Grand Birthday  
ದೇಶ

ಸೋದರಮಾವ ಅಂದ್ರೆ ಇವನೇ ಕಣ್ರೀ: 1 ವರ್ಷದ ಮಗುವಿನ ಬರ್ತ್‌ಡೇಗೆ ಹೈವೇ ಪಕ್ಕದ ಸೈಟ್, 11 ಲಕ್ಷ ಕ್ಯಾಶ್ ಗಿಫ್ಟ್! | Grand Birthday

ಅಲಿಗಢ: ಸಾಮಾನ್ಯವಾಗಿ ಮೊದಲ ವರ್ಷದ ಹುಟ್ಟುಹಬ್ಬ(Grand Birthday)ಎಂದರೆ ಆಟಿಕೆಗಳು, ಬಟ್ಟೆಗಳನ್ನು ಉಡುಗೊರೆಯಾಗಿ ನೀಡಲಾಗುತ್ತದೆ. ಆದರೆ ಉತ್ತರ ಪ್ರದೇಶದ ಅಲಿಗಢದಲ್ಲಿ ನಡೆದ ಪುಟಾಣಿ ಶಿವಾಯ್‌ನ ಜನ್ಮದಿನದ ಸಂಭ್ರಮ 'ಶ್ರೀಮಂತಿಕೆಯ' ಹೊಸ ದಾಖಲೆಯನ್ನೇ ಬರೆದಿದೆ.
ಹೌದು, ಮಗುವಿನ ಸೋದರಮಾವ ಅಖಿಲೇಶ್ ಚೌಹಾಣ್ ತಮ್ಮ ಸೋದರಳಿಯನಿಗೆ ನೀಡಿರುವ ಉಡುಗೊರೆಗಳ ಪಟ್ಟಿ ಈಗ ಸೋಷಿಯಲ್ ಮೀಡಿಯಾದಲ್ಲಿ ಕಿಚ್ಚು ಹಚ್ಚಿದೆ.

ಪುರೋಹಿತರಿಂದ ಉಡುಗೊರೆಗಳ ಅಧಿಕೃತ ಘೋಷಣೆ!

ವೈರಲ್ ಆಗಿರುವ ವಿಡಿಯೋದಲ್ಲಿ, ಮಗುವಿನ ನಾಮಕರಣ ಅಥವಾ ಹುಟ್ಟುಹಬ್ಬದ ಸಂಪ್ರದಾಯದಂತೆ ಪುರೋಹಿತರು ಮೈಕ್ ಹಿಡಿದು ಮಗುವಿನ ಮಾವನ ಕಡೆಯಿಂದ ಬಂದಿರುವ ಉಡುಗೊರೆಗಳನ್ನು ಓದುತ್ತಿದ್ದಾರೆ. ಆ ಪಟ್ಟಿಯಲ್ಲಿ ಸಾಧಾರಣ ವಸ್ತುಗಳಿರಲಿಲ್ಲ, ಬದಲಾಗಿ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಪಾಸ್ತಿಗಳಿದ್ದವು!

ಮಗು ಶಿವಾಯ್‌ಗೆ ಸಿಕ್ಕ ಉಡುಗೊರೆಗಳು

ಅಲಿಗಢ-ಆಗ್ರಾ ಹೈವೇ ಪಕ್ಕದಲ್ಲಿರುವ ಒಂದು ಬೆಲೆಬಾಳುವ ಪ್ಲಾಟ್ (ನಿವೇಶನ). ಹನ್ನೊಂದು ಲಕ್ಷ ರೂಪಾಯಿ (11,00,000) ನಗದು ಹಣ. 20 ಗ್ರಾಂ ತೂಕದ ಚಿನ್ನದ ಸರ. 500 ಗ್ರಾಂ ತೂಕದ ಐದು ಬೆಳ್ಳಿಯ ಪಾತ್ರೆಗಳು, ಬೆಳ್ಳಿಯ ಲಕ್ಷ್ಮಿ-ಗಣೇಶ ವಿಗ್ರಹಗಳು, ಕೈಕಾಲುಗಳಿಗೆ ಬೆಳ್ಳಿಯ ಬಳೆಗಳು. 15 ಜೊತೆ ಬ್ರಾಂಡೆಡ್ ಬಟ್ಟೆಗಳು ಮತ್ತು ಅಸಂಖ್ಯಾತ ಆಟಿಕೆಗಳು.

ಮಗು ಮಾತ್ರವಲ್ಲ, ಇಡೀ ಕುಟುಂಬಕ್ಕೇ ಹಬ್ಬ!

ಸೋದರಮಾವನ ಉದಾರತೆ ಕೇವಲ ಮಗುವಿಗೆ ಸೀಮಿತವಾಗಿರಲಿಲ್ಲ. ಮಗುವಿನ ತಾಯಿಗೆ (ಮಾವನ ತಂಗಿ) 35 ಗ್ರಾಂನ 'ರಾಣಿ ಹಾರ', ಚಿನ್ನದ ಬಳೆಗಳು, ಉಂಗುರ, ಓಲೆಗಳು ಮತ್ತು ಬೆಳ್ಳಿಯ ಕಾಲುಂಗುರಗಳನ್ನು ನೀಡಲಾಗಿದೆ. ಅಲ್ಲದೆ ಮನೆಯ ಹಿರಿಯರಿಗಾಗಿ 101 ರೇಷ್ಮೆ ಸೀರೆಗಳು ಮತ್ತು ಪುರುಷರಿಗೆ 101 ಪ್ಯಾಂಟ್-ಶರ್ಟ್ ಸೆಟ್‌ಗಳನ್ನು ಉಡುಗೊರೆಯಾಗಿ ನೀಡಲಾಗಿದೆ.

ನಮ್ಮನ್ನೂ ದತ್ತು ತಗೊಳ್ಳಿ ಪ್ಲೀಸ್!

ಈ ವಿಡಿಯೋ ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಆಗುತ್ತಿದ್ದಂತೆ ಕಮೆಂಟ್ ಬಾಕ್ಸ್ ಹಾಸ್ಯ ಮತ್ತು ಅಚ್ಚರಿಯ ಮಾತುಗಳಿಂದ ತುಂಬಿಹೋಗಿದೆ.ನಮ್ಮ ಜೀವನದ ಏಕೈಕ ಗುರಿ: ಶಿವಾಯ್‌ನನ್ನು ಕಿಡ್ನಾಪ್ ಮಾಡುವುದು! ಎಂದು ಒಬ್ಬರು ತಮಾಷೆ ಮಾಡಿದರೆ,ನಮ್ಮ ಮಾವ ನನ್ನ ಹತ್ತಿರ ಸಾಲ ಕೇಳ್ತಾರೆ, ಇಲ್ಲಿ ನೋಡಿದರೆ ಹೈವೇ ಸೈಟೇ ಗಿಫ್ಟ್ ಕೊಡ್ತಿದ್ದಾರೆ ಎಂದು ಮತ್ತೊಬ್ಬರು ಗೋಳು ತೋಡಿಕೊಂಡಿದ್ದಾರೆ. ಶಿವಾಯ್ ಮನೆತನದವರೇ, ದಯವಿಟ್ಟು ನನ್ನನ್ನೂ ದತ್ತು ಪಡೆದುಕೊಳ್ಳಿ ಎಂದು ಅನೇಕರು ಕಾಲೆಳೆದಿದ್ದಾರೆ.
ಪ್ರದರ್ಶನವೋ ಅಥವಾ ಪ್ರೀತಿಯೋ?
ಈ ವಿಡಿಯೋ ಲಕ್ಷಾಂತರ ವೀಕ್ಷಣೆ ಪಡೆದಿದ್ದರೂ, ಸಮಾಜದ ಒಂದು ವರ್ಗ "ಇದು ಶ್ರೀಮಂತಿಕೆಯ ಪ್ರದರ್ಶನವೇ ಹೊರತು ಪ್ರೀತಿಯಲ್ಲ, ಇಂತಹ ಪದ್ಧತಿಗಳು ಬಡವರ ಮೇಲೆ ಒತ್ತಡ ಹೇರುತ್ತವೆ" ಎಂಬ ಗಂಭೀರ ಚರ್ಚೆಯನ್ನು ಶುರು ಮಾಡಿದೆ. ಮದುವೆಯ ವರದಕ್ಷಿಣೆ ಸಾಲದೆಂಬಂತೆ ಈಗ ಹುಟ್ಟುಹಬ್ಬಕ್ಕೂ ಇಂತಹ ಸೈಟು-ಚಿನ್ನದ ಉಡುಗೊರೆಗಳ ಪದ್ಧತಿ ಶುರುವಾಗುತ್ತಿರುವುದು ಆತಂಕಕಾರಿ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಏನೇ ಇರಲಿ, ಶಿವಾಯ್ ಮಾತ್ರ ತನ್ನ ಮೊದಲ ವರ್ಷದಲ್ಲೇ 'ಲಕ್ಷಾಧಿಪತಿ'ಯಾಗಿ ಮಿಂಚುತ್ತಿರುವುದು ಸುಳ್ಳಲ್ಲ!,(ಏಜೆನ್ಸೀಸ್).