಧ್ಯತೆ ಇದೆ.
ಮೂರು ಹೊಸ ಏರ್​ಲೈನ್ಸ್​ ಪೈಕಿ ಶಂಖ್​ ಏರ್​ಲೈನ್ಸ್​ ಸಂಸ್ಥೆ ಬೆಳೆದು ಬಂದ ರೀತಿ ಆಧುನಿಕ ಭಾರತದ ಅತ್ಯಂತ ಗಮನಾರ್ಹ ಉದ್ಯಮಶೀಲ ಯಶೋಗಾಥೆಗಳಲ್ಲಿ ಒಂದಾಗಿದೆ. ಕೇವಲ ಏಳು ವರ್ಷಗಳ ಹಿಂದೆ ಕಾನ್ಪುರದ ಬೀದಿಗಳಲ್ಲಿ ಲೋಡರ್ ಮತ್ತು ಟೆಂಪೋ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಶ್ರವಣ್ ಕುಮಾರ್ ವಿಶ್ವಕರ್ಮ ಎಂಬುವರು ಈ ಸಂಸ್ಥೆಯನ್ನು ಕಟ್ಟಿದ್ದಾರೆ.
ಉಕ್ಕು ಮತ್ತು ಸಿಮೆಂಟ್ ಹಾಗೂ ಸಾರಿಗೆ ಉದ್ಯಮದ ಲಾಭದಿಂದ ಜೊತೆಗೆ ದೃಢ ನಿಶ್ಚಯದಿಂದ ಇಂದು ತಮ್ಮ ಬಾಲ್ಯದ ಕನಾಸಾಗಿದ್ದ ಉತ್ತರ ಪ್ರದೇಶದ ಮೊದಲ ಸ್ಥಳೀಯ ವಿಮಾನಯಾನ ಸಂಸ್ಥೆಯನ್ನು ಕಟ್ಟಿ ಅದನ್ನು ಭಾರತದ ವಾಯುಯಾನ ಕ್ಷೇತ್ರದಲ್ಲಿ ಜನರಿಗೆ ಸೇವೆ ಒದಗಿಸಲು ಸಿದ್ದರಾಗಿದ್ದಾರೆ.

ಯಾರೀ ಶ್ರವಣ್​ ಕುಮಾರ್ ವಿಶ್ವಕರ್ಮ?

ಉತ್ತರ ಪ್ರದೇಶದ ಕಾನ್ಪಪುರದಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿರುವ ಶ್ರವಣ್​ ಕುಮಾರ್ ವಿಶ್ವಕರ್ಮ. ಬಾಲ್ಯದಲ್ಲಿ ಓದುವ ಕಡೆಗೆ ಅಷ್ಟೊಂದು ಆಸಕ್ತಿ ಇರಲಿಲ್ಲ ಎನ್ನಲಾಗಿದೆ. ಮುಂದೆ ಆಟೋ, ಟೆಂಪೋ ಡ್ರೈವರ್​ ಆಗಿ ಕೆಲಸ ಮಾಡಿದ್ದಾರೆ. ಬಳಿಕ ಕೆಲವು ವ್ಯಾಪರ ಉದ್ಯಮಗಳ ಸ್ಥಾಪಿಸಿದ್ರು ಅವು ವಿಫಲವಾದ ಬಳಿಕ 2014ರಲ್ಲಿ ಸಿಮೆಂಟ್ ವ್ಯಾಪಾರದಲ್ಲಿನ ಯಶಸ್ಸು ಅವರನ್ನು ಇಂದು ವಿಮಾನಯಾನ ಸಂಸ್ಥೆಯನ್ನು ಕಟ್ಟುವವರೆಗೂ ತಂದು ನಿಲ್ಲಿಸಿದೆ.
ಮೊದಲು ಸಣ್ಣದಾಗಿ ಪ್ರಗತಿ ಟಿಎಂಟಿ ರೀಬಾರ್ ಉದ್ಯಮದ ಯಶಸ್ಸು, ಬಳಿಕ ಅದು ಸಿಮೆಂಟ್, ಗಣಿಗಾರಿಕೆ ಮತ್ತು ಸಾರಿಗೆ ವಲಯಕ್ಕೆ ವಿಸ್ತಾರವಾಗಿದೆ. ಅಲ್ಲಿಂದ ಟ್ರಕ್‌ಗಳ ಗಣನೀಯ ಸಮೂಹವನ್ನು ಸ್ಥಾಪಿಸುವ ಮೂಲಕ ಉದ್ಯಮದಲ್ಲಿ ಹೆಸರು ಮಾಡಿದ್ದಾರೆ. ಅದರ ಯಶಸ್ಸಿನ ಮೇಲೆ ಇಂದು ಶಂಖ್ ಏರ್​ಲೈನ್ಸ್ಟ್ ಕಟ್ಟಿದ್ದಾರೆ.

ಶಂಖ್ ಏರ್​ ಸ್ಥಾಪಿಸಿದ್ದೇಗೆ?

ಈ ಕುರಿತು ಸ್ವತಃ ಪಿಟಿಐ ಜೊತೆ ಮಾತನಾಡಿರುವ ಶ್ರವಣ್​ಕುಮಾರ್ ವಿಶ್ವಕರ್ಮ, ನಾಲ್ಕು ವರ್ಷಗಳ ಹಿಂದೆ ವಿಮಾನಯಾನ ಕ್ಷೇತ್ರವನ್ನು ಪ್ರವೇಶಿಸುವ ಆಲೋಚನೆ ಬಂದಿತು. ಈ ಆಲೋಚನೆ ಹೊಳೆದ ನಂತರ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳಲು ಪ್ರಾರಂಭಿಸಿದೆ. NOC ಅನ್ನು ಹೇಗೆ ಪಡೆಯುವುದು, ನಿಯಮಗಳೇನು ಮತ್ತು ವ್ಯವಸ್ಥೆಯು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ನಾನು ಅರ್ಥ ಮಾಡಿಕೊಂಡೆ. ನಾಲ್ಕು ವರ್ಷಗಳ ಹಿಂದೆ ಪ್ರಾರಂಭವಾದ ಕಲ್ಪನೆಯು ಈಗ ರೂಪುಗೊಂಡಿದೆ ಎಂದು ತಿಳಿಸಿದ್ದಾರೆ.
ಇನ್ನೂ ತಮ್ಮ ಶಂಖ್ ಏರ್​ ​ವಿಮಾನಯಾನ ಸಂಸ್ಥೆಯು ಜನವರಿ ಮೊದಲಾರ್ಧದಲ್ಲಿ ಮೂರು ಏರ್‌ಬಸ್ ವಿಮಾನಗಳ ಆರಂಭಿಕ ಫ್ಲೀಟ್‌ನೊಂದಿಗೆ ಹಾರಾಟ ಕಾರ್ಯಾಚರಣೆಯನ್ನು ಪ್ರಾರಂಭಿಸುವ ಸಾಧ್ಯತೆಯಿದೆ ಎಂದಿರುವ ಅವರು, ಲಕ್ನೋವನ್ನು ದೆಹಲಿ, ಮುಂಬೈ ಮತ್ತು ಇತರ ಮೆಟ್ರೋ ನಗರಗಳೊಂದಿಗೆ ಸಂಪರ್ಕಿಸುವತ್ತ ಗಮನಹರಿಸುತ್ತದೆ ಎಂದು ಹೇಳಿದ್ದಾರೆ (ಏಜೆನ್ಸೀಸ್).