ಕಲ್ಲಂಗಡಿಯನ್ನು ಸ್ವಲ್ಪ ಹೊತ್ತು ಫ್ರಿಡ್ಜ್ನಲ್ಲಿ ಇಟ್ಟು ವಾಪಸ್ ತೆಗೆದ ವ್ಯಕ್ತಿಗೆ ಕಾದಿತ್ತು ಬಿಗ್ ಶಾಕ್! Watermelon
- ದಿನದಿಂದ ದಿನಕ್ಕೆ ರಾಜ್ಯದಲ್ಲಿ ಬೇಸಿಗೆಯ ಕಾವು ಹೆಚ್ಚಾಗುತ್ತಿದೆ
- ಮನೆಯಿಂದ ಹೊರಗೆ ಕಾಲಿಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ
- ಬೇಸಿಗೆ ಬಂತೆಂದರೆ ಸಾಕು, ಕಲ್ಲಂಗಡಿ ಹಣ್ಣಿಗೆ ಭಾರಿ ಡಿಮ್ಯಾಂಡ್ ಆಗುತ್ತದೆ
- ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವರು ಜನರನ್ನು ಯಾಮಾರಿಸುತ್ತಿದ್ದಾರೆ
Watermelon : ದಿನದಿಂದ ದಿನಕ್ಕೆ ಬೇಸಿಗೆಯ ಕಾವು ಹೆಚ್ಚಾಗುತ್ತಿದೆ. ಮನೆಯಿಂದ ಹೊರಗೆ ಕಾಲಿಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬಿಸಿಲಿನ ಹೊಡೆತಕ್ಕೆ ಬಳಲಿದ ಜನ, ತಮ್ಮ ಹೊಟ್ಟೆಯನ್ನು ತಂಪು ಮಾಡಿಕೊಳ್ಳಲು ಕೂಲ್ ಡ್ರಿಂಕ್ಸ್ ಮೊರೆ ಹೋಗುತ್ತಿದ್ದಾರೆ. ಆದರೆ, ಆರೋಗ್ಯ ಕಾಳಜಿ ಇರುವವರು ಹಣ್ಣುಗಳತ್ತ ಮುಖ ಮಾಡಿದ್ದಾರೆ. ಬೇಸಿಗೆ ಬಂತೆಂದರೆ ಸಾಕು, ಕಲ್ಲಂಗಡಿ ಹಣ್ಣಿಗೆ ಭಾರಿ ಡಿಮ್ಯಾಂಡ್ ಆಗುತ್ತದೆ. ಏಕೆಂದರೆ, ಕಲ್ಲಂಗಡಿಯನ್ನು ಬೇಸಿಗೆಯ ಸಂಜೀವಿನಿ ಎಂದು ಕರೆಯಲಾಗುತ್ತಿದೆ.
ಸದ್ಯ ಕಲ್ಲಂಗಡಿ ಹಣ್ಣುಗಳು ಸಖತ್ ಮಾರಾಟವಾಗುತ್ತಿವೆ. ಆದರೆ, ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವರು ಜನರನ್ನು ಯಾಮಾರಿಸುತ್ತಿದ್ದಾರೆ. ನಕಲಿ ಹಣ್ಣುಗಳನ್ನು ನೀಡಿ ವಂಚನೆ ಮಾಡುತ್ತಿದ್ದಾರೆ. ಇದಕ್ಕೆ ತಾಜಾ ಸಾಕ್ಷಿ ಎನ್ನುವಂತೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು, ಭಾರಿ ಚರ್ಚೆಗೆ ಗ್ರಾಸವಾಗಿದೆ.
ಅಪ್ರೆಸ್ಸರ್ (Oppressor) ಹೆಸರಿನ ಎಕ್ಸ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಟ್ವೀಟ್ನಲ್ಲಿ ಉಲ್ಲೇಖಿಸಿರುವಂತೆ ವ್ಯಕ್ತಿಯೊಬ್ಬ ಸಂಜೆ ಸಮಯದಲ್ಲಿ ಒಂದು ಕಲ್ಲಂಗಡಿ ಹಣ್ಣನ್ನು ಮನೆಗೆ ತರುತ್ತಾನೆ. ಬಳಿಕ ಆ ಹಣ್ಣನ್ನು ಸ್ವಲ್ಪ ಹೊತ್ತು ಫ್ರಿಡ್ಜ್ನಲ್ಲಿ ಇಡುತ್ತಾನೆ. ಇದಾದ ನಂತರ ಹಣ್ಣನ್ನು ಫ್ರಿಡ್ಜ್ನಿಂದ ಹೊರ ತೆಗೆದು, ಕತ್ತರಿಸಲು ಮುಂದಾದಾಗ ಆತನಿಗೆ ಒಂದು ಶಾಕ್ ಕಾದಿರುತ್ತದೆ. ಅದೇನೆಂದರೆ, ಹಣ್ಣಿನ ಮೇಲಿರುವ ಪದರವು ಪೇಪರ್ ಅಥವಾ ಸಿಪ್ಪೆಯಂತೆ ಸುಲಿಯುತ್ತದೆ.
ವಿಡಿಯೋ ಶೇರ್ ಮಾಡಿರುವ ನೆಟ್ಟಿಗ, ತಮ್ಮ ಆಕ್ರೋಶವನ್ನು ಹೊರಹಾಕಿದ್ದಾನೆ. ಈ ಒಂದು ವಿಡಿಯೋ ಸರ್ಕಾರಕ್ಕೆ ಒಂದು ಸರಳ ಪ್ರಶ್ನೆಯನ್ನು ಮುಂದಿಡುತ್ತದೆ. ನಿಜವಾಗಿಯೂ ಶುದ್ಧವಾದ ಯಾವುದೇ ವಸ್ತು ಈಗ ಲಭ್ಯವಿದೆಯೇ? ಅಥವಾ ನಾವೆಲ್ಲರು ಆಹಾರದ ಹೆಸರಿನಲ್ಲಿ ರಾಸಾಯನಿಕಗಳನ್ನು ಸೇವಿಸುತ್ತಿದ್ದೇವೆಯೇ? ಎಂದು ಪ್ರಶ್ನಿಸುವ ಮೂಲಕ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಕಲ್ಲಂಗಡಿ ಸಿಪ್ಪೆಯಂತೆ ಸುಲಿದಿದ್ದೇಕೆ ಎಂಬ ಪ್ರಶ್ನೆಗೆ ಗ್ರೋಕ್ ಎಐ ಉತ್ತರ ನೀಡಿದೆ. ಅದರ ಪ್ರಕಾರ, ಕಲ್ಲಂಗಡಿಗಳು ತುಂಬಾ ತಣ್ಣಗಾದಾಗ ಅಥವಾ ಫ್ರೀಜರ್ ಕಂಪಾರ್ಟ್‌ಮೆಂಟ್‌ನಲ್ಲಿ ಹೆಪ್ಪುಗಟ್ಟಿದಾಗ ಸಿಪ್ಪೆ ಸುಲಿಯುವುದು ಸಾಮಾನ್ಯ ಪರಿಣಾಮ ಎಂದಿದೆ. ಕಲ್ಲಂಗಡಿ ಚರ್ಮದ ಹೊರ ಪದರಗಳ ನಡುವೆ ಐಸ್ ಸ್ಫಟಿಕಗಳು ರೂಪುಗೊಳ್ಳುತ್ತವೆ. ನಂತರ, ಅದು ಕೋಣೆಯ ಉಷ್ಣಾಂಶಕ್ಕೆ ಕರಗಿದಾಗ ಚರ್ಮವನ್ನು ಬೇರ್ಪಡಿಸುತ್ತವೆ. ಇದಕ್ಕೆ ರಾಸಾಯನಿಕ ಕಾರಣವಲ್ಲ. ಸಂಪೂರ್ಣ ಕಲ್ಲಂಗಡಿಗಳನ್ನು ತಂಪಾದ ಕೋಣೆಯ ಉಷ್ಣಾಂಶದಲ್ಲಿ (10-15°C) ಉತ್ತಮವಾಗಿ ಸಂಗ್ರಹಿಸಲಾಗುತ್ತದೆ ಹೊರತು ಅದನ್ನು ರೆಫ್ರಿಜರೇಟರ್‌ನಲ್ಲಿ ಇಡಲಾಗುವುದಿಲ್ಲ ಎಂದು ಗ್ರೋಕ್ ಹೇಳಿದೆ.
ಇನ್ನು ವಿಡಿಯೋ ನೋಡಿದವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಸಾಕಷ್ಟು ಮಂದಿ ಕಾಮೆಂಟ್ ಮಾಡಿದ್ದು, ಈ ರೀತಿ ಆಗೋದು ಸಹಜ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಯಾವುದೇ ಹಣ್ಣನ್ನು ಖರೀದಿ ಮಾಡುವಾಗ ತುಂಬಾ ಎಚ್ಚರಿಕೆ ವಹಿಸಿ ಎಂದು ಸಲಹೆ ನೀಡಿದ್ದಾರೆ, (ಏಜೆನ್ಸೀಸ್).