Mamata Banerjee | ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ
ಕೋಲ್ಕತ್ತಾ: ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ, ಪಶ್ಚಿಮ ಬಂಗಾಳದ ರಾಜಕೀಯ ವಾತಾವರಣ ಬಿಸಿಯಾಗುತ್ತಿದ್ದು, ಬಿಜೆಪಿಯ ಬಂಗಾಳ ಘಟಕವು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯನ್ನು(Mamata Banerjee) ಗುರಿಯಾಗಿಸಿಕೊಂಡು ಮಾಡಿದ್ದ ಪೋಸ್ಟ್ ಹೊಸ ವಿವಾದ ಸೃಷ್ಟಿಸಿದೆ.
ಸರ್ವಾಧಿಕಾರಿಗೆ ದಿಗಿಲು
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ, ಬ್ಯಾನರ್ಜಿಯನ್ನು ಸರ್ವಾಧಿಕಾರಿ ಎಂದು ಬಣ್ಣಿಸಿದೆ. ಅಲ್ಲದೆ, ದೀದಿಯನ್ನು ಜರ್ಮನಿಯ ಅಡಾಲ್ಫ್ ಹಿಟ್ಲರ್‌ಗೆ ಹೋಲಿಸಿದೆ. ಈ ಪೋಸ್ಟ್‌ನಲ್ಲಿ ಬ್ಯಾನರ್ಜಿಯ ಮುಖವನ್ನು ಕುಖ್ಯಾತ ಜರ್ಮನ್ ಆಡಳಿತಗಾರನ ಮುಖದೊಂದಿಗೆ ಜೋಡಿಸಲಾದ ಚಿತ್ರವಿದ್ದು, ಸರ್ವಾಧಿಕಾರಿ ಜರ್ಜರಿತನಾಗಿದ್ದಾನೆ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದೆ. ಬಿಜೆಪಿ ಹೊಸ ಪೋಸ್ಟ್ ಬಂಗಾಳದಲ್ಲಿ ಹೊಸ ರಾಜಕೀಯ ಬಿರುಗಾಳಿಯನ್ನು ಎಬ್ಬಿಸಿದೆ.
ಬಂಗಾಳದಲ್ಲಿ ಬಿಜೆಪಿ - ಟಿಎಂಸಿ ಸಂಘರ್ಷ
ಪಶ್ಚಿಮ ಬಂಗಾಳದಲ್ಲಿ ಈಗಾಗಲೇ ಬಿರುಸಿನ ರಾಜಕೀಯ ವಾತಾವರಣದ ಹಿನ್ನೆಲೆಯಲ್ಲಿ ಇತ್ತೀಚಿನ ಉದ್ವಿಗ್ನತೆ ಉಂಟಾಗಿದೆ. ಅರ್ಜೆಂಟೀನಾದ ಫುಟ್ಬಾಲ್ ದಂತಕಥೆ ಲಿಯೋನೆಲ್ ಮೆಸ್ಸಿ ಅವರ ಹೆಚ್ಚು ಪ್ರಚಾರ ಪಡೆದ GOAT ಪ್ರವಾಸದ ಸಂದರ್ಭದಲ್ಲಿ ಫುಟ್ಬಾಲ್ ಅಭಿಮಾನಿಗಳು ಕೋಲ್ಕತ್ತಾ ಕ್ರೀಡಾಂಗಣವನ್ನು ಧ್ವಂಸ ಮಾಡಿದ ನಂತರ ಉದ್ವಿಗ್ನತೆ ಇನ್ನೂ ಹೆಚ್ಚಾಯಿತು. ಅಲ್ಲದೆ, ಕಳಪೆ ನಿರ್ವಹಣೆಯಿಂದಾಗಿ ಮೈದಾನದಲ್ಲಿ ಕೇವಲ 10 ನಿಮಿಷಗಳ ಕಾಲ ಕಳೆದ ನಂತರ ಮೆಸ್ಸಿ ಕ್ರೀಡಾಂಗಣವನ್ನು ತೊರೆದಿದ್ದರು. ಇದರಿಂದಾಗಿ ಟಿಕೆಟ್‌ಗಳಿಗಾಗಿ ಭಾರಿ ಮೊತ್ತವನ್ನು ಪಾವತಿಸಿದ್ದ ಅಭಿಮಾನಿಗಳು ಕೋಪಗೊಂಡರು ಮತ್ತು ನಿರಾಶೆಗೊಂಡರು.
ಈ ಘಟನೆಯ ನಂತರ, ಸಿಎಂ ಬ್ಯಾನರ್ಜಿ ಕ್ಷಮೆಯಾಚಿಸಿದರು ಮತ್ತು ವಿಧ್ವಂಸಕ ಕೃತ್ಯದಿಂದ ತುಂಬಾ ಅಸಮಾಧಾನಗೊಂಡಿದ್ದೇನೆ ಮತ್ತು ಆಘಾತಕ್ಕೊಳಗಾಗಿದ್ದೇನೆ ಎಂದು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದರು. ಅದರೆ, ಬಿಜೆಪಿ ಇದನ್ನು ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ ಎಂದು ಆರೋಪಿಸಿತು. ಈ ಘಟನೆಯನ್ನು ಪಶ್ಚಿಮ ಬಂಗಾಳ ಮತ್ತು ಫುಟ್ಬಾಲ್ ಕ್ರೀಡೆ ಎರಡಕ್ಕೂ ಅವಮಾನ ಎಂದು ಬಿಜೆಪಿ ಕಿಡಿಕಾರಿತ್ತು.
ಈ ಅವ್ಯವಸ್ಥೆಗೆ ತೃಣಮೂಲ ಕಾಂಗ್ರೆಸ್ ಸರ್ಕಾರವೇ ಕಾರಣ ಎಂದು ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ಆರೋಪಿಸಿವೆ. ಅದರೆ, ಆಡಳಿತ ಪಕ್ಷವು ಈ ಘಟನೆಯಿಂದ ದೂರ ಉಳಿದಿದ್ದು, ಈ ಕಾರ್ಯಕ್ರಮವನ್ನು ಖಾಸಗಿ ಸಂಸ್ಥೆ ಆಯೋಜಿಸಿದೆಯೇ ಹೊರತು ರಾಜ್ಯ ಸರ್ಕಾರವಲ್ಲ ಎಂದು ಸ್ಪಷ್ಟಪಡಿಸಿದೆ.
ಘಟನೆಗೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟ ಒಂದು ದಿನದ ನಂತರ, ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಅವರ GOAT ಇಂಡಿಯಾ ಟೂರ್ 2025 ರ ಪ್ರವರ್ತಕ ಮತ್ತು ಸಂಘಟಕ ಸತಾದ್ರು ದತ್ತ ಅವರನ್ನು ಭಾನುವಾರ ಬಿಧಾನ್ನಗರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು ಅವರನ್ನು 14 ದಿನಗಳ ಪೊಲೀಸ್ ಕಸ್ಟಡಿಗೆ ನೀಡಿದೆ,(ಏಜೆನ್ಸೀಸ್).