ಬ್ಲಡ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದ 3 ವರ್ಷದ ಮಗುವಿಗೆ ತಪ್ಪು ಇಂಜೆಕ್ಷನ್ ನೀಡಿದ ನರ್ಸ್‌ಗಳು 
ದೇಶ

ಏಮ್ಸ್ ಆಸ್ಪತ್ರೆಯಲ್ಲಿ ಘೋರ ದುರಂತ: ಬ್ಲಡ್​ ಕ್ಯಾನ್ಸರ್​ನಿಂದ ಬಳಲುತ್ತಿದ್ದ ಮಗು; ತಪ್ಪು ಇಂಜೆಕ್ಷನ್ ಕೊಟ್ಟು ಕೊಂದ ನರ್ಸ್‌ಗಳು! AIIMS Bhopal Tragedy

ಪ್ರಮುಖ ಮುಖ್ಯಾಂಶಗಳು

  • ಭೋಪಾಲ್ ಏಮ್ಸ್ ಆಸ್ಪತ್ರೆಯಲ್ಲಿ ಘೋರ ದುರಂತ!
  • ಬ್ಲಡ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದ 3 ವರ್ಷದ ಮಗುವಿಗೆ ತಪ್ಪು ಇಂಜೆಕ್ಷನ್ ನೀಡಿದ ನರ್ಸ್‌ಗಳು
  • ಮಗು ಸಾವು, ಇಬ್ಬರು ದಾದಿಯರ ವಿರುದ್ಧ FIR ದಾಖಲು
ಭೋಪಾಲ್​: ರಕ್ತಕ್ಕೆ ಸಂಬಂಧಿಸಿದ ಕ್ಯಾನ್ಸರ್ (ಬ್ಲಡ್​ ಕ್ಯಾನ್ಸರ್​​) ​ನಿಂದ ಬಳಲುತ್ತಿದ್ದ ಮೂರು ವರ್ಷದ ಮಗುವಿಗೆ ತಪ್ಪಾದ ಚುಚ್ಚುಮದ್ದ (Injection) ನ್ನು ನೀಡಿದ ಪರಿಣಾಮ ಸಾವನ್ನಪ್ಪಿರುವ ದಯನೀಯ ಘಟನೆ ಏಮ್ಸ್ ಭೋಪಾಲ್​ (AIIMS Bhopal Tragedy) ನಲ್ಲಿ ವರದಿಯಾಗಿದೆ.
ಈ ಘಟನೆಯು 2025 ರ ಡಿಸೆಂಬರ್​ ತಿಂಗಳಲ್ಲಿ ನಡೆದಿದ್ದು, ನಂತರ ನಡೆದ ಆಂತರಿಕ ತನಿಖೆಯಲ್ಲಿ ಈ ಕೃತ್ಯ ಸಾಭಿತಾಗಿದ್ದು, ಈಗ ಇಬ್ಬರು ನರ್ಸ್​ಗಳ ಮೇಲೆ ಎಫ್​ಐಆರ್​ ದಾಖಲಾಗಿದೆ. ಸಾವಿಗೀಡಾದ ಮಗುವನ್ನು ಮಧ್ಯಪ್ರದೇಶದ ಸಾಗರ ಜಿಲ್ಲೆಯ ಸಾರ್ಥಕ್​ ಯಾದವ್​ ಎಂದು ಗುರುತಿಸಲಾಗಿದ್ದು, ಡಿಸೆಂಬರ್ 15 ರಂದು ಏಮ್ಸ್​ ಭೋಪಾಲ್​ಗೆ ದಾಖಲು ಮಾಡಿಕೊಂಡ ಬಗ್ಗೆ ಮಾಹಿತಿ ದೊರೆತಿದೆ.

ದಾದಿಯರ ನಿರ್ಲಕ್ಷ!

ದಾಖಲಾದ ಮಗು, ಬ್ಲಡ್​ ಕ್ಯಾನ್ಸರ್​ನಿಂದ ಬಳಲುತ್ತಿದ್ದು, ಡಿಸೆಂಬರ್​ 17 ರಂದು ದಾದಿಯರು ತಪ್ಪಾದ ಔಷಧವನ್ನು ಚುಚ್ಚುಮದ್ದಿಗೆ ತುಂಬಿಸಿದ್ದಾರೆ. ಇದನ್ನು ಗಮನಿಸಿದ ತಂದೆ, ಇದು ಯಾವಾಗಲೂ ನೀಡುವ ಔಷಧದ ರೀತಿಯಿಲ್ಲ ಎಂದು ಹೇಳಿದ್ದಾನೆ.
ಆದರೆ ಆತನ ಮಾತನ್ನು ಕಿವಿಗೆ ಹಾಕಿಕೊಳ್ಳದ ದಾದಿಯರು ತಪ್ಪಾದ ಔಷಧವನ್ನು ಮಗುವಿನ ದೇಹಕ್ಕೆ ಸೇರಿಸಿದ್ದು, ಇದರಿಂದ ರಿಯಾಕ್ಷನ್​ ಉಂಟಾಗಿದ್ದು, ಕೆಲವೇ ಸಮಯದಲ್ಲಿ ಮಗುವಿನ ಪ್ರಜ್ಞೆ ತಪ್ಪಿದೆ. ಕೂಡಲೇ ಮಗುವನ್ನು ತೀವ್ರನಿಗಾ ಘಟಕದಲ್ಲಿ ಚಿಕಿತ್ಸೆ ನೀಡಿದರೂ ಸಹ ಮಗು ಸಾವನ್ನಪ್ಪಿದೆ.

ಪೊಲೀಸರಿಂದ ಬಂಧನ

ನಂತರ ಈ ಘಟನೆ ಬಗ್ಗೆ ಆಂತರಿಕ ತನಿಖೆ ನಡೆದು ದಾದಿಯರ ನಿರ್ಲಕ್ಷದಿಂದಲೇ ಮಗುವಿನ ಸಾವು ಸಂಭವಿಸಿರುವುದು ರುಜುವಾತಾಗಿದೆ. ಈಗ ಆರೋಪಿತ ದಾದಿಯರಾದ ಮಧುಬಾಲಾ ಶರ್ಮಾ ಹಾಗೂ ಅನುಕಾ ಗುಜರಾತಿ ಎಂಬವರನ್ನು ಬಿನ್​ಎಸ್​ಎಸ್​​ ಸೆಕ್ಷನ್​ 106(1) ರ ಪ್ರಕಾರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ, (ಏಜನ್ಸೀಸ್​).