- ಇಸ್ರೇಲ್-ಇರಾನ್ ಯುದ್ಧದಿಂದ ದೇಶದಲ್ಲಿ ಗ್ಯಾಸ್ ಸರಬಾರಜಿನಲ್ಲಿ ಕೊರತೆ
- ರಿಲಯನ್ಸ್ ಇಂಡಸ್ಟ್ರೀಸ್ನಿಂದ ಮಹತ್ತರವಾದ ಘೋಷಣೆ
ಮುಂಬೈ: ಇಸ್ರೇಲ್-ಇರಾನ್ ಯುದ್ಧದಿಂದ ಇದೀಗ ಹಲವಾರು ದೇಶಗಳಲ್ಲಿ ಗ್ಯಾಸ್, ಇಂಧನ ಮತ್ತು ಅಗತ್ಯ ವಸ್ತುಗಳ ಪೂರೈಕೆಯಲ್ಲಿ ಭಾರೀ ವ್ಯತ್ಯಯ ಉಂಟಾಗಿದೆ. ಅತಿ ಮುಖ್ಯವಾಗಿ, ದೇಶದಲ್ಲಿ ಗೃಹಬಳಕೆ ಮತ್ತು ವಾಣಿಜ್ಯ ಸಿಲಿಂಡರ್ಗಳ ಕೊರೆತೆ ಉಂಟಾಗಿದ್ದು, ಹೋಟೆಲ್ ಉದ್ಯಮಕ್ಕೆ ದೊಡ್ಡ ಸಂಕಷ್ಟ ಎದುರಾಗಿದೆ. ಈ ಬೆಳವಣಿಗೆಗಳ ಬೆನ್ನಲ್ಲೇ ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ನಿಂದ ಮಹತ್ತರವಾದ ಘೋಷಣೆಯೊಂದು ಹೊರಬಿದ್ದಿದೆ.
ಜಾಮ್ ನಗರದಲ್ಲಿ ಇರುವಂಥ ಸಂಸ್ಕರಣಾಗಾರ ಹಾಗೂ ಪೆಟ್ರೋಕೆಮಿಕಲ್ಸ್ ಸಮುಚ್ಚಯದಿಂದ ಎಲ್‌ಪಿಜಿ ಉತ್ಪಾದನೆಯನ್ನು ಸ್ವಯಂಪ್ರೇರಿತವಾಗಿ ಗರಿಷ್ಠ ಪ್ರಮಾಣದಲ್ಲಿ ಹೆಚ್ಚಿಸುವುದಕ್ಕೆ ನಿರ್ಧಾರ ಕೈಗೊಳ್ಳಲಾಗಿದೆ. ಅಂದಹಾಗೆ, ಜಾಮ್ ನಗರದಲ್ಲಿರುವ ಇದು ವಿಶ್ವದಲ್ಲಿಯೇ ಅತಿದೊಡ್ಡ ಸಂಯೋಜಿತ ಸಂಸ್ಕರಣೆ ಹಬ್ ಎಂಬ ದಾಖಲೆಗೆ ಪಾತ್ರವಾಗಿದೆ ಎಂದು ಕಂಪನಿಯ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಕೆಜಿ- ಡಿ6 ಬ್ಲಾಕ್‌ನಲ್ಲಿ ಉತ್ಪಾದನೆ ಆದಂಥ ಅನಿಲವನ್ನು ಆದ್ಯತೆ ವಲಯಗಳ ಕಡೆಗೆ ತಿರುಗಿಸಲಾಗುವುದು. ರಾಷ್ಟ್ರೀಯ ಇಂಧನ ಆದ್ಯತೆಗಳು ಹಾಗೂ ಸರ್ಕಾರಿ ಮಾರ್ಗದರ್ಶನದ ಅನ್ವಯ ಆದ್ಯತಾ ವಲಯಗಳಿಗೆ ಪೂರೈಕೆ ಬೆಂಬಲ ನೀಡುವುದಕ್ಕಾಗಿ ಈ ಮಹತ್ವದ ಹೆಜ್ಜೆಯನ್ನು ತೆಗೆದುಕೊಳ್ಳಲಾಗಿದೆ. “ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ವಿಪರೀತದ ಏರಿಳಿತ ಕಾಣುತ್ತಿರುವ ಸಂದರ್ಭದಲ್ಲಿ, ಭಾರತೀಯ ಕುಟುಂಬಗಳಿಗೆ ಅಗತ್ಯವಾದ ಇಂಧನವನ್ನು ಅಡೆತಡೆಯೇ ಇಲ್ಲದೆ ಪೂರೈಕೆ ಮಾಡುತ್ತೇವೆ ಎಂದು ಖಾತ್ರಿ ಪಡಿಸುತ್ತೇವೆ. ಇದು ರಾಷ್ಟ್ರೀಯ ಆದ್ಯತೆಯಾಗಿದೆ” ಎಂದು ಮುಖೇಶ್ ಅಂಬಾನಿ ನೇತೃತ್ವದ ಕಂಪನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ತೈಲದಿಂದ ರಾಸಾಯನಿಕ ವ್ಯವಹಾರಗಳ ತನಕ ವ್ಯವಹಾರಗಳ ಸಮೂಹವಾದ ರಿಲಯನ್ಸ್ ಇಂಡಸ್ಟ್ರೀಸ್ ತಿಳಿಸಿರುವಂತೆ, ಹಗಲು-ರಾತ್ರಿ ನಮ್ಮ ತಂಡ ಸಂಸ್ಕರಣಾಗಾರದಿಂದ ಗರಿಷ್ಠ ಪ್ರಮಾಣದ ಉತ್ಪಾದನೆಗಾಗಿ ಶ್ರಮಿಸುತ್ತಿದೆ. ಮತ್ತು ಎಲ್‌ಪಿಜಿ ಉತ್ಪಾದನೆ ವಿಸ್ತರಣೆಗೆ ಪ್ರಯತ್ನಿಸುತ್ತಿದೆ. ಈ ಶ್ರಮದ ಹಿಂದಿನ ಉದ್ದೇಶ ಏನೆಂದರೆ, ದೇಶೀಯ ಮಾರುಕಟ್ಟೆಗೆ ಸ್ಥಿರವಾದ ಹಾಗೂ ವಿಶ್ವಾಸಾರ್ಹ ಅನಿಲ ಪೂರೈಕೆ ಮಾಡುವುದು ಎಂದು ಹೇಳಿದೆ.
ಪ್ರಮುಖಾಂಶಗಳು
- ಎಲ್‌ಪಿಜಿ ಉತ್ಪಾದನೆ ಹೆಚ್ಚಳ: ವಿಶ್ವದ ಅತಿದೊಡ್ಡ ಸಂಸ್ಕರಣಾ ಕೇಂದ್ರವಾದ ಜಾಮ್‌ನಗರದ ಘಟಕದಲ್ಲಿ ಎಲ್‌ಪಿಜಿ ಉತ್ಪಾದನೆಯನ್ನು ಗರಿಷ್ಠ ಮಟ್ಟಕ್ಕೆ ಹೆಚ್ಚಿಸಲು ರಿಲಯನ್ಸ್ ನಿರ್ಧರಿಸಿದೆ.
- ಆದ್ಯತಾ ವಲಯಕ್ಕೆ: KG-D6 ಬ್ಲಾಕ್‌ನಲ್ಲಿ ಉತ್ಪಾದನೆಯಾಗುವ ನೈಸರ್ಗಿಕ ಅನಿಲವನ್ನು ದೇಶದ ಪ್ರಮುಖ ಆದ್ಯತಾ ವಲಯಗಳಿಗೆ ಸರಬರಾಜು ಮಾಡಲಾಗುವುದು.
- ಇಂಧನ ಭದ್ರತೆ: ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಳಿತವಿದ್ದರೂ ಭಾರತೀಯ ಕುಟುಂಬಗಳಿಗೆ ಅಡೆತಡೆಯಿಲ್ಲದೆ ಇಂಧನ ಪೂರೈಕೆ ಮಾಡುವುದು ಕಂಪನಿಯ ಮುಖ್ಯ ಗುರಿಯಾಗಿದೆ.
- ಸರ್ಕಾರದೊಂದಿಗೆ ಸಹಕಾರ: ರಾಷ್ಟ್ರೀಯ ಇಂಧನ ನೀತಿ ಮತ್ತು ಸರ್ಕಾರದ ಮಾರ್ಗಸೂಚಿಗಳಿಗೆ ಅನುಗುಣವಾಗಿ ರಿಲಯನ್ಸ್ ಈ ಕ್ರಮ ಕೈಗೊಂಡಿದೆ.
- ದೇಶೀಯ ಮಾರುಕಟ್ಟೆಗೆ ಬದ್ಧತೆ: ದೇಶದ ಇಂಧನ ಭದ್ರತೆ ಮತ್ತು ಜನರ ಯೋಗಕ್ಷೇಮಕ್ಕೆ ಮೊದಲ ಆದ್ಯತೆ ನೀಡುವುದಾಗಿ ಮುಕೇಶ್ ಅಂಬಾನಿ ನೇತೃತ್ವದ ಸಂಸ್ಥೆ ತಿಳಿಸಿದೆ.