ಸುಪ್ರೀಂಕೋರ್ಟ್​ 
ದೇಶ

ಈ ವರ್ಷ ಮಹತ್ವದ ತೀರ್ಪುಗಳ ಸಂಚಲನ; ಇಲ್ಲಿವೆ ನೋಡಿ ಪ್ರಕರಣಗಳ ವಿವರ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನ್ಯಾಯಾಂಗದ ಪಾತ್ರ ಪ್ರಮುಖವಾದದ್ದು. ಕಾರ್ಯಾಂಗ, ಶಾಸಕಾಂಗ ತಪ್ಪು ಮಾಡಿದರೆ ತಿದ್ದಿ ಸರಿದಾರಿಗೆ ತರುವ ಹೊಣೆಗಾರಿಕೆ ನ್ಯಾಯಾಂಗದ್ದು. ಈ ಕಾರ್ಯವನ್ನು ಇದುವರೆಗೆ ಭಾರತದ ನ್ಯಾಯಾಂಗ ಸಮರ್ಥವಾಗಿ ಮಾಡುತ್ತ ಬಂದಿದೆ. ಇದಕ್ಕೆ ಪೂರಕವಾಗಿ ಈ ವರ್ಷವೂ ಹಲವಾರು ತೀರ್ಪಗಳು ಪ್ರಕಟವಾಗಿವೆ. ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್​ನ ಆಯ್ದ ಕೆಲವು ಆದೇಶಗಳ ಸ್ಥೂಲ ಮಾಹಿತಿ ಇಲ್ಲಿದೆ.

| ವಿಕ್ರಮ್​ ಕುಮಾರ್ ನಂದೋಡಿ

| ಶ್ರವಣ್ ನೀರಬಿದಿರೆ

ಇಬ್ಬರು ಸಿಜೆಐಗಳು

2025ರಲ್ಲಿ ಇಬ್ಬರು ಮುಖ್ಯ ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸಿದ್ದಾರೆ. ನ್ಯಾ. ಬಿ.ಆರ್. ಗವಾಯಿ ಮೇ 14ರಂದು ಸಿಜೆಐ ಆಗಿ ಅಧಿಕಾರ ವಹಿಸಿಕೊಂಡು 193 ದಿನ ಸೇವೆ ಸಲ್ಲಿಸಿದರೆ, ಅವರ ನಂತರ ನ್ಯಾ. ಸೂರ್ಯಕಾಂತ್ ನ. 24ರಂದು ಸಿಜೆಐ ಆಗಿ ಪ್ರಮಾಣವಚನ ಸ್ವೀಕರಿಸಿ ಸೇವೆ ಸಲ್ಲಿಸುತ್ತಿದ್ದಾರೆ.

ಬಾಡಿಗೆದಾರರು ಮಾಲೀಕರಲ್ಲ

ಆಸ್ತಿ ಮಾಲೀಕತ್ವದ ವಿಚಾರವಾಗಿ ಈ ವರ್ಷ ಸುಪ್ರೀಂ ಕೋರ್ಟ್ ಮಹತ್ತರವಾದ ತೀರ್ಪೊಂದನ್ನು ನೀಡಿದೆ. ಯಾವುದೇ ಬಾಡಿಗೆದಾರ, 5 ವರ್ಷಗಳಿಂದಾಗಲಿ, 50 ವರ್ಷಗಳಿಂದಾಗಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರೂ, ಅಷ್ಟು ವರ್ಷ ನಿರಂತರವಾಗಿ ವಾಸಿಸುತ್ತಿದ್ದರೆಂಬ ಕಾರಣಕ್ಕೆ ಆ ಆಸ್ತಿಯ ಮಾಲೀಕರಾಗಲು ಸಾಧ್ಯವಿಲ್ಲ. ಮಾಲೀಕರ ಒಪ್ಪಿಗೆಯ ಮೇರೆಗೆ ಅವರು ಹೇಳುವವರೆಗೆ ಆ ಜಾಗವನ್ನು ಬಳಸುವ ಅಧಿಕಾರವಷ್ಟೇ ಬಾಡಿಗೆದಾರನಿಗೆ ಇರುತ್ತದೆ ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ಈ ತೀರ್ಪು ಭೂಮಾಲೀಕರ ಹಕ್ಕುಗಳನ್ನು ಬಲಪಡಿಸುವ ಜತೆಗೆ ದಶಕಗಳಿಂದ ನಡೆದುಕೊಂಡು ಬಂದ ಬಾಡಿಗೆದಾರ-ಮಾಲೀಕ ವಿವಾದಗಳಿಗೆ ಸ್ವಲ್ಪಮಟ್ಟಿಗೆ ಸ್ಪಷ್ಟತೆ ನೀಡಿದಂತಾಗಿದೆ.

ನ್ಯಾಯಾಧೀಶರ ವಿರುದ್ಧವೇ ಭ್ರಷ್ಟಾಚಾರ ಆರೋಪ

ದೆಹಲಿ ಹೈಕೋರ್ಟ್ ನ್ಯಾ. ಯಶವಂತ ವರ್ವ ಅವರ ನಿವಾಸದಲ್ಲಿ ಮಾರ್ಚ್​ನಲ್ಲಿ ಸಂಭವಿಸಿದ ಅಗ್ನಿ ದುರಂತದ ವೇಳೆ ಸಾಕಷ್ಟು ನಗದು ಹಣ ಪತ್ತೆಯಾಗಿತ್ತು. ಅವರನ್ನು ಅಲಹಾಬಾದ್ ಹೈಕೋರ್ಟ್​ಗೆ ವರ್ಗಾಯಿಸಿದ ಸುಪ್ರೀಂಕೋರ್ಟ್​ನ ಕೊಲಿಜಿಯಂ, ಆಂತರಿಕ ತನಿಖೆ ನಡೆಸಿತು. ಅದರಲ್ಲಿ ಅವರು ತಪ್ಪಿತಸ್ಥರೆಂದು ಕಂಡುಬಂತು. ಅವರನ್ನು ನ್ಯಾಯಾಂಗ ಕಾರ್ಯದಿಂದ ದೂರವಿರಿಸಲಾಯಿತು. ಇದರ ಬೆನ್ನಲ್ಲೇ ನ್ಯಾ. ವರ್ವ ವಿರುದ್ಧ ಲೋಕಸಭೆಯಲ್ಲಿ ಮಹಾಭಿಯೋಗ ಪ್ರಸ್ತಾವನೆ ಮಂಡನೆಯಾಗಿದ್ದು, ಪ್ರಕ್ರಿಯೆ ಚಾಲ್ತಿಯಲ್ಲಿದೆ.

ಮೇಕೇದಾಟು ಅಬಾಧಿತ

ತಮಿಳುನಾಡು ಸಲ್ಲಿಸಿದ್ದ ತಕರಾರು ಅರ್ಜಿಯ ವಿಚಾರಣೆಯನ್ನು ನವೆಂಬರ್​ನಲ್ಲಿ ನಡೆಸಿದ ಸುಪ್ರೀಂ ಕೋರ್ಟ್ ಸಿಜೆಐ ಪೀಠ, ‘ಮೇಕೆದಾಟು ಯೋಜನೆ ಇನ್ನೂ ಆರಂಭಿಕ ಹಂತದಲ್ಲಿದ್ದು, ಯಾವುದೇ ನಿರ್ಮಾಣ ಕಾರ್ಯ ಪ್ರಾರಂಭವಾಗಿಲ್ಲ. ಈ ಯೋಜನೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ಕೇಂದ್ರ ಜಲ ಆಯೋಗದಂತಹ ತಜ್ಞ ಸಂಸ್ಥೆಗಳ ಪರಿಶೀಲನೆಯಲ್ಲಿದೆ. ಹೀಗಾಗಿ ನಾವು ಮಧ್ಯಪ್ರವೇಶ ಮಾಡುವುದಿಲ್ಲ’ ಎಂದಿತು. ಇದರಿಂದ ಮೊದಲ ಹಂತದಲ್ಲಿ ಮೇಕೆದಾಟು ವಿಚಾರವಾಗಿ ಕರ್ನಾಟಕಕ್ಕೆ ಜಯ ಸಿಕ್ಕಂತಾಯಿತು.

ಭಾಷೆ ಬೇರೆ, ಧರ್ಮ ಬೇರೆ

ಮಹಾರಾಷ್ಟ್ರದ ಅಕೋಲಾ ಜಿಲ್ಲೆಯ ಪಾಟುರ್​ನ ಪುರಸಭೆಯ ನಾಮಫಲಕದಲ್ಲಿ ಮರಾಠಿ ಜತೆಗೆ ಉರ್ದು ಭಾಷೆ ಬಳಸಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಏಪ್ರಿಲ್​ನಲ್ಲಿ ಸುಪ್ರೀಂ ಕೋರ್ಟ್ ತಿರಸ್ಕರಿಸಿತ್ತು. ಭಾಷೆಯನ್ನು ಧರ್ಮ ಎಂದು ಪರಿಗಣಿಸುವುದು ಸೂಕ್ತವಲ್ಲ ಎಂದು ಹೇಳಿರುವ ನ್ಯಾ. ಸುಧಾಂಶು ಧುಲಿಯಾ ಮತ್ತು ನ್ಯಾ. ಕೆ. ವಿನೋದಚಂದ್ರನ್ ನೇತೃತ್ವದ ಪೀಠ, ‘ಉರ್ದು ಕೇವಲ ಮುಸ್ಲಿಮರ ಭಾಷೆ ಎಂಬ ಕಲ್ಪನೆ ಸರಿಯಲ್ಲ. ಭಾಷೆಯನ್ನು ಧರ್ಮವೆಂದು ಪರಿಗಣಿಸುವುದು ಸೂಕ್ತವಲ್ಲ. ಇಂತಹ ನಂಬಿಕೆಗಳು ವಿವಿಧತೆಯಲ್ಲಿ ಏಕತೆಯ ಪರಿಕಲ್ಪನೆಯನ್ನು ದುರ್ಬಲಗೊಳಿಸುತ್ತದೆ’ ಎಂದು ಅಭಿಪ್ರಾಯಪಟ್ಟಿತು.

ಮಸೂದೆ ಅಂಕಿತಕ್ಕೆ ಕಾಲಮಿತಿ ಇಲ್ಲ

ಶಾಸನಸಭೆಯಲ್ಲಿ ಅಂಗೀಕರಿಸಿ, ಸರ್ಕಾರಗಳು ಕಳಿಸುವ ಮಸೂದೆಗಳಿಗೆ ಅಂಕಿತ ಹಾಕಲು ರಾಜ್ಯಪಾಲರಿಗೆ, ರಾಷ್ಟ್ರಪತಿಗೆ ಯಾವುದೇ ಕಾಲಮಿತಿ ವಿಧಿಸಲು ಸಾಧ್ಯವಿಲ್ಲ ಎಂಬ ಆದೇಶವನ್ನು ಸುಪ್ರೀಂಕೋರ್ಟ್​ನ ಸಾಂವಿಧಾನಿಕ ಪೀಠ ನವೆಂಬರ್​ನಲ್ಲಿ ನೀಡಿತು. ತಮಿಳುನಾಡು ಸರ್ಕಾರ ಮತ್ತು ರಾಜ್ಯಪಾಲರ ನಡುವಿನ ಬಿಕ್ಕಟ್ಟಿನ ವಿಚಾರಕ್ಕೆ ಸಂಬಂಧಿಸಿದಂತೆ ರಾಷ್ಟ್ರಪತಿ ದ್ರೌಪದಿ ಮುಮು ಅವರ ಪ್ರಶ್ನೆಗಳಿಗೆ ಪಂಚ ಸದಸ್ಯ ಪೀಠ ಈ ಸ್ಪಷ್ಟ ಉತ್ತರ ನೀಡಿತು. ರಾಷ್ಟ್ರಪತಿ ಅಥವಾ ರಾಜ್ಯಪಾಲರ ನಡೆ ನ್ಯಾಯಸಮ್ಮತವಲ್ಲ ಅಥವಾ ಕಾನೂನು ಉಲ್ಲಂಘನೆಯಾಗುತ್ತಿದೆ ಎಂದಾದರೆ ಮಾತ್ರ ನ್ಯಾಯಾಂಗದ ಪರಿಶೀಲನೆಗೆ ಒಳಪಡಿಸಬಹುದು ಎಂದಿತು.

ಇದಕ್ಕೆ ಮುನ್ನ, ತಮಿಳುನಾಡು ರಾಜ್ಯಪಾಲರ ಪ್ರಕರಣದಲ್ಲಿ ಏ.8ರಂದು ನ್ಯಾ. ಜೆ.ಬಿ. ಪರ್ದಿವಾಲಾ ನೇತೃತ್ವದ ಪೀಠವು ‘ಶಾಸಕಾಂಗ ಅಂಗೀಕರಿಸಿದ ಮಸೂದೆಗಳನ್ನು ರಾಜ್ಯಪಾಲರು ಅನಿರ್ದಿಷ್ಟ ಕಾಲದವರೆಗೆ ತಡೆ ಹಿಡಿಯುವಂತಿಲ್ಲ’ ಎಂದಿತ್ತು. ‘ಸಂವಿಧಾನದ 200ನೇ ವಿಧಿಯಡಿ ರಾಜ್ಯಪಾಲರು ಮಸೂದೆಗೆ ಒಪ್ಪಿಗೆ ನೀಡಬೇಕು ಅಥವಾ ಮರು ಪರಿಶೀಲನೆಗೆ ಕಳಿಸಬೇಕು, ಅನಗತ್ಯವಾಗಿ ವಿಳಂಬ ಮಾಡುವುದು ಕಾನೂನುಬಾಹಿರ’ ಎಂದು ಅಭಿಪ್ರಾಯಪಟ್ಟಿತ್ತು. ಈ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಮುಮು ಸುಪ್ರೀಂಕೋರ್ಟ್​ನಿಂದ ಸ್ಪಷ್ಟನೆ ಬಯಸಿದ್ದರು.

ಅರಾವಳಿ ಅಪಾಯದ ಕೂಗು

ದಿಲ್ಲಿ, ಹರಿಯಾಣ, ರಾಜಸ್ಥಾನ, ಗುಜರಾತನ್ನು ಒಳಗೊಂಡ ಅರಾವಳಿ ಪ್ರದೇಶದಲ್ಲಿ ನೂರು ಮೀಟರ್​ಗಿಂತ ಕಡಿಮೆ ಎತ್ತರ ಹೊಂದಿರುವ ಗುಡ್ಡಬೆಟ್ಟಗಳಲ್ಲಿ ಗಣಿಗಾರಿಕೆಗೆ ಯಾವುದೇ ಆಕ್ಷೇಪವಿಲ್ಲ ಎಂದು ಸುಪ್ರೀಂಕೋರ್ಟ್​ಗೆ ಹೇಳಿದ್ದು ದೇಶಾದ್ಯಂತ ಭಾರಿ ಚರ್ಚೆಗೆ ಕಾರಣವಾಯಿತು. ಇದರ ಬಗ್ಗೆ ಪರಿಸರವಾದಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಈ ತೀರ್ಪು ಬರುವುದಕ್ಕೆ ಕೇಂದ್ರ ಸರ್ಕಾರದ ಶಿಫಾರಸು ಮೂಲಕಾರಣ ಎಂಬ ಹಿನ್ನೆಲೆಯಲ್ಲಿ ಕೇಂದ್ರದ ವಿರುದ್ಧವೂ ಪರಿಸರಾಸಕ್ತರು ಆಕ್ರೋಶ ವ್ಯಕ್ತಪಡಿಸಿದ್ದರು.

ಮಸೂದೆ ಅಂಕಿತಕ್ಕೆ ಕಾಲಮಿತಿ ಇಲ್ಲ

ಶಾಸನಸಭೆಯಲ್ಲಿ ಅಂಗೀಕರಿಸಿ, ಸರ್ಕಾರಗಳು ಕಳಿಸುವ ಮಸೂದೆಗಳಿಗೆ ಅಂಕಿತ ಹಾಕಲು ರಾಜ್ಯಪಾಲರಿಗೆ, ರಾಷ್ಟ್ರಪತಿಗೆ ಯಾವುದೇ ಕಾಲಮಿತಿ ವಿಧಿಸಲು ಸಾಧ್ಯವಿಲ್ಲ ಎಂಬ ಆದೇಶವನ್ನು ಸುಪ್ರೀಂಕೋರ್ಟ್​ನ ಸಾಂವಿಧಾನಿಕ ಪೀಠ ನವೆಂಬರ್​ನಲ್ಲಿ ನೀಡಿತು. ತಮಿಳುನಾಡು ಸರ್ಕಾರ ಮತ್ತು ರಾಜ್ಯಪಾಲರ ನಡುವಿನ ಬಿಕ್ಕಟ್ಟಿನ ವಿಚಾರಕ್ಕೆ ಸಂಬಂಧಿಸಿದಂತೆ ರಾಷ್ಟ್ರಪತಿ ದ್ರೌಪದಿ ಮುಮು ಅವರ ಪ್ರಶ್ನೆಗಳಿಗೆ ಪಂಚ ಸದಸ್ಯ ಪೀಠ ಈ ಸ್ಪಷ್ಟ ಉತ್ತರ ನೀಡಿತು. ರಾಷ್ಟ್ರಪತಿ ಅಥವಾ ರಾಜ್ಯಪಾಲರ ನಡೆ ನ್ಯಾಯಸಮ್ಮತವಲ್ಲ ಅಥವಾ ಕಾನೂನು ಉಲ್ಲಂಘನೆಯಾಗುತ್ತಿದೆ ಎಂದಾದರೆ ಮಾತ್ರ ನ್ಯಾಯಾಂಗದ ಪರಿಶೀಲನೆಗೆ ಒಳಪಡಿಸಬಹುದು ಎಂದಿತು.

ಇದಕ್ಕೆ ಮುನ್ನ, ತಮಿಳುನಾಡು ರಾಜ್ಯಪಾಲರ ಪ್ರಕರಣದಲ್ಲಿ ಏ. 8ರಂದು ನ್ಯಾ. ಜೆ.ಬಿ. ಪರ್ದಿವಾಲಾ ನೇತೃತ್ವದ ಪೀಠವು ‘ಶಾಸಕಾಂಗ ಅಂಗೀಕರಿಸಿದ ಮಸೂದೆಗಳನ್ನು ರಾಜ್ಯಪಾಲರು ಅನಿರ್ದಿಷ್ಟ ಕಾಲದವರೆಗೆ ತಡೆ ಹಿಡಿಯುವಂತಿಲ್ಲ’ ಎಂದಿತ್ತು. ‘ಸಂವಿಧಾನದ 200ನೇ ವಿಧಿಯಡಿ ರಾಜ್ಯಪಾಲರು ಮಸೂದೆಗೆ ಒಪ್ಪಿಗೆ ನೀಡಬೇಕು ಅಥವಾ ಮರು ಪರಿಶೀಲನೆಗೆ ಕಳಿಸಬೇಕು, ಅನಗತ್ಯವಾಗಿ ವಿಳಂಬ ಮಾಡುವುದು ಕಾನೂನುಬಾಹಿರ’ ಎಂದು ಅಭಿಪ್ರಾಯಪಟ್ಟಿತ್ತು. ಈ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಮುಮು ಸುಪ್ರೀಂಕೋರ್ಟ್​ನಿಂದ ಸ್ಪಷ್ಟನೆ ಬಯಸಿದ್ದರು.

ರಾಜಕಾರಣಿಗಳಿಗೆ ಸಿಹಿ-ಕಹಿ

ಈ ವರ್ಷ ರಾಜ್ಯದ ಪ್ರಮುಖ ರಾಜಕಾರಣಿಗಳ ವಿರುದ್ಧದ ಪ್ರಕರಣಗಳಲ್ಲಿ ಹೈಕೋರ್ಟ್ ಮಹತ್ವದ ಆದೇಶಗಳನ್ನು ನೀಡಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧದ ಪೋಕ್ಸೋ ಪ್ರಕರಣದ ತನಿಖೆಗೆ ನ್ಯಾಯಾಲಯ ಅನುಮತಿ ನೀಡಿದರೂ, ಬಂಧನದಿಂದ ರಕ್ಷಣೆ ಒದಗಿಸಿದೆ. ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಶಾಸಕ ಬೈರತಿ ಬಸವರಾಜ್ ವಿರುದ್ಧ ‘ಕೊಕಾ’ ಕಾಯ್ದೆ ಅನ್ವಯಿಸಿದ್ದ ಸಿಐಡಿ ಆದೇಶವನ್ನು ರದ್ದುಪಡಿಸಿ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಮೇಲಿನ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಕ್ಕೆ ತಡೆ ನೀಡಿದೆ. ಜೀವಾವಧಿ ಶಿಕ್ಷೆ ಪ್ರಶ್ನಿಸಿರುವ ಪ್ರಜ್ವಲ್ ರೇವಣ್ಣ ಮೇಲ್ಮನವಿಯನ್ನು ವಿಚಾರಣೆಗೆ ಸ್ವೀಕರಿಸಿದ್ದರೂ ಮಧ್ಯಂತರ ಪರಿಹಾರ ನೀಡಲು ನ್ಯಾಯಾಲಯ ನಿರಾಕರಿಸಿದೆ. ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ದಾಖಲಿಸಿರುವ ಮಾನಹಾನಿ ಪ್ರಕರಣದ ವಿಚಾರಣೆ ಪ್ರಗತಿಯಲ್ಲಿದೆ.

ಮುಡಾ ಕೇಸ್ ತನಿಖೆಗೆ ಹಸಿರುನಿಶಾನೆ

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ನಿವೇಶನ ಅಕ್ರಮಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ರಾಜ್ಯಪಾಲರು ನೀಡಿದ್ದ ಅನುಮತಿಯನ್ನು ಹೈಕೋರ್ಟ್ ಸೆಪ್ಟೆಂಬರ್ 24ರಂದು ಎತ್ತಿಹಿಡಿಯಿತು. ರಾಜ್ಯಪಾಲರ ಕ್ರಮ ಪ್ರಶ್ನಿಸಿ ಸಿಎಂ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ನ್ಯಾ. ಎಂ. ನಾಗಪ್ರಸನ್ನ, ತನಿಖೆ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದರು.

ಬೈಕ್ ಟ್ಯಾಕ್ಸಿಗೆ ನಿಷೇಧ

ಮೋಟಾರು ವಾಹನ ಕಾಯ್ದೆಯಡಿ ರಾಜ್ಯ ಸರ್ಕಾರ ಸೂಕ್ತ ಮಾರ್ಗಸೂಚಿ ರೂಪಿಸುವವರೆಗೆ ಬೈಕ್ ಟ್ಯಾಕ್ಸಿಗಳನ್ನು ಹೈಕೋರ್ಟ್ ನಿಷೇಧಿಸಿತು. ಇದರಿಂದ ಬೈಕ್ ಟ್ಯಾಕ್ಸಿ ಅಗ್ರಿಗೇಟರ್​ಗಳ ಸೇವೆ ಜೂ.16ರಿಂದ ಅಧಿಕೃತವಾಗಿ ಸ್ಥಗಿತಗೊಂಡಿದೆ. ಆದರೆ ಚಾಲಕರಿಗೆ ನೇರವಾಗಿ ಪ್ರಯಾಣಿಕರ ಸಂಪರ್ಕವನ್ನು ಆಪ್​ಗಳು ಒದಗಿಸುತ್ತಿವೆ. ಬೈಕ್ ಟ್ಯಾಕ್ಸಿಗಳ ಕುರಿತು ವಿಳಂಬ ನೀತಿ ಅನುಸರಿಸುತ್ತಿರುವ ಸರ್ಕಾರದ ವರ್ತನೆಗೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.

ಸಮೀಕ್ಷೆ ತಡೆಗೆ ನಿರಾಕರಣೆ

ರಾಜ್ಯ ಸರ್ಕಾರದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ತಡೆಯಾಜ್ಞೆ ನೀಡಲು ಹೈಕೋರ್ಟ್ ಸೆಪ್ಟೆಂಬರ್ 25ರಂದು ನಿರಾಕರಿಸಿತು. ಸಮೀಕ್ಷೆಯಲ್ಲಿ ಭಾಗವಹಿಸುವುದು ಸ್ವಯಂಪ್ರೇರಿತವಾಗಿದ್ದು, ಯಾವುದೇ ನಾಗರಿಕರನ್ನು ಮಾಹಿತಿ ನೀಡುವಂತೆ ಒತ್ತಾಯಿಸಬಾರದು, ಜನರ ದತ್ತಾಂಶದ ಗೌಪ್ಯತೆ ಕಾಪಾಡಬೇಕು ಎಂದು ಸೂಚಿಸಿತು.

3,644 ಹುದ್ದೆ ನೇಮಕಕ್ಕೆ ಅಸ್ತು

ಮೀಸಲಾತಿ ಪ್ರಮಾಣವನ್ನು ಶೇಕಡ 50ರಿಂದ 56ಕ್ಕೆ ಹೆಚ್ಚಿಸಿರುವ 2022ರ ಕರ್ನಾಟಕ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳ (ಶೈಕ್ಷಣಿಕ ಸಂಸ್ಥೆಗಳು ಮತ್ತು ಸರ್ಕಾರಿ ಸೇವೆಗಳ ನೇಮಕಾತಿ ಮತ್ತು ಹುದ್ದೆಗಳಲ್ಲಿ ಮೀಸಲಾತಿ) ಕಾಯ್ದೆ ಆಧರಿಸಿ ಹೊಸ ನೇಮಕಾತಿ ಮತ್ತು ಬಡ್ತಿ ಆದೇಶಗಳನ್ನು ಹೊರಡಿಸಬಾರದು ಎಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನ. 28ರಂದು ನಿರ್ದೇಶಿಸಿತು. ಆದರೆ, ರಾಜ್ಯ ಲೋಕಸೇವಾ ಆಯೋಗ ಆರಂಭಿಸಿರುವ 3,644 ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ಷರತ್ತುಬದ್ಧ ಅನುಮತಿ ನೀಡಿತು.

ಆರೆಸ್ಸೆಸ್ ಪಥಸಂಚಲನ

ಕಲಬುರಗಿಯ ಚಿತ್ತಾಪುರದಲ್ಲಿ ಆರೆಸ್ಸೆಸ್ ಪಥಸಂಚಲನಕ್ಕೆ ಸಂಬಂಧಿಸಿದಂತೆ ಉಂಟಾಗಿದ್ದ ವಿವಾದಗಳು ನ್ಯಾಯಾಲಯದ ಮಧ್ಯಸ್ಥಿಕೆಯಿಂದ ಶಾಂತಿಯುತವಾಗಿ ಪರಿಹಾರವಾದವು. ಹೈಕೋರ್ಟ್ ನಿರ್ದೇಶನ ದಂತೆ ಕಲಬುರಗಿ ಮತ್ತು ಬೆಂಗಳೂರಿನಲ್ಲಿ ಶಾಂತಿ ಸಭೆಗಳನ್ನು ನಡೆದವು. ನವೆಂಬರ್ 16ರ ಪಥಸಂಚಲನಕ್ಕೆ ಆರೆಸ್ಸೆಸ್​ಗೆ ನ್ಯಾಯಾಲಯ ಅನುಮತಿ ನೀಡಿತು.

ಸಕ್ಕರೆ ಕಾರ್ಖಾನೆಗೆ ತರಾಟೆ

ರಾಜ್ಯ ಸರ್ಕಾರ ನಿಗದಿಪಡಿಸಿರುವ ಹೆಚ್ಚುವರಿ ಎಫ್​ಆರ್​ಪಿ ದರ ಪಾವತಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಮೆಟ್ಟಿಲೇರಿರುವ ಸಕ್ಕರೆ ಕಾರ್ಖಾನೆಗಳನ್ನು ಹೈಕೋರ್ಟ್ ವಿಚಾರಣೆ ವೇಳೆ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು. ಸರ್ಕಾರದ ನಿರ್ಧಾರಕ್ಕೆ ತಡೆ ನೀಡಲು ನಿರಾಕರಿಸಿತು. ರೈತರ ಹಿತದೃಷ್ಟಿಯಿಂದ ಕಬ್ಬು ನಿಯಂತ್ರಣ ಮಂಡಳಿಗೆ 10 ದಿನದೊಳಗೆ ಮನವಿ ಸಲ್ಲಿಸಲು ಮತ್ತು ಮಂಡಳಿಯು 3 ವಾರಗಳಲ್ಲಿ ನಿರ್ಧಾರ ತಿಳಿಸಲು ನ್ಯಾಯಾಲಯ ಆದೇಶಿಸಿತು. ಮುಂದಿನ ವಿಚಾರಣೆ ಫೆ.5ಕ್ಕೆ ನಿಗದಿಯಾಗಿದೆ.

ನಿರ್ಬಂಧಕ್ಕೆ ತಡೆಯಾಜ್ಞೆ

ರಸ್ತೆ, ಉದ್ಯಾನ, ಆಟದ ಮೈದಾನ ಸೇರಿ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ 10ಕ್ಕಿಂತ ಹೆಚ್ಚು ಮಂದಿ ಸಾಮಾಜಿಕ, ಸಾಂಸ್ಕೃತಿಕ ಅಥವಾ ಇನ್ನಾವುದೇ ಉದ್ದೇಶದಿಂದ ಅನುಮತಿಯಿಲ್ಲದೆ ಸೇರುವುದನ್ನು ನಿಷೇಧಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ ಅ. 28ರಂದು ಮಧ್ಯಂತರ ತಡೆಯಾಜ್ಞೆ ನೀಡಿತು. ಆದೇಶವನ್ನು ಪ್ರಶ್ನಿಸಿ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್​ನ ದ್ವಿಸದಸ್ಯ ಪೀಠ ವಜಾಗೊಳಿಸಿ ತಡೆಯಾಜ್ಞೆ ಮುಂದುವರಿಸಿತು.

ಬೆಳಗ್ಗೆ ತಡೆ, ಮಧ್ಯಾಹ್ನ ತೆರವು

ಕಾಯಂ, ಗುತ್ತಿಗೆ ಮತ್ತು ಹೊರಗುತ್ತಿಗೆ ಮಹಿಳಾ ಉದ್ಯೋಗಿಗಳಿಗೆ ತಿಂಗಳಿಗೆ ಒಂದು ದಿನ ವೇತನಸಹಿತ ಮುಟ್ಟಿನ ರಜೆ ನೀಡುವುದನ್ನು ಕಡ್ಡಾಯಗೊಳಿಸಿ ನ.20ರಂದು ರಾಜ್ಯ ಸರ್ಕಾರ ಹೊರಡಿಸಿದ ಆದೇಶವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಡಿ.9ರ ಬೆಳಗ್ಗೆ ವಿಚಾರಣೆ ನಡೆಸಿದ ನ್ಯಾ. ಜ್ಯೋತಿ ಮೂಲಿಮನಿ, ಸರ್ಕಾರದ ಆದೇಶಕ್ಕೆ ತಡೆ ನೀಡಿದರು. ಆದರೆ, ಅದೇ ದಿನ ಮಧ್ಯಾಹ್ನದ ವಿರಾಮದ ಮೊದಲು ಸರ್ಕಾರದ ಪರವಾಗಿ ಹಾಜರಾದ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಸರ್ಕಾರದ ವಾದ ಆಲಿಸಿ ನಂತರ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕಾಗಿ ಕೇಳಿಕೊಂಡರು. ಇದನ್ನು ನ್ಯಾಯಾಲಯ ಪರಿಗಣಿಸಿ ತಡೆ ತೆರವುಗೊಳಿಸಿತು.