ಉತ್ತರ ಪ್ರದೇಶ:"ದುಸ್ಸಾಹಸ ಮತ್ತು ಅತಿಯಾದ ಆತ್ಮವಿಶ್ವಾಸ ಪ್ರಾಣಕ್ಕೆ ಸಂಚಕಾರ ತರುತ್ತದೆ" ಎನ್ನುವುದಕ್ಕೆ ಉತ್ತರ ಪ್ರದೇಶದ ರಾಂಪುರದಲ್ಲಿ ನಡೆದ ಈ ಘಟನೆ ಸಾಕ್ಷಿಯಾಗಿದೆ.
ಹೌದು, ಅತೀ ವಿಷಪೂರಿತ ನಾಗರಹಾವನ್ನು (Cobra) ಬರಿಗೈನಲ್ಲಿ ಹಿಡಿದು, ಅದನ್ನು ಪ್ರದರ್ಶಿಸುತ್ತಾ ಜನರ ಮುಂದೆ "ನನ್ನಂತಹ ವೀರ ಜಗತ್ತಿನಲ್ಲಿ ಯಾರಿದ್ದಾರೆ?" ಎಂದು ಬಡಾಯಿ ಕೊಚ್ಚಿಕೊಂಡ 50 ವರ್ಷದ ವ್ಯಕ್ತಿಯೊಬ್ಬರು, ಹಾವಿನ ಕಚ್ಚುವಿಕೆಗೆ ಒಳಗಾಗಿ ಸಾವನ್ನಪ್ಪಿದ ಘಟನೆ ಯುಪಿಯ ರಾಂಪುರದ ಗ್ರಾಮವೊಂದರಲ್ಲಿ ನಡೆದಿದೆ. ಅಲ್ಲದೇ, ಈ ಘಟನೆಗೆ ಸಂಬಂಧಿಸಿದಂತೆ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಸುಮಾರು 50 ವರ್ಷದ ವ್ಯಕ್ತಿಯೊಬ್ಬರು ತಮ್ಮ ಮನೆಯ ಸಮೀಪ ಕಾಣಿಸಿಕೊಂಡ ಬೃಹತ್ ನಾಗರಹಾವನ್ನು ಹಿಡಿಯಲು ಮುಂದಾಗಿದ್ದರು. ಯಾವುದೇ ಸುರಕ್ಷತಾ ಕ್ರಮಗಳಿಲ್ಲದೆ ಹಾವನ್ನು ಹಿಡಿದ ಆ ವ್ಯಕ್ತಿ, ಅದರ ವಿಷದ ಭೀತಿಯನ್ನು ಮರೆತು ಜನರ ಮುಂದೆ ಸಾಹಸ ಪ್ರದರ್ಶಿಸಲು ಆರಂಭಿಸಿದರು. ಹಾವನ್ನು ಕೈಯಲ್ಲಿ ಹಿಡಿದುಕೊಂಡು ಮೈಮೇಲೆ ಹರಿಸಿಕೊಳ್ಳುತ್ತಾ, "ಐಸಾ ಕೋಯಿ ವೀರ್ ಹೈ ದುನಿಯಾ ಮೇ?" (ಈ ಜಗತ್ತಿನಲ್ಲಿ ನನ್ನಂತಹ ವೀರ ಯಾರಾದರೂ ಇದ್ದಾರೆಯೇ?) ಎಂದು ನೆರೆದಿದ್ದವರ ಮುಂದೆ ಅಬ್ಬರಿಸಿದ್ದರು.
ಮೂರು ಬಾರಿ ಕಚ್ಚಿದರೂ ನಿರ್ಲಕ್ಷ್ಯ
ವೈರಲ್ ಆಗಿರುವ ವಿಡಿಯೋದಲ್ಲಿ ಕಂಡುಬರುವಂತೆ, ಆ ವ್ಯಕ್ತಿ ಹಾವಿನೊಂದಿಗೆ ಆಟವಾಡುತ್ತಿದ್ದಾಗ ಅದು ಒಮ್ಮೆ ಅಲ್ಲ, ಬರೋಬ್ಬರಿ ಮೂರು ಬಾರಿ ಅವರ ಕೈ ಮತ್ತು ಬೆರಳುಗಳಿಗೆ ಕಚ್ಚಿದೆ. ಹಾವಿನ ವಿಷ ದೇಹಕ್ಕೆ ಏರುತ್ತಿದ್ದರೂ, ಆತ ತನ್ನ ಸಾಹಸ ಪ್ರದರ್ಶನವನ್ನು ನಿಲ್ಲಿಸಲಿಲ್ಲ. ಹಾವಿನ ವಿಷದ ತೀವ್ರತೆಯನ್ನು ಅರಿಯದ ಆತ, "ನನಗೇನೂ ಆಗುವುದಿಲ್ಲ" ಎಂಬಂತೆ ವರ್ತಿಸುತ್ತಾ ಹಾವಿನೊಂದಿಗೆ ಸರಸ ಮುಂದುವರಿಸಿದ್ದರು.
ಸಾವಿನೊಂದಿಗೆ ಅಂತ್ಯವಾದ ಸಾಹಸ
ಸ್ವಲ್ಪ ಸಮಯದ ನಂತರ ವಿಷ ದೇಹದಾದ್ಯಂತ ಹರಡುತ್ತಿದ್ದಂತೆ ವ್ಯಕ್ತಿ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಗಾಬರಿಗೊಂಡ ಕುಟುಂಬಸ್ಥರು ಮತ್ತು ಸ್ಥಳೀಯರು ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದರು. ಆದರೆ, ಪರಿಸ್ಥಿತಿ ತೀರಾ ಹದಗೆಟ್ಟಿದ್ದರಿಂದ ವೈದ್ಯರ ಎಷ್ಟೇ ಪ್ರಯತ್ನದ ಹೊರತಾಗಿಯೂ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಹಾವಿನಂತಹ ಅಪಾಯಕಾರಿ ಸರಿಸೃಪಗಳೊಂದಿಗೆ ಈ ರೀತಿ ವರ್ತಿಸುವುದು ಸಾಹಸವಲ್ಲ, ಬದಲಿಗೆ ಆತ್ಮಹತ್ಯೆಗೆ ಸಮಾನ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ,(ಏಜೆನ್ಸೀಸ್).