Bankipur Byelection | ತಂದೆಯ ಆ ತಪ್ಪಿಗೆ ಬಲಿಯಾಯ್ತಾ ಮಗನ ಟಿಕೆಟ್..? ಬಂಕಿಪುರದಲ್ಲಿ ಬಿಜೆಪಿ ಅಭ್ಯರ್ಥಿ ಬದಲಾವಣೆಯ ಅಸಲಿ ಕಥೆ ಇಲ್ಲಿದೆ ನೋಡಿ! 
ದೇಶ

ತಂದೆಯ ಆ ತಪ್ಪಿಗೆ ಬಲಿಯಾಯ್ತಾ ಮಗನ ಟಿಕೆಟ್..? ಬಂಕಿಪುರದಲ್ಲಿ ಬಿಜೆಪಿ ಅಭ್ಯರ್ಥಿ ಬದಲಾವಣೆಯ ಅಸಲಿ ಕಥೆ ಇಲ್ಲಿದೆ ನೋಡಿ! | Bankipur Byelection

Bankipur Byelection: ಬಿಹಾರ ರಾಜಕೀಯದಲ್ಲಿ ಶುಕ್ರವಾರ ಹಠಾತ್ ಹಾಗೂ ನಾಟಕೀಯ ಬೆಳವಣಿಗೆಯೊಂದು ನಡೆದಿದ್ದು, ಬಂಟಿ ಎಂದೇ ಜನಪ್ರಿಯರಾಗಿರುವ ಬಿಜೆಪಿ ನಾಯಕ ಅಭಿಷೇಕ್ ಕುಮಾರ್ ಸಿನ್ಹಾ ಬಂಕಿಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ರೇಸ್‌ನಿಂದ ತಮ್ಮ ಉಮೇದುವಾರಿಕೆಯನ್ನು ಹಿಂಪಡೆದಿದ್ದಾರೆ. ಈ ಘಟನೆ ನಡೆದ ಕೆಲವೇ ಕ್ಷಣಗಳಲ್ಲಿ ಎಚ್ಚೆತ್ತುಕೊಂಡ ಕೇಸರಿ ಪಾಳಯ, ನೀರಜ್ ಕುಮಾರ್ ಸಿನ್ಹಾ ಅವರನ್ನು ಪಕ್ಷದ ಹೊಸ ಅಭ್ಯರ್ಥಿಯನ್ನಾಗಿ ಅಧಿಕೃತವಾಗಿ ಘೋಷಿಸಿದೆ.
ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್​ ಅವರು ರಾಜ್ಯಸಭೆಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ಬಂಕಿಪುರ ಕ್ಷೇತ್ರಕ್ಕೆ ಈ ಉಪಚುನಾವಣೆ ಎದುರಾಗಿದೆ.

ಕೌಟುಂಬಿಕ ಕಾರಣ ಎಂದ ಬಂಟಿ

ಈ ಅನಿರೀಕ್ಷಿತ ತಿರುವು ಬಿಹಾರದ ರಾಜಕೀಯ ವಲಯದಲ್ಲಿ ಎಲ್ಲರನ್ನೂ ಗೊಂದಲಕ್ಕೀಡು ಮಾಡಿದೆ. ಆದರೆ ಅಧಿಕೃತವಾಗಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅಭಿಷೇಕ್ ಕುಮಾರ್ ಸಿನ್ಹಾ, ತಾವು ಕೌಟುಂಬಿಕ ಕಾರಣಗಳಿಗಾಗಿ ಉಪಚುನಾವಣೆಯಿಂದ ಹಿಂದೆ ಸರಿಯುತ್ತಿರುವುದಾಗಿ ತಿಳಿಸಿದ್ದಾರೆ. ಕೇವಲ ಒಂದು ದಿನದ ಹಿಂದಷ್ಟೇ ತಮ್ಮ ನಾಮಪತ್ರ ಸಲ್ಲಿಸಿದ್ದ ಸಿನ್ಹಾ, ತಾವು ಪಕ್ಷದ ಒಬ್ಬ ಬದ್ಧತೆಯುಳ್ಳ ಕಾರ್ಯಕರ್ತನಾಗಿ ಬಿಜೆಪಿಗಾಗಿ ಕೆಲಸ ಮಾಡುವುದನ್ನು ಮುಂದುವರಿಸುವುದಾಗಿ ಹೇಳಿದ್ದಾರೆ.
ಕೌಟುಂಬಿಕ ಕಾರಣಗಳಿಂದಾಗಿ ನನಗೆ ಈ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಾಗುತ್ತಿಲ್ಲ. ಆದರೆ, ನಾನು ಪಕ್ಷದ ಒಬ್ಬ ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇನೆ. ಇದೇ ವಿಷಯವನ್ನು ನಾನು ರಾಜ್ಯ ಘಟಕದ ಅಧ್ಯಕ್ಷ ಸಂಜಯ್ ಸರೋಗಿ ಅವರಿಗೆ ತಿಳಿಸಿದ್ದೇನೆ ಎಂದು ಬಂಟಿ ಸುದ್ದಿಗೋಷ್ಠಿಯಲ್ಲಿ ವಿವರಿಸಿದ್ದಾರೆ.

ಅಸಲಿ ಕಾರಣ ಬೇರನೆ ಇದೆಯಾ..?

ಆದರೆ, ಬಂಟಿ ಅವರ ಈ ದಿಢೀರ್ ನಿರ್ಧಾರದ ಹಿಂದೆ ಕೇವಲ ಕೌಟುಂಬಿಕ ಕಾರಣಗಳು ಮಾತ್ರವೇ ಇಲ್ಲ, ಇದರ ಹಿಂದೆ ಬೇರೆ ಕಥೆಯೇ ಇದೆ ಎಂದು ನಂಬಲರ್ಹ ಮೂಲಗಳು ಇಂಡಿಯಾ ಟಿವಿಗೆ ತಿಳಿಸಿರುವುದಾಗಿ ವರದಿಯಾಗಿದೆ. ಮೂಲಗಳ ಪ್ರಕಾರ, ಅವರ ಕುಟುಂಬಕ್ಕೆ ಬಹುಕೋಟಿ ಮೇವು ಹಗರಣದ ಜೊತೆ ಇರುವ ಸಂಬಂಧದಿಂದಾಗಿ ಬಿಜೆಪಿ ಕೊನೆ ಕ್ಷಣದಲ್ಲಿ ಈ ಬದಲಾವಣೆ ಮಾಡಿದೆ ಎನ್ನಲಾಗಿದೆ.
ಬಂಟಿ ತಂದೆ ರವೀಂದ್ರ ಪ್ರಸಾದ್ ಅವರು ಮಗಧ್ ಕೆಮಿಕಲ್ಸ್ ಕಾರ್ಪೊರೇಷನ್'ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು ಮತ್ತು ಅವರು ಮೇವು ಹಗರಣದಲ್ಲಿ ದೋಷಿಯಾಗಿದ್ದಾರೆ. ಸರ್ಕಾರಿ ಅಧಿಕಾರಿಗಳೊಂದಿಗೆ ಸಂಚು ರೂಪಿಸಿ, ನಕಲಿ ಬಿಲ್‌ಗಳ ಮೂಲಕ ಸಾರ್ವಜನಿಕ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪ ಇವರ ಮೇಲಿತ್ತು. 2022 ರಲ್ಲಿ ಸಿಬಿಐ ವಿಶೇಷ ನ್ಯಾಯಾಲಯವು ಮೇವು ಹಗರಣದಲ್ಲಿ ಶಿಕ್ಷೆ ವಿಧಿಸಿದ 75 ಜನರಲ್ಲಿ ರವೀಂದ್ರ ಪ್ರಸಾದ್ ಕೂಡ ಒಬ್ಬರಾಗಿದ್ದಾರೆ. ಸಿಬಿಐ 2001 ಮತ್ತು 2003 ರ ನಡುವೆ ದಾಖಲಿಸಿದ್ದ ಮೂರು ಚಾರ್ಜ್‌ಶೀಟ್‌ಗಳಲ್ಲಿ ಪ್ರಸಾದ್ ಅವರನ್ನು ಆರೋಪಿ ಎಂದು ಹೆಸರಿಸಲಾಗಿತ್ತು. ಈ ಅಪರಾಧಕ್ಕಾಗಿ ಅವರಿಗೆ 3 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು ಎಂದು ತಿಳಿದುಬಂದಿದೆ.
ಇದರ ಜೊತೆಗೆ, ಅಭಿಷೇಕ್ ಕುಮಾರ್ ಸಿನ್ಹಾ ಉಪಚುನಾವಣೆಗೆ ನಾಮಪತ್ರ ಸಲ್ಲಿಸುವಾಗ ತಮ್ಮ ಶೈಕ್ಷಣಿಕ ಅರ್ಹತೆಗೆ ಸಂಬಂಧಿಸಿದ ಮಾಹಿತಿಯನ್ನು ಮರೆಮಾಚಿದ್ದಾರೆ ಎನ್ನಲಾಗಿದೆ. ತಮ್ಮ ನಾಮಪತ್ರದ ದಾಖಲೆಗಳಲ್ಲಿ ತಾವು 10ನೇ ತರಗತಿ ಪಾಸ್ ಎಂದು ಘೋಷಿಸಿಕೊಂಡಿದ್ದರಾದರೂ, ಅದರಲ್ಲೂ ಕೆಲವು ಗಂಭೀರ ವ್ಯತ್ಯಾಸಗಳು ಕಂಡುಬಂದಿದ್ದವು. ಹೀಗಾಗಿ ಉಪಚುನಾವಣೆಗೂ ಮುನ್ನ ಯಾವುದೇ ರೀತಿಯ ರಿಸ್ಕ್ ತೆಗೆದುಕೊಳ್ಳಲು ಇಷ್ಟಪಡದ ಬಿಜೆಪಿ, ಕೊನೆ ಕ್ಷಣದಲ್ಲಿ ಅಭ್ಯರ್ಥಿಯನ್ನೇ ಬದಲಾಯಿಸಿದೆ ಎಂದು ಮೂಲಗಳು ಸೇರಿಸಿವೆ.

ಪ್ರಶಾಂತ್ ಕಿಶೋರ್ ಎಂಟ್ರಿಯಿಂದ ಕುತೂಹಲ ಮೂಡಿಸಿದ ಚುನಾವಣೆ

ಜನ್ ಸುರಾಜ್ ಪಕ್ಷದ ಸಂಸ್ಥಾಪಕ ಪ್ರಶಾಂತ್ ಕಿಶೋರ್ ಈ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿರುವುದು ಇಡೀ ಉಪಚುನಾವಣೆಯನ್ನು ಅತ್ಯಂತ ರೋಚಕಗೊಳಿಸಿದೆ. ಬಿಜೆಪಿಯ ಭದ್ರಕೋಟೆಯಾಗಿರುವ ಬಂಕಿಪುರದಲ್ಲಿ ಜಯಭೇರಿ ಬಾರಿಸುವ ಪೂರ್ಣ ವಿಶ್ವಾಸದಲ್ಲಿ ಪ್ರಶಾಂತ್ ಕಿಶೋರ್ ಇದ್ದಾರೆ. ಇತ್ತ ಬಿಜೆಪಿ ಮಾತ್ರ ಈ ಕ್ಷೇತ್ರವನ್ನು ತನ್ನಲ್ಲೇ ಉಳಿಸಿಕೊಳ್ಳುವ ಭರವಸೆ ಹೊಂದಿದೆ. ಮತ್ತೊಂದೆಡೆ, ಆರ್​​ಜೆಡಿ ಪಕ್ಷವು ರೇಖಾ ಕುಮಾರಿ ಗುಪ್ತಾ ಅವರಿಗೆ ಟಿಕೆಟ್ ನೀಡಿದೆ. ರೇಖಾ 2025 ರ ಬಿಹಾರ ವಿಧಾನಸಭಾ ಚುನಾವಣೆಯಲ್ಲೂ ಬಂಕಿಪುರ ಕ್ಷೇತ್ರದಿಂದ ಆರ್‌ಜೆಡಿ ಅಭ್ಯರ್ಥಿಯಾಗಿದ್ದರು.
ಬಂಕಿಪುರ ಉಪಚುನಾವಣೆಯ ಮತದಾನವು ಜುಲೈ 30 ರಂದು ನಡೆಯಲಿದ್ದು, ಆಗಸ್ಟ್ 4 ರಂದು ಫಲಿತಾಂಶ ಹೊರಬೀಳಲಿದೆ(ಏಜೆನ್ಸೀಸ್​).