ಸಿಕ್ಕಿಂನ ಹಿಮಾಲಯನ್ ಪ್ರಾಣಿ ಸಂರಕ್ಷಣಾ ಉದ್ಯಾನದಲ್ಲಿ ಜನಿಸಿದ ರೆಡ್ ಪಾಂಡಾ ಮರಿಗಳು 
ದೇಶ

ಸಿಕ್ಕಿಂನಲ್ಲಿ ಪ್ರಕೃತಿಯ ಪವಾಡ: ಒಂದೇ ಸೀಸನ್‌ನಲ್ಲಿ 5 ರೆಡ್ ಪಾಂಡಾ, 2 ಕರಡಿ, 4 ಗೊರಲ್ ಮರಿಗಳ ಜನನ! | Sikkim Red Panda

ಸಿಕ್ಕಿಂನ ಹಿಮಾಲಯನ್ ಪ್ರಾಣಿ ಸಂರಕ್ಷಣಾ ಉದ್ಯಾನದಲ್ಲಿ ಒಂದೇ ಋತುವಿನಲ್ಲಿ 5 ರೆಡ್ ಪಾಂಡಾ, 2 ಹಿಮಾಲಯನ್ ಕಪ್ಪು ಕರಡಿ ಹಾಗೂ 4 ಗೊರಲ್ ಮರಿಗಳು ಜನಿಸಿವೆ.

ಸಿಕ್ಕಿಂನಲ್ಲಿ ವನ್ಯಜೀವಿ ಸಂರಕ್ಷಣೆಗೆ ಮಹತ್ವದ ಯಶಸ್ಸು

ಒಂದೇ ಋತುವಿನಲ್ಲಿ 6 ರೆಡ್ ಪಾಂಡಾ ಮರಿಗಳ ಜನನ

6ರಲ್ಲಿ 5 ರೆಡ್ ಪಾಂಡಾ ಮರಿಗಳು ಆರೋಗ್ಯವಾಗಿವೆ

Red Panda Cubs: ಸಿಕ್ಕಿಂನಲ್ಲಿ ವನ್ಯಜೀವಿ ಸಂರಕ್ಷಣೆಗೆ ಮತ್ತೊಂದು ಖುಷಿಯ ಸುದ್ದಿ ಸಿಕ್ಕಿದೆ. ಗ್ಯಾಂಗ್ಟಾಕ್‌ನ ಬುಲ್ಬುಲೆ ಪ್ರದೇಶದಲ್ಲಿರುವ ಹಿಮಾಲಯನ್ ಪ್ರಾಣಿ ಸಂರಕ್ಷಣಾ ಉದ್ಯಾನದಲ್ಲಿ ಒಂದೇ ಋತುವಿನಲ್ಲಿ ಹಲವು ಅಪರೂಪದ ಪ್ರಾಣಿಗಳ ಮರಿಗಳು ಜನಿಸಿವೆ.

ಈ ಬಾರಿ ಉದ್ಯಾನದಲ್ಲಿ 5 ರೆಡ್ ಪಾಂಡಾ ಮರಿಗಳು, 2 ಹಿಮಾಲಯನ್ ಕಪ್ಪು ಕರಡಿ ಮರಿಗಳು ಹಾಗೂ 4 ಹಿಮಾಲಯನ್ ಗೊರಲ್ ಮರಿಗಳು ಜನಿಸಿವೆ. ಅದರಲ್ಲೂ ಜೂನ್ ಮತ್ತು ಜುಲೈನಲ್ಲಿ ಒಟ್ಟು 6 ರೆಡ್ ಪಾಂಡಾ ಮರಿಗಳು ಹುಟ್ಟಿದ್ದು, 5 ಮರಿಗಳು ಆರೋಗ್ಯವಾಗಿವೆ.

ವರ್ಷಗಳ ಪ್ರಯತ್ನಕ್ಕೆ ಸಿಕ್ಕ ಫಲ

ಉದ್ಯಾನದಲ್ಲಿ 1996–97ರಿಂದ ರೆಡ್ ಪಾಂಡಾ ಸಂರಕ್ಷಣೆ ಹಾಗೂ ಸಂತಾನೋತ್ಪತ್ತಿ ಕಾರ್ಯ ನಡೆಯುತ್ತಿದೆ. 2012–2017ರ ಅವಧಿಯಲ್ಲಿ ವೈರಸ್‌ನಿಂದ 12 ರೆಡ್ ಪಾಂಡಾಗಳು ಮೃತಪಟ್ಟಿದ್ದವು. ಬಳಿಕ ಏಳು ವರ್ಷಗಳ ಕಾಲ ಸಂತಾನೋತ್ಪತ್ತಿಗೆ ಗಂಡು ರೆಡ್ ಪಾಂಡಾ ಇರಲಿಲ್ಲ. 2022ರಲ್ಲಿ ಹೊಸ ರೆಡ್ ಪಾಂಡಾ ಜೋಡಿಯನ್ನು ಉದ್ಯಾನಕ್ಕೆ ತರಲಾಯಿತು.

ಮಳೆ, ತೇವಾಂಶದ ನಡುವೆಯೂ ಮರಿಗಳ ರಕ್ಷಣೆ

‘ಸಂಗ್ರು’ ಮತ್ತು ‘ಪುಂಡಿ’ ರೆಡ್ ಪಾಂಡಾ ಜೋಡಿ ಮಳೆ, ತೇವಾಂಶದಿಂದ ಮರಿಗಳನ್ನು ಕಾಪಾಡಲು ಸುರಕ್ಷಿತ ಜಾಗಕ್ಕೆ ಕರೆದೊಯ್ಯುತ್ತಿತ್ತು. ಪಶುವೈದ್ಯರು ಹಾಗೂ ಸಿಬ್ಬಂದಿ ನಿರಂತರ ನಿಗಾ ವಹಿಸಿದ್ದರು. ಹವಾಮಾನ ವೈಪರೀತ್ಯದಿಂದ ಒಂದು ಮರಿ ಮೃತಪಟ್ಟಿದ್ದು, ಉಳಿದ 5 ಮರಿಗಳು ಆರೋಗ್ಯವಾಗಿವೆ.

ಉದ್ಯಾನದ ನಿರ್ದೇಶಕ ಸಂಗಾಯ್ ಗ್ಯಾಮ್ಟ್ಸೋ ಮಾತನಾಡಿ, ಒಂದೇ ವರ್ಷದಲ್ಲಿ ಇಷ್ಟು ರೆಡ್ ಪಾಂಡಾ ಮರಿಗಳು ಹುಟ್ಟಿರುವುದು ಇದೇ ಮೊದಲು ಎಂದು ತಿಳಿಸಿದ್ದಾರೆ. ಇದರೊಂದಿಗೆ ಉದ್ಯಾನದಲ್ಲಿರುವ ಒಟ್ಟು ರೆಡ್ ಪಾಂಡಾಗಳ ಸಂಖ್ಯೆ 13ಕ್ಕೆ ಏರಿಕೆಯಾಗಿದೆ..

ಕರಡಿ, ಗೊರಲ್‌ಗಳ ಸಂತಾನೋತ್ಪತ್ತಿಯಲ್ಲೂ ಯಶಸ್ಸು

ರೆಡ್ ಪಾಂಡಾಗಳ ಜತೆಗೆ 2 ಹಿಮಾಲಯನ್ ಕಪ್ಪು ಕರಡಿ ಮರಿಗಳೂ ಹುಟ್ಟಿವೆ. ಇನ್ನು ಕಳೆದ ವರ್ಷ 6 ಗೊರಲ್‌ಗಳನ್ನು ಕಾಡಿಗೆ ಬಿಡಲಾಗಿತ್ತು. ಇದೀಗ 4 ಗೊರಲ್ ಮರಿಗಳು ಜನಿಸಿರುವುದು ಸಂರಕ್ಷಣಾ ಕಾರ್ಯಕ್ಕೆ ಮತ್ತಷ್ಟು ಬಲ ನೀಡಿದೆ.

ಸಿಕ್ಕಿಂನ ಜೀವವೈವಿಧ್ಯಕ್ಕೆ ಮತ್ತಷ್ಟು ಬಲ

ಸುಮಾರು 230 ಹೆಕ್ಟೇರ್ ಪ್ರದೇಶದಲ್ಲಿರುವ ಈ ಉದ್ಯಾನದಲ್ಲಿ 13 ಪ್ರಭೇದಗಳ 92 ಪ್ರಾಣಿಗಳಿವೆ. ಕ್ಲೌಡೆಡ್ ಲೆಪರ್ಡ್, ಹಿಮಾಲಯನ್ ತಹರ್, ರಣಹದ್ದು ಸೇರಿದಂತೆ ಹಲವು ಅಪರೂಪದ ಪ್ರಾಣಿಗಳನ್ನು ಇಲ್ಲಿ ಸಂರಕ್ಷಿಸಲಾಗುತ್ತಿದೆ.

ಅರಣ್ಯ ಇಲಾಖೆ ಪ್ರಕಾರ, ಅರುಣಾಚಲ ಪ್ರದೇಶದ ಬಳಿಕ ಸಿಕ್ಕಿಂನಲ್ಲಿ ಹೆಚ್ಚು ಕಾಡು ರೆಡ್ ಪಾಂಡಾಗಳಿವೆ. ಇಲ್ಲಿ ಸುಮಾರು 300 ರೆಡ್ ಪಾಂಡಾಗಳಿವೆ ಎಂದು ಅಂದಾಜಿಸಲಾಗಿದೆ. ಅಪರೂಪದ ಪ್ರಾಣಿಗಳ ಸಂರಕ್ಷಣೆಗೆ ಉದ್ಯಾನದ ಸಿಬ್ಬಂದಿ ನಡೆಸುತ್ತಿರುವ ಪ್ರಯತ್ನಕ್ಕೆ ಈ ಯಶಸ್ಸು ಸಾಕ್ಷಿಯಾಗಿದೆ.(ಏಜೆನ್ಸೀಸ್​)