ನವದೆಹಲಿ: ಈ ಸಲದ ಕೇಂದ್ರ ಬಜೆಟ್ನಲ್ಲಿ ಪ್ರಸ್ತಾಪಿಸಲಾದ 16ನೇ ಹಣಕಾಸು ಆಯೋಗದ ಶಿಫಾರಸುಗಳು ದೇಶದ ಒಕ್ಕೂಟ ವ್ಯವಸ್ಥೆಯಲ್ಲಿ ಹೊಸ ಸಂಚಲನ ಮೂಡಿಸಿವೆ. ಕೇಂದ್ರದ ತೆರಿಗೆ ಸಂಗ್ರಹದಲ್ಲಿ ರಾಜ್ಯಗಳ ಪಾಲನ್ನು ಶೇ. 41ರಷ್ಟು ನಿಗದಿಪಡಿಸಲಾಗಿದ್ದರೂ, ರಾಜ್ಯಗಳ ನಡುವಿನ ಆಂತರಿಕ ಹಂಚಿಕೆಯ ಸೂತ್ರದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ವಿಶೇಷವಾಗಿ ಜಿಡಿಪಿ ಕೊಡುಗೆಗೆ ಹೆಚ್ಚಿನ ಆದ್ಯತೆ ನೀಡಿರುವುದು ದಕ್ಷಿಣ ಭಾರತದ ರಾಜ್ಯಗಳಿಗೆ ವರದಾನವಾಗಿದೆ. ಕರ್ನಾಟಕ ಮತ್ತು ಕೇರಳ ಈ ಪಟ್ಟಿಯಲ್ಲಿ ಅಗ್ರಗಣ್ಯ ಲಾಭದಾಯಕ ರಾಜ್ಯಗಳಾಗಿ ಹೊರಹೊಮ್ಮಿದ್ದರೆ, ಉತ್ತರ ಪ್ರದೇಶ ಮತ್ತು ಬಿಹಾರದಂತಹ ರಾಜ್ಯಗಳ ಪಾಲಿನಲ್ಲಿ ಅಲ್ಪ ಇಳಿಕೆಯಾಗಿದೆ. ಅಭಿವೃದ್ಧಿ ಹೊಂದಿದ ರಾಜ್ಯಗಳ ಆರ್ಥಿಕ ಶ್ರಮಕ್ಕೆ ಮನ್ನಣೆ ಸಿಕ್ಕಿದೆಯೇ ಅಥವಾ ಹಿಂದುಳಿದ ರಾಜ್ಯಗಳ ಮೇಲಿನ ಹೂಡಿಕೆ ಕಡಿಮೆಯಾಗಿದೆಯೇ ಎಂಬುದರ ವಿಶ್ಲೇಷಣೆ ಇಲ್ಲಿದೆ.
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಈ ಸಲದ ಕೇಂದ್ರ ಬಜೆಟ್ ದೇಶದ ಒಕ್ಕೂಟ ವ್ಯವಸ್ಥೆಯ ಆರ್ಥಿಕ ಇತಿಹಾಸದಲ್ಲಿ ಒಂದು ಮಹತ್ವದ ಮೈಲಿಗಲ್ಲಾಗಿ ದಾಖಲಾಗಿದೆ. ಅರವಿಂದ್ ಪನಗರಿಯಾ ನೇತೃತ್ವದ 16ನೇ ಹಣಕಾಸು ಆಯೋಗದ ಶಿಫಾರಸುಗಳನ್ನು ಸರ್ಕಾರ ಅಂಗೀಕರಿಸಿರುವುದು ಇದಕ್ಕೆ ಮುಖ್ಯ ಕಾರಣ. ತೆರಿಗೆ ಹಂಚಿಕೆಯಲ್ಲಿನ ಹೊಸ ಸೂತ್ರಗಳು ರಾಜ್ಯಗಳ ನಡುವಿನ ಆರ್ಥಿಕ ಸಮತೋಲನವನ್ನು ಮರುಸ್ಥಾಪಿಸುವ ಭರವಸೆ ನೀಡಿವೆ. ಈ ಬಾರಿಯ ಶಿಫಾರಸುಗಳು ವಿಶೇಷವಾಗಿ ಕರ್ನಾಟಕ ಸೇರಿದಂತೆ ಅಭಿವೃದ್ಧಿ ಹೊಂದಿದ ರಾಜ್ಯಗಳ ಹಲವು ದಶಕಗಳಷ್ಟು ಹಳೆಯ ಬೇಡಿಕೆಯನ್ನು ಭಾಗಶಃ ಈಡೇರಿಸುವಲ್ಲಿ ಯಶಸ್ವಿಯಾಗಿವೆ.
ಕೇಂದ್ರದ ಒಟ್ಟು ತೆರಿಗೆ ಸಂಗ್ರಹದಲ್ಲಿ ರಾಜ್ಯಗಳ ಪಾಲನ್ನು ಶೇ.41ರ ಮಟ್ಟದಲ್ಲಿಯೇ ಕಾಯ್ದುಕೊಳ್ಳಲಾಗಿದೆ. ಆದರೆ, ಈ ಶೇ.41 ಹಣವನ್ನು ರಾಜ್ಯಗಳ ನಡುವೆ ಹಂಚುವ ಸಮತಲ ಹಂಚಿಕೆ (ಹಾರಿಜಾಂಟಲ್ ಡೆವಲ್ಯೂಷನ್) ಸೂತ್ರದಲ್ಲಿ ಆಯೋಗ ಕ್ರಾಂತಿಕಾರಿ ಬದಲಾವಣೆ ತಂದಿದೆ. ಇಲ್ಲಿಯವರೆಗೆ ಜನಸಂಖ್ಯೆ ಮತ್ತು ಹಿಂದುಳಿದಿರುವಿಕೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿತ್ತು. ಆದರೆ ಈ ಬಾರಿ ‘ಜಿಡಿಪಿಗೆ ನೀಡಿದ ಕೊಡುಗೆ’ ಎಂಬ ಹೊಸ ಮಾನದಂಡವನ್ನು ಶೇ.10ರಷ್ಟು ವೇಟೇಜ್ನೊಂದಿಗೆ ಸೇರಿಸಲಾಗಿದೆ. ಇದು ದೇಶದ ಆರ್ಥಿಕತೆಗೆ ಅತಿ ಹೆಚ್ಚು ಕೊಡುಗೆ ನೀಡುವ ಕರ್ನಾಟಕ, ಕೇರಳ ಮತ್ತು ತಮಿಳುನಾಡಿನಂತಹ ರಾಜ್ಯಗಳಿಗೆ ವರದಾನವಾಗಿ ಪರಿಣಮಿಸಿದೆ.
ಕಳೆದ 15ನೇ ಹಣಕಾಸು ಆಯೋಗದ ಅವಧಿಯಲ್ಲಿ ಕರ್ನಾಟಕದ ತೆರಿಗೆ ಪಾಲು ಗಣನೀಯವಾಗಿ ಇಳಿಕೆಯಾಗಿದ್ದು ಭಾರಿ ವಿವಾದಕ್ಕೆ ಕಾರಣವಾಗಿತ್ತು. ಕೇಂದ್ರಕ್ಕೆ ಕರ್ನಾಟಕ ಸಲ್ಲಿಸುವ ಪ್ರತಿ 100 ರೂ. ತೆರಿಗೆಯಲ್ಲಿ ಕೇವಲ 15 ರೂ. ವಾಪಸ್ ಬರುತ್ತಿದೆ ಎಂಬ ಆರೋಪಗಳಿದ್ದವು. ಆದರೆ, 16ನೇ ಆಯೋಗ, ರಾಜ್ಯದ ಜಿಡಿಪಿ ಬೆಳವಣಿಗೆ ಮತ್ತು ತೆರಿಗೆ ಸಂಗ್ರಹದ ದಕ್ಷತೆಯನ್ನು ಗುರುತಿಸಿದ್ದರ ಫಲವಾಗಿ ಕರ್ನಾಟಕದ ಪಾಲಿನಲ್ಲಿ ಏರಿಕೆ ಕಂಡುಬಂದಿದ್ದು, ರಾಜ್ಯದ ಬೊಕ್ಕಸಕ್ಕೆ ಸಾವಿರಾರು ಕೋಟಿ ರೂ.ಗಳ ಹೆಚ್ಚುವರಿ ಅನುದಾನ ಹರಿದುಬರಲಿದೆ. ಕರ್ನಾಟಕದ ಜತೆಗೆ ಕೇರಳ ಕೂಡ ತನ್ನ ಪಾಲನ್ನು ಹೆಚ್ಚಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಅಭಿವೃದ್ಧಿ ಪಥದಲ್ಲಿ ವೇಗವಾಗಿ ಸಾಗುತ್ತಿರುವ ರಾಜ್ಯಗಳಿಗೆ ಉತ್ತೇಜನ ನೀಡುವ ಸಲುವಾಗಿ, ಹಿಂದುಳಿದಿರುವಿಕೆಯ ಆಧಾರದ ಮೇಲೆ ನೀಡಲಾಗುತ್ತಿದ್ದ ಆದಾಯದ ಅಂತರ (ಇನ್ಕಮ್ ಡಿಸ್ಟನ್ಸ್) ಮಾನದಂಡದ ವೇಟೇಜನ್ನು ಶೇ. 45ರಿಂದ ಶೇ. 42.5ಕ್ಕೆ ಇಳಿಸಲಾಗಿದೆ. ಇದರ ಪರಿಣಾಮವಾಗಿ ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶದಂತಹ ರಾಜ್ಯಗಳ ಪಾಲಿನಲ್ಲಿ ಅಲ್ಪ ಪ್ರಮಾಣದ ಇಳಿಕೆಯಾಗಿದೆ. ಇದು ಕಾರ್ಯಕ್ಷಮತೆ ಆಧಾರಿತ ಒಕ್ಕೂಟ ವ್ಯವಸ್ಥೆಗೆ ನಾಂದಿ ಹಾಡಿದೆ ಎನ್ನುವುದು ಕೆಲವು ಆರ್ಥಿಕ ತಜ್ಞರ ಅನಿಸಿಕೆ.
16ನೇ ಹಣಕಾಸು ಆಯೋಗ ಕೇವಲ ಹಣ ಹಂಚಿಕೆಯಷ್ಟೇ ಅಲ್ಲದೆ, ರಾಜ್ಯಗಳ ವಿತ್ತೀಯ ಶಿಸ್ತಿಗೂ ಕಟ್ಟುನಿಟ್ಟಿನ ಸೂಚನೆ ನೀಡಿದೆ. ರಾಜ್ಯಗಳ ವಿತ್ತೀಯ ಕೊರತೆಯನ್ನು ಜಿಎಸ್ಡಿಪಿಯ ಶೇ. 3ಕ್ಕೆ ಮಿತಿಗೊಳಿಸಬೇಕು ಎಂದು ಶಿಫಾರಸು ಮಾಡಲಾಗಿದೆ. ಅಲ್ಲದೆ, ಬಜೆಟ್ ಹೊರತಾದ ಸಾಲಗಳನ್ನು ತಕ್ಷಣವೇ ನಿಲ್ಲಿಸಬೇಕು ಮತ್ತು ಎಲ್ಲ ಸಾಲಗಳನ್ನು ಪಾರದರ್ಶಕವಾಗಿ ಬಜೆಟ್ನಲ್ಲಿ ತೋರಿಸಬೇಕು ಎಂದು ಕಟ್ಟುನಿಟ್ಟಾಗಿ ಹೇಳಲಾಗಿದೆ. ಈ ಶಿಫಾರಸುಗಳು 2026ರ ಏ. 1ರಿಂದ ಜಾರಿಗೆ ಬರಲಿದ್ದು, ಮುಂದಿನ ಐದು ವರ್ಷಗಳ ಕಾಲ (2031ರವರೆಗೆ) ದೇಶದ ಆರ್ಥಿಕ ಹಾದಿಯನ್ನು ನಿರ್ಧರಿಸಲಿವೆ. ಅಭಿವೃದ್ಧಿ ಹೊಂದಿದ ರಾಜ್ಯಗಳಿಗೆ ಪ್ರೋತ್ಸಾಹ ಮತ್ತು ಹಿಂದುಳಿದ ರಾಜ್ಯಗಳಿಗೆ ಅಗತ್ಯ ಬೆಂಬಲ ನೀಡುವ ಮೂಲಕ ‘ಸಮತೋಲಿತ ಭಾರತ’ ನಿರ್ವಿುಸುವ ಗುರಿಯನ್ನು ಈ ಶಿಫಾರಸುಗಳು ಹೊಂದಿವೆ.
ಕೇಂದ್ರ ಸಂಗ್ರಹಿಸುವ ಒಟ್ಟು ತೆರಿಗೆಯಲ್ಲಿ ಶೇ. 2025ರಷ್ಟು ಹಣ ಸೆಸ್ ಮತ್ತು ಸರ್ಚಾರ್ಜ್ಗಳ ರೂಪದಲ್ಲಿರುತ್ತದೆ. ಈ ಹಣ ಕೇಂದ್ರದ ಪೂಲ್ ಸೇರುವುದಿಲ್ಲ, ಹಾಗಾಗಿ ರಾಜ್ಯಗಳಿಗೆ ಇದರಲ್ಲಿ ಒಂದು ರೂಪಾಯಿ ಪಾಲೂ ಸಿಗುವುದಿಲ್ಲ. ಕರ್ನಾಟಕ ಪ್ರತಿ ವರ್ಷ ಈ ಮೂಲದಿಂದ ಸುಮಾರು 15,000 ಕೋಟಿಯಿಂದ 20,000 ಕೋಟಿ ರೂ. ನಷ್ಟ ಅನುಭವಿಸುತ್ತಿದೆ ಎಂದು ಅಂದಾಜಿಸಲಾಗಿದೆ. 16ನೇ ಆಯೋಗ ಈ ವ್ಯವಸ್ಥೆಯಲ್ಲಿ ಯಾವುದೇ ದೊಡ್ಡ ಬದಲಾವಣೆ ತಂದಿಲ್ಲ. ಇದು ರಾಜ್ಯಕ್ಕೆ ಹಿನ್ನಡೆ.
ಮಾನದಂಡಗಳ ಬದಲಾವಣೆ
ಆಯೋಗದ ಹೊಸ ಸೂತ್ರ ದಕ್ಷಿಣ ಭಾರತದ ಬಹುತೇಕ ರಾಜ್ಯಗಳಿಗೆ ಲಾಭದಾಯಕವಾಗಿ ಪರಿಣಮಿಸಿದೆ. ಕರ್ನಾಟಕ, ಕೇರಳ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳ ತೆರಿಗೆ ಪಾಲು ಕೂಡ ಏರಿಕೆಯಾಗಿದೆ.
ಕೇಂದ್ರ ಬಜೆಟ್ ಘೊಷಣೆಯ ಬೆನ್ನಲ್ಲೇ ಕರ್ನಾಟಕಕ್ಕೆ ಆರ್ಥಿಕ ಹಂಚಿಕೆಯಲ್ಲಿ ಸಮಾಧಾನಕರ ಸುದ್ದಿ ಸಿಕ್ಕಿದೆ. 16ನೇ ಹಣಕಾಸು ಆಯೋಗ ರಾಜ್ಯದ ತೆರಿಗೆ ಪಾಲನ್ನು ಗಮನಾರ್ಹವಾಗಿ ಹೆಚ್ಚಿಸಿದ್ದು, ಕಳೆದ ಹಲವು ವರ್ಷಗಳಿಂದ ರಾಜ್ಯ ಎದುರಿಸುತ್ತಿದ್ದ ಅನ್ಯಾಯದ ದೂರುಗಳಿಗೆ ಇದು ಸ್ವಲ್ಪ ಮಟ್ಟಿಗೆ ಸಮಾಧಾನ ನೀಡಿದಂತಿದೆ. ಆಯೋಗ ಜಿಡಿಪಿ ಕೊಡುಗೆಯನ್ನು ಒಂದು ಪ್ರಮುಖ ಮಾನದಂಡವಾಗಿ ಪರಿಗಣಿಸಿರುವುದು ಕರ್ನಾಟಕದಂತಹ ಆರ್ಥಿಕವಾಗಿ ಸದೃಢವಾದ ರಾಜ್ಯಗಳಿಗೆ ದೊಡ್ಡ ಮಟ್ಟದ ಲಾಭ ತಂದುಕೊಟ್ಟಿದೆ. 15ನೇ ಹಣಕಾಸು ಆಯೋಗದ ಅವಧಿಯಲ್ಲಿ ಕರ್ನಾಟಕದ ಪಾಲು ಶೇ. 4.71ರಿಂದ ಶೇ. 3.64ಕ್ಕೆ ಕುಸಿದಿತ್ತು. ಇದರಿಂದ ರಾಜ್ಯ ಸುಮಾರು 80,000 ಕೋಟಿ ರೂ. ನಷ್ಟ ಅನುಭವಿಸಿದೆ ಎಂದು ಸರ್ಕಾರ ಪ್ರತಿಪಾದಿಸಿತ್ತು. ಆದರೆ ಈಗ 16ನೇ ಆಯೋಗ ರಾಜ್ಯದ ಪಾಲನ್ನು ಶೇ. 4.13ಕ್ಕೆ ಏರಿಸಿದೆ. ಇದರಿಂದಾಗಿ 2026-27ರ ಹಣಕಾಸು ವರ್ಷದಲ್ಲಿ ರಾಜ್ಯಕ್ಕೆ ಸುಮಾರು 63,049 ಕೋಟಿ ರೂ. ತೆರಿಗೆ ಪಾಲು ಸಿಗಲಿದೆ. ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಸುಮಾರು 11,173 ಕೋಟಿ ರೂ.ಗಳಷ್ಟು ಹೆಚ್ಚಳವಾಗಿದೆ.
ಕೇಂದ್ರ ಸರ್ಕಾರ 16ನೇ ಹಣಕಾಸು ಆಯೋಗದ ಶಿಫಾರಸುಗಳನ್ನು ಜಾರಿಗೆ ತಂದಿರುವುದು ಕರ್ನಾಟಕದ ಪಾಲಿಗೆ ಅರ್ಧ ವಿಜಯ ಎಂದು ವಿಶ್ಲೇಷಿಸಲಾಗುತ್ತಿದೆ. ರಾಜ್ಯ ಸರ್ಕಾರ ಆಯೋಗದ ಮುಂದೆ ಮಂಡಿಸಿದ್ದ ಹಲವು ಬೇಡಿಕೆಗಳಲ್ಲಿ ಕೆಲವು ಈಡೇರಿದ್ದರೆ, ಇನ್ನು ಕೆಲವು ಚರ್ಚೆಯ ಹಂತದಲ್ಲಿವೆ. ವಿಶೇಷವಾಗಿ ‘ಸೆಸ್ ಮತ್ತು ಸರ್ಚಾರ್ಜ್’ ಹಂಚಿಕೆ ವಿಷಯದಲ್ಲಿ ರಾಜ್ಯದ ಹಿತಾಸಕ್ತಿಗೆ ಪೂರ್ಣ ಮನ್ನಣೆ ಸಿಕ್ಕಿಲ್ಲ ಎನ್ನಲಾಗುತ್ತಿದೆ. ಕರ್ನಾಟಕ ಸರ್ಕಾರ ಪ್ರಮುಖವಾಗಿ ಮೂರು ಬೇಡಿಕೆಗಳನ್ನು ಇಟ್ಟಿತ್ತು. 1. ತೆರಿಗೆ ಪಾಲನ್ನು ಕನಿಷ್ಠ ಶೇ. 5ಕ್ಕೆ ಏರಿಸುವುದು. 2. ಸೆಸ್ ಮತ್ತು ಸರ್ಚಾರ್ಜ್ಗಳನ್ನು ಮೂಲ ತೆರಿಗೆಯಲ್ಲಿ ವಿಲೀನಗೊಳಿಸಿ ರಾಜ್ಯಗಳಿಗೂ ಪಾಲು ನೀಡುವುದು. 3. ಬೆಂಗಳೂರಿನಂತಹ ಮಹಾನಗರಗಳ ಮೂಲಸೌಕರ್ಯಕ್ಕೆ ವಿಶೇಷ ಅನುದಾನ ನೀಡುವುದು. ಆದರೆ, ಈಗಿನ ಹಂಚಿಕೆಯಲ್ಲಿ ಪಾಲು ಶೇ. 3.64ರಿಂದ ಶೇ. 4.13ಕ್ಕೆ ಏರಿಕೆಯಾಗಿದೆಯೇ ಹೊರತು, ರಾಜ್ಯ ಬಯಸಿದ್ದ ಶೇ. 5ರ ಗಡಿಯನ್ನು ತಲುಪಿಲ್ಲ.
ರಾಜ್ಯಕ್ಕೆ ಈಗ ಸಿಕ್ಕಿರುವ ಶೇ. 4.13ರ ಪಾಲು ಹೆಚ್ಚಾಗಲು ಪ್ರಮುಖ ಕಾರಣ ಆಯೋಗ ಮೊದಲ ಬಾರಿಗೆ ‘ಜಿಡಿಪಿ ಕೊಡುಗೆ’ಗೆ ಶೇ. 10ರಷ್ಟು ವೇಟೇಜ್ ನೀಡಿರುವುದು. ದೇಶದ ಒಟ್ಟು ಜಿಡಿಪಿಗೆ ಕರ್ನಾಟಕ ಶೇ. 8.2ರಷ್ಟು ಕೊಡುಗೆ ನೀಡುತ್ತಿದೆ. ಈ ಮೊದಲು ಜನಸಂಖ್ಯೆ ಮತ್ತು ಹಿಂದುಳಿದಿರುವಿಕೆಗೆ ಮಾತ್ರ ಪ್ರಾಮುಖ್ಯತೆ ಇದ್ದಾಗ, ಹೆಚ್ಚು ತೆರಿಗೆ ಪಾವತಿಸುವ ಕರ್ನಾಟಕಕ್ಕೆ ಕಡಿಮೆ ಹಣ ಸಿಗುತ್ತಿತ್ತು. ಈಗ ದಕ್ಷಿಣದ ರಾಜ್ಯಗಳ ಆರ್ಥಿಕ ಕಾರ್ಯಕ್ಷಮತೆಯನ್ನು ಗುರುತಿಸಿರುವುದು ಒಕ್ಕೂಟ ವ್ಯವಸ್ಥೆಯಲ್ಲಿ ಆಶಾದಾಯಕ ಬೆಳವಣಿಗೆಯಾಗಿದೆ.
ರಾಜ್ಯ ಸರ್ಕಾರ ಈಗ ಸಿಕ್ಕಿರುವ ಹೆಚ್ಚುವರಿ 11,000 ಕೋಟಿ ರೂ.ಗಳನ್ನು ಬರ ಪರಿಹಾರ, ನೀರಾವರಿ ಯೋಜನೆಗಳು ಮತ್ತು ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಬಳಸಿಕೊಳ್ಳಬಹುದು. ಆದರೆ, ಸೆಸ್ ಮತ್ತು ಸರ್ಚಾರ್ಜ್ ಹಂಚಿಕೆಗಾಗಿ ಕೇಂದ್ರದ ಮೇಲೆ ಒತ್ತಡ ಹೇರುವ ಕಾರ್ಯ ಮುಂದುವರಿಯುವ ಸಾಧ್ಯತೆಯಿದೆ.