ಬಾಲಕನಿಗೆ ಬಿಯರ್ ಮತ್ತು ಸಿಗರೇಟ್ ಸೇದಿಸುತ್ತಿರುವ ವ್ಯಕ್ತಿ
- ಚಿಕ್ಕ ಹುಡುಗನಿಗೆ ಬಿಯರ್ ಮತ್ತು ಸಿಗರೇಟ್ ಸೇವಿಸುವಂತೆ ಮಾಡಿದ ವ್ಯಕ್ತಿ
- ವೈರಲ್ ವಿಡಿಯೋಗೆ ತೀವ್ರ ಖಂಡನೆ
- ವಿಡಿಯೋದಲ್ಲಿರುವ ವ್ಯಕ್ತಿಯನ್ನು ಬಂಧಿಸುವಂತೆ ನೆಟ್ಟಿಗರ ಆಗ್ರಹ
ರಾಜಸ್ಥಾನ: ಕೇವಲ ಸೋಶಿಯಲ್ ಮೀಡಿಯಾದಲ್ಲಿ ಲೈಕ್ಸ್ ಮತ್ತು ವೀವ್ಸ್ ಪಡೆಯಲು ಜನರು ಎಷ್ಟು ಕೆಳಮಟ್ಟಕ್ಕೆ ಇಳಿಯುತ್ತಾರೆ ಎಂಬುದಕ್ಕೆ ರಾಜಸ್ಥಾನ ನಡೆದಿದೆ ಎಂದು ಹೇಳಲಾಗುತ್ತಿರುವ ಈ ಘಟನೆಯೇ ಸಾಕ್ಷಿಯಾಗಿದೆ. ಪುಟ್ಟ ಮಗುವೊಂದಕ್ಕೆ ವ್ಯಕ್ತಿಯೊಬ್ಬ ಬಿಯರ್ ಕುಡಿಸಿ, ಸಿಗರೇಟ್ ಸೇದಿಸುತ್ತಿರುವ ಅಮಾನವೀಯ ವಿಡಿಯೋ (viral video) ವೊಂದು ಈಗ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ.
ವಿಡಿಯೋದಲ್ಲೇನಿದೆ?
ವೈರಲ್ ಆಗಿರುವ ಈ ಆಘಾತಕಾರಿ ವಿಡಿಯೋದಲ್ಲಿ, ವ್ಯಕ್ತಿಯೊಬ್ಬ ಮಗುವಿಗೆ ಬಿಯರ್ ಬಾಟಲಿಯನ್ನು ಹಿಡಿಸಿ ಕುಡಿಯುವಂತೆ ಒತ್ತಾಯಿಸುತ್ತಿದ್ದಾನೆ. ಅಷ್ಟಕ್ಕೆ ನಿಲ್ಲದ ಆತ, ಸಿಗರೇಟನ್ನು ಮಗುವಿನ ಬಾಯಿಗಿಟ್ಟು ಹೇಗೆ ಸೇದಬೇಕು ಎಂದು ಹೇಳಿ ಕೊಡಿತ್ತಿದ್ದಾನೆ. ಚಿಕ್ಕ ವಯಸ್ಸಿನ ಮಗುವನ್ನು ಈ ರೀತಿ ಶೋಷಣೆಗೆ ಒಳಪಡಿಸುತ್ತಿರುವಾಗ ಅಲ್ಲಿಯೇ ಇದ್ದ ಮತ್ತೊಬ್ಬರು ಇದನ್ನು ವಿಡಿಯೋ ಮಾಡುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಬೈಕ್ ನಂಬರ್‌ನಿಂದ ಸಿಕ್ಕಿತು ಕ್ಲೂ!
ವಿಡಿಯೋದಲ್ಲಿ ಮೋಟಾರ್ ಸೈಕಲ್ ಸ್ಪಷ್ಟವಾಗಿ ಕಾಣಿಸುತ್ತಿದ್ದು, ಅದರ ನೋಂದಣಿ ಸಂಖ್ಯೆ RJ25 SS 8392 ಎಂದು ಓದಬಹುದಾಗಿದೆ. ಈ ನಂಬರ್‌ನಲ್ಲಿರುವ 'RJ' ಅಕ್ಷರಗಳು ರಾಜಸ್ಥಾನ ರಾಜ್ಯಕ್ಕೆ ಸೇರಿದ್ದಾಗಿವೆ. ಹೀಗಾಗಿ ಈ ಘಟನೆ ರಾಜಸ್ಥಾನದಲ್ಲಿ ನಡೆದಿರಬಹುದು ಎಂದು ಅಂದಾಜಿಸಲಾಗಿದೆ.
ರಾಜಸ್ಥಾನ ಪೊಲೀಸರಿಗೆ ಟ್ಯಾಗ್ ಮಾಡಿ ಆಕ್ರೋಶ
ದಿವ್ಯಾ ತಂಡನ್ ಎಂಬುವವರು ಈ ವಿಡಿಯೋವನ್ನು ಹಂಚಿಕೊಂಡಿದ್ದು, ರಾಜಸ್ಥಾನ ಪೊಲೀಸರನ್ನು (@PoliceRajasthan) ಟ್ಯಾಗ್ ಮಾಡಿ ಈ ಕೂಡಲೇ ಆ ವ್ಯಕ್ತಿಯನ್ನು ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ. ಇದು ಯಾವುದೇ ರೀತಿಯಲ್ಲೂ ಸ್ವೀಕಾರಾರ್ಹವಲ್ಲ. ಮಕ್ಕಳನ್ನು ಈ ರೀತಿ ಶೋಷಣೆ ಮಾಡುವುದು ಭಾರತೀಯ ಕಾನೂನಿನಡಿ ಕಠಿಣ ಶಿಕ್ಷೆಗೆ ಅರ್ಹವಾದ ಅಪರಾಧ. ಮಕ್ಕಳನ್ನು ಕೇವಲ ರೀಲ್ಸ್ ಅಥವಾ ಕಂಟೆಂಟ್ ಮಾಡಲು ಬಳಸಿಕೊಳ್ಳಬಾರದು ಎಂದು ಅವರು ಕಿಡಿಕಾರಿದ್ದಾರೆ.
ಕಾನೂನು ಏನು ಹೇಳುತ್ತದೆ?
ಭಾರತೀಯ ಕಾನೂನಿನ ಪ್ರಕಾರ, ಅಪ್ರಾಪ್ತ ವಯಸ್ಕರಿಗೆ ಮದ್ಯಪಾನ ಅಥವಾ ತಂಬಾಕು ಪದಾರ್ಥಗಳನ್ನು ನೀಡುವುದು ಅಥವಾ ಅದನ್ನು ಪ್ರೋತ್ಸಾಹಿಸುವುದು ಜುವೆನೈಲ್ ಜಸ್ಟಿಸ್ (ಮಕ್ಕಳ ರಕ್ಷಣೆ) ಕಾಯ್ದೆಯಡಿ ಗಂಭೀರ ಅಪರಾಧವಾಗಿದೆ. ಈ ವಿಡಿಯೋ ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳುವ ಸಾಧ್ಯತೆಯಿದೆ.
ಆರೋಪಿ ಬಂಧನ ಯಾವಾಗ?
ಸದ್ಯಕ್ಕೆ ಈ ವಿಡಿಯೋ ಎಲ್ಲೆಡೆ ಹರಿದಾಡುತ್ತಿದ್ದು, ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬೈಕ್ ನಂಬರ್ ಪ್ಲೇಟ್ ಆಧರಿಸಿ ಪೊಲೀಸರು ಈ ಪಾಪಿ ವ್ಯಕ್ತಿಯನ್ನು ಪತ್ತೆಹಚ್ಚಲು ಸುಲಭವಾಗಲಿದೆ. ಆದರೆ, ಈವರೆಗೆ ಆತನ ಬಂಧನದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಂದಿಲ್ಲ. ಇಂತಹ ಕೃತ್ಯಗಳು ಸಮಾಜಕ್ಕೆ ಕೆಟ್ಟ ಸಂದೇಶ ನೀಡುವ ಜತೆಗೆ ಮಗುವಿನ ಭವಿಷ್ಯ ಮತ್ತು ಆರೋಗ್ಯದ ಜೊತೆ ಆಟವಾಡುತ್ತಿರುವ ಈ ವ್ಯಕ್ತಿಗೆ ಕಠಿಣ ಶಿಕ್ಷೆಯಾಗಲಿ ಎಂಬುದು ನೆಟ್ಟಿಗರ ಆಗ್ರಹವಾಗಿದೆ,(ಏಜನ್ಸೀಸ್).