ಬಂಗಾಳದಲ್ಲಿ ಸುವೇಂದು ಆರ್ಭಟ! ಮದರಸಾಗಳಲ್ಲಿ ವಂದೇ ಮಾತರಂ ಕಡ್ಡಾಯ! ನಾವು ಹಾಡಲ್ಲ ಎಂದ ಹುಮಾಯೂನ್ ಕಬೀರ್! 
ದೇಶ

ಬಂಗಾಳದಲ್ಲಿ ಸುವೇಂದು ಆರ್ಭಟ! ಮದರಸಾಗಳಲ್ಲಿ ವಂದೇ ಮಾತರಂ ಕಡ್ಡಾಯ! ನಾವು ಹಾಡಲ್ಲ ಎಂದ ಹುಮಾಯೂನ್ ಕಬೀರ್! Humayun Kabir

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಸುವೇಂದು ಅಧಿಕಾರಿ ನೇತೃತ್ವದ ನೂತನ ಸರ್ಕಾರವು ಆಡಳಿತಕ್ಕೆ ಬಂದ ಬೆನ್ನಲ್ಲೇ ಕಠಿಣ ಹಿಂದುತ್ವ ಮತ್ತು ರಾಷ್ಟ್ರೀಯತೆಯ ಅಜೆಂಡಾವನ್ನು ಜಾರಿಗೆ ತರಲು ಆರಂಭಿಸಿದೆ. ಕಳೆದ ವಾರ ಸರ್ಕಾರಿ ಶಾಲೆಗಳಲ್ಲಿ ವಂದೇ ಮಾತರಂ ಕಡ್ಡಾಯಗೊಳಿಸಿದ್ದ ಶಿಕ್ಷಣ ಇಲಾಖೆ, ಈಗ ರಾಜ್ಯದ ಎಲ್ಲಾ ಅನುದಾನಿತ ಮತ್ತು ಮಾನ್ಯತೆ ಪಡೆದ ಮದರಸಾಗಳಲ್ಲೂ ಬೆಳಗಿನ ಪ್ರಾರ್ಥನೆಯ ಸಮಯದಲ್ಲಿ ವಂದೇ ಮಾತರಂ ಹಾಡುವುದನ್ನು ಕಡ್ಡಾಯಗೊಳಿಸಿ ಅಧಿಕೃತ ಆದೇಶ ಹೊರಡಿಸಿದೆ. ಸರ್ಕಾರದ ಈ ಐತಿಹಾಸಿಕ ಆದೇಶದ ವಿರುದ್ಧ AJUP ಮುಖ್ಯಸ್ಥ ಹಾಗೂ ವಿವಾದಿತ ನಾಯಕ ಹುಮಾಯೂನ್ ಕಬೀರ್(Humayun Kabir) ಬಹಿರಂಗವಾಗಿಯೇ ಬಂಡಾಯ ಸಾರಿದ್ದಾರೆ.

ನಮ್ಮ ಮೇಲೆ ಕಾನೂನು ಹೇರಲು ಸರ್ಕಾರಕ್ಕೆ ಹಕ್ಕಿಲ್ಲ!

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ತೀವ್ರ ಆಕ್ರೋಶ ಹೊರಹಾಕಿರುವ ಕಬೀರ್​, ಯಾವ ಕಾರಣಕ್ಕೂ ಮದರಸಾಗಳಲ್ಲಿ ವಂದೇ ಮಾತರಂ ಗೀತೆಯನ್ನು ಹಾಡುವುದಿಲ್ಲ. ಮದರಸಾಗಳ ಆಂತರಿಕ ವಿಷಯಗಳಲ್ಲಿ ಮತ್ತು ಧಾರ್ಮಿಕ ಆಚರಣೆಗಳಲ್ಲಿ ಇಂತಹ ನಿರ್ದೇಶನಗಳನ್ನು ನೀಡಲು ಸರ್ಕಾರಕ್ಕೆ ಯಾವುದೇ ಕಾನೂನಾತ್ಮಕ ಅಥವಾ ನೈತಿಕ ಹಕ್ಕಿಲ್ಲ ಎಂದು ಕಿಡಿಕಾರಿದ್ದಾರೆ.
ಮುರ್ಶಿದಾಬಾದ್‌ನಲ್ಲಿ ಬಾಬರಿ ಮಸೀದಿಯ ಪ್ರತಿಕೃತಿ ನಿರ್ಮಾಣದ ಘೋಷಣೆ ಮಾಡಿ ಈ ಹಿಂದೆ ಟಿಎಂಸಿಯಿಂದ ಅಮಾನತುಗೊಂಡು, ನಂತರ ಸ್ವಂತ ಪಕ್ಷ ಕಟ್ಟಿರುವ ಹುಮಾಯೂನ್ ಕಬೀರ್ ಅವರ ಈ ಹೇಳಿಕೆ ಈಗ ಇಡೀ ರಾಜ್ಯದಲ್ಲಿ ಭಾರಿ ಸಂಚಲನ ಮೂಡಿಸಿದೆ.
ಸರ್ಕಾರದ ಆದೇಶದಲ್ಲಿ ಏನಿದೆ?
ಅಲ್ಪಸಂಖ್ಯಾತ ಕಲ್ಯಾಣ ಮತ್ತು ಮದರಸಾ ಶಿಕ್ಷಣ ಇಲಾಖೆಯ ಸಚಿವ ಖುದಿರಾಮ್ ತುಡು ಅವರ ಅನುಮೋದನೆಯೊಂದಿಗೆ ಹೊರಬಿದ್ದಿರುವ ಈ ಆದೇಶವು ತಕ್ಷಣದಿಂದಲೇ ಜಾರಿಗೆ ಬರಲಿದೆ.
ವ್ಯಾಪ್ತಿ: ಸರ್ಕಾರದ ಮಾದರಿ ಮದರಸಾಗಳು, ಸರ್ಕಾರಿ ಅನುದಾನಿತ ಮದರಸಾಗಳು, ಶಿಶು ಶಿಕ್ಷಣ ಕೇಂದ್ರಗಳು ಮತ್ತು ಮಾನ್ಯತೆ ಪಡೆದ ಅನುದಾನರಹಿತ ಮದರಸಾಗಳಿಗೆ ಈ ನಿಯಮ ಅನ್ವಯಿಸುತ್ತದೆ.
ಉದ್ದೇಶ: ಇಲಾಖೆಯ ಅಡಿಯಲ್ಲಿ ಬರುವ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಏಕರೂಪದ ಪ್ರಾರ್ಥನಾ ಪದ್ಧತಿಯನ್ನು ತರುವುದು ಮತ್ತು ರಾಷ್ಟ್ರೀಯ ಗೌರವವನ್ನು ಹೆಚ್ಚಿಸುವುದು ಇದರ ಮುಖ್ಯ ಉದ್ದೇಶ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಕಠಿಣ ಕ್ರಮ: ಒಂದು ವೇಳೆ ಆದೇಶವನ್ನು ಪಾಲಿಸದಿದ್ದರೆ ಅಂತಹ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

ಬಿಕ್ಕಟ್ಟಿನ ಹಿನ್ನೆಲೆ: ಬಂಗಾಳ ರಾಜಕೀಯದ ಹೊಸ ಧ್ರುವೀಕರಣ

ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗಷ್ಟೇ ಮುಕ್ತಾಯಗೊಂಡ ವಿಧಾನಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಅವರ 15 ವರ್ಷಗಳ ಆಡಳಿತ ಅಂತ್ಯಗೊಂಡಿದೆ. ಬಿಜೆಪಿ ಅಧಿಕಾರಕ್ಕೆ ಬಂದ ತಕ್ಷಣವೇ ಈ ಹಿಂದೆ ಇದ್ದ ರಾಜ್ಯ ಗೀತೆ ಬಾಂಗ್ಲಾರ್ ಮಾತಿ ಬಾಂಗ್ಲಾರ್ ಜಲ್ ನಿಯಮವನ್ನು ಬದಲಾಯಿಸಿ, ಕೇಂದ್ರ ಸರ್ಕಾರದ ಸೂಚನೆಯಂತೆ ವಂದೇ ಮಾತರಂ ಗೀತೆಯ 150ನೇ ವರ್ಷಾಚರಣೆಯ ಅಂಗವಾಗಿ ಈ ಹೊಸ ಕ್ರಾಂತಿಕಾರಿ ನಿಯಮವನ್ನು ತಂದಿದೆ.
ಕೇಂದ್ರ ಸರ್ಕಾರವು ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ ಕಾಯ್ದೆ, 1971 ಕ್ಕೆ ತಿದ್ದುಪಡಿ ತರಲು ಸಜ್ಜಾಗುತ್ತಿದ್ದು, ವಂದೇ ಮಾತರಂ ಗಾಯನಕ್ಕೆ ಅಡ್ಡಿಪಡಿಸುವುದನ್ನು ಶಿಕ್ಷಾರ್ಹ ಅಪರಾಧವಾಗಿಸಲು ಮುಂದಾಗಿದೆ. ಇದರ ನಡುವೆಯೇ ಬಂಗಾಳ ಸರ್ಕಾರದ ಈ ನಡೆ ಮುಸ್ಲಿಂ ಧಾರ್ಮಿಕ ಮುಖಂಡರ ಕೆಂಗಣ್ಣಿಗೆ ಗುರಿಯಾಗಿದೆ.
ಅಸ್ಸಾಂನಲ್ಲಿ ಹಿಮಂತ ಬಿಸ್ವ ಶರ್ಮಾ ಅವರು ಏಕರೂಪ ನಾಗರಿಕ ಸಂಹಿತೆ (UCC) ಜಾರಿಗೆ ತಂದು ಸಂಚಲನ ಸೃಷ್ಟಿಸುತ್ತಿದ್ದರೆ, ಇತ್ತ ಬಂಗಾಳದಲ್ಲಿ ಸುವೇಂದು ಅಧಿಕಾರಿ ಸರ್ಕಾರ ಮದರಸಾಗಳ ಮೇಲೆ ಹಿಡಿತ ಸಾಧಿಸಲು ಮುಂದಾಗಿದೆ. ಹುಮಾಯೂನ್ ಕಬೀರ್ ಅವರ ಈ ಸವಾಲು ಬಂಗಾಳದ ಬೀದಿಗಳಲ್ಲಿ ಮತ್ತೊಂದು ಸುತ್ತಿನ ಕೋಮು ಮತ್ತು ರಾಜಕೀಯ ಸಂಘರ್ಷಕ್ಕೆ ನಾಂದಿ ಹಾಡಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ,(ಏಜೆನ್ಸೀಸ್​).