Amit Shah | ಅಜಿತ್ ದೋವಲ್​​​ಗಾಗಿ ಒಂದು ಸುವರ್ಣ ಪುಟ ಕಾಯ್ದಿರಿಸಲೇಬೇಕು!.. ಲೋಕಮಾನ್ಯ ತಿಲಕ್ ಪ್ರಶಸ್ತಿ ಪ್ರದಾನ ಮಾಡಿ ಷಾ ಶ್ಲಾಘನೆ 
ದೇಶ

ಅಜಿತ್ ದೋವಲ್​​​ಗಾಗಿ ಒಂದು ಸುವರ್ಣ ಪುಟ ಕಾಯ್ದಿರಿಸಲೇಬೇಕು!.. ಲೋಕಮಾನ್ಯ ತಿಲಕ್ ಪ್ರಶಸ್ತಿ ಪ್ರದಾನ ಮಾಡಿ ಷಾ ಶ್ಲಾಘನೆ | Amit Shah

ಭಾರತದ ಆಂತರಿಕ ಹಾಗೂ ಬಾಹ್ಯ ಭದ್ರತೆಯಲ್ಲಿ ಅಭೂತಪೂರ್ವ ಕೊಡುಗೆ ನೀಡಿದ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‌ಎಸ್‌ಎ) ಅಜಿತ್ ದೋವಲ್ ಅವರಿಗಾಗಿ ಒಂದು ಸುವರ್ಣ ಪುಟ ಸದಾ ಕಾಯ್ದಿರಿಸಲ್ಪಡುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ (Amit Shah) ಶ್ಲಾಘಿಸಿದ್ದಾರೆ.

ಶನಿವಾರ ಲೋಕಮಾನ್ಯ ಬಾಲ ಗಂಗಾಧರ ತಿಲಕರ 106ನೇ ಪುಣ್ಯತಿಥಿಯ ಅಂಗವಾಗಿ ಆಯೋಜಿಸಲಾಗಿದ್ದ '2026ರ ಸಾಲಿನ ಲೋಕಮಾನ್ಯ ತಿಲಕ್ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರನ್ನು ಗೌರವಿಸಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಷಾ, ದೇಶದ ಭದ್ರತೆಯನ್ನು ಕಾಯುವಲ್ಲಿ ಅವರ ಪಾತ್ರವನ್ನು ಕೊಂಡಾಡಿದರು.
ಇತಿಹಾಸವನ್ನು ಬರೆದಾಗಲೆಲ್ಲಾ, ಯಾರಾದರೂ ಆಂತರಿಕ ಭದ್ರತೆ ಮತ್ತು ಬಾಹ್ಯ ಭದ್ರತೆಯನ್ನು ವಿಶ್ಲೇಷಿಸಿದರೆ, ಅಜಿತ್ ದೋವಲ್​ ಅವರಿಗೆ ಸುವರ್ಣ ಪುಟವನ್ನು ಕಾಯ್ದಿರಿಸಬೇಕಾಗುತ್ತದೆ, ಇದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಷಾ ಹೇಳಿದರು. ತಿಲಕರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಗೃಹಸಚಿವರು, ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು ಎಂಬ ಘೋಷಣೆಯನ್ನು ನೆನಪಿಸಿಕೊಳ್ಳುತ್ತಾ, ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ತಿಲಕರನ್ನು ಪರಿವರ್ತನಕಾರಿ ನಾಯಕ ಎಂದು ಬಣ್ಣಿಸಿದರು. ತಿಲಕರು ಸ್ವಾತಂತ್ರ್ಯ ಸಂಗ್ರಾಮಕ್ಕೆ ಹೊಸ ದಿಕ್ಸೂಚಿ ನೀಡಿದರು ಮತ್ತು ಸ್ವಯಂ ಆಡಳಿತವು ಭಾರತದ ಜನರಿಗೆ ಸೇರಿದ್ದು ಎಂಬ ಕಲ್ಪನೆಯೊಂದಿಗೆ ಲಕ್ಷಾಂತರ ಜನರಿಗೆ ಪ್ರೇರಣೆ ನೀಡಿದರು ಎಂದು ಅವರು ಹೇಳಿದರು.
ತಿಲಕರನ್ನು ಯುಗಪುರುಷ ಎಂದು ಬಣ್ಣಿಸಿದ ಅಮಿತ್​ ಷಾ, ಮಹಾನ್ ಶಿಕ್ಷಕ, ಭಯವಿಲ್ಲದ ಪತ್ರಕರ್ತ, ಚಿಂತಕ, ಕರ್ಮಯೋಗಿ ಮತ್ತು ಸ್ವಾತಂತ್ರ್ಯ ಹೋರಾಟಗಾರರಾಗಿ ಅವರ ಕೊಡುಗೆಗಳು ಸಾಟಿಯಿಲ್ಲದ್ದು ಎಂದರು. ತಿಲಕರ ಕೇಸರಿ ಪತ್ರಿಕೆಯನ್ನು ಉಲ್ಲೇಖಿಸಿ, ಪತ್ರಕರ್ತ ಎಷ್ಟು ನಿರ್ಭೀತನಾಗಿರಬಹುದು ಎಂಬುದನ್ನು ಕೇಸರಿಯ ಲೇಖನಗಳನ್ನು ಓದುವುದರ ಮೂಲಕ ಮಾತ್ರ ಅನುಭವಿಸಬಹುದು ಎಂದು ಹೇಳಿದರು.

ಅಮಿತ್​-ಅಜಿತ್​​ ಪರಿಚಯವಾಗಿದ್ದು ಹೀಗೆ!...

ಗುಜರಾತ್ ಗೃಹ ಸಚಿವರಾಗಿದ್ದ ತಮ್ಮ ಅಧಿಕಾರಾವಧಿಯನ್ನು ನೆನಪಿಸಿಕೊಂಡ ಷಾ, ಅಹಮದಾಬಾದ್ ಸರಣಿ ಬಾಂಬ್ ಸ್ಫೋಟದ ನಂತರ ದೋವಲ್​ ಅವರೊಂದಿಗೆ ತಮ್ಮ ಮೊದಲ ಸಂವಾದ ನಡೆಯಿತು ಎಂದು ಹೇಳಿದರು. ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿ, ದೋವಲ್​ ಸಲಹೆ ಪಡೆಯುವಂತೆ ತಮಗೆ ತಿಳಿಸಿದ್ದರು ಮತ್ತು ಅವರ ಮಾರ್ಗದರ್ಶನವು ಗುಜರಾತ್ ಪೊಲೀಸರಿಗೆ ಕೇವಲ ಅಹಮದಾಬಾದ್ ಬಾಂಬ್ ಸ್ಫೋಟ ಮಾತ್ರವಲ್ಲದೆ, ದೇಶದಾದ್ಯಂತ ನಡೆದ 13 ಬಾಂಬ್ ಸ್ಫೋಟಗಳನ್ನು ಒಂದೇ ಬಾರಿಗೆ ಭೇದಿಸಲು ನೆರವಾಯಿತು ಎಂದು ಹೇಳಿದರು.
ಇಂದು ಭಾರತದ ವಿದೇಶಾಂಗ ನೀತಿಯು ಉಕ್ಕಿನ ಬೆನ್ನುಮೂಳೆಯಿರುವ ವಿದೇಶಾಂಗ ನೀತಿಯಾಗಿದೆ, ಇದನ್ನು ಯಾರೂ ನಿರಾಕರಿಸಲಾಗುವುದಿಲ್ಲ. ನಾವು ಸ್ವಭಿಮಾನದೊಂದಿಗೆ ಜಗತ್ತಿನಲ್ಲಿ ನಮ್ಮ ಸ್ಥಾನವನ್ನು ಬಲಪಡಿಸಿಕೊಂಡಿದ್ದೇವೆ ಎಂದರು..
ಗೌರವವನ್ನು ಸ್ವೀಕರಿಸಿ ಮಾತನಾಡಿದ ದೋವಲ್, ಯುವಕರು ವೈಯಕ್ತಿಕ ಆಕಾಂಕ್ಷೆಗಳಿಗಿಂತ ದೇಶದ ಹಿತಾಸಕ್ತಿಗೆ ಮೊದಲ ಆದ್ಯತೆ ನೀಡಬೇಕೆಂದು ಕರೆ ನೀಡಿದರು. ಯುವಕರು ರಾಷ್ಟ್ರ ಹಿತಕ್ಕಾಗಿ ತಮ್ಮನ್ನು ತಾವು ಸಮರ್ಪಿಸಿಕೊಳ್ಳಬೇಕು ಎಂದು ದೋವಲ್​ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ. ದೇಶದ ನಾಯಕತ್ವಕ್ಕೆ ಕೃತಜ್ಞತೆ ಸಲ್ಲಿಸಿದ ಅವರು, ಪ್ರಧಾನಿ ಮೋದಿ ಮತ್ತು ಅಮಿತ್ ಷಾ ಅವರಂತಹ ನಾಯಕರನ್ನು ಪಡೆಯಲು ನಾವು ತುಂಬಾ ಅದೃಷ್ಟ ಮಾಡಿದ್ದೇವೆ ಎಂದರು.
ಪುಣೆಯೊಂದಿಗಿನ ತಮ್ಮ ಬಾಲ್ಯದ ಬಾಂಧವ್ಯವನ್ನು ನೆನಪಿಸಿಕೊಂಡ ದೋವಲ್​, ಸುಮಾರು 76 ವರ್ಷಗಳ ಹಿಂದೆ ತಮ್ಮ ತಂದೆ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಪುಣೆಯಲ್ಲಿದ್ದ ವಿಶೇಷ ನೆನಪುಗಳನ್ನು ಹಂಚಿಕೊಂಡರು. ಅವರು ಪುಣೆಯಲ್ಲಿ ಸುಮಾರು ಒಂದರಿಂದ ಒಂದೂವರೆ ವರ್ಷಗಳ ಕಾಲ ಕಳೆದಿದ್ದರು, ಅಲ್ಲಿ ದೆಹಲಿಯ ಸೇನಾ ಪ್ರಧಾನ ಕಚೇರಿಗೆ ತಂದೆಯವರ ವರ್ಗಾವಣೆಯಾಗುವ ಮೊದಲು ತಮ್ಮ ಶಾಲಾ ಶಿಕ್ಷಣವನ್ನು ಪ್ರಾರಂಭಿಸಿದ್ದರು(ಏಜೆನ್ಸೀಸ್​).