Narendra Modi | ಪ್ರಧಾನಿ ನರೇಂದ್ರ ಮೋದಿ
ರೀಲ್ಸ್, ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌ಗಳು ಹಾಗೂ ಕ್ಷಣಾರ್ಧದಲ್ಲಿ ಸಿಗುವ ತೃಪ್ತಿಯ ಈ ಆಧುನಿಕ ಯುಗದಲ್ಲಿ ಯುವಜನತೆ ಸುಲಭದ ಹಾದಿ ಅಥವಾ ಶಾರ್ಟ್‌ಕಟ್‌ಗಳನ್ನು ಆಯ್ಕೆ ಮಾಡಿಕೊಳ್ಳಬಾರದು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಜೆನ್-ಝಿ (Gen Z) ತಲೆಮಾರಿಗೆ ಕಿವಿಮಾತು ಹೇಳಿದ್ದಾರೆ.
ಬುಧವಾರ ದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಮಾಜಿ ರಾಷ್ಟ್ರಪತಿ ರಾಮ್‌ನಾಥ್ ಕೋವಿಂದ್ ಅವರ ಆತ್ಮಚರಿತ್ರೆ ಟ್ರಯಂಫ್ ಆಫ್ ದಿ ಇಂಡಿಯನ್ ರಿಪಬ್ಲಿಕ್: ಮೈ ಲೈಫ್, ಮೈ ಸ್ಟ್ರಗಲ್ಸ್ (Triumph of the Indian Republic: My Life, My Struggles) ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಪ್ರಧಾನಿ ಮೋದಿ ಮಾತನಾಡಿದರು.
ರೈಲ್ವೆ ಸ್ಟೇಷನ್ ಎಚ್ಚರಿಕೆಯ ಉದಾಹರಣೆ
ರೈಲ್ವೆ ನಿಲ್ದಾಣಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಎಚ್ಚರಿಕೆ ಫಲಕವನ್ನು ಉದಾಹರಣೆ ನೀಡಿದ ಪ್ರಧಾನಿ, ಜನರು ಫುಟ್‌ಬ್ರಿಡ್ಜ್ ಬಳಸುವ ಬದಲು ಸಮಯ ಉಳಿಸಲು ರೈಲ್ವೆ ಹಳಿಗಳನ್ನು ದಾಟುವ ಶಾರ್ಟ್‌ಕಟ್ ಹುಡುಕುತ್ತಾರೆ. ಆದರೆ ಅಲ್ಲಿ ಹಾಕಲಾದ ಶಾರ್ಟ್‌ಕಟ್ ನಿಮ್ಮನ್ನು ಶಾರ್ಟ್ ಮಾಡುತ್ತದೆ ಎಂಬ ಸಾಲು ಕೇವಲ ಹಳಿಗೆ ಮಾತ್ರವಲ್ಲ, ಇಡೀ ಜೀವನಕ್ಕೂ ಅನ್ವಯಿಸುತ್ತದೆ. ಇಂದಿನ ರೀಲ್ಸ್ ಯುಗದಲ್ಲಿ ಇನ್‌ಫ್ಲುಯೆನ್ಸರ್‌ಗಳು ನಿಮ್ಮನ್ನು ವಿಭಿನ್ನ ದಾರಿಗಳಿಗೆ ಎಳೆಯಬಹುದು. ಆದ್ದರಿಂದ ಯುವಜನರು ಸುಲಭದ ಹಾದಿ ತುಳಿಯದೆ, ಕಷ್ಟಪಟ್ಟು ಸಾಧಿಸುವ ದೀರ್ಘ ಹಾಗೂ ಅರ್ಥಪೂರ್ಣ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಯುವಜನತೆ ತಾವು ಗೌರವಿಸುವ ಅಥವಾ ಆರಾಧಿಸುವ ನಾಯಕರ ಆತ್ಮಚರಿತ್ರೆಗಳನ್ನು ಓದಬೇಕು. ರಾಮ್‌ನಾಥ್ ಕೋವಿಂದ್ ಅವರ ಜೀವನವು ಎಂತಹ ಕಷ್ಟದ ಸಂದರ್ಭಗಳಲ್ಲೂ ಶ್ರಮ ಹಾಗೂ ಆತ್ಮವಿಶ್ವಾಸದಿಂದ ಹೇಗೆ ಉನ್ನತ ಸಾಂವಿಧಾನಿಕ ಹುದ್ದೆಗೇರಬಹುದು ಎಂಬುದಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ ಎಂದು ಮೋದಿ ಬಣ್ಣಿಸಿದರು.
ಯುವಕರತ್ತ ಬಿಜೆಪಿ ಚಿತ್ತ!...
ಕಳೆದ ತಿಂಗಳು ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ನವದೆಹಲಿ ಸೇರಿದಂತೆ ದೇಶಾದ್ಯಂತ ವಿದ್ಯಾರ್ಥಿಗಳು ನಡೆಸಿದ್ದ ಬೃಹತ್ ಪ್ರತಿಭಟನೆಯ ನಂತರ, ಮೋದಿ ಸರ್ಕಾರ ಹಾಗೂ ಬಿಜೆಪಿ ಪಕ್ಷವು ಜೆನ್-ಝಿ ತಲೆಮಾರಿನೊಂದಿಗೆ ಸಂಪರ್ಕ ಕಾಯ್ದುಕೊಳ್ಳಲು ತೀವ್ರ ಹರಸಾಹಸ ಪಡುತ್ತಿದೆ. ವಿದ್ಯಾರ್ಥಿಗಳ ಸಾಲು ಸಾಲು ಪ್ರತಿಭಟನೆಗಳ ಪರಿಣಾಮವಾಗಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕಾಗಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಯುವಜನತೆಯನ್ನು ತಲುಪಲು ಪ್ರಧಾನಿ ಮೋದಿ ತಮ್ಮ ಸಾಮಾಜಿಕ ಜಾಲತಾಣಗಳ ಶೈಲಿಯನ್ನು ಬದಲಾಯಿಸಿಕೊಂಡಿದ್ದಾರೆ.
ಹಾಯ್ ಫ್ರೆಂಡ್ಸ್ ಎಂಬ ಆಪ್ತ ಸಂಬೋಧನೆ, ಸೆಲ್ಫಿ ವಿಡಿಯೋಗಳು, First in my bloodline ಹಾಗೂ GRWM (Get Ready With Me) ಮಾದರಿಯ ರೀಲ್ಸ್‌ಗಳನ್ನು ಹಂಚಿಕೊಳ್ಳುವ ಮೂಲಕ ಯುವಕರ ಭಾಷೆಯಲ್ಲಿಯೇ ಸಂವಹನ ನಡೆಸುತ್ತಿದ್ದಾರೆ. ಕೇಂದ್ರ ಸಚಿವರು ಹಾಗೂ ವಿವಿಧ ಸಚಿವಾಲಯಗಳು ಸಹ ಶಾರ್ಟ್ ವೀಡಿಯೋಗಳ ಮೂಲಕ ಕಾರ್ಯನಿರ್ವಹಿಸಲು ಸೂಚನೆ ನೀಡಲಾಗಿದ್ದು, ಇತ್ತೀಚೆಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಸ್ನ್ಯಾಪ್‌ಚಾಟ್‌ನಲ್ಲೂ ಖಾತೆ ತೆರೆದಿದೆ(ಏಜೆನ್ಸೀಸ್).