ರಾಜಸ್ಥಾನ: ಶಾಲಾ ಮಕ್ಕಳು, ಶಿಕ್ಷಕರು ಸೇರಿದಂತೆ ಒಟ್ಟು 27 ಜನರಿಗೆ ಹೆಣ್ಣು ನಾಯಿಯೊಂದು ಕಚ್ಚಿದ ಘಟನೆ ರಾಜಸ್ಥಾನದ ಭರತ್ಪುರ ಜಿಲ್ಲೆಯ ಹಲೈನಾ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದಾದ್ಯಂತ ಹೆಣ್ಣು ನಾಯಿಯೊಂದು ಭಯಭೀತತೆಯನ್ನು ಸೃಷ್ಠಿಸಿದೆ. ಇದು ಶಾಲಾ ಮಕ್ಕಳು, ಶಿಕ್ಷಕರು ಮತ್ತು ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡುತ್ತಿದ್ದು, ಎಲ್ಲರೂ ಭಯಭೀತರಾಗಿದ್ದಾರೆ.
ಈ ಹೆಣ್ಣು ನಾಯಿ ಹಲಿನಾದ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆ ಮತ್ತು ಸರ್ಕಾರಿ ಸಂಸ್ಕೃತ ಹೈಯರ್ ಪ್ರೈಮರಿ ಶಾಲೆಯ ನಡುವೆ ಬಿಡು ಬಿಟ್ಟಿದೆ. ಬೆಳಿಗ್ಗೆಯಿಂದ ಸಂಜೆಯವರೆಗೆ ಆ ಪ್ರದೇಶದಲ್ಲಿ ಸುತ್ತಾಡುತ್ತಾ, ಇದ್ದಕ್ಕಿದ್ದಂತೆ ದಾಳಿ ಮಾಡುತ್ತದೆ. ಶಾಲೆಯಲ್ಲಿ ಓದುತ್ತಿರುವ 18 ಮಕ್ಕಳಿಗೆ ಕಚ್ಚಿದೆ, ಅವರಲ್ಲಿ ಹಲವರು ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ.
ಇಬ್ಬರು ಶಿಕ್ಷಕರಿಗೂ ಗಂಭೀರ ಗಾಯಗಳಾಗಿವೆ. ಮಕ್ಕಳು ಈಗ ಶಾಲೆಗೆ ಬರಲು ಹೆದರುತ್ತಿದ್ದಾರೆ ಮತ್ತು ತರಗತಿಯಲ್ಲಿ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ನಾಯಿ ಎಲ್ಲಿಂದಲೋ ಬಂದು ಮಕ್ಕಳ ಮೇಲೆ ದಾಳಿ ಮಾಡುತ್ತದೆ. ಇದು ಕಲಿಕೆಯ ವಾತಾವರಣವನ್ನು ಸಂಪೂರ್ಣವಾಗಿ ಅಸ್ತವ್ಯಸ್ತಗೊಳಿಸಿದೆ ಎಂದು ಶಿಕ್ಷಕರು ಹೇಳುತ್ತಾರೆ.
ಏಳು ಗ್ರಾಮಸ್ಥರಿಗೂ ಭಯ
ನಾಯಿಯ ಭಯ ಕೇವಲ ಶಾಲೆಗೆ ಮಾತ್ರ ಸೀಮಿತವಾಗಿಲ್ಲ. ಏಳು ಗ್ರಾಮಸ್ಥರಿಗೆ ಇದು ಕಚ್ಚಿದೆ. ಜನರು ತಮ್ಮ ಮನೆಗಳನ್ನು ಬಿಡಲು ಹಿಂಜರಿಯುತ್ತಿದ್ದಾರೆ. ಬೀದಿಯಲ್ಲಿ ನಾಯಿ ಇದ್ದಕ್ಕಿದ್ದಂತೆ ಅವರ ಮೇಲೆ ಎರಗಿ ಓಡಿಹೋಗುತ್ತದೆ ಎಂದು ಗ್ರಾಮಸ್ಥರೊಬ್ಬರು ಹೇಳಿದರು. ಇದು ಪಟ್ಟಣದಾದ್ಯಂತ ಭಯದ ವಾತಾವರಣವನ್ನು ಸೃಷ್ಟಿಸಿದೆ.
"ಈ ಸಮಸ್ಯೆಯ ಬಗ್ಗೆ ನಾವು ಸ್ಥಳೀಯ ಆಡಳಿತ ಮತ್ತು ಅರಣ್ಯ ಇಲಾಖೆಗೆ ಪದೇ ಪದೇ ತಿಳಿಸಿದ್ದೇವೆ. ನಾವು ಟೋಲ್-ಫ್ರೀ ಸಂಖ್ಯೆ 181 ಗೆ ದೂರು ನೀಡಿದ್ದೇವೆ, ಆದರೆ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ" ಎಂದು ಶಾಲಾ ಶಿಕ್ಷರು ಆರೋಪಿಸಿದ್ದಾರೆ(ಏಜೆನ್ಸೀಸ್).