ರಾಯ್ಪುರ: ಕೇಂದ್ರ ಸರ್ಕಾರದ ಆಪರೇಷನ್ ಕಗಾರ್ನಿಂದ ಭಾರಿ ಹಿನ್ನಡೆ ಕಂಗಾಲಾಗಿರುವ ನಕ್ಸಲಿಸಂಗೆ ಮತ್ತೊಮ್ಮೆ ಭಾರಿ ಹೊಡೆತ ಬಿದ್ದಿದ್ದು, ಇಂದು(ಜ. 09) ಛತ್ತೀಸ್ಗಢದ ದಂತೇವಾಡದಲ್ಲಿ 18 ಮಹಿಳೆಯರು ಸೇರಿ 63 ನಕ್ಸಲರು(Naxalites surrender) ಪೊಲೀಸರ ಮುಂದೆ ಶರಣಾಗಿದ್ದಾರೆ ಎಂದು ವರದಿಯಾಗಿದೆ.
ಛತ್ತೀಸ್ಗಢ ಸರ್ಕಾರದ ಮನೆಗೆ ಹಿಂತಿರುಗಿ ಅಭಿಯಾನದ ಭಾಗವಾಗಿ ಪಶ್ಚಿಮ ಬಸ್ತಾರ್ ವಿಭಾಗೀಯ ಸಮಿತಿಯ ಕಾರ್ಯದರ್ಶಿ ಮೋಹನ್ ಕಡ್ತಿ ತಮ್ಮ ಪತ್ನಿ ಸೇರಿ ಬೆಂಬಲಿಗರೊಂದಿಗೆ ಪೊಲೀಸರ ಮುಂದೆ ಶರಣಾಗಿದ್ದಾರೆ. ಈ ವೇಳೆ ತಮ್ಮ ಬಳಿಯಿದ್ದ ಎಲ್ಲಾ ಶಸ್ತ್ರಾಸ್ತ್ರಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಶರಣಾದ ಎಲ್ಲಾ ನಕ್ಸಲರ ಮೇಲೆ 1 ಕೋಟಿ ರೂ. ಬಹುಮಾನವಿತ್ತು ಎನ್ನಲಾಗಿದೆ.
2026 ಮಾರ್ಚ್ 31ರೊಳಗೆ ದೇಶದಲ್ಲಿ ನಕ್ಸಲಿಸಂ ಕೊನೆಯಾಗಬೇಕೆಂದು ಪಣತೊಟ್ಟಿರುವ ಕೇಂದ್ರ ಸರ್ಕಾರ, ಅದಕ್ಕಾಗಿ ಭದ್ರತಾ ಪಡೆಗಳಿಂದ ಆಪರೇಷನ್ ಕಾಗರ್ ಕಾರ್ಯಾಚರಣೆಯನ್ನು ಆರಂಭಿಸಿದೆ. ದೇಶದ ಬಹುತೇಕ ಎಲ್ಲಾ ರಾಜ್ಯಗಳಲ್ಲಿ ನಕ್ಸಲರ ಪ್ರಭಾವ ಕಡಿಮೆಯಾಗಿದ್ದು, ಛತ್ತೀಸ್ಗಢದಲ್ಲಿ ಇನ್ನೂ ಸ್ವಲ್ಪಮಟ್ಟಿಗೆ ಪ್ರಭಾವ ಇದೆ ಎನ್ನಲಾಗಿದೆ. ಈ ಹಿನ್ನೆಲೆ ಪೊಲೀಸರು ಮತ್ತು ಭದ್ರತಾ ಪಡೆಗಳು ಜಂಟಿಯಾಗಿ ಕೂಂಬಿಂಗ್ ಕಾರ್ಯಾಚರಣೆ ನಡೆಸಿವೆ (ಏಜೆನ್ಸೀಸ್).