ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಬಾಬರಿ ಮಸೀದಿ, ಹುಮಾಯೂನ್ ಕಬೀರ್
- ಮುರ್ಷಿದಾಬಾದ್‌ನಲ್ಲಿ ಬಾಬರಿ ಮಸೀದಿ ಎಂಬ ಹೆಸರಿನ ಮಸೀದಿ ನಿರ್ಮಾಣ ಆರಂಭ
- ಮಸೀದಿ ನಿರ್ಮಾಣ ಕಾರ್ಯಕ್ಕೆ ಮುಂದಾದ ಹುಮಾಯೂನ್ ಕಬೀರ್
- ಹುಮಾಯೂನ್ ಕಬೀರ್ ತೃಣಮೂಲ ಕಾಂಗ್ರೆಸ್ನಿಂದ ಉಚ್ಛಾಟಿತಗೊಂಡ ಶಾಸಕ
- 2026 ರ ಬಂಗಾಳ ಚುನಾವಣೆಯಲ್ಲಿ 249 ಸ್ಥಾನಗಳಲ್ಲಿ 135 ಸ್ಥಾನಗಳಲ್ಲಿ ಸ್ಪರ್ಧಿಸುವುದಾಗಿ ಹೇಳಿಕೆ
ಪಶ್ಚಿಮ ಬಂಗಾಳ: ತೃಣಮೂಲ ಕಾಂಗ್ರೆಸ್ನಿಂದ ಉಚ್ಛಾಟಿತಗೊಂಡ ಶಾಸಕ ಹುಮಾಯೂನ್ ಕಬೀರ್ (Humayun Kabir) ಮುರ್ಷಿದಾಬಾದ್‌ನಲ್ಲಿ ಬಾಬರಿ ಮಸೀದಿ ಎಂಬ ಹೆಸರಿನ ಮಸೀದಿ ನಿರ್ಮಾಣ ಪ್ರಕ್ರಿಯೆಯನ್ನು ಪ್ರಾರಂಭಿಸಲಿದ್ದು, ನೂರಾರು ಧರ್ಮಗುರುಗಳಿಂದ ಕುರಾನ್ ಪಠಣ ಸೇರಿದಂತೆ ಧಾರ್ಮಿಕ ವಿಧಿವಿಧಾನಗಳ ನಂತರ ಅಡಿಪಾಯ ಹಾಕಲಾಗುವುದು ಎಂದು ತಿಳಿಸಿದ್ದಾರೆ.
ಮಸೀದಿ ನಿರ್ಮಾಣವು ಎರಡು ವರ್ಷಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ, ಅಲ್ಲಾಹನ ಕೃಪೆ ಮತ್ತು ಆಶೀರ್ವಾದದಿಂದ, ನಮ್ಮ ಬಾಬರಿ ಮಸೀದಿ ನಿರ್ಮಾಣವಾಗಲಿದೆ ಎಂದು ಕಬೀರ್ ಹೇಳಿದರು.
ಇದನ್ನು ವಿರೋಧಿಸುತ್ತಿರುವವರಿಗೆ, ನಾನು ನಮ್ಮಿಂದ ದೂರ ಸರಿಯಿರಿ ಎಂದು ಹೇಳುತ್ತೇನೆ. ಜನರು ತಮ್ಮದೇ ಆದ ಧರ್ಮಗಳನ್ನು ಅನುಸರಿಸಲು ಮತ್ತು ದೇವಾಲಯ, ಚರ್ಚ್ ಅಥವಾ ಅವರು ಬಯಸಿದ ಯಾವುದೇ ಕಟ್ಟಡವನ್ನು ನಿರ್ಮಿಸಲು ಸ್ವತಂತ್ರರಾಗಿದ್ದಾರೆ ಎಂದು ಅವರು ಹೇಳಿದರು.
ಸ್ವಪಕ್ಷದಿಂದಲೇ ವಜಾಗೊಂಡ ಕಬೀರ್
ಡಿಸೆಂಬರ್ 1992 ರಲ್ಲಿ ಬಲಪಂಥೀಯ ಗುಂಪೊಂದು ಕೆಡವಿದ್ದ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ 16 ನೇ ಶತಮಾನದ ಮಸೀದಿಯಾದ ಬಾಬರಿ ಮಸೀದಿಯನ್ನು ಪುನರ್ನಿರ್ಮಿಸುವ ಯೋಜನೆಯನ್ನು ಕಬೀರ್ ಘೋಷಿಸಿದ ನಂತರ, ಮಾರ್ಚ್/ಏಪ್ರಿಲ್‌ನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಬಂಗಾಳದಲ್ಲಿ ಕಬೀರ್ ರಾಜಕೀಯ ಬಿರುಗಾಳಿ ಎಬ್ಬಿಸಿದರು.
ಈ ಘೋಷಣೆಯು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ತೃಣಮೂಲ ಮತ್ತು ಭಾರತೀಯ ಜನತಾ ಪಕ್ಷದ ನಡುವೆ ದೇವಾಲಯ vs ಮಸೀದಿ ಎಂಬ ಯುದ್ಧಕ್ಕೆ ಕಾರಣವಾಯಿತು. ತೃಣಮೂಲ ಪಕ್ಷವು ತನ್ನ ಜಾತ್ಯತೀತತೆಯನ್ನು ರುಜುವಾತು ಪಡಿಸಲು ಕಬೀರ್ ಅವರನ್ನು ಪಕ್ಷದಿಂದ ಹೊರಹಾಕಿತು.
ಪಕ್ಷದಿಂದ ಹೊರಬಿದ್ದ ಕಬೀರ್ ಜನತಾ ಉನ್ನಯನ್ ಪಕ್ಷವನ್ನು ಸೇರಿಕೊಂಡು ತಮ್ಮನ್ನು ಬಂಗಾಳ ರಾಜಕೀಯದ ಗೇಮ್ ಚೇಂಜರ್ ಎಂದು ಕರೆದುಕೊಂಡ ಅವರು 2026 ರ ಬಂಗಾಳ ಚುನಾವಣೆಯಲ್ಲಿ ಒಟ್ಟು 249 ಸ್ಥಾನಗಳಲ್ಲಿ 135 ಸ್ಥಾನಗಳಲ್ಲಿ ಸ್ಪರ್ಧಿಸುವುದಾಗಿ ಹೇಳಿದರು. ಜೆಯುಪಿ ತೃಣಮೂಲವನ್ನು ಸೋಲಿಸುತ್ತದೆ ಎಂದು ಅವರು ಹೇಳಿದರು.
ಕಬೀರ, ಓವೈಸಿ ಮೈತ್ರಿ
ಜೆಯುಪಿ - ಎಐಎಂಐಎಂ ಮಾತುಕತೆಗಳನ್ನು ದೃಢಪಡಿಸದಿದ್ದರೂ 2026 ರ ಚುನಾವಣೆಯಲ್ಲಿ ಅಸಾದುದ್ದೀನ್ ಓವೈಸಿ ಅವರೊಂದಿಗೆ ಕಬೀರ್ ಮೈತ್ರಿ ಮಾಡಿಕೊಳ್ಳುವ ನಿರೀಕ್ಷೆಯಿದೆ. ರಾಜ್ಯದ 249 ಸ್ಥಾನಗಳಲ್ಲಿ ಒಟ್ಟು 135 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಎಂದು ಕಬೀರ್ ಈಗಾಗಲೇ ತಿಳಿಸಿದ್ದಾರೆ.
ತೃಣಮೂಲ ಕಾಂಗ್ರೆಸ್‌ಗೆ ಮುಸ್ಲಿಮರು ಪ್ರಮುಖ ಮತಬ್ಯಾಂಕ್ ಆಗಿದ್ದು, ಆಡಳಿತ ಪಕ್ಷವು ಈಗ ಆ ಮತಗಳನ್ನು ಕಬೀರ್ ಮತ್ತು ಓವೈಸಿಗೆ ಕಳೆದುಕೊಳ್ಳುವುದನ್ನು ತಪ್ಪಿಸಬೇಕು. ಹಾಗೆಯೇ ಬಿಜೆಪಿ 2021 ರ ಚುನಾವಣೆಗಿಂತ ಹೆಚ್ಚು ಬಲಿಷ್ಟವಾಗಿದ್ದು, ಈ ಭಾರಿ ಇನ್ನೂ ಹೆಚ್ಚಿನ ಸ್ಥಾನಗಳನ್ನು ಪಡೆಯಲಿದೆ ಎನ್ನುವುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ,(ಏಜನ್ಸೀಸ್).