ದೇಶದಲ್ಲಿ ಗ್ಯಾಸ್ ಬಿಕ್ಕಟ್ಟು
- ಇರಾನ್-ಇಸ್ರೇಲ್ ಯುದ್ಧದಿಂದ ದೇಶದಲ್ಲಿ ಗ್ಯಾಸ್ ಬಿಕ್ಕಟ್ಟು
- ಗ್ಯಾಸ್ ಬುಕಿಂಗ್‌ನಲ್ಲಿ ಹೊಸ ನಿಯಮಗಳು ಜಾರಿಗೆ
- ಗ್ರಾಮೀಣ ಪ್ರದೇಶಗಳಲ್ಲಿ 45 ದಿನಗಳ ಬುಕ್ಕಿಂಗ್
- ನಗರ ಪ್ರದೇಶಗಳಲ್ಲಿ 25 ದಿನಗಳ ನಿಯಮ
ನವದೆಹಲಿ: ಪ್ರಸ್ತುತ, ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಇರಾನ್-ಇಸ್ರೇಲ್ ಭೀಕರ ಯುದ್ಧ ದಾಳಿಯಿಂದ ಇಡೀ ಜಗತ್ತೇ ಈಗ ದೊಡ್ಡ ಸಂಕಷ್ಟಕ್ಕೆ ಸಿಲುಕಿದೆ. ಅಮೆರಿಕ-ಇಸ್ರೇಲಿ ಪಡೆಗಳ ತಿರುಗೇಟು ಮತ್ತು ಇರಾನ್ನ ಪ್ರತೀಕಾರದ ದಾಳಿಗಳು ಇತರೆ ದೇಶಕ್ಕಿಂತ ಭಾರತದ ಮೇಲೆ ಕೊಂಚ ಜಾಸ್ತಿಯೇ ಪರಿಣಾಮ ಬೀರಿದೆ. ಅದು ತೈಲದ ವಿಷಯದಲ್ಲಿ ಎಂಬುದು ಗಮನಾರ್ಹ.
ದೇಶದಲ್ಲಿ ಅನಿಲ ಬಿಕ್ಕಟ್ಟು ಕಾಡುತ್ತಿದ್ದು, ಎಲ್ಪಿಜಿ, ಎನ್ಪಿಜಿ ಗ್ಯಾಸ್ನ ಅಭಾವ ಕಾಡಲಾರಂಭಿಸಿದೆ. ಗೃಹಬಳಕೆ ಮತ್ತು ವಾಣಿಜ್ಯ ಸಿಲಿಂಡರ್‌ಗಳ ಸರಬರಾಜಿನಲ್ಲಿ ಭಾರೀ ವ್ಯತ್ಯಯ ಉಂಟಾದ ಬೆನ್ನಲ್ಲೇ ರಾಷ್ಟ್ರದ ಹಲವು ರಾಜ್ಯಗಳಲ್ಲಿ ಹೋಟೆಲ್ ಉದ್ಯಮಗಳನ್ನೇ ನಂಬಿಕೊಂಡಿರುವ ಮಂದಿ, ತಮ್ಮ ಉದ್ಯಮಕ್ಕೆ ತಾತ್ಕಾಲಿಕ ಬ್ರೇಕ್ ಹಾಕಿದ್ದಾರೆ. ಗ್ಯಾಸ್ ಸಿಲಿಂಡರ್‌ಗಳ ಸಪ್ಲೇ ಸಮಸ್ಯೆ ಕಂಡುಬಂದ ಹಿನ್ನೆಲೆ ಹೋಟೆಲ್ಗಳನ್ನು ಬಂದ್ ಮಾಡಿದ್ದಾರೆ. ಕೆಲವರು ಬೇರೆ ದಾರಿಯಿಲ್ಲದೆ, ಸೌದೆ ಓಲೆಯನ್ನು ಬಳಸಿಕೊಂಡು ಜನರಿಗೆ ಕಡಿಮೆ ಮೆನುವಿರುವ ಉಪಹಾರ ನೀಡುತ್ತಿದ್ದಾರೆ.
ಕೇಂದ್ರ ಸರ್ಕಾರ ಈಗಾಗಲೇ ಗ್ಯಾಸ್ ಬೆಲೆಯನ್ನು ಯುದ್ಧದ ಪರಿಸ್ಥಿತಿಯಿಂದ ದಿಢೀರ್ ಹೆಚ್ಚಿಸಿದ್ದು, ಗೃಹಬಳಕೆಯ ಸಿಲಿಂಡರ್ ಬೆಲೆಯನ್ನು 60 ರೂ. ಏರಿಕೆ ಮಾಡಿದರೆ, ವಾಣಿಜ್ಯ ಗ್ಯಾಸ್ ಬೆಲೆಯನ್ನು 114.5 ರೂ. ಹೆಚ್ಚಿಸಲಾಗಿದೆ. ಇದರೊಟ್ಟಿಗೆ, ಅಡುಗೆ ಅನಿಲದ ಕೊರತೆಯಿಂದಾಗಿ, ನಗರ ಮತ್ತು ಗ್ರಾಮೀಣ ಪ್ರದೇಶದ ಜನರು ಬುಕ್ಕಿಂಗ್ನಲ್ಲಿ ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಅತಿ ಮುಖ್ಯವಾಗಿ, ಕೇಂದ್ರ ಸರ್ಕಾರ ಗ್ಯಾಸ್ ಬುಕ್ಕಿಂಗ್ನಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನು ಸಹ ಮಾಡಿದೆ.
ಇತ್ತೀಚೆಗೆ ಸಿಲಿಂಡರ್‌ಗಳ ನಡುವಿನ ಬುಕಿಂಗ್ ಅವಧಿಯನ್ನು 21ರಿಂದ 25 ದಿನಗಳಿಗೆ ಹೆಚ್ಚಿಸಿದೆ ಎಂದು ವರದಿಯಾಗಿದೆ. ಆದಾಗ್ಯೂ, ಮತ್ತೊಂದು ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಒಂದರ ಬೆನ್ನಲ್ಲೇ ಮತ್ತೊಂದು ಸಿಲಿಂಡರ್‌ಗಳ ಬುಕಿಂಗ್ ಅವಧಿಯನ್ನು 45 ದಿನಗಳಿಗೆ ಹೆಚ್ಚಿಸಲಾಗಿದೆ. ಗ್ಯಾಸ್ ಸಿಲಿಂಡರ್‌ಗಳ ಕೊರತೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರವು ಈ ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿದೆ ಎಂದು ವಿವರಿಸಲಾಗಿದೆ.
ಇದಕ್ಕೂ ಮೊದಲು ಪ್ರತಿ 55 ದಿನಗಳಿಗೊಮ್ಮೆ ಗ್ಯಾಸ್ ಬುಕ್ ಮಾಡುತ್ತಿದ್ದವರು ಈಗ ಕೇವಲ 15 ದಿನಗಳವರೆಗೆ ಮಾತ್ರ ಅನಿಲವನ್ನು ಬುಕ್ ಮಾಡುತ್ತಿರುವುದು ಗಮನಕ್ಕೆ ಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಸಂದರ್ಭದಲ್ಲಿ, ಸಿಲಿಂಡರ್‌ಗಳ ಸಂಗ್ರಹಣೆ ಮತ್ತು ಬ್ಲ್ಯಾಕ್ ಮಾರುಕಟ್ಟೆಯನ್ನು ತಡೆಗಟ್ಟಲು ನಗರ ಪ್ರದೇಶಗಳಲ್ಲಿ ಬುಕಿಂಗ್ ಅವಧಿಯನ್ನು 21 ದಿನಗಳಿಂದ 25 ದಿನಗಳಿಗೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 45 ದಿನಗಳಿಗೆ ಹೆಚ್ಚಿಸಲಾಗಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
ಈಗ ಮದುವೆ ಮತ್ತು ಶುಭ ಕಾರ್ಯಗಳು ನಡೆಯುವಂತ ಸೀಸನ್. ಇಂಥಾ ಸಮಯದಲ್ಲೇ ಗ್ಯಾಸ್ ಅಭಾವ ಕಾಡುತ್ತಿರುವುದು ಜನರಿಗೆ ದೊಡ್ಡ ತಲೆನೋವು ತಂದಿಟ್ಟಿದೆ. ವಾಣಿಜ್ಯ ಬುಕಿಂಗ್‌ಗಳು ಬಹುತೇಕ ರದ್ದಾಗಿರುವುದರಿಂದ, ಅಡುಗೆ ಗ್ಯಾಸ್ ಕೊರತೆಯಿಂದಾಗಿ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳು ಸಹ ತೆರೆಯಲಾಗದ ಸಂಕಷ್ಟಕ್ಕೆ ಸಿಲುಕಿವೆ. ಇರಾನ್ ಮೇಲೆ ತನ್ನ ಬ್ರಹ್ಮಾಸ್ತ್ರ ಬಿಟ್ಟಿರುವ ಅಮೆರಿಕ, ಯಾವಾಗ ಯುದ್ಧವನ್ನು ನಿಲ್ಲಿಸುವ ಮನಸ್ಸು ಮಾಡುತ್ತೆ? ಎಂಬ ಚಿಂತೆ ಜನರ ಬೆನ್ನತ್ತಿದೆ. ಮತ್ತೊಂದೆಡೆ, ಈ ಪರಿಸ್ಥಿತಿ ಹೀಗೆ ಮುಂದುವರೆದರೆ, ಇನ್ನೂ ಕೆಲವೇ ದಿನಗಳಲ್ಲಿ ಪೆಟ್ರೋಲ್-ಡಿಸೇಲ್ ಬೆಲೆಗಳು ಸಹ ಹೆಚ್ಚಾಗಲಿದೆ ಎಂಬುದರಲ್ಲಿ ಅನುಮಾನ ಬೇಡ,(ಏಜೆನ್ಸೀಸ್).