ಕಳೆದ 5 ವರ್ಷಗಳಿಂದ ಚಿತ್ರಹಿಂಸೆ  
ದೇಶ

ಅವಳ ದೇಹದಲ್ಲಿ ಮಾಂಸವೇ ಇಲ್ಲ! ನಿವೃತ್ತ ರೈಲ್ವೆ ಕ್ಲರ್ಕ್ ಸಾವು, ಪುತ್ರಿ ನರಳಾಟ; 5 ವರ್ಷಗಳ ಚಿತ್ರಹಿಂಸೆ ಕಡೆಗೂ ಬೆಳಕಿಗೆ

ಪ್ರಮುಖ ಮುಖ್ಯಾಂಶಗಳು

  • ಐದು ವರ್ಷಗಳಿಂದ ಒಂದೇ ರೂಮ್​ನಲ್ಲಿ ಕೂಡಿ ಹಾಕಿ ಚಿತ್ರಹಿಂಸೆ
  • ದಂಪತಿಗಳ ಚಿತ್ರಹಿಂಸೆಗೆ ನಿವೃತ್ತ ರೈಲ್ವೆ ಕ್ಲರ್ಕ್​ ಸಾವು
  • ಮಾನಸಿಕ ಅಸ್ವಸ್ಥ ಮಗಳು ಹಸಿವಿನಿಂದ ನರಳಾಟ
ಉತ್ತರ ಪ್ರದೇಶ: ನಿವೃತ್ತ ರೈಲ್ವೆ ಕ್ಲರ್ಕ್ ಮತ್ತು ಅವರ ಮಾನಸಿಕ ಅಸ್ವಸ್ಥೆಯಿಂದ ಬಳಲುತ್ತಿರುವ ಪುತ್ರಿಯನ್ನು ಐದು ವರ್ಷಗಳಿಂದ ಒಂದೇ ರೂಮ್​ನಲ್ಲಿ ಕೂಡಿ ಹಾಕಿ, ಅನ್ನ-ನೀರು ಕೊಡದೆ ಚಿತ್ರಹಿಂಸೆ ನೀಡಿದ ಮನಕಲುಕುವ ಘಟನೆ ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯಲ್ಲಿ ವರದಿಯಾಗಿದೆ.
'ಎನ್​ಡಿಟಿವಿ' ವರದಿ ಪ್ರಕಾರ, ಐದು ವರ್ಷಗಳಿಂದ ತಂದೆ-ಮಗಳಿಗೆ ಚಿತ್ರಹಿಂಸೆ ನೀಡಿದ ದಂಪತಿ, ಕಡೆಗೂ ನಿವೃತ್ತ ರೈಲ್ವೆ ಉದ್ಯೋಗಿಯ ಜೀವವನ್ನು ಬಲಿ ಪಡೆದಿದ್ದಾರೆ. ವ್ಯಕ್ತಿಯ ಸಾವಿನಿಂದ ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಮೃತ ವ್ಯಕ್ತಿಯನ್ನು ಓಂ ಪ್ರಕಾಶ್​ ಸಿಂಗ್ ರಾಥೋರ್​ (70), ನಿವೃತ್ತ ಹಿರಿಯ ರೈಲ್ವೆ ಕ್ಲರ್ಕ್​ ಎಂದು ಗುರುತಿಸಲಾಗಿದೆ. ಇವರ ಪುತ್ರಿ ರಶ್ಮಿ (27) ಮಾನಸಿಕ ಅಸ್ವಸ್ಥಳು ಎಂದು ಹೇಳಲಾಗಿದ್ದು, ಸರಿಯಾದ ಊಟ-ನೀರು ಸಿಗದೆ ಯುವತಿಯ ದೇಹ ಪೂರ ಒಣಗಿ ಹೋಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಚಿತ್ರಹಿಂಸೆ ಕೊಟ್ಟವರಾರು?

ಮೃತ ಓಂಪ್ರಕಾಶ್ ಅವರ ಸಹೋದರ ಅಮರ್ ಸಿಂಗ್ ಮಾಹಿತಿ ಪ್ರಕಾರ, ಓಂಪ್ರಕಾಶ್​ ಪತ್ನಿ 2016ರಲ್ಲಿ ಸಾವಿಗೀಡಾದರು. ಇದಾದ ಬಳಿಕ ಪ್ರತ್ಯೇಕ ಮನೆಗೆ ತೆರಳಿದ ಓಂಪ್ರಕಾಶ್ ಮತ್ತು ಅವರ ಪುತ್ರಿ, ತಮ್ಮನ್ನು ನೋಡಿಕೊಳ್ಳಲು ಒಂದು ದಂಪತಿಯನ್ನು ನೇಮಕ ಮಾಡಿಕೊಂಡರು. ರಾಮ್ ಪ್ರಕಾಶ್ ಕುಶ್ವಾಹ ಮತ್ತು ಅವರ ಪತ್ನಿ ರಾಮದೇವಿ ಆರೈಕೆ ಮಾಡ್ತೇವೆ ಎಂದು ಬಂದವರು, ಇಡೀ ಮನೆಯನ್ನು ತಮ್ಮ ಅಧಿಕಾರಕ್ಕೆ ತೆಗೆದುಕೊಂಡು, ಅವರಿಗೆ ಚಿತ್ರಹಿಂಸೆ ನೀಡಿದ್ದಾರೆ ಎಂದರು.
ದಂಪತಿ ಇಡೀ ಮನೆಯನ್ನು ತಮ್ಮ ವಶಕ್ಕೆ ತೆಗೆದುಕೊಂಡು, ತಂದೆ ಮತ್ತು ಮಗಳನ್ನು ಮನೆಯ ಕೆಳಗಿನ ರೂಮ್​ಗೆ ದೂಡಿ, ಹೊರಗಡೆ ಬಾರದಂತೆ ಅಲ್ಲೇ ಕೊಳೆಯುವಂತೆ ಮಾಡಿದರು ಎಂದು ಅಮರ್ ಆರೋಪಿಸಿದ್ದಾರೆ. "ಸಂಬಂಧಿಕರು ಅವರಿಬ್ಬರನ್ನು ನೋಡಲು ಮನೆಯ ಬಳಿ ಬಂದಾಗಲೆಲ್ಲಾ, ಕುಶ್ವಾಹ ಅಣ್ಣನನ್ನು ನೋಡಲು ಬಿಡುತ್ತಿರಲಿಲ್ಲ. ಓಂಪ್ರಕಾಶ್​ ಯಾರನ್ನೂ ಭೇಟಿಯಾಗಲು ಬಯಸುವುದಿಲ್ಲ ಎಂದೇಳಿ, ಕುಟುಂಬಸ್ಥರು ಅವರ ಮುಖ ನೋಡದಂತೆ ಅಲ್ಲಿಂದ ಕಳುಹಿಸುತ್ತಿದ್ದ" ಎಂದು ಅಮರ್ ಹೇಳಿದ್ದಾರೆ.
ಇಂದು (ಡಿ.29) ಓಂಪ್ರಕಾಶ್ ಸಾವಿನ ಸುದ್ದಿ ಕುಟುಂಬಕ್ಕೆ ತಲುಪಿದ ಬೆನ್ನಲ್ಲೇ, ಸಂಬಂಧಿಕರು ಮನೆ ಮುಂದೆ ದೌಡಾಯಿಸಿದ್ದಾರೆ. ಈ ವೇಳೆ ಭಯಾನಕ ದೃಶ್ಯ ಕಂಡುಬಂದಿದ್ದು, ಮೃತ ಓಂಪ್ರಕಾಶ್ ಅವರ ದೇಹವು ಸಂಪೂರ್ಣವಾಗಿ ಒಣಗಿ ಹೋಗಿತ್ತು. ಮತ್ತು ಅವರ ಪುತ್ರಿ ಕತ್ತಲೆಯ ಕೋಣೆಯಲ್ಲಿ ಬೆತ್ತಲೆಯಾಗಿ, ಹಸಿವಿನಿಂದ ಬಳಲುತ್ತಿದ್ದಳು ಎಂದು ಕುಟುಂಬಸ್ಥರು ಅಳಲು ತೋಡಿಕೊಂಡಿದ್ದಾರೆ. ರಶ್ಮಿಯ ದೇಹವು 80 ವರ್ಷದ ವೃದ್ಧೆಯಂತೆ ಕಾಣುತ್ತಿತ್ತು ಎಂದಿದ್ದಾರೆ.
"ಆಕೆಯ ದೇಹದಲ್ಲಿ ಕೇವಲ ಮೂಳೆ ಬಿಟ್ಟರೆ ಮಾಂಸವೇ ಇರಲಿಲ್ಲ. ಒಂದು ಅಸ್ಥಿಪಂಜರ ಮಾತ್ರ ಉಳಿದಿದೆ ಅಷ್ಟೇ" ಎಂದು ಮೃತನ ಸಂಬಂಧಿ ಪುಷ್ಪಾ ಸಿಂಗ್ ರಾಥೋಡ್ ಹೇಳಿದ್ದಾರೆ. ಆಸ್ಪತ್ರೆಗೆ ತಲುಪುವಷ್ಟರಲ್ಲಿ ಓಂಪ್ರಕಾಶ್ ಮೃತಪಟ್ಟಿದ್ದಾಗಿ ವೈದ್ಯರು ದೃಢಪಡಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ, ತನಿಖೆ ಚುರುಕುಗೊಳಿಸಿದ್ದಾರೆ,(ಏಜೆನ್ಸೀಸ್).