BY Vijayendra | ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ  
ದೇಶ

ದೇಶದಲ್ಲಿ ದಂಗೆ ಏಳುವುದನ್ನು ತಡೆಯಲು ನಿಸ್ವಾರ್ಥ ನಿರ್ಗಮನ!..ಪ್ರಧಾನ್ ರಾಜೀನಾಮೆ ಸಮರ್ಥಿಸಿಕೊಂಡ ಬಿ ವೈ ವಿಜಯೇಂದ್ರ | BY Vijayendra

ಬೆಂಗಳೂರು: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯು ದೇಶ ರಕ್ಷಣೆಯ ನಿಟ್ಟಿನಲ್ಲಿ ಕೈಗೊಂಡ ಅತ್ಯಂತ ಮಹತ್ವದ ಹೆಜ್ಜೆಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದ್ದಾರೆ. ಕಳೆದ 5 ವರ್ಷಗಳಲ್ಲಿ ಇಡೀ ಶಿಕ್ಷಣ ವ್ಯವಸ್ಥೆಯಲ್ಲಿ ಅಪಾರ ಸುಧಾರಣೆ ತಂದಿದ್ದ ಧರ್ಮೇಂದ್ರ ಪ್ರಧಾನ್ ಅವರು, ದೇಶದಲ್ಲಿ ದಂಗೆ ಏಳುವ ಸಾಧ್ಯತೆಯನ್ನು ತಡೆಯಲು ನಿಸ್ವಾರ್ಥದಿಂದ ರಾಜೀನಾಮೆ ನೀಡಿದ್ದಾರೆ ಎಂದು ಬಿವೈವಿ ಬಣ್ಣಿಸಿದ್ದಾರೆ.
ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ವಿಜಯೇಂದ್ರ, ವಿದ್ಯಾರ್ಥಿಗಳಿಗೆ ನ್ಯಾಯ ಕೊಡಿಸುವ ನೆಪದಲ್ಲಿ ಪ್ರತಿಭಟನೆಯಲ್ಲಿ ಕೆಲವು ಸಮಾಜಘಾತುಕ ಶಕ್ತಿಗಳು ಸೇರಿಕೊಂಡಿದ್ದವು. ಶಿಕ್ಷಣ ಸುಧಾರಣೆಗಿಂತ ಸಚಿವರ ರಾಜೀನಾಮೆಯನ್ನೇ ನೆಪವಾಗಿಟ್ಟುಕೊಂಡಿದ್ದ ಈ ಶಕ್ತಿಗಳು, ಒಂದು ವೇಳೆ ಪ್ರಧಾನ್ ರಾಜೀನಾಮೆ ನೀಡದಿದ್ದರೆ ದೇಶವನ್ನೇ ಹೊತ್ತಿ ಉರಿಸುವ ಸಾಧ್ಯತೆಯೂ ಇತ್ತು. ಆದರೆ, ಇಂತಹ ದಂಗೆಗೆ ಅವಕಾಶ ಮಾಡಿಕೊಡದೆ ಪ್ರಧಾನ್ ಅವರು ನಿಸ್ವಾರ್ಥವಾಗಿ ಹುದ್ದೆ ತೊರೆದಿದ್ದಾರೆ ಎಂದು ತಿಳಿಸಿದ್ದಾರೆ.

ದೇಶದ್ರೋಹಿಗಳ ಹುನ್ನಾರಕ್ಕೆ ಬಿಜೆಪಿ ಅವಕಾಶ ನೀಡಲ್ಲ

ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರವು ಪ್ರಜಾತಂತ್ರದ ಮೌಲ್ಯಗಳನ್ನು ಕಾಪಾಡಲು ಮತ್ತು ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಸದಾ ಮುಂದಿದೆ. ನೀಟ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಂತಹ ಪ್ರಸಂಗಗಳು ಮತ್ತೆ ಮರುಕಳಿಸಬಾರದು ಎಂಬ ಕಾರಣಕ್ಕೇ ಕೇಂದ್ರ ಸರ್ಕಾರ ಅತ್ಯಂತ ಕಠಿಣ ಕಾಯ್ದೆಯನ್ನು ರೂಪಿಸಿದೆ. ಅದಕ್ಕೆ ಪೂರಕವಾಗಿಯೇ ಶಿಕ್ಷಣ ಸಚಿವರು ರಾಜೀನಾಮೆ ನೀಡಿದ್ದಾರೆ ಎಂದು ವಿಜಯೇಂದ್ರ ವಿವರಿಸಿದ್ದಾರೆ.
ಅಲ್ಲದೆ, ನೀಟ್ ಪರೀಕ್ಷೆಯ ನೆಪದಲ್ಲಿ ದೇಶದ್ರೋಹಿಗಳು, ದೇಶ ತುಂಡರಿಸಬೇಕೆನ್ನುವವರು ಹಾಗೂ ಪಾಕಿಸ್ತಾನ-ಚೀನಾ ಪರ ಅನುಕಂಪ ಹೊಂದಿರುವವರು ತಮ್ಮ ಬೇಳೆ ಬೇಯಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ವಿದ್ಯಾರ್ಥಿಗಳ ಹಾಗೂ ದೇಶದ ಭವಿಷ್ಯವನ್ನು ಹಾಳುಮಾಡುವ ಹುನ್ನಾರವನ್ನು ಆಂತರಿಕ ಮತ್ತು ಬಾಹ್ಯ ವಿದ್ರೋಹಿ ಶಕ್ತಿಗಳು ಹೊಂದಿರುವ ಶಂಕೆ ಇದೆ. ಆದರೆ ಇದಕ್ಕೆ ಬಿಜೆಪಿ ಎಂದಿಗೂ ಅವಕಾಶ ನೀಡುವುದಿಲ್ಲ. ನಡೆಯುತ್ತಿರುವ ತನಿಖೆಯಿಂದ ನೀಟ್ ಅಕ್ರಮ ಎಸಗಿದ ತಪ್ಪಿತಸ್ಥರು ಮತ್ತು ಈ ಪರಿಸ್ಥಿತಿಯನ್ನು ಬಳಸಿಕೊಂಡ ಅವಕಾಶವಾದಿಗಳಿಬ್ಬರ ಮುಖವಾಡವೂ ಕಳಚಿ ಬೀಳಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರು ಎಚ್ಚರಿಕೆ ನೀಡಿದ್ದಾರೆ.