ವಿದ್ಯುತ್​ ಕಂಬವೇರಿರುವ ಬಾಲಕ 
ದೇಶ

ಸಾವಿಗೂ ಹೆದರದ 'ವಿದ್ಯುತ್' ಪ್ರೇಮಿ! ಪ್ರೇಯಸಿಯನ್ನು ಮದುವೆಯಾಗಲು ಹೈಟೆನ್ಷನ್ ಕಂಬವೇರಿದ ಬಾಲಕ | Lover

ಪ್ರಮುಖ ಮುಖ್ಯಾಂಶಗಳು

  • ಪ್ರೇಯಸಿಯನ್ನು ಮದುವೆ ಮಾಡಿಕೊಡಿ ಎಂದು ವಿದ್ಯುತ್​ ಕಂಬವೇರಿದ ಭೂಪ
  • ಆಧುನಿಕ ವೀರೂ ಎಂದು ಕರೆದ ನೆಟ್ಟಿಗರು
  • ಹುಡುಗನ ಮನವೊಲಿಸಿ ಕೆಳಗಿಳಿಸಿದ ಪೊಲೀಸರು
ಪ್ರತಾಪ್‌ಗಢ: ಪ್ರೀತಿ ಕುರುಡು ಎನ್ನುವ ಮಾತನ್ನು ನೀವು ಕೇಳಿರಬಹುದು. ಆದರೆ ಉತ್ತರ ಪ್ರದೇಶದ ಪ್ರತಾಪ್‌ಗಢದಲ್ಲಿ ನಡೆದ ಈ ಘಟನೆ ನೋಡಿದರೆ ಪ್ರೀತಿ ಕೇವಲ ಕುರುಡಷ್ಟೇ ಅಲ್ಲ, ಸಾವಿಗೂ ಹೆದರುವವರಲ್ಲ ಎಂದು ಅನಿಸಬಹುದು.
ತನ್ನ ಪ್ರೇಯಸಿಯನ್ನು (Lover) ಮದುವೆ ಮಾಡಿಕೊಡದಿದ್ದರೆ ಪ್ರಾಣ ಬಿಡುವುದಾಗಿ ಬೆದರಿಕೆ ಹಾಕಿದ 15 ವರ್ಷದ ಬಾಲಕನೊಬ್ಬ, ಸೀದಾ 11,000 ವೋಲ್ಟ್ ಹೈಟೆನ್ಷನ್ ವಿದ್ಯುತ್ ಕಂಬವೇರಿ ಕುಳಿತ ಘಟನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಏನಿದು 'ವಿದ್ಯುತ್' ಪ್ರೇಮ ಪುರಾಣ?

ವರದಿಗಳ ಪ್ರಕಾರ, ಈ 15 ವರ್ಷದ ಹದಿಹರೆಯದ ಹುಡುಗ ಕಳೆದ ಒಂದು ವರ್ಷದಿಂದ ಪಟ್ಟಿ ಪ್ರದೇಶದ ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿದ್ದನಂತೆ. ಇತ್ತೀಚೆಗೆ ಆಕೆಯನ್ನು ಭೇಟಿಯಾಗಲು ಹೋದಾಗ ಹುಡುಗಿಯ ಮನೆಯವರು ಈತನನ್ನು ಹಿಡಿದು ಚೆನ್ನಾಗಿ ಥಳಿಸಿದ್ದರು. ವಿಷಯ ಅಷ್ಟಕ್ಕೇ ಮುಗಿಯಲಿಲ್ಲ, ಮಗನ ಪ್ರೇಮ ವ್ಯವಹಾರ ತಿಳಿದ ಈತನ ಪೋಷಕರು ಹುಡುಗನ ಫೋನ್ ಕಸಿದುಕೊಂಡು, ಆ ಪ್ರದೇಶಕ್ಕೆ ಹೋಗದಂತೆ ಕಟ್ಟುನಿಟ್ಟಿನ ತಾಕೀತು ಮಾಡಿದ್ದರು.
ಪೋಷಕರ ಈ ಕ್ರಮದಿಂದ ಕೆಂಡಾಮಂಡಲವಾದ ಹುಡುಗ, ಶೋಲೆ ಸಿನಿಮಾದಲ್ಲಿ ವೀರೂ (ಧರ್ಮೆಂದ್ರ) ಬಸಂತಿ (ಹೇಮಾ ಮಾಲಿನಿ) ಜೊತೆ ಮದುವೆ ಮಾಡಿಸಿ ಎಂದು ನೀರಿನ ಟ್ಯಾಂಕ್ ಹತ್ತಿದ ರೀತಿ, ನೇರವಾಗಿ ಹೋಗಿ ದೇವ್ಸಾರಾ ಪೊಲೀಸ್ ಠಾಣೆ ಸಮೀಪದ ಹೈಟೆನ್ಷನ್ ಕಂಬವೇರಿದ್ದಾನೆ. ನೆಲದಿಂದ ಸುಮಾರು 35 ಅಡಿ ಎತ್ತರದ ತಂತಿಯ ಮೇಲೆ ಕುಳಿತು, ಅವಳ ಜೊತೆ ಮದುವೆ ಮಾಡಿಸುವುದಾಗಿ ಮಾತು ಕೊಟ್ಟರೆ ಮಾತ್ರ ಕೆಳಗೆ ಬರುತ್ತೇನೆ ಎಂದು ಪಟ್ಟು ಹಿಡಿದಿದ್ದಾನೆ.
ಅದೃಷ್ಟವಶಾತ್ ಬದುಕುಳಿದ ಬಾಲಕ!
ಬಾಲಕ ತಂತಿ ಹಿಡಿದು ನೇತಾಡುತ್ತಿರುವುದನ್ನು ಕಂಡು ಗ್ರಾಮಸ್ಥರು ಬೆಚ್ಚಿಬಿದ್ದರು. 11,000 ವೋಲ್ಟ್ ತಂತಿ ಎಂದರೆ ಸಾಧಾರಣ ಮಾತಲ್ಲ, ಮುಟ್ಟಿದರೆ ಬೂದಿಯಾಗುವುದು ಖಚಿತ. ಆದರೆ ಆ ಸಮಯದಲ್ಲಿ ನಿರ್ವಹಣಾ ಕೆಲಸದ ಕಾರಣದಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಇದು ಆ ಹುಡುಗನ ಪಾಲಿಗೆ ಅದೃಷ್ಟವೇ ಸರಿ! ಒಂದು ವೇಳೆ ವಿದ್ಯುತ್ ಇದ್ದಿದ್ದರೆ ಇಂದು ಕಥೆಯೇ ಬೇರೆಯಾಗಿರುತ್ತಿತ್ತು.
ಸುಮಾರು 40 ನಿಮಿಷಗಳ ಕಾಲ ಈ ಹೈಡ್ರಾಮಾ ನಡೆದಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಮತ್ತು ವಿದ್ಯುತ್ ಇಲಾಖೆಯವರು ನಿನ್ನ ಮದುವೆ ಮಾಡಿಸೋಣ, ಮೊದಲು ಕೆಳಗೆ ಬಾರಪ್ಪಾ ಎಂದು ಬಾಲಕನಿಗೆ ನಯವಾಗಿಯೇ ಮನವೊಲಿಸಿದ್ದಾರೆ. ಕೊನೆಗೆ ಪೊಲೀಸರ ಭರವಸೆ ನಂಬಿದ ಬಾಲಕ, ಏಣಿಯ ಸಹಾಯದಿಂದ ಕೆಳಗೆ ಇಳಿದು ಬಂದಿದ್ದಾನೆ.

ಪೊಲೀಸರಿಂದ ಕೌನ್ಸೆಲಿಂಗ್

ಘಟನೆಯ ನಂತರ ಪೊಲೀಸರು ಇಬ್ಬರೂ ಅಪ್ರಾಪ್ತ ವಯಸ್ಕರು ಎನ್ನುವುದನ್ನು ಗಮನಿಸಿ, ಎರಡು ಕುಟುಂಬದವರನ್ನು ಕರೆಸಿ ಬುದ್ಧಿವಾದ ಹೇಳಿದ್ದಾರೆ. ಬಾಲಕನಿಗೆ ಜೀವನದ ಮಹತ್ವ ಮತ್ತು ಪ್ರಾಯದ ತಪ್ಪುಗಳ ಬಗ್ಗೆ ತಿಳುವಳಿಕೆ ನೀಡಿ ಆತನ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ.
ಸಿನಿಮಾ ಸ್ಟೈಲ್‌ನಲ್ಲಿ ಪ್ರೇಮ ನಿವೇದನೆ ಮಾಡಲು ಹೋಗಿ ಪ್ರಾಣವನ್ನೇ ಪಣಕ್ಕಿಡುವುದು ಎಷ್ಟು ಸರಿ? ಹದಿಹರೆಯದವರಲ್ಲಿ ಇಂತಹ ವಿವೇಚನಾ ರಹಿತ ನಡವಳಿಕೆಗಳು ಹೆಚ್ಚುತ್ತಿರುವುದು ಪೋಷಕರಿಗೆ ತಲೆನೋವಾಗಿ ಪರಿಣಮಿಸಿದೆ. ಮಕ್ಕಳ ಚಟುವಟಿಕೆಗಳ ಮೇಲೆ ನಿಗಾ ಇಡುವುದು ಎಷ್ಟು ಮುಖ್ಯ ಎಂಬುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ,(ಏಜನ್ಸೀಸ್​).