Narendra Modi 
ದೇಶ

ಗುಜರಾತ್ ಲ್ಯಾಬ್​ನಿಂದ ರಾಷ್ಟ್ರೀಯ ಬ್ಲೂಪ್ರಿಂಟ್​

ಗುಜರಾತ್​ಅನ್ನು 2001ರಿಂದ 2014ರವರೆಗೆ ಒಂದು ನೀತಿ ಸಂಶೋಧನಾಲಯ (ಥಿಂಕ್ ಟ್ಯಾಂಕ್) ಅಥವಾ ಪ್ರಯೋಗಶಾಲೆಯಂತೆ ಬಳಸಿ, ಅಲ್ಲಿ ಯಶಸ್ವಿಯಾದ ಮಾದರಿಗಳನ್ನು ಮೋದಿ 2014ರ ನಂತರ ಇಡೀ ದೇಶಕ್ಕೆ ವಿಸ್ತರಿಸಿದರು.
ಸ್ಕೇಲಿಂಗ್​ ಅಪ್​ (ಚಿಕ್ಕ ಪ್ರಯೋಗ, ಬೃಹತ್​ ಅನುಷ್ಠಾನ): ಗುಜರಾತ್​ನಲ್ಲಿ ಪೈಪ್​ಲೈನ್​ ಮೂಲಕ ಅಡುಗೆ ಅನಿಲ ಒದಗಿಸುವ ಯೋಜನೆ (ಪಿಎನ್‌ಜಿ) ಇತ್ತು. ಕೇಂದ್ರಕ್ಕೆ ಬಂದಾಗ ಇದು ಬಡ ಕುಟುಂಬಗಳ ಮಹಿಳೆಯರಿಗೆ ಸಿಲಿಂಡರ್​ ಒದಗಿಸುವ "ಪ್ರಧಾನಮಂತ್ರಿ ಉಜ್ವಲಾ ಯೋಜನೆ'ಯಾಗಿ 10 ಕೋಟಿ ಕುಟುಂಬಗಳನ್ನು ತಲುಪಿತು.
ಬ್ಯೂರೋಕ್ರಸಿ ನಿರ್ವಹಣೆಯ ಶೈಲಿ: ಗುಜರಾತ್​ನಲ್ಲಿ "ಪ್ರಗತಿ' (ಸಚಿವರು ಮತ್ತು ಕಾರ್ಯದರ್ಶಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್​ ಮೂಲಕ ನೇರ ಪರಾಮರ್ಶೆ) ಮಾದರಿಯನ್ನು ತಂದಿದ್ದರು. ಕೇಂದ್ರದಲ್ಲಿ ನನೆಗುದಿಗೆ ಬಿದ್ದಿದ್ದ ಲಕ್ಷಾಂತರ ಕೋಟಿ ಮೌಲ್ಯದ ಹೆದ್ದಾರಿ, ರೈಲ್ವೆ ಯೋಜನೆಗಳನ್ನು ತ್ವರಿತಗೊಳಿಸಲು ಈ ವ್ಯವಸ್ಥೆಯನ್ನು ಜಾರಿಗೆ ತಂದರು.
ರಾಯಭಾರಿಗಳ ಮೂಲಕ ಪ್ರಚಾರ: ಗುಜರಾತ್​ನಲ್ಲಿ ಬಾಲಿವುಡ್​ ಬಿಗ್​ ಬಿ ಅಮಿತಾಭ್​ ಬಚ್ಚನ್​ ಅವರ ಮೂಲಕ "ಖುಷ್ಬೂ ಗುಜರಾತ್​ ಕೀ' ಪ್ರವಾಸೋದ್ಯಮ ಪ್ರಚಾರ ಆರಂಭಿಸಲಾಯಿತು. ರಾಷ್ಟ್ರಮಟ್ಟದಲ್ಲಿ ಅದೇ ಮಾರ್ಕೆಟಿಂಗ್​ ಶಕ್ತಿಯನ್ನು ಯೋಗ ದಿನ, ಆಜಾದಿ ಕಾ ಅಮೃತ್​ ಮಹೋತ್ಸವ ಹಾಗೂ "ಖಾದಿ'ಯ ಬ್ರ್ಯಾಂಡಿಂಗ್​ಗೆ ಬಳಸಲಾಯಿತು.

ಯೋಜನೆಗಳು

ವೈಬ್ರೆಂಟ್​ ಗುಜರಾತ್​ (2003) ಜಾಗತಿಕ ಹೂಡಿಕೆದಾರರನ್ನು ಆಕರ್ಷಿಸಲು ಆರಂಭಿಸಿದ ಬಂಡವಾಳ ಸಮಾವೇಶ. "ಮೇಕ್​ ಇನ್​ ಇಂಡಿಯಾ' ಯೋಜನೆಯನ್ನು (2014) ಭಾರತವನ್ನು ಜಾಗತಿಕ ಉತ್ಪಾದನಾ ಹಬ್​ ಮಾಡುವ ಗುರಿಯೊಂದಿಗೆ ಆರಂಭಿಸಲಾಯಿತು. ರಾಜ್ಯ ಮಟ್ಟದ ಬಂಡವಾಳ ಹೂಡಿಕೆಯನ್ನು ಜಾಗತಿಕ ಸಪ್ಲೈ ಚೈನ್​ (ಎಲೆಕ್ಟ್ರಾನಿಕ್ಸ್​, ಮೊಬೈಲ್​, ರಕ್ಷಣೆ) ಜತೆ ಬೆಸೆಯುವ ರಾಷ್ಟ್ರೀಯ ನೀತಿಯಾಗಿ ಪರಿವರ್ತಿಸಲಾಯಿತು.
ನಿರ್ಮಲ್​ ಗುಜರಾತ್​ (2007) ಯೋಜನೆ ಮೂಲಕ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಬಯಲು ಶೌಚಮುಕ್ತ ಅಭಿಯಾನ ಆರಂಭಿಸಲಾಯಿತು. 2014ರಲ್ಲಿ ಆರಂಭಗೊಂಡ "ಸ್ವಚ್ಛ ಭಾರತ ಅಭಿಯಾನ'ದ ಮೂಲಕ 10 ಕೋಟಿಗೂ ಹೆಚ್ಚು ಶೌಚಗೃಹಗಳನ್ನು ನಿರ್ಮಾಣ ಮಾಡಲಾಯಿತು.
ಗುಜರಾತ್​ನಲ್ಲಿ ಜ್ಯೋತಿಗ್ರಾಮ್​ ಯೋಜನೆಯ (2003-06) ಮೂಲಕ ಕೃಷಿ ಮತ್ತು ಗೃಹಬಳಕೆಯ ವಿದ್ಯುತ್​ ಪೂರೈಕೆ ಜಾಲವನ್ನು ಪ್ರತ್ಯೇಕಿಸಿ, ಹಳ್ಳಿಗಳಿಗೆ 24/7 ವಿದ್ಯುತ್​ ಪೂರೈಕೆ ಮಾಡಲಾಯಿತು. ಕೇಂದ್ರದಲ್ಲಿ ದೀನದಯಾಳ್​ ಉಪಾಧ್ಯಾಯ ಗ್ರಾಮೀಣ ಜ್ಯೋತಿ ಯೋಜನೆ ಮೂಲಕ ಪ್ರತಿ ಗ್ರಾಮ ಹಾಗೂ ಮನೆಗೆ ವಿದ್ಯುತ್​ ಸಂಪರ್ಕ ಕಲ್ಪಿಸುವ ಅಭಿಯಾನ ನಡೆಯುತ್ತಿದೆ. ಈ ಮೂಲಕ, ರಾಜ್ಯದ ಗ್ರಿಡ್​ ವಿಭಜನೆಯ ತಂತ್ರಜ್ಞಾನವನ್ನು ಬಳಸಿ, ದೇಶದ ಕಟ್ಟಕಡೆಯ ಹಳ್ಳಿಗೂ ವಿದ್ಯುತ್​ ಕಂಬ ಮತ್ತು ಮೀಟರ್​ ಮುಟ್ಟಿಸುವ ಮೆಗಾ ಪ್ರಾಜೆಕ್ಟ್​ ಜಾರಿಗೆ ಬಂತು.

ಮಾಸ್​ ಕಮ್ಯುನಿಕೇಟರ್​

ನರೇಂದ್ರ ಮೋದಿಯವರ ಸಂವಹನ ಶೈಲಿಯು ಭಾರತೀಯ ರಾಜಕೀಯ ಇತಿಹಾಸದಲ್ಲೇ ಪ್ರಭಾವಶಾಲಿ ಮಾಧ್ಯಮ ತಂತ್ರಗಳಲ್ಲಿ ಒಂದಾಗಿದೆ. ಸಾಂಪ್ರದಾಯಿಕ ಪತ್ರಿಕಾಗೋಷ್ಠಿಗಳನ್ನು ಬದಿಗಿಟ್ಟು, ಮಧ್ಯವರ್ತಿಗಳಿಲ್ಲದೆ ನೇರವಾಗಿ ಮತದಾರರನ್ನು ತಲುಪುವ ಮೂಲಕ ಅವರು "ಬ್ರ್ಯಾಂಡ್​ ಮೋದಿ'ಯನ್ನು ನಿರ್ಮಿಸಿದರು.
ಮನ್​ ಕಿ ಬಾತ್​: ಟಿವಿ ಮತ್ತು ಇಂಟರ್ನೆಟ್​ ತಲುಪದ ತಳಮಟ್ಟದ ಜನರನ್ನು ತಲುಪಲು ರೇಡಿಯೋವನ್ನು ಮಾಧ್ಯಮವಾಗಿ ಆರಿಸಿಕೊಂಡರು. ಇದರಲ್ಲಿ ಯಾವುದೇ ರಾಜಕೀಯ ಭಾಷಣವಿಲ್ಲದೆ, ಪರೀಕ್ಷಾ ಆತಂಕ, ಸ್ಥಳೀಯ ಸಾಧಕರು, ಪರಿಸರ, ಸ್ವಚ್ಛತೆಯಂತಹ ದೈನಂದಿನ ವಿಷಯಗಳ ಬಗ್ಗೆ ಮಾತನಾಡುವ ಮೂಲಕ ಮನೆಯ ಹಿರಿಯ (ಕುಟುಂಬಸ್ಥ) ಎಂಬ ಭಾವನೆ ಮೂಡಿಸಿದರು.
ಡಿಜಿಟಲ್​ ಕಮಾಂಡ್​ (ಎಕ್ಸ್​, ಯೂಟ್ಯೂಬ್​, ನಮೋ ಆ್ಯಪ್​): ಬ್ರೇಕಿಂಗ್​ ನ್ಯೂಸ್​, ಸರ್ಕಾರದ ನಿರ್ಧಾರಗಳು, ಹಬ್ಬದ ಶುಭಾಶಯಗಳು ಮತ್ತು ವಿದೇಶಾಂಗ ರಾಜತಾಂತ್ರಿಕತೆಯನ್ನೂ ಮೊದಲು ಸಾಮಾಜಿಕ ಜಾಲತಾಣಗಳಲ್ಲೇ ಪ್ರಕಟಿಸುವ ಮೂಲಕ ಮಾಧ್ಯಮಗಳು ತಮ್ಮ ಟ್ವೀಟ್​ಗಳನ್ನೇ ವರದಿ ಮಾಡುವಂತೆ ಮಾಡಿದರು.
ಮೆಗಾ ರ್ಯಾಲಿಗಳು: ಬೃಹತ್​ ವೇದಿಕೆಗಳು, ಡಿಜಿಟಲ್​ ಪರದೆಗಳು ಮತ್ತು ಯೋಜಿತ ಧ್ವನಿ&ಬೆಳಕಿನ ವ್ಯವಸ್ಥೆಯೊಂದಿಗೆ ರ್ಯಾಲಿಗಳನ್ನು ಒಂದು ಇವೆಂಟ್​ ಅಥವಾ ಉತ್ಸವದಂತೆ ಮಾರ್ಪಡಿಸಿ ಜನರನ್ನು ನೇರವಾಗಿ ಸೆಳೆದರು.

ಬ್ರ್ಯಾಂಡ್​ ಮೋದಿ!

ವ್ಯಕ್ತಿತ್ವ ರೂಪಿಸುವಿಕೆ: ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬಲ್ಲ ದೃಢ ನಾಯಕ (56 ಇಂಚಿನ ಎದೆಗಾರಿಕೆ) ಮತ್ತು ಅದೇ ಸಮಯದಲ್ಲಿ ಜನಸಾಮಾನ್ಯರ ಕಷ್ಟಗಳನ್ನು ಅರಿಯುವ ಪ್ರಧಾನ ಸೇವಕ ಅಥವಾ ಚೌಕೀದಾರ್​ ಎಂಬ ಎರಡು ವ್ಯಕ್ತಿತ್ವಗಳ ಸಮತೋಲನ.
ಆಕರ್ಷಕ ಘೋಷಣೆಗಳು: ನೀತಿಗಳನ್ನು ಜನಸಾಮಾನ್ಯರಿಗೆ ನೆನಪಿರುವಂತೆ ಮಾಡಲು ಸುಲಭ ಪದಗಳ ಬಳಕೆ; ಉದಾಹರಣೆಗೆ ಮೇಕ್​ ಇನ್​ ಇಂಡಿಯಾ, ಸಬ್​ಕಾ ಸಾಥ್​, ಸಬ್​ಕಾ ವಿಕಾಸ್​, ಆತ್ಮನಿರ್ಭರ ಭಾರತ.
ಭಾವನಾತ್ಮಕ ಸಂವಹನ: ಕ್ಯಾಮೆರಾ ಮತ್ತು ಮಾಧ್ಯಮದ ಫ್ರೇಮಿಂಗ್​ ಅನ್ನು ಸೂಕ್ಷ್ಮವಾಗಿ ಬಳಸಿ, ಗಂಗಾರತಿ, ಕೇದಾರನಾಥದ ಧ್ಯಾನ, ಸೈನಿಕರೊಂದಿಗೆ ದೀಪಾವಳಿಯಂತಹ ಸಂದರ್ಭಗಳನ್ನು ದೃಶ್ಯ ಮಾಧ್ಯಮದ ಮೂಲಕ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುವಂತೆ ಪ್ರಸ್ತುತಪಡಿಸುವುದು.

ಸರಣಿ ದಾಖಲೆಗಳು!

ಪ್ರಧಾನಿ ನರೇಂದ್ರ ಮೋದಿಯವರು ಭಾರತದಲ್ಲಿ ಅತಿ ಹೆಚ್ಚು ಕಾಲ ನಿರಂತರವಾಗಿ ಸೇವೆ ಸಲ್ಲಿಸಿದ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಪ್ರಧಾನಿ ಎಂಬ ಹೆಗ್ಗಳಿಗೆ ಪಾತ್ರವಾಗಿದ್ದಾರೆ. ಈ ಮೂಲಕ ಅವರು ಸ್ವತಂತ್ರ ಭಾರತದ ಮೊದಲ ಪ್ರಧಾನಿ ಜವಾಹರಲಾಲ್​ ನೆಹರು ದಾಖಲೆಯನ್ನು ಹಿಂದಿಕ್ಕಿದ್ದಾರೆ. 2014ರ ಮೇ 26ರಂದು ಮೋದಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. 2026ರ ಜೂನ್​ 10ರಂದು ಅವರು ಪ್ರಧಾನಿಯಾಗಿ 4,399 ಸತತ ದಿನಗಳನ್ನು ಪೂರೈಸಿದರು. ನೆಹರು 1952ರ ಮೇ 13ರಂದು ಮೊದಲ ಸಾರ್ವತ್ರಿಕ ಚುನಾವಣೆಯ ನಂತರ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಅವರು 1964ರ ಮೇ 27ರಂದು ನಿಧನರಾಗುವವರೆಗೆ 4,398 ದಿನಗಳ ಕಾಲ ಪ್ರಧಾನಿ ಹುದ್ದೆಯಲ್ಲಿದ್ದರು.
ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಅತಿ ದೀರ್ಘಾವಧಿಯ ನಿರಂತರ ಅಧಿಕಾರಾವಧಿಯನ್ನು (4,077 ದಿನಗಳು) ಪ್ರಧಾನಿ ನರೇಂದ್ರ ಮೋದಿ 2025ರ ಜುಲೈ 25ರಂದು ಹಿಂದಿಕ್ಕಿದ್ದಾರೆ.
ಸತತ ಎರಡು ಬಾರಿ ಪೂರ್ಣ ಅವಧಿಯನ್ನು ಪೂರೈಸಿದ ಕಾಂಗ್ರೆಸ್ಸೇತರ ಮೊದಲ ಪ್ರಧಾನಿ ಮತ್ತು ಸತತ ಮೂರು ಲೋಕಸಭಾ ಚುನಾವಣೆಗಳನ್ನು ಗೆದ್ದ ನೆಹರು ನಂತರದ ಮೊದಲ ಪ್ರಧಾನಿ ಕೂಡ ಮೋದಿ ಆಗಿದ್ದಾರೆ.
ಈ ವರ್ಷದ ಆರಂಭದಲ್ಲಿ, ಗುಜರಾತ್​ ಮುಖ್ಯಮಂತ್ರಿ ಮತ್ತು ಪ್ರಧಾನಮಂತ್ರಿಯಾಗಿ ಮೋದಿ ಅವರ ಸಂಯೋಜಿತ ಅಧಿಕಾರಾವಧಿಯು 8,930 ದಿನಗಳನ್ನು ದಾಟಿದಾಗ, ಅವರು ಭಾರತದಲ್ಲಿ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಚುನಾಯಿತ ಸರ್ಕಾರದ ಮುಖ್ಯಸ್ಥರು ಎಂಬ ದಾಖಲೆ ಬರೆದರು.