ನವದೆಹಲಿ: ಚುನಾವಣಾ ಆಯೋಗವನ್ನು ಟೀಕಿಸಿದ್ದಕ್ಕಾಗಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ಗಾಂಧಿ ಅವರನ್ನು ನ್ಯಾಯಧೀಶರು, ನಿವೃತ್ತ ಅಧಿಕಾರಿಗಳ ಸೇರಿ ಹಿರಿಯ ನಾಗರಿಕರ ತಂಡವೊಂದು ಭಾರೀ ಟೀಕೆ ಮಾಡಿದೆ.
ಹೌದು, 16 ಮಾಜಿ ನ್ಯಾಯಾಧೀಶರು, 123 ನಿವೃತ್ತ ನಾಗರಿಕ ಸೇವಕರು, 14 ಮಾಜಿ ರಾಯಭಾರಿಗಳು ಮತ್ತು 133 ನಿವೃತ್ತ ಸಶಸ್ತ್ರ ಪಡೆಗಳ ಅಧಿಕಾರಿಗಳು ಸೇರಿದಂತೆ 272 ಪ್ರಮುಖ ನಾಗರಿಕರ ತಂಡವೊಂದು ರಾಹುಲ್ ಗಾಂಧಿಯನ್ನು ಟೀಕಿಸುವ ಬಹಿರಂಗ ಪತ್ರವೊಂದು ಬಿಡುಗಡೆ ಮಾಡಿದೆ.
ವಿರೋಧ ಪಕ್ಷದ ನಾಯಕ ರಾಹುಲ್ಗಾಂಧಿ ಅವರಿಂದ ಮತ್ತು ಕಾಂಗ್ರೆಸ್ ಪಕ್ಷದಿಂದ ಸಾಂವಿಧಾನಿಕ ಸಂಸ್ಥೆಗಳನ್ನು, ವಿಶೇಷವಾಗಿ ಭಾರತದ ಚುನಾವಣಾ ಆಯೋಗವನ್ನು (ECI) ದುರ್ಬಲಗೊಳಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಪತ್ರದಲ್ಲಿ ಆರೋಪ ಮಾಡಲಾಗಿದೆ.
ಬಹಿರಂಗ ಪ್ರತದಲ್ಲೇನಿದೆ..?
272 ಹಿರಿಯ ನಾಗರಿಕರಾದ ನಾವು ಸಹಿ ಮಾಡಿದ್ದೇವೆ. ''ಆಕ್ರಮಣಕಾರಿ ರಾಜಕೀಯ ವಾಕ್ಚಾತುರ್ಯದ ಮೂಲಕ ಪ್ರಜಾಪ್ರಭುತ್ವ ಸಂಸ್ಥೆಗಳ ಮೇಲೆ ಹೆಚ್ಚುತ್ತಿರುವ ದಾಳಿಯಿಂದ ಆತಂಕಗೊಂಡಿದ್ದೇವೆ. ಕೆಲವು ರಾಜಕೀಯ ನಾಯಕರು ರಚನಾತ್ಮಕ ನೀತಿ ನಿರೂಪಣೆಗಿಂತ ಪ್ರಚೋದನೆಯನ್ನು ಆರಿಸಿಕೊಳ್ಳುತ್ತಿದ್ದಾರೆ ಮತ್ತು ಸಂಸ್ಥೆಗಳಲ್ಲಿ ಅಪನಂಬಿಕೆಯನ್ನು ಸೃಷ್ಟಿಸಲು ಆಧಾರರಹಿತ ಆರೋಪಗಳನ್ನು ಹೊರಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಸಶಸ್ತ್ರ ಪಡೆಗಳು, ನ್ಯಾಯಾಂಗ, ಸಂಸತ್ತು ಮತ್ತು ಇತರ ಸಾಂವಿಧಾನಿಕ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡ ನಂತರ, ಈಗ ಚುನಾವಣಾ ಆಯೋಗದ ಮೇಲೆ ಇದೇ ರೀತಿಯ "ವ್ಯವಸ್ಥಿತ ಮತ್ತು ಪಿತೂರಿ ದಾಳಿಗಳು" ನಡೆಯುತ್ತಿವೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ವಿರೋಧ ಪಕ್ಷದ ನಾಯಕರು ಯಾವುದೇ ವಿಶ್ವಾಸಾರ್ಹ ಪುರಾವೆಗಳನ್ನು ನೀಡದೆ "ಮತ ಕಳ್ಳತನ" ಸೇರಿದಂತೆ ಆಯೋಗದ ಮೇಲೆ ಗಂಭೀರ ದುಷ್ಕೃತ್ಯದ ಆರೋಪ ಮಾಡಿದ್ದಾರೆ ಎಂದು ಸಹಿದಾರರು ಆರೋಪಿಸಿದ್ದಾರೆ(ಏಜೆನ್ಸೀಸ್).