ಅಹಮದಾಬಾದ್: ಗುಜರಾತಿನ ಸೂರತ್ ನಗರದಲ್ಲಿರುವ ಜವಳಿ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಸಂಭವಿಸಿದ ಭೀಕರ ಬೆಂಕಿ ಅವಘಡವು ಆರಂಭದಲ್ಲಿ ಕೇವಲ ಒಂದು ಆಕಸ್ಮಿಕ ದುರ್ಘಟನೆ ಎಂದೇ ಭಾವಿಸಲಾಗಿತ್ತು. ಆದರೆ, ಪೊಲೀಸರ ತೀವ್ರ ತನಿಖೆಯ ನಂತರ ಇದೊಂದು ಆಕಸ್ಮಿಕವಲ್ಲ, ಬದಲಿಗೆ ಮಾಲೀಕನ ಮೇಲೆ ಪ್ರತೀಕಾರ ( Revenge ) ತೀರಿಸಿಕೊಳ್ಳಲು ನಡೆಸಿದ ಒಂದು ಕೃತ್ಯ ಎಂಬ ಆಘಾತಕಾರಿ ಸತ್ಯ ಹೊರಬಿದ್ದಿದೆ. ಕೇವಲ 150 ರೂಪಾಯಿ ಮೌಲ್ಯದ ಪೆಟ್ರೋಲ್ ಮತ್ತು ಒಂದು ಬೆಂಕಿ ಕಡ್ಡಿಯ ಸಹಾಯದಿಂದ ಅಕೌಂಟೆಂಟ್ ಒಬ್ಬ ಇಡೀ ಜವಳಿ ಮಾರುಕಟ್ಟೆಯನ್ನೇ ಸುಟ್ಟುಹಾಕಿದ್ದು, ಸೂರತ್ ಕ್ರೈಂ ಬ್ರಾಂಚ್ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ವಿನೋದ್ ಪಂಡಿತ್ ಸಾವ್ಲೆ ಎಂದು ಗುರುತಿಸಲಾಗಿದೆ. ಈತ ಸೂರತ್‌ನ ದಿಂದೋಲಿಯ ಬಿಲಿಪತ್ರ ರೆಸಿಡೆನ್ಸಿಯಲ್ಲಿ ವಾಸವಾಗಿದ್ದ. ಈತ ಕಳೆದ ಏಪ್ರಿಲ್ 2026 ರಿಂದ ಅಂಗಡಿ ಸಂಖ್ಯೆ 639 ರಲ್ಲಿ ಅಕೌಂಟೆಂಟ್ ಆಗಿ ಸುಮಾರು ಮೂರು ತಿಂಗಳುಗಳ ಕಾಲ ಕೆಲಸ ಮಾಡಿದ. ಆದರೆ, ಅಕೌಂಟ್ಸ್ ಕೆಲಸವನ್ನು ಸರಿಯಾಗಿ ನಿರ್ವಹಿಸಲು ವಿಫಲವಾದ ಕಾರಣ ಆತ ಜೂನ್ ತಿಂಗಳಲ್ಲಿ ಕೆಲಸ ಬಿಡಬೇಕಾಯಿತು. ಈ ಅವಧಿಯಲ್ಲಿ ತನ್ನ ಮಾಲೀಕ ತನಗೆ 10,000 ರೂಪಾಯಿ ಸಂಬಳವನ್ನು ಬಾಕಿ ಕೊಡಬೇಕಿದೆ ಅಂದುಕೊಂಡನು. ಆದರೆ, ತನ್ನ ಮಾಲೀಕನಿಂದ ಹಣ ಸಿಗದೇ ಇದ್ದಾಗ ಆತನಿಗೆ ತಕ್ಕ ಪಾಠ ಕಲಿಸಬೇಕೆಂದು ವಿನೋದ್ ನಿರ್ಧರಿಸಿದ.
ಮಾಲೀಕನ ಮೇಲೆ ಸೇಡು ತೀರಿಸಿಕೊಳ್ಳಲು ನಿರ್ಧರಿಸಿದ ವಿನೋದ್, ತಾನು ಕೆಲಸ ಮಾಡುತ್ತಿದ್ದ ಅಂಗಡಿ ಸಮೀಪದ ಪೆಟ್ರೋಲ್ ಬಂಕ್‌ನಲ್ಲಿ ಪ್ಲಾಸ್ಟಿಕ್ ಚೀಲ ಹಾಗೂ ಬಾಟಲಿಯಲ್ಲಿ ಸುಮಾರು 150 ರೂ. ಮೌಲ್ಯದ ಪೆಟ್ರೋಲ್ ಖರೀದಿಸಿದನು. ಸೆಪ್ಟೆಂಬರ್ 8ರ ರಾತ್ರಿ ಸುಮಾರು 9 ಗಂಟೆಯ ವೇಳೆಗೆ ಮಾರುಕಟ್ಟೆ ಪ್ರವೇಶಿಸಿದ ವಿನೋದದ, ಯಾರ ಕಣ್ಣಿಗೂ ಬೀಳದಂತೆ ಐದನೇ ಮಹಡಿಯ ಮೆಟ್ಟಿಲುಗಳ ಬಳಿ ಅಚ್ಚುಕಟ್ಟಾಗಿ ತಲೆಮರೆಸಿಕೊಂಡಿದ್ದನು. ರಾತ್ರಿ ಸುಮಾರು 12.30ರ ಸುಮಾರಿಗೆ ಮಾರುಕಟ್ಟೆಯು ಸಂಪೂರ್ಣ ಜನಸಂದಣಿಯಿಂದ ಖಾಲಿಯಾದ ಬಳಿಕ, ತಾನು ಗುರಿಯಾಗಿಸಿದ್ದ ಅಂಗಡಿಯ ಕಡೆಗೆ ಹೆಜ್ಜೆ ಹಾಕಿ, ಬೆಂಕಿ ಹಚ್ಚಿದನು. ಆರಂಭದಲ್ಲಿ ಇದೊಂದು ಆಕಸ್ಮಿಕ ಘಟನೆ ಎಂದೇ ಅಂದುಕೊಳ್ಳಲಾಗಿತ್ತು. ಆದರೆ, ಪೊಲೀಸ್ ತನಿಖೆಯ ಬಳಿಕ ವಿನೋದ್ ಎಸಗಿದ ದುಷ್ಕೃತ್ಯ ಬಯಲಾಯಿತು.
ಕ್ರೈಂ ಬ್ರಾಂಚ್ ಪೊಲೀಸರು ವಶಪಡಿಸಿಕೊಂಡ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಮುಖಕ್ಕೆ ಬಿಳಿ ಬಟ್ಟೆ ಸುತ್ತಿಕೊಂಡು, ಭುಜದ ಮೇಲೆ ಬ್ಯಾಗ್ ಹಾಕಿಕೊಂಡಿದ್ದ ಆರೋಪಿಯು ಆರನೇ ಮಹಡಿಯನ್ನು ತಲುಪುವುದು ಸ್ಪಷ್ಟವಾಗಿ ದಾಖಲಾಗಿದೆ. ಆ ಪ್ರದೇಶವನ್ನು ಸಂಪೂರ್ಣವಾಗಿ ಪರಿಶೀಲಿಸಿದಾಗ ವಿನೋದ್, ಬ್ಯಾಗ್‌ನಿಂದ ಪೆಟ್ರೋಲ್ ತುಂಬಿದ ಬಾಟಲಿಯನ್ನು ಹೊರತೆಗೆದು ಅಂಗಡಿಯ ಹೊರಗೆ ಇರಿಸಲಾಗಿದ್ದ ಬಟ್ಟೆಯ ಪೆಟ್ಟಿಗೆ ಹಾಗೂ ಪಾರ್ಸೆಲ್‌ಗಳ ಮೇಲೆ ಸುರಿದಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಮೊದಲ ಬಾರಿ ಬೆಂಕಿ ಕಡ್ಡಿ ಗೀಚಿದಾಗ ಬೆಂಕಿ ಹತ್ತಿಕೊಳ್ಳಲಿಲ್ಲವಾದರೂ, ಎರಡನೇ ಪ್ರಯತ್ನದಲ್ಲಿ ಬಟ್ಟೆಗೆ ಬೆಂಕಿ ಹೊತ್ತಿಕೊಂಡಿತು. ಬೆಂಕಿ ರಭಸವಾಗಿ ಹತ್ತಿಕೊಳ್ಳುತ್ತಿದ್ದಂತೆ ಆತ ಅಲ್ಲಿಂದ ಪರಾರಿಯಾಗಿದ್ದು, ತನ್ನ ಯೋಜನೆ ಯಶಸ್ವಿಯಾಯಿತೇ ಎಂದು ಒಮ್ಮೆ ಹಿಂದೆ ತಿರುಗಿ ನೋಡುವ ದೃಶ್ಯಗಳು ಕೂಡ ಸಿಸಿಟಿವಿಯಲ್ಲಿ ಸೆರೆಸಿಕ್ಕಿವೆ.
ಅಂಗಡಿಯ ಹೊರಗೆ ಬಟ್ಟೆ ಮತ್ತು ದೊಡ್ಡ ಪ್ರಮಾಣದ ಪ್ಯಾಕಿಂಗ್ ಸಾಮಗ್ರಿಗಳು ಹೇರಳವಾಗಿದ್ದರಿಂದ ಬೆಂಕಿ ಕ್ಷಿಪ್ರವಾಗಿ ಹಬ್ಬಿಕೊಂಡಿತು ಮತ್ತು ಸುತ್ತಮುತ್ತಲಿನ ಹಲವಾರು ಅಂಗಡಿಗಳನ್ನು ಆವರಿಸಿಕೊಂಡಿತು. ಸುದ್ದಿ ತಿಳಿದು ಧಾವಿಸಿಬಂದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿಯನ್ನು ಹತೋಟಿಗೆ ತರಲು ತಾಸುಗಟ್ಟಲೆ ಹೆಣಗಾಡಬೇಕಾಯಿತು. ಈ ಭೀಕರ ಅಗ್ನಿ ದುರಂತದಲ್ಲಿ ಕನಿಷ್ಠ 14 ಅಂಗಡಿಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದ್ದು, ಅಂದಾಜು 24 ಕೋಟಿ ರೂಪಾಯಿ ಮೌಲ್ಯದ ಬಟ್ಟೆ ಹಾಗೂ ಬಟ್ಟೆ ಸಾಮಗ್ರಿಗಳು ಬೂದಿಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆಯ ನಂತರ ಸರೌಲಿ ಪೊಲೀಸ್ ಠಾಣೆಯಲ್ಲಿ ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಸೂರತ್ ಪೊಲೀಸರ 'ವಿಶ್ವಾಸ್ ಪ್ರಾಜೆಕ್ಟ್ ಹಂತ-2' ರ ಅಡಿಯಲ್ಲಿ ಅಳವಡಿಸಲಾಗಿದ್ದ ಅನೇಕ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳನ್ನು ಕ್ರೈಂ ಬ್ರಾಂಚ್ ತನಿಖಾ ತಂಡವು ಕೂಲಂಕಷವಾಗಿ ಪರಿಶೀಲಿಸಿತು. ಆರೋಪಿ ಮಾರುಕಟ್ಟೆ ಪ್ರವೇಶಿಸಿದ ಹಾದಿಯಿಂದ ಹಿಡಿದು ಹೊರಬಂದ ಮಾರ್ಗದವರೆಗೆ ಎಲ್ಲಾ ತುಣುಕುಗಳನ್ನು ಜೋಡಿಸಿ ತನಿಖೆ ನಡೆಸಿದ ಪೊಲೀಸರಿಗೆ ಅಂತಿಮವಾಗಿ ವಿನೋದ್ ಸಾವ್ಲೆ ಸಿಕ್ಕಿಬಿದ್ದಿದ್ದಾನೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ಸುದ್ದಿ ಹಬ್ಬಿ ತನ್ನ ವಿರುದ್ಧ ಎಫ್‌ಐಆರ್ ದಾಖಲಾಗಿರುವುದನ್ನು ತಿಳಿದ ವಿನೋದ್, ತಕ್ಷಣವೇ ತನ್ನ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿ ಹೆಂಡತಿ ಹಾಗೂ ಮಗುವಿನೊಂದಿಗೆ ಸೂರತ್ ಬಿಟ್ಟು ಪರಾರಿಯಾಗಿದ್ದನು. ಮೊದಲು ರಾಜಸ್ಥಾನದ ಖಾತು ಶ್ಯಾಮ್ ದೇವಾಲಯಕ್ಕೆ ತೆರಳಿದ್ದ ಆತ, ನಂತರ ಅಯೋಧ್ಯೆಗೆ ಹೋಗಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ. ಅಂತಿಮವಾಗಿ ಸೂರತ್‌ಗೆ ವಾಪಸಾದ ಆರೋಪಿಯನ್ನು ದಿಂದೋಲಿಯ ಫ್ಲವರ್ ಗಾರ್ಡನ್ ಬಳಿ ಕ್ರೈಂ ಬ್ರಾಂಚ್ ತಂಡವು ಬಂಧಿಸಿದೆ. ಈ ಕೃತ್ಯದಲ್ಲಿ ಆತ ಒಂಟಿಯಾಗಿ ಸಂಚು ರೂಪಿಸಿದ್ದನೇ ಅಥವಾ ಬೇರೆ ಯಾರಾದರೂ ಕೈಜೋಡಿಸಿದ್ದರೇ ಎಂಬ ಬಗ್ಗೆ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ, (ಏಜೆನ್ಸೀಸ್).