ಗುಜರಾತ್ನಲ್ಲಿ ರಾಜಕೀಯ ದೇಣಿಗೆ ಹಗರಣವೊಂದು ಬಯಲಾಗಿದೆ. ಹೆಚ್ಚು ಜನಪ್ರಿಯತೆ ಪಡೆಯದ ನಾಲ್ಕು ರಾಜಕೀಯ ಪಕ್ಷಗಳು 600 ಕೋಟಿ ರೂಪಾಯಿ ತೆರಿಗೆ ವಂಚಿಸಿವೆ. ಇದಕ್ಕೆ ಸಂಬಂಧಿಸಿದಂತೆ ರಾಜ್ಯ ಸಿಐಡಿ (ಅಪರಾಧ ವಿಭಾಗ) ಮೂರು ಪಕ್ಷಗಳ ವಿರುದ್ಧ ಪ್ರತ್ಯೇಕ ಎಫ್ಐಆರ್ ದಾಖಲಿಸಿದೆ. ಗರೀಬ್ ಕಲ್ಯಾಣ ಪಕ್ಷ, ಸ್ವತಂತ್ರ ಅಭಿವ್ಯಕ್ತಿ ಪಕ್ಷ ಹಾಗೂ ಭಾರತೀಯ ರಾಷ್ಟ್ರೀಯ ಜನತಾ ದಳ ಎಂಬ 3 ಪಕ್ಷಗಳ ವಿರುದ್ಧ ಆದಾಯ ತೆರಿಗೆ ಇಲಾಖೆಯ ದೂರಿನ ಮೇರೆಗೆ ಸಿಐಡಿ ಪ್ರಕರಣ ದಾಖಲಿಸಿಕೊಂಡಿದೆ. ಈ ಪಕ್ಷಗಳು ಒಟ್ಟು 2000 ಕೋಟಿ ರೂ.ಗಳನ್ನು ವಂಚಿಸಿವೆ. ದೇಶದಾದ್ಯಂತ ಇಂತಹ ಆಟಕ್ಕುಂಟು, ಲೆಕ್ಕಕ್ಕಿಲ್ಲದ ಎಷ್ಟು ಪಕ್ಷಗಳಿವೆ? ಅವುಗಳಿಗೆ ಪ್ರತಿ ವರ್ಷ ಎಷ್ಟು ದೇಣಿಗೆ ಬರುತ್ತಿದೆ? ತೆರಿಗೆ ವಂಚನೆ ಹೇಗೆ ನಡೆಯುತ್ತದೆ? ಚುನಾವಣಾ ಆಯೋಗ ಏನು ಕ್ರಮ ಕೈಗೊಂಡಿದೆ? ಈ ಕುರಿತಾದ ಮಾಹಿತಿ ಇಲ್ಲಿದೆ.
ಗುಜರಾತ್ನಲ್ಲಿ ಬೆಳಕಿಗೆ ಬಂದಿರುವ ರಾಜಕೀಯ ದೇಣಿಗೆ ಹಗರಣವು ಭಾರತದ ಚುನಾವಣಾ ಹಾಗೂ ಹಣಕಾಸು ವ್ಯವಸ್ಥೆಯಲ್ಲಿರುವ ದೊಡ್ಡ ಲೋಪವನ್ನು ಬಯಲಿಗೆಳೆದಿದೆ. ಜನಪ್ರಿಯವಲ್ಲದ, ಚುನಾವಣೆಯಲ್ಲಿ ಠೇವಣಿ ಕಳೆದುಕೊಳ್ಳುವ ಅಥವಾ ಚುನಾವಣೆಯನ್ನೇ ಎದುರಿಸದ ಪಕ್ಷಗಳು ಸಾವಿರಾರು ಕೋಟಿ ರೂಪಾಯಿಗಳ ಕಪ್ಪುಹಣವನ್ನು ಬಿಳಿ ಮಾಡುವ ಕರಾಳ ದಂಧೆಯು ಈ ತನಿಖೆಯಿಂದ ಬಯಲಿಗೆ ಬಂದಿದೆ. ಹೌದು, ರಾಜಕೀಯ ದೇಣಿಗೆಗಳ ಸೋಗಿನಲ್ಲಿ ನಡೆಯುತ್ತಿದ್ದ ಬೃಹತ್ ಹಣಕಾಸು ವಂಚನೆಯ ಜಾಲವನ್ನು ಗುಜರಾತ್ ಪೊಲೀಸರು ಭೇದಿಸಿದ್ದಾರೆ. ಗುಜರಾತ್ನ ಗಾಂಧಿನಗರದ ಸೆಕ್ಟರ್ 11ರಲ್ಲಿ ಕಚೇರಿ ಹೊಂದಿರುವ ಮಾನ್ಯತೆ ಪಡೆಯದ ‘ಭಾರತೀಯ ನ್ಯಾಷನಲ್ ಜನತಾ ದಳ’ (ಬಿಎನ್ಜೆಡಿ) ಪಕ್ಷ ಹಾಗೂ ಅದರ ಪದಾಧಿಕಾರಿಗಳ ವಿರುದ್ಧ ಆದಾಯ ತೆರಿಗೆ ಉಪ ಆಯುಕ್ತ ಡಾ. ರಾಜೇಂದ್ರ ರಾಜ್ ನೀಡಿದ ದೂರಿನ ಮೇರೆಗೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ. ಬಿಎನ್ಜೆಡಿ 2019-20ರಿಂದ 2024-25ರ ನಡುವೆ 56,000ಕ್ಕೂ ಹೆಚ್ಚು ತೆರಿಗೆದಾರರಿಂದ ಆರ್ಟಿಜಿಎಸ್ ಮೂಲಕ -ಠಿ;1,143 ಕೋಟಿ ನಕಲಿ ದೇಣಿಗೆ ಸಂಗ್ರಹಿಸಿದೆ! ಇದಕ್ಕೆ ಪ್ರತಿಯಾಗಿ ನಕಲಿ ರಸೀದಿ ನೀಡಿ ಶೇ.100ರಷ್ಟು ತೆರಿಗೆ ವಿನಾಯಿತಿಗೆ ಅವಕಾಶ ಕಲ್ಪಿಸಿತ್ತು. ಚುನಾವಣಾ ಆಯೋಗಕ್ಕೆ ನಕಲಿ ವರದಿ ಸಲ್ಲಿಸಿ ಸಾರ್ವಜನಿಕ ಹಣ ಲಪಟಾಯಿಸಿದ್ದು, ಬೊಕ್ಕಸಕ್ಕೆ -ಠಿ;343 ಕೋಟಿ ನಷ್ಟವಾಗಿದೆ. ಶೇ.2ರಿಂದ 10ರಷ್ಟು ಕಮಿಷನ್ ಕಡಿತಗೊಳಿಸಿ ಉಳಿದ ಹಣವನ್ನು ದಾನಿಗಳಿಗೆ ಹಿಂದಿರುಗಿಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಗುಜರಾತ್ ಸಿಐಡಿಯ ಕ್ರೖೆಂ ವಿಭಾಗವು ಆದಾಯ ತೆರಿಗೆ ಇಲಾಖೆಯ ದೂರಿನ ಮೇರೆಗೆ ಸ್ವತಂತ್ರ ಅಭಿವ್ಯಕ್ತಿ ಪಕ್ಷ (ಎಸ್ಎಪಿ), ಗರೀಬ್ ಕಲ್ಯಾಣ ಪಕ್ಷ (ಜಿಕೆಪಿ) ಮತ್ತು ಭಾರತೀಯ ರಾಷ್ಟ್ರೀಯ ಜನತಾ ದಳ (ಬಿಎನ್ಜೆಡಿ) ಎಂಬ ಮೂರು ನೊಂದಾಯಿತ ಆದರೆ ಮಾನ್ಯತೆ ಪಡೆಯದ ಪಕ್ಷಗಳ ವಿರುದ್ಧ ಎಫ್ಐಆರ್ ದಾಖಲಿಸಿದೆ. ಈ ಪಕ್ಷಗಳು -ಠಿ;1,870 ಕೋಟಿಯಿಂದ -ಠಿ;2,000 ಕೋಟಿ ಮೌಲ್ಯದ ನಕಲಿ ದೇಣಿಗೆ ವ್ಯವಹಾರ ನಡೆಸಿ, ಸರ್ಕಾರಕ್ಕೆ ಕನಿಷ್ಠ -ಠಿ;560 ಕೋಟಿಯಿಂದ -ಠಿ;725 ಕೋಟಿಗೂ ಹೆಚ್ಚು ತೆರಿಗೆ ನಷ್ಟ ಉಂಟುಮಾಡಿವೆ ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ. ಈ ಪಕ್ಷಗಳು 2017ರಿಂದ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದರೂ, ಅವುಗಳ ಅಭ್ಯರ್ಥಿಗಳು ಸದಾ ಠೇವಣಿ ಕಳೆದುಕೊಳ್ಳುತ್ತಿದ್ದರು. ವಾಸ್ತವದಲ್ಲಿ ಇವು ರಾಜಕೀಯ ಚಟುವಟಿಕೆಗಳಿಗಾಗಿ ಇರದೆ, ಹಣಕಾಸು ದಂಧೆಗಾಗಿಯೇ ಸ್ಥಾಪಿತವಾಗಿದ್ದವು.
ಆದಾಯ ತೆರಿಗೆ ಕಾಯ್ದೆಯ ಕೆಲವು ಕಾನೂನು ವಿನಾಯಿತಿ ಗಳನ್ನು ದುರುಪಯೋಗಪಡಿಸಿಕೊಂಡು, ರಾಜಕೀಯ ದೇಣಿಗೆ ಹೆಸರಿನಲ್ಲಿ ಕಪು್ಪಹಣವನ್ನು ಚಲಾವಣೆಗೆ ತರಲಾಗುತ್ತಿದೆ.
ಸೆಕ್ಷನ್ 80ಜಿಜಿಸಿ/80ಜಿಜಿಬಿ ಲಾಭ: ಯಾವುದೇ ವ್ಯಕ್ತಿ (80ಜಿಜಿಸಿ ಅಡಿಯಲ್ಲಿ) ಅಥವಾ ಕಾರ್ಪೆರೇಟ್ ಕಂಪನಿ (80ಜಿಜಿಬಿ ಅಡಿಯಲ್ಲಿ) ನೋಂದಾಯಿತ ರಾಜಕೀಯ ಪಕ್ಷಕ್ಕೆ ಬ್ಯಾಂಕ್ ಮೂಲಕ ದೇಣಿಗೆ ನೀಡಿದರೆ, ಆ ಸಂಪೂರ್ಣ ಮೊತ್ತಕ್ಕೆ 100% ಆದಾಯ ತೆರಿಗೆ ವಿನಾಯಿತಿ ಸಿಗುತ್ತದೆ.
ಸೆಕ್ಷನ್ 13ಎ ಅಡಿಯಲ್ಲಿ ಪಕ್ಷಗಳಿಗೆ ತೆರಿಗೆ ಮುಕ್ತಿ: ರಾಜಕೀಯ ಪಕ್ಷಗಳು ಪಡೆಯುವ ದೇಣಿಗೆ, ಸ್ವತ್ತುಗಳ ಮೇಲಿನ ಆದಾಯಕ್ಕೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 13ಎ ಅಡಿಯಲ್ಲಿ ಶೂನ್ಯ ತೆರಿಗೆ (100% ವಿನಾಯಿತಿ) ಇರುತ್ತದೆ.
ಹಣ ವಾಪಸ್ ಮಾಡುವ ಸರಪಳಿ (Round Tripping): ತೆರಿಗೆ ಉಳಿಸಬೇಕೆಂದಿರುವ ವ್ಯಕ್ತಿ/ಉದ್ಯಮಿ ಇಂತಹ ನಕಲಿ ಪಕ್ಷಕ್ಕೆ ಚೆಕ್ ಅಥವಾ ಆರ್ಟಿಜಿಎಸ್ ಮೂಲಕ ಕೋಟ್ಯಂತರ ರೂಪಾಯಿ ದೇಣಿಗೆ ಕಳುಹಿಸುತ್ತಾನೆ. ಆ ದೇಣಿಗೆ ರಸೀದಿಯನ್ನು ತೋರಿಸಿ ಆತ ಸರ್ಕಾರಕ್ಕೆ ಕಟ್ಟಬೇಕಾದ ಆದಾಯ ತೆರಿಗೆಯನ್ನು ಮನ್ನಾ ಮಾಡಿಸಿಕೊಳ್ಳುತ್ತಾನೆ. ಇತ್ತ ರಾಜಕೀಯ ಪಕ್ಷದ ಏಜೆಂಟ್ಗಳು 5%ರಿಂದ 10% ಕಮಿಷನ್ ಕಡಿತಗೊಳಿಸಿ, ಉಳಿದ 90-95% ಹಣವನ್ನು ಹವಾಲಾ ಅಥವಾ ಶೆಲ್ ಕಂಪನಿಗಳ (ಬೋಗಸ್ ಸಂಸ್ಥೆಗಳು) ಮುಖಾಂತರ ದೇಣಿಗೆದಾರನಿಗೆ ನಗದು ರೂಪದಲ್ಲಿ ರಹಸ್ಯವಾಗಿ ಮರಳಿಸುತ್ತಾರೆ.
ಅಧಿಕಾರ ವ್ಯಾಪ್ತಿಯ ಮಿತಿಯಲ್ಲೇ ಕೇಂದ್ರ ಚುನಾವಣಾ ಆಯೋಗವು ಕಳೆದ ಕೆಲವು ವರ್ಷಗಳಲ್ಲಿ ಸಕ್ರಿಯವಾಗಿಲ್ಲದ, ಕಚೇರಿ ವಿಳಾಸವೇ ಇಲ್ಲದ 500ಕ್ಕೂ ಹೆಚ್ಚು ಪಕ್ಷಗಳನ್ನು ತನ್ನ ಪಟ್ಟಿಯಿಂದ ಅಮಾನತು ಮಾಡಿದೆ/ಕೈಬಿಟ್ಟಿದೆ (Delisted).
ಲೆಕ್ಕಪತ್ರ ನೀಡದ ಹಾಗೂ ಚುನಾವಣೆಯಲ್ಲಿ ಸ್ಪರ್ಧಿಸದೆ ಕೇವಲ ಹಣ ವರ್ಗಾವಣೆ ಮಾಡುತ್ತಿರುವ ನೂರಾರು ಪಕ್ಷಗಳ ಪಟ್ಟಿಯನ್ನು ಸಿದ್ಧಪಡಿಸಿ, ಅವುಗಳಿಗೆ ಸಿಗುವ ತೆರಿಗೆ ವಿನಾಯಿತಿಯನ್ನು (ಸೆಕ್ಷನ್ 13ಎ) ರದ್ದುಗೊಳಿಸಲು ಮತ್ತು ತನಿಖೆ ನಡೆಸಲು ಕೇಂದ್ರ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ)ಗೆ ಶಿಫಾರಸು ಕಳುಹಿಸಿದೆ.
ತನಗೆ ಪಕ್ಷಗಳ ನೋಂದಣಿ ರದ್ದುಗೊಳಿಸುವ (Deregistration Power) ಅಧಿಕಾರ ನೀಡುವಂತೆ ಹಾಗೂ ಕನಿಷ್ಠ 1 ಸೀಟು ಅಥವಾ ನಿರ್ದಿಷ್ಟ ಮತ ಗಳಿಸದ ಪಕ್ಷಗಳಿಗೆ ತೆರಿಗೆ ವಿನಾಯಿತಿ ರದ್ದುಪಡಿಸುವಂತೆ ಸರ್ಕಾರಕ್ಕೆ ಚುನಾವಣಾ ಆಯೋಗ ಹಲವು ಬಾರಿ ಶಿಫಾರಸು ಮಾಡಿದೆ.
ಭಾರತದಲ್ಲಿ ರಾಜಕೀಯ ಪಕ್ಷಗಳನ್ನು ಎರಡು ವಿಧವಾಗಿ ವಿಂಗಡಿಸಲಾಗಿದೆ.
ಮಾನ್ಯತೆ ಪಡೆದ ಪಕ್ಷಗಳು (Recognised Parties): ರಾಷ್ಟ್ರೀಯ ಅಥವಾ ರಾಜ್ಯ ಮಟ್ಟದಲ್ಲಿ ನಿರ್ದಿಷ್ಟ ಶೇಕಡಾವಾರು ಮತ ಅಥವಾ ಸೀಟುಗಳನ್ನು ಗೆದ್ದ ಪಕ್ಷಗಳು. ಉದಾಹರಣೆಗೆ, ಬಿಜೆಪಿ, ಕಾಂಗ್ರೆಸ್, ಸಮಾಜವಾದಿ ಪಕ್ಷ, ಜೆಡಿಎಸ್ ಸೇರಿದಂತೆ ಪ್ರಮುಖ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳು.
ನೋಂದಾಯಿತ ಆದರೆ ಮಾನ್ಯತೆ ಪಡೆಯದ ಪಕ್ಷಗಳು (RUPPs- Registered Unrecognised political parties): ದೇಶದಲ್ಲಿ ಇಂಥ ಮಾನ್ಯತೆ ಪಡೆಯದ ಪಕ್ಷಗಳ ಸಂಖ್ಯೆ 2800ಕ್ಕೂ ಹೆಚ್ಚು. ಈ ಪೈಕಿ 70%ಕ್ಕೂ ಹೆಚ್ಚು ಪಕ್ಷಗಳು ನೋಂದಣಿಯಾದ ನಂತರ ಎಂದಿಗೂ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಅಥವಾ ಅತ್ಯಲ್ಪ ಮತ ಪಡೆಯುತ್ತವೆ. ಈ 2,800 ಪಕ್ಷಗಳ ಪೈಕಿ ಅತಿ ಹೆಚ್ಚು ಅಂದರೆ 750ಕ್ಕಿಂತ ಅಧಿಕ ಪಕ್ಷಗಳು ಉತ್ತರ ಪ್ರದೇಶದಲ್ಲೇ ಇವೆ. ದೆಹಲಿಯಲ್ಲಿ 260ಕ್ಕೂ ಹೆಚ್ಚು, ತಮಿಳುನಾಡಿನಲ್ಲಿ 250, ಮಹಾರಾಷ್ಟ್ರದಲ್ಲಿ 200, ಬಿಹಾರದಲ್ಲಿ 150, ಗುಜರಾತ್ನಲ್ಲಿ 130, ಕರ್ನಾಟಕದಲ್ಲಿ 60ಕ್ಕೂ ಹೆಚ್ಚು ನೋಂದಾಯಿತ ಆದರೆ ಮಾನ್ಯತೆ ಪಡೆಯದ ಪಕ್ಷಗಳಿವೆ.
ಉತ್ತರ ಪ್ರದೇಶ ಮತ್ತು ಬಿಹಾರದಂತಹ ರಾಜ್ಯಗಳಲ್ಲಿ ಲೋಕಸಭಾ ಮತ್ತು ವಿಧಾನಸಭಾ ಕ್ಷೇತ್ರಗಳು ಹೆಚ್ಚಿರುವುದರಿಂದ ಸಣ್ಣ ಸಣ್ಣ ಜಾತಿ, ಸಮುದಾಯ ಅಥವಾ ಪ್ರಾದೇಶಿಕ ಹಿತಾಸಕ್ತಿಗಳ ಹೆಸರಿನಲ್ಲಿ ಪಕ್ಷ ಕಟ್ಟುವುದು ಸುಲಭ. ಗುಜರಾತ್, ಮಹಾರಾಷ್ಟ್ರ ಹಾಗೂ ದೆಹಲಿಗಳಂತಹ ವ್ಯಾಪಾರ ಪ್ರಧಾನ ಪ್ರದೇಶಗಳಲ್ಲಿ ಕಂಪನಿಗಳು ಮತ್ತು ಉದ್ಯಮಿಗಳು ತಮ್ಮ ತೆರಿಗೆ ಉಳಿಸಲು (80ಜಿಜಿಸಿ ವಿನಾಯಿತಿ ಪಡೆಯಲು) ಸ್ಥಳೀಯ ರಾಜಕೀಯ ಪಕ್ಷಗಳನ್ನು ರಚಿಸಿ ಹಣ ವರ್ಗಾವಣೆಗೆ ಬಳಸಿಕೊಳ್ಳುತ್ತಿರುವುದು ತನಿಖೆಗಳಿಂದ ದೃಢಪಟ್ಟಿದೆ.
ಜನಪ್ರತಿನಿಧಿ ಕಾಯ್ದೆ (ಆರ್ಪಿಎ) 1951ರ ಸೆಕ್ಷನ್ 29ಎ ಅಡಿಯಲ್ಲಿ ಚುನಾವಣಾ ಆಯೋಗಕ್ಕೆ ಪಕ್ಷವನ್ನು ನೋಂದಾಯಿಸುವ ಅಧಿಕಾರವಿದೆ, ಆದರೆ ಒಮ್ಮೆ ನೋಂದಣಿಯಾದ ಪಕ್ಷವನ್ನು ರದ್ದು ಮಾಡುವ ಶಾಸನಬದ್ಧ ಅಧಿಕಾರವಿಲ್ಲ. ಸುಪ್ರೀಂ ಕೋರ್ಟ್ನ ಹಳೆಯ ತೀರ್ಪಿನ ಪ್ರಕಾರ, ಸಂವಿಧಾನ ವಿರೋಧಿ ಚಟುವಟಿಕೆ ಅಥವಾ ವಂಚನೆಯಿಂದ ನೊಂದಣಿ ಪಡೆದ ಅಪರೂಪದ ಸಂದರ್ಭಗಳನ್ನು ಹೊರತುಪಡಿಸಿ ಆಯೋಗ ನೇರವಾಗಿ ಪಕ್ಷವನ್ನು ರದ್ದುಗೊಳಿಸುವಂತಿಲ್ಲ. ಹಾಗಾಗಿಯೇ, ಹಣಕಾಸಿನ ವಹಿವಾಟಿಗೆ ಪಕ್ಷಗಳು ಹುಟ್ಟಿಕೊಳ್ಳುವ ಪ್ರಮಾಣ ಹೆಚ್ಚಿದೆ.
ಮಾನ್ಯತೆ ಪಡೆಯದ (ಆರ್ಯುುಪಿಪಿ) ಪಕ್ಷಗಳಿಗೆ ಪ್ರತಿ ವರ್ಷ ಅಂದಾಜು -ಠಿ;2,000ರಿಂದ -ಠಿ;3,500 ಕೋಟಿಗೂ ಅಧಿಕ ಮೊತ್ತ ದೇಣಿಗೆ ರೂಪದಲ್ಲಿ ಬರುತ್ತದೆ. ಇವುಗಳಲ್ಲಿ ಸಿಂಹಪಾಲು ಕೇವಲ 50-60 ಅಪರಿಚಿತ ಪಕ್ಷಗಳ ಖಾತೆಗಳಿಗೆ ಜಮೆಯಾಗುತ್ತದೆ. ನಿಯಮದ ಪ್ರಕಾರ ವಾರ್ಷಿಕ ಆಡಿಟ್ ಲೆಕ್ಕ ಮತ್ತು ದೇಣಿಗೆ ವರದಿ ಸಲ್ಲಿಸಬೇಕಿದ್ದರೂ, ಅರ್ಧಕ್ಕಿಂತ ಹೆಚ್ಚು ಪಕ್ಷಗಳು ಚುನಾವಣಾ ಆಯೋಗಕ್ಕೆ ಯಾವುದೇ ಲೆಕ್ಕ ಕೊಡುವುದಿಲ್ಲ.