India Post  
ದೇಶ

ಅಂಚೆ ಇಲಾಖೆಯಲ್ಲಿ ಹೊಸ ಕ್ರಾಂತಿ: ಇಂದಿನಿಂದಲೇ '24 ಅವರ್ಸ್ ಸ್ಪೀಡ್ ಪೋಸ್ಟ್' ಸೇವೆ ಆರಂಭ! | India Post

ಪ್ರಮುಖ ಮುಖ್ಯಾಂಶಗಳು

  • ಇನ್ಮುಂದೆ 24 ಗಂಟೆಯಲ್ಲಿ ನಿಮ್ಮ ಕೈಸೇರಲಿದೆ ಪೋಸ್ಟ್​, ಅಂಚೆ ಇಲಾಖೆಯಿಂದ ವಿನೂತನ ಸೇವೆ
  • ಮನೆ ಅಥವಾ ಕಚೇರಿಯಿಂದಲೇ ಉಚಿತ ಪಿಕ್​ಅಪ್ ಸೇವೆ ಆರಂಭ
  • ಪೋಸ್ಟ್​ ಎಲ್ಲಿದೆ ಎನ್ನುವ ಟ್ರ್ಯಾಕಿಂಗ್​ ಸೌಲಭ್ಯವೂ ಇರಲಿದೆ ಎಂದ ಅಂಚೆ ಇಲಾಖೆ
  • ಮುಂಬೈ, ಬೆಂಗಳೂರು ಸೇರಿದಂತೆ ಮೆಟ್ರೋ ನಗರದಲ್ಲಿ ಈ ಸೇವೆ ಆರಂಭ
ಬೆಂಗಳೂರು: ತೊಂಬತ್ತರ ದಶಕದಲ್ಲಿ ಒಂದು ಪತ್ರ ತಲುಪಬೇಕೆಂದರೆ ದಿನಗಟ್ಟಲೆ ಕಾಯಬೇಕಿತ್ತು. ಆದರೆ ಈಗ ಕಾಲ ಬದಲಾಗಿದೆ. ಡಿಜಿಟಲ್ ಯುಗದಲ್ಲೂ ತನ್ನ ಅಸ್ತಿತ್ವ ಉಳಿಸಿಕೊಂಡಿರುವ ಭಾರತೀಯ ಅಂಚೆ ಇಲಾಖೆ (India Post), ಈಗ ಖಾಸಗಿ ಕೊರಿಯರ್ ಕಂಪನಿಗಳಿಗೆ ಸಡ್ಡು ಹೊಡೆಯಲು ಸಜ್ಜಾಗಿದೆ. ಇಂದಿನಿಂದ (ಮಾರ್ಚ್ 17) ಮೆಟ್ರೋ ನಗರಗಳಲ್ಲಿ ಅತ್ಯಂತ ವೇಗದ '24 ಸ್ಪೀಡ್ ಪೋಸ್ಟ್' ಮತ್ತು '48 ಸ್ಪೀಡ್ ಪೋಸ್ಟ್' ಪ್ರೀಮಿಯಂ ಸೇವೆಗಳನ್ನು ಅಂಚೆ ಇಲಾಖೆ ಪರಿಚಯಿಸುತ್ತಿದೆ.

ಏನಿದು ಹೊಸ ಸೇವೆ? ಇದರ ವಿಶೇಷತೆಗಳೇನು?

ನೀವು ಕಳುಹಿಸುವ ಪಾರ್ಸೆಲ್ ಅಥವಾ ಪ್ರಮುಖ ದಾಖಲೆಗಳು ಕೇವಲ 24 ಗಂಟೆಗಳಲ್ಲಿ ಗಮ್ಯಸ್ಥಾನ ತಲುಪಬೇಕೆಂದರೆ ಈ ಸೇವೆ ಅತ್ಯುತ್ತಮ. ಮೆಟ್ರೋ ನಗರಗಳ ನಡುವೆ ಕಳುಹಿಸುವ ಪೋಸ್ಟ್ ಮರುದಿನವೇ (D+1) ತಲುಪುತ್ತದೆ. 48 ಗಂಟೆಗಳಲ್ಲಿ ತಲುಪಿಸುವ ಸೇವೆಯೂ ಲಭ್ಯವಿದೆ.ಫ್ಲಿಪ್‌ಕಾರ್ಟ್ ಅಥವಾ ಮೀಶೋದಂತಹ ಆನ್‌ಲೈನ್ ಕಂಪನಿಗಳ ಮಾದರಿಯಲ್ಲೇ, ನಿಮ್ಮ ಪಾರ್ಸೆಲ್ ಎಲ್ಲಿದೆ ಎಂಬ ಮಾಹಿತಿಯನ್ನು ಎಂಡ್-ಟು-ಎಂಡ್ ಟ್ರ್ಯಾಕ್ ಮಾಡಬಹುದು. ವಿತರಣೆಯ ಸಮಯದಲ್ಲಿ ಒಟಿಪಿ (OTP) ಭದ್ರತೆಯೂ ಇರಲಿದೆ. ನೀವು ಅಂಚೆ ಕಚೇರಿಗೆ ಹೋಗಬೇಕಿಲ್ಲ! ನಿಮ್ಮ ಮನೆ ಅಥವಾ ಕಚೇರಿಯಿಂದಲೇ ಪಾರ್ಸೆಲ್ ಪಡೆದುಕೊಳ್ಳುವ ಫ್ರೀ ಪಿಕ್-ಅಪ್ ವ್ಯವಸ್ಥೆ ಇಲ್ಲಿದೆ.

ಎಲ್ಲೆಲ್ಲಿ ಲಭ್ಯ?

ಸದ್ಯಕ್ಕೆ ಈ ಪ್ರೀಮಿಯಂ ಸೇವೆ ದೇಶದ ಪ್ರಮುಖ ಆರು ಮೆಟ್ರೋ ನಗರಗಳಲ್ಲಿ ಲಭ್ಯವಿರಲಿದೆ. ಬೆಂಗಳೂರು, ದೆಹಲಿ, ಮುಂಬೈ, ಚೆನ್ನೈ, ಕೋಲ್ಕತ್ತಾ, ಹೈದರಾಬಾದ್ನಲ್ಲಿ ಸೇವೆ ಆರಂಭಿಸಲಾಗಿದೆ. ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದರೆ ಶೀಘ್ರದಲ್ಲೇ ಇತರ ನಗರಗಳಿಗೂ ಇದನ್ನು ವಿಸ್ತರಿಸಲಾಗುವುದು ಎಂದು ಇಲಾಖೆ ತಿಳಿಸಿದೆ.

ಶುಲ್ಕ ಮತ್ತು ನಿಯಮಗಳು

ಈ ಸೇವೆಯಡಿಯಲ್ಲಿ ಗರಿಷ್ಠ 5 ಕಿಲೋ ಗ್ರಾಂ ತೂಕದ ವಸ್ತುಗಳನ್ನು ಕಳುಹಿಸಲು ಅವಕಾಶವಿದೆ.ವಸ್ತುವಿನ ತೂಕಕ್ಕೆ ಅನುಗುಣವಾಗಿ ಶುಲ್ಕ ನಿಗದಿಪಡಿಸಲಾಗುತ್ತದೆ (GST ಸೇರಿರುತ್ತದೆ).ಪ್ರತಿ ವಸ್ತು ನೋಂದಣಿಗೆ ಕೇವಲ 5 ರೂಪಾಯಿ ಹೆಚ್ಚುವರಿ ಶುಲ್ಕವಿರುತ್ತದೆ.ವಿಶೇಷವಾಗಿ 'ನಂತರ ಪಾವತಿಸಿ' (Book Now Pay Later - BNPL) ಸೌಲಭ್ಯವೂ ದೊಡ್ಡ ಗ್ರಾಹಕರಿಗೆ ಲಭ್ಯವಿರಲಿದೆ.
ಪತ್ರ ಬರೆಯುವ ಸಂಪ್ರದಾಯ ಕಡಿಮೆಯಾಗಿದ್ದರೂ, ಉಡುಗೊರೆ ಮತ್ತು ಅಧಿಕೃತ ದಾಖಲೆಗಳ ರವಾನೆಗೆ ಈಗಲೂ ಅಂಚೆ ಇಲಾಖೆಯೇ ಜನಸಾಮಾನ್ಯರ ಮೊದಲ ಆದ್ಯತೆಯಾಗಿದೆ,(ಏಜೆನ್ಸೀಸ್).