ಚುನಾವಣೆಗಷ್ಟೇ ನೆನಪಾಗುವ ಚಹಾತೋಟ! 
ದೇಶ

ಚುನಾವಣೆಗಷ್ಟೇ ನೆನಪಾಗುವ ಚಹಾತೋಟ!

ವಿಕ್ರಮ್ ನಂದೋಡಿ, ದಿಬ್ರುಗಢ|
ಬೆಳಿಗ್ಗೆ ಎದ್ದ ಕೂಡಲೇ ಜಗತ್ತಿಗೆಲ್ಲ ಉಲ್ಲಾಸದ ಕಿಕ್ ನೀಡುವ ಒಂದು ಲೋಟ ಚಹಾದ ಹಿಂದೆ ಲಕ್ಷಾಂತರ ಶ್ರಮಿಕರ ಬದುಕಿನ ಕಹಿ ಕಥೆಯಿದೆ. ಭಾರತ ಸೇರಿ ಹತ್ತು ಹಲವು ದೇಶಗಳಿಗೆ ಚಹಾ ಪುಡಿ ಸರಬರಾಜು ಮಾಡುವ ಅಸ್ಸಾಂನ ವಿಶಾಲ ಹಸಿರು ಕಣಿವೆಗಳಲ್ಲಿ ಚಹಾದ ಚಿಗುರನ್ನು ಚಿವುಟುವ ಕೈಗಳಿಗೆ ಸುಭದ್ರ ಭವಿಷ್ಯದ ಕನಸಿದೆ. ಬ್ರಿಟೀಷರ ಕಾಲದಿಂದಲೂ ಈ ಮಣ್ಣಿಗಾಗಿ ಬೆವರು ಸುರಿಸುತ್ತಾ ಬಂದಿರುವ ‘ಟೀ ಟ್ರ್ಯೆಬ್ಸ್’ ಪಾಲಿಗೆ, ‘ಚಾಯ್ ಬಗಾನ್’ ಎಂಬುದು ಕೇವಲ ಚಹಾದ ತೋಟವಲ್ಲ ಅದು ಅವರ ಬದುಕಿನ ಕನ್ನಡಿ. ಕನಿಷ್ಠ ಕೂಲಿಗಾಗಿ ಹೋರಾಟ, ಹಕ್ಕುಗಳಿಗಾಗಿ ಹಂಬಲ ಹಾಗೂ ಮೂಲಸೌಕರ್ಯದ ಕೊರತೆಯ ನಡುವೆ ಬೇಯುತ್ತಿರುವ ಈ ಶ್ರಮಿಕ ವರ್ಗದವರು ರಾಜಕಾರಣಿಗಳಿಗೆ ನೆನಪಾಗುವುದು ಚುನಾವಣಾ ಸಮಯದಲ್ಲಿ ಮಾತ್ರ.
ವಿಜಯವಾಣಿಯು ದಿಬ್ರುಗಢ ಜಿಲ್ಲೆಯ ಬುರ್ ಬುರುವಾ, ಬೊಕೆಲಾ, ಚೌಲಾಖೊವಾ ಚಹಾ ತೋಟಕ್ಕೆ ತೆರಳಿ ಅಲ್ಲಿನ ಕಾರ್ವಿುಕರನ್ನು ಮಾತಿಗೆಳೆದಾಗ, ಚಹಾ ಚಿಗುರನ್ನು ಕೊಯ್ಯುತ್ತಲೇ ಅವರು ಮನಸ್ಸಿನ ಮಾತನ್ನು ಹಂಚಿಕೊಂಡರು. ಬ್ರಿಟೀಷರ ಕಾಲದಿಂದ ಇಂದಿಗೂ ಇದೇ ಕೆಲಸದಲ್ಲಿ ಮುಂದುವರಿದಿದ್ದು, ಕನಿಷ್ಠ ಮೂಲಸೌಕರ್ಯ, ಶಿಕ್ಷಣವೂ ಇಲ್ಲ. ಭಾರತದ ಶೇ.30ರಷ್ಟು ಚಹಾ ಪುಡಿಯನ್ನು ಉತ್ಪಾದಿಸುವ ಹಾಗೂ ಚಹಾ ಎಲೆಗಳನ್ನು ಬೆಳೆಯುವ ರಾಜ್ಯ ಅಸ್ಸಾಂನಲ್ಲಿ ಸುಮಾರು 70 ಲಕ್ಷ ಟೀ ಟ್ರ್ಯೆಬ್ಸ್’ ಸಮುದಾಯದವರು ವಾಸಿಸುತ್ತಿದ್ದಾರೆ.
ಅಸ್ಸಾಂನ ಟಿನ್ಸುಕಿಯಾ, ದಿಬ್ರುಗಢ, ಜೋರ್ಹಾತ್, ಘೋಲ್ಗಾಟ್, ಸಿವಸಾಗರ ಸೇರಿದಂತೆ ಸುಮಾರು 10 ಜಿಲ್ಲೆಗಳು ಸಂಪೂರ್ಣ ಚಾಯ್ ಬಗಾನ್​ನಿಂದ ಕೂಡಿವೆ. ನಿತ್ಯ 250 ರೂ. ದಿನಗೂಲಿಗೆ ಈ ಕಾರ್ವಿುಕರು ಚಹಾ ಎಲೆಗಳನ್ನು ಕೀಳುವ ಕೆಲಸ ಮಾಡುತ್ತಿದ್ದು, ಈ ಪ್ರದೇಶದ ಜನರು ಅತ್ಯಂತ ಕಡಿಮೆ ಜೀವಿತಾವಧಿ ಮಟ್ಟವನ್ನು ಹೊಂದಿದ್ದು, ರೋಗಗಳ ಬಾಧೆ, ಅಪೌಷ್ಟಿಕತೆ ಮತ್ತು ರಕ್ತಹೀನತೆಯ ಸಮಸ್ಯೆ ಶ್ರಮಿಕರನ್ನು ಕಾಡುತ್ತಿದೆ.
ಇವರ ಮತಗಳು ಉತ್ತರ ಅಸ್ಸಾಂನ ಸುಮಾರು 40 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹೀಗಿದ್ದರೂ ಚುನಾವಣೆ ಮುಗಿದ ಬಳಿಕ ಯಾವುದೇ ರಾಜಕಾರಣಿಗಳು ಬಂದು ಯಾವುದೇ ಸಮಸ್ಯೆಗಳನ್ನು ಬಗೆಹರಿಸುವುದಿಲ್ಲ ಎಂಬುದು ಇಲ್ಲಿನ ಕಾರ್ವಿುಕರ ಬೇಸರ. ಈ ಬಾರಿ ಬಿಜೆಪಿ ಪುನಃ ಅಧಿಕಾರಕ್ಕೆ ಬಂದರೆ ಕಾರ್ವಿುಕರ ವೇತನವನ್ನು 500ರೂಗೆ ಏರಿಸುವುದು, ಭೂವಿ ಹಕ್ಕು, ಆರೋಗ್ಯ, ಶಿಕ್ಷಣ ಸೌಲಭ್ಯಗಳನ್ನು ನೀಡುವುದಾಗಿ ಘೋಷಿಸಿದ್ದು, ಕಾಂಗ್ರೆಸ್ ಪಕ್ಷವು ಎಸ್​ಟಿ ಸ್ಥಾನಮಾನ, ಕೈಗಾರಿಕಾ ಮಟ್ಟದ ಕನಿಷ್ಠ ವೇತನ ಮತ್ತು ಹೆಚ್ಚಿನ ಕಲ್ಯಾಣ ಯೋಜನೆಗಳನ್ನು ನೀಡುವುದಾಗಿ ಭರವಸೆ ನೀಡಿದೆ.

ಅಲ್ಪವಾದರೂ ಅಭಿವೃದ್ಧಿ ಕಂಡಿದ್ದು ಸೋನೋವಾಲ್​ರಿಂದ

ಚಹಾ ತೋಟದಲ್ಲಿ ಕೆಲಸ ಮಾಡುವ ಕಾರ್ವಿುಕರು, ಬಿಜೆಪಿಯಿಂದ ಮೊದಲ ಬಾರಿಗೆ 2016ರಲ್ಲಿ ಮುಖ್ಯಮಂತ್ರಿಯಾಗಿದ್ದ ಸರ್ಬಾನಂದ ಸೋನೋವಾಲ್​ರನ್ನು ನೆನಪಿಸಿಕೊಳ್ಳುತ್ತಾರೆ. ನಾವು ರಸ್ತೆ ಎಂಬುದನ್ನು ಕಂಡಿದ್ದಿದ್ದರೆ ಅದು 2016ರ ಬಳಿಕವೇ. ಸೋನೋವಾಲ್ ಸಹ ಈ ಭಾಗದವರೇ ಆದ ಕಾರಣ ನಮ್ಮ ಕಷ್ಟಗಳು ಸ್ವಲ್ಪವಾದರೂ ತಿಳಿದಿತ್ತು. ಅವರ ಅವಧಿಯಲ್ಲಿ ಹಲವು ಅಭಿವೃದ್ಧಿ ಕೆಲಸಗಳು ಆಗಿವೆ ಎಂದು ಕಾರ್ವಿುಕರು ಅಭಿಪ್ರಾಯ ಹಂಚಿಕೊಂಡರು.

ಇರುವುದು ಮೂರೇ ಬೇಡಿಕೆ

1. ಚಾಯ್ ಬಗಾನ್ ಕಾರ್ವಿುಕರ ದಿನಗೂಲಿಯನ್ನು 280ರಿಂದ 550 ರೂ.ಗೆ ಹಚ್ಚಿಸಬೇಕು
2. ಚಹಾ ತೋಟಗಳ ಆವರಣದಲ್ಲಿ ಸಣ್ಣ ಮನೆ ಅಥವಾ ಗುಡಿಸಲು ನಿರ್ವಿುಸಿ ಕೊಂಡಿರುವವರಿಗೆ ಪಟ್ಟಾ ಭೂಮಿ (ಭೂಮಿ ಹಕ್ಕು) ನೀಡಬೇಕು.
3. ಟೀ ಟ್ರ್ಯೆಬ್ಸ್’ ಆದಿವಾಸಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು.

ಶ್ರಮಿಕರ ದಿನನಿತ್ಯದ ಕಾರ್ಯ ಹೇಗೆ?

ಬೆಳಿಗ್ಗೆ 7ಕ್ಕೆ ಪ್ರಾರಂಭಗೊಂಡ ಕೆಲಸ ಸಂಜೆ 4 ರವರೆಗೆ ನಡೆಯುತ್ತದೆ. ಪ್ರತಿ ಚಹಾ ತೋಟವೂ ಸರಿಸುಮಾರು 12 ರಿಂದ 14 ಹೆಕ್ಟೇರ್ ಪ್ರದೇಶದಲ್ಲಿದ್ದು, ಚಹಾ ತೋಟಗಳನ್ನು ಸುಮಾರು 14 ವಿಭಾಗಗಳಾಗಿ ವಿಂಗಡಿಸಿ ಪ್ರತೀ ವಿಭಾಗಕ್ಕೂ 60 ರಿಂದ 70 ಕಾರ್ವಿುಕರನ್ನು ನೇಮಿಸಲಾಗುತ್ತದೆ. ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ವಿಭಾಗಗಳಿರಲಿದ್ದು, ಒಟ್ಟಾರೆಯಾಗಿ 800 ಕಾರ್ವಿುಕರನ್ನು ಹೊಂದಿರುತ್ತದೆ. ಪ್ರತೀ ವಿಭಾಗಕ್ಕೆ ಓರ್ವ ಮಹಿಳಾ ಮತ್ತು ಪುರುಷನಿಗೆ ಜವಾಬ್ದಾರಿ ನೀಡಲಾಗುತ್ತದೆ ಹಾಗೂ ಅವರನ್ನು ‘ಸರ್ದಾರ್’ ಎಂದು ಕರೆಯಲಾಗುತ್ತದೆ. ಕಾರ್ವಿುಕರಿಗೆ ಪ್ರತೀ ಶನಿವಾರ ಕೂಲಿ ಹಣವನ್ನು
ನಾನು 15 ವರ್ಷಗಳಿಂದ ಚಹಾ ತೋಟದಲ್ಲಿ ಕೆಲಸ ಮಾಡುತ್ತಿದ್ದೇನೆ. ನಮಗೆ ದಿನಕ್ಕೆ 250 ರೂ. ಕೂಲಿ ಸಿಗುತ್ತಿದೆ. ಈ ಹಣದಲ್ಲಿ ಕುಟುಂಬ ನಿರ್ವಹಣೆ ಕಷ್ಟ. ನಾವು ಪ್ರತಿನಿತ್ಯ ಕೆಲಸಕ್ಕೆ ಹೋಗಲು ಕಳಪೆ ರಸ್ತೆಗಳಲ್ಲಿ ಸುಮಾರು ಎರಡು ಕಿಲೋಮೀಟರ್ ನಡೆದುಕೊಂಡು ಹೋಗಬೇಕಿದೆ. ನಮಗೂ ಶಿಕ್ಷಣ ದೊರೆತಿದ್ದರೆ, ಉತ್ತಮ ಉದ್ಯೋಗದಲ್ಲಿರಲು ಸಾಧ್ಯವಾಗುತ್ತಿತ್ತು.
| ದೀಪಾಂಜಲಿ ತಾತಿ ಕಾರ್ವಿುಕ ಮಹಿಳೆ