ಬಂಗಾಳ ಗಡಿಗೆ ಹಠಾತ್ ಹರಿದುಬಂದ ನುಸುಳುಕೋರರ ದಂಡು! ಸಿಎಂ ಸುವೇಂದು ಆಕ್ಷನ್ ಪ್ಲಾನ್‌ಗೆ ಹೆದರಿ ಓಡುತ್ತಿರುವುದೇಕೆ ಬಾಂಗ್ಲಾದೇಶಿಗಳು? 
ದೇಶ

ಬಂಗಾಳ ಗಡಿಗೆ ಹಠಾತ್ ಹರಿದುಬಂದ ನುಸುಳುಕೋರರ ದಂಡು! ಸಿಎಂ ಸುವೇಂದು ಆಕ್ಷನ್ ಪ್ಲಾನ್‌ಗೆ ಹೆದರಿ ಓಡುತ್ತಿರುವುದೇಕೆ ಬಾಂಗ್ಲಾದೇಶಿಗಳು? Bengal Crack down

ಕೋಲ್ಕತ್ತಾ: ಪಶ್ಚಿಮ ಬಂಗಾಳದ ನೂತನ ಬಿಜೆಪಿ ಸರ್ಕಾರವು ಅಕ್ರಮ ಬಾಂಗ್ಲಾದೇಶಿ ವಲಸಿಗರು ಹಾಗೂ ರೋಹಿಂಗ್ಯಾಗಳ ವಿರುದ್ಧ ಜಾರಿಗೆ ತಂದಿರುವ ಪತ್ತೆ ಹಚ್ಚಿ, ವಜಾಗೊಳಿಸಿ ಮತ್ತು ಗಡೀಪಾರು ಮಾಡಿ ಎಂಬ ಮಹಾ ಕಾರ್ಯಾಚರಣೆಯು ಗಡಿ ಭಾಗದಲ್ಲಿ ದಿಗಿಲು ಮೂಡಿಸಿದೆ. ಸರ್ಕಾರದ ಈ ಭೀಕರ ಆಕ್ಷನ್ ಪ್ಲಾನ್‌ಗೆ ಹೆದರಿರುವ ಸಾವಿರಾರು ಅಕ್ರಮ ಬಾಂಗ್ಲಾದೇಶಿ ನುಸುಳುಕೋರರು ಕಳ್ಳಮಾರ್ಗಗಳ ಮೂಲಕ ಮತ್ತೆ ಭಾರತ-ಬಾಂಗ್ಲಾ(Bengal Crack down) ಗಡಿಯತ್ತ ಓಡುತ್ತಿದ್ದಾರೆ. ಉತ್ತರ 24 ಪರಗಣ ಜಿಲ್ಲೆಯ ಗಡಿ ಭಾಗದಲ್ಲಿರುವ ಹಕೀಂಪುರ ಚೆಕ್‌ಪೋಸ್ಟ್ ಬಳಿ ಮಂಗಳವಾರ ಎಂದೂ ಕಾಣದಂತಹ ಅಕ್ರಮ ವಲಸಿಗರ ಬೃಹತ್ ತಲೆಮರೆಸಿಕೊಂಡಿದ್ದ ಗುಂಪುಗಳು ದೇಶ ತೊರೆಯಲು ಸಾಲಾಗಿ ನಿಂತಿರುವುದು ಜಾಗತಿಕ ಮಟ್ಟದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ.
ಯಾವುದೇ ಅಧಿಕೃತ ಭಾರತೀಯ ಗುರುತಿನ ಚೀಟಿಗಳಿಲ್ಲದೆ ಕಳೆದ ಹಲವು ವರ್ಷಗಳಿಂದ ಪಶ್ಚಿಮ ಬಂಗಾಳದ ವಿವಿಧ ಜಿಲ್ಲೆಗಳಲ್ಲಿ ಅಕ್ರಮವಾಗಿ ನೆಲೆಸಿದ್ದ ಈ ವಿದೇಶಿಗರನ್ನು ಪತ್ತೆಹಚ್ಚುವ ಕೆಲಸ ಯುದ್ಧೋಪಾದಿಯಲ್ಲಿ ನಡೆಯುತ್ತಿದ್ದು, ಆಡಳಿತ ಯಂತ್ರ ಇವರಿಗೆ ಎಲ್ಲಿಯೂ ಆಶ್ರಯ ನೀಡದಂತೆ ಕಟ್ಟುನಿಟ್ಟಿನ ಸೂಚನೆ ರವಾನಿಸಿದೆ.

"ಇಲ್ಲಿ ಇನ್ಮೇಲೆ ನಮಗೆ ಕೆಲಸವೂ ಇಲ್ಲ, ನೆಲೆಸಲು ಜಾಗವೂ ಇಲ್ಲ! ವಲಸಿಗರ ಕಣ್ಣೀರು!

ಗಡಿಗೆ ಓಡಿ ಬರುತ್ತಿರುವ ನುಸುಳುಕೋರರು ಮಾಧ್ಯಮಗಳ ಎದುರು ತಮ್ಮ ಅಸಹಾಯಕತೆಯನ್ನು ಬಿಚ್ಚಿಡುತ್ತಿದ್ದಾರೆ. ಹೌರಾದಲ್ಲಿ ಮೋಟಾರ್ ಸೈಕಲ್ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ ಬಾಂಗ್ಲಾದೇಶದ ಪ್ರಜೆ ಹಕೀಂಪುರ ಗಡಿಯಲ್ಲಿ ಮಾತನಾಡಿ, ಈಗ ಬಂಗಾಳದಲ್ಲಿ ನಮಗೆ ಬದುಕು ನಡೆಸುವುದು ಅತ್ಯಂತ ಕಠಿಣವಾಗಿದೆ. ನಮಗೆ ಇಲ್ಲಿ ಯಾವುದೇ ಕೆಲಸ ಸಿಗುತ್ತಿಲ್ಲ ಮತ್ತು ಆಡಳಿತ ಯಂತ್ರವು ನಮ್ಮನ್ನು ಇಲ್ಲಿ ಇರಲು ಬಿಡುತ್ತಿಲ್ಲ. ಹಾಗಾಗಿ ನಾವು ತಾಯ್ನಾಡಿಗೆ ಮರಳುತ್ತಿದ್ದೇವೆ. ಎರಡು-ಮೂರು ವರ್ಷಗಳ ಹಿಂದೆ ನನ್ನನ್ನು ಕೆಲವರು ಇಲ್ಲಿಗೆ ಕರೆತಂದಿದ್ದರು. ನನ್ನ ಬಳಿ ಯಾವುದೇ ಅಧಿಕೃತ ಗುರುತಿನ ಚೀಟಿ ಅಥವಾ ಪಡಿತರ ಚೀಟಿ ಇರಲಿಲ್ಲ. ನಮ್ಮ ಜೊತೆ 10 ಜನ ಬಂದಿದ್ದೆವು, ಆದರೆ ಈಗ ಕೇವಲ ನಾನು ಮಾತ್ರ ಪ್ರಾಣ ಉಳಿಸಿಕೊಂಡು ವಾಪಸ್ ಹೋಗುತ್ತಿದ್ದೇನೆ ಎಂದು ಕಣ್ಣೀರಿಟ್ಟಿದ್ದಾನೆ.
ನುಸುಳುಕೋರರ ಅಂತಿಮ ತಾಣ ಡಿಟೆನ್ಷನ್ ಸೆಂಟರ್ ಮಾತ್ರ!": ಸಂಸದ ಖಗೇನ್ ಮುರ್ಮು
ಈ ಬಿಕ್ಕಟ್ಟಿನ ಕುರಿತು ಕಠಿಣ ಹೇಳಿಕೆ ನೀಡಿರುವ ಬಿಜೆಪಿ ಸಂಸದ ಖಗೇನ್ ಮುರ್ಮು, ಅಕ್ರಮ ಬಾಂಗ್ಲಾದೇಶಿ ನುಸುಳುಕೋರರಿಗೆ ಭಾರತದ ಮಣ್ಣಿನಲ್ಲಿ ಜಾಗವಿಲ್ಲ. ಅವರ ಅಂತಿಮ ತಾಣ ಕೇವಲ ಡಿಟೆನ್ಷನ್ ಸೆಂಟರ್ ಮಾತ್ರ. ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಹೇಳಿದಂತೆ ಪ್ರತಿಯೊಬ್ಬ ನುಸುಳುಕೋರನನ್ನು ಹುಡುಕಿ ಹೊರಹಾಕಲಾಗುವುದು. ಈಗಾಗಲೇ ಶೇ. 40 ರಷ್ಟು ಜನ ಗಡಿ ದಾಟಿ ಓಡಿ ಹೋಗಿದ್ದಾರೆ, ಇನ್ನುಳಿದ ಕೆಲವು ಕಡೆ ಅಡಗಿರುವವರನ್ನು ನಮ್ಮ ಭದ್ರತಾ ಪಡೆಗಳು ಶೀಘ್ರದಲ್ಲೇ ಪತ್ತೆಹಚ್ಚಲಿವೆ ಎಂದು ಎಚ್ಚರಿಸಿದ್ದಾರೆ. ಭಾರತ ಮತ್ತು ಬಾಂಗ್ಲಾದೇಶದ ಅಂತಾರಾಷ್ಟ್ರೀಯ ಗಡಿಗೆ ಸಂಪೂರ್ಣವಾಗಿ ಕಾಂಕ್ರೀಟ್ ಬೇಲಿ ಅಳವಡಿಸುವ ಕೇಂದ್ರ ಸರ್ಕಾರದ ಕಾರ್ಯವು ಅಂತಿಮ ಹಂತ ತಲುಪಿದೆ ಎಂದು ಮಾಹಿತಿ ನೀಡಿದ್ದಾರೆ.
ರಾಜ್ಯಾದ್ಯಂತ ಬೃಹತ್ ‘ಹೋಲ್ಡಿಂಗ್ ಸೆಂಟರ್’ಗಳ ಸ್ಥಾಪನೆಗೆ ಆದೇಶ!
ಪಶ್ಚಿಮ ಬಂಗಾಳದ ಗೃಹ ಮತ್ತು ಗಿರಿಪ್ರದೇಶಗಳ ವ್ಯವಹಾರಗಳ ಸಚಿವಾಲಯವು ಮೇ 23 ರಂದು ಮಹತ್ವದ ಆದೇಶವೊಂದನ್ನು ಹೊರಡಿಸಿದ್ದು, ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ತಮ್ಮ ತಮ್ಮ ವ್ಯಾಪ್ತಿಯಲ್ಲಿ ಅಕ್ರಮ ವಿದೇಶಿ ಪ್ರಜೆಗಳನ್ನು ಬಂಧಿಸಿ ಇಡಲು ಬೃಹತ್ ಹೋಲ್ಡಿಂಗ್ ಸೆಂಟರ್‌ಗಳನ್ನು ನಿರ್ಮಿಸಲು ಕಟ್ಟುನಿಟ್ಟಿನ ಆದೇಶ ನೀಡಿದೆ. ಶಿಕ್ಷೆ ಪೂರ್ಣಗೊಂಡಿದ್ದರೂ ಗಡೀಪಾರು ಪ್ರಕ್ರಿಯೆ ಬಾಕಿ ಇರುವ ವಿದೇಶಿ ಕೈದಿಗಳು, ಅಕ್ರಮವಾಗಿ ನುಸುಳಿರುವ ಬಾಂಗ್ಲಾದೇಶಿಗಳು ಮತ್ತು ರೋಹಿಂಗ್ಯಾಗಳನ್ನು ಕೇಂದ್ರ ಗೃಹ ಸಚಿವಾಲಯದ ಮಾರ್ಗಸೂಚಿಗಳ ಅನ್ವಯ ಈ ತಾತ್ಕಾಲಿಕ ಶಿಬಿರಗಳಲ್ಲಿ ಕೂಡಿಹಾಕಲು ವ್ಯವಸ್ಥೆ ಮಾಡಲಾಗುತ್ತಿದೆ.

ದೀರ್ಘ ಜೈಲು ವಾಸವಿಲ್ಲ, ಬಿಎಸ್‌ಎಫ್‌ಗೆ ನೇರ ಹಸ್ತಾಂತರದ ಮಾಸ್ಟರ್ ಪ್ಲಾನ್!

ಬಂಗಾಳದ ರಾಜಕೀಯ ಮತ್ತು ಆಡಳಿತಾತ್ಮಕ ವಲಯದಲ್ಲಿ ಕೇಳಿಬರುತ್ತಿರುವ ಅತ್ಯಂತ ರೋಚಕ ಸುದ್ದಿಯೆಂದರೆ, ಇನ್ಮೇಲೆ ಅಕ್ರಮ ವಲಸಿಗರನ್ನು ವಶಕ್ಕೆ ಪಡೆದ ತಕ್ಷಣ ಅವರ ಮೇಲೆ ದೀರ್ಘಾವಧಿಯ ನ್ಯಾಯಾಲಯದ ಮೊಕದ್ದಮೆಗಳನ್ನು ಹೂಡಿ ಜೈಲಿನಲ್ಲಿ ಇಟ್ಟುಕೊಳ್ಳುವ ಬದಲು, ಆಡಳಿತ ಯಂತ್ರವು ಅವರನ್ನು ನೇರವಾಗಿ ಗಡಿಯಲ್ಲಿರುವ ಗಡಿ ರಕ್ಷಣಾ ಪಡೆಗೆ (BSF) ಹಸ್ತಾಂತರಿಸಲಿದೆ. ಬಿಎಸ್‌ಎಫ್ ಪಡೆಗಳು ತಕ್ಷಣವೇ ಫ್ಲಾಗ್ ಮೀಟಿಂಗ್ ನಡೆಸಿ ಬಾಂಗ್ಲಾದೇಶದ ಗಡಿ ಕಾವಲು ಪಡೆಗೆ ಇವರನ್ನು ಹಸ್ತಾಂತರಿಸಲಿವೆ. ಈ ಹೊಸ ನೀತಿಯಿಂದಾಗಿ ಗಡೀಪಾರು ಪ್ರಕ್ರಿಯೆಯು ಕೇವಲ 48 ಗಂಟೆಗಳ ಒಳಗೆ ಮುಕ್ತಾಯಗೊಳ್ಳಲಿದ್ದು, ಸರ್ಕಾರದ ಮೇಲಿನ ಆರ್ಥಿಕ ಹೊರೆಯೂ ತಗ್ಗಲಿದೆ.
ಮುಂದಿನ ದಿನಗಳಲ್ಲಿ ಈ ಕಾರ್ಯಾಚರಣೆಯನ್ನು ಇನ್ನು ಹತ್ತು ಪಟ್ಟು ತೀವ್ರಗೊಳಿಸಲು ಸುವೇಂದು ಅಧಿಕಾರಿ ಸರ್ಕಾರ ನಿರ್ಧರಿಸಿದ್ದು, ಬಂಗಾಳದ ಆಂತರಿಕ ಭದ್ರತೆ, ಸಾಂಸ್ಕೃತಿಕ ಅಸ್ತಿತ್ವ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಈ ಮಹಾ ಗಡೀಪಾರು ಪ್ರಕ್ರಿಯೆ ದೇಶದ ಇತಿಹಾಸದಲ್ಲೇ ಅತಿ ದೊಡ್ಡ ಆಪರೇಷನ್ ಆಗಿ ಮೂಡಿಬರುತ್ತಿದೆ,(ಏಜೆನ್ಸೀಸ್​).