ನಲ್ಗೊಂಡ (ತೆಲಂಗಾಣ): ಆನ್‌ಲೈನ್‌ನಲ್ಲಿ 'How to Kill' (ಕೊಲೆ ಮಾಡುವುದು ಹೇಗೆ) ಎಂಬ ವಿಡಿಯೋಗಳನ್ನು ನೋಡಿ ಕೊಲೆ ಮಾಡುವ ವಿಧಾನ ಕಲಿತ ವ್ಯಕ್ತಿಯೊಬ್ಬ, ₹2 ಕೋಟಿ ಮೌಲ್ಯದ ಆಸ್ತಿ, ಸಾಲದ ವಿವಾದ ಹಾಗೂ ವೈಯಕ್ತಿಕ ಸೇಡಿನ ಕಾರಣದಿಂದ ಒಂದೇ ಕುಟುಂಬದ ನಾಲ್ವರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ನಲ್ಗೊಂಡ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಪ್ರಕರಣವನ್ನು ನಾಲ್ಕೇ ದಿನಗಳಲ್ಲಿ ಭೇದಿಸಿರುವ ಪೊಲೀಸರು ನಾಲ್ವರನ್ನು ಬಂಧಿಸಿದ್ದು, ಇನ್ನಿಬ್ಬರು ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.
ಜೂನ್ 22ರಂದು ದುರ್ವಾಸನೆ ಬರುತ್ತಿದೆ ಎಂದು ನೆರೆಹೊರೆಯವರು ಮಾಹಿತಿ ನೀಡಿದ ಬಳಿಕ ಮನೆಯ ಬಾಗಿಲು ಒಡೆದು ನೋಡಿದಾಗ ಮೊಹಮ್ಮದ್ ಸುಲ್ತಾನ್, ಅವರ ಪತ್ನಿ ಹಸೀನಾ, ಪುತ್ರ ಮುಜಮ್ಮಿಲ್ ಹಾಗೂ ಪುತ್ರಿ ಅಫ್ಸರಾ ಅವರ ಕೊಳೆತ ಶವಗಳು ಪತ್ತೆಯಾಗಿದ್ದವು.
₹2 ಕೋಟಿ ಆಸ್ತಿ, ಸಾಲವೇ ಕೊಲೆಗೆ ಕಾರಣ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶರತ್ ಚಂದ್ರ ಪವಾರ್ ಅವರ ಪ್ರಕಾರ, ₹2 ಕೋಟಿಗೂ ಅಧಿಕ ಮೌಲ್ಯದ ಆಸ್ತಿ, ತೀರಿಸದ ಸಾಲ ಹಾಗೂ ಕುಟುಂಬದ ವೈಷಮ್ಯವೇ ಈ ಹತ್ಯೆಯ ಪ್ರಮುಖ ಕಾರಣವಾಗಿದೆ. ಮುಖ್ಯ ಆರೋಪಿ ಸಯ್ಯದ್ ಅಸ್ಲಂ ಹೈದರಾಬಾದ್‌ನಲ್ಲಿ ಕಾರು ಚಾಲಕನಾಗಿದ್ದು, ಸಾಲದ ಹೊರೆ ಹಾಗೂ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದ. ಈ ಹಿಂದೆ ಹಸೀನಾ ಅವರಿಂದ ₹1 ಲಕ್ಷ ಸಾಲ ಪಡೆದಿದ್ದ ಅಸ್ಲಂ, ಮತ್ತೊಮ್ಮೆ ₹1 ಲಕ್ಷ ಸಾಲ ಕೇಳಿದ್ದ. ಆದರೆ ಹಸೀನಾ ನಿರಾಕರಿಸಿ, ಹಿಂದಿನ ಸಾಲಕ್ಕೂ ಬಡ್ಡಿ ಕಟ್ಟಿಲ್ಲ ಎಂದು ಗದರಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇದಕ್ಕೂ ಮೊದಲು ಹಸೀನಾ ಮನೆಯಲ್ಲಿದ್ದ ಜಮೀನಿನ ದಾಖಲೆ ಕದಿಯಲು ಯತ್ನಿಸಿದ್ದರೂ ಅದು ವಿಫಲವಾಗಿತ್ತು.
'How to Kill' ವಿಡಿಯೋ ನೋಡಿ ಸಂಚು
ಪೊಲೀಸರ ಪ್ರಕಾರ, ಹಣಕಾಸಿನ ಒತ್ತಡ ಮತ್ತು ವೈಯಕ್ತಿಕ ದ್ವೇಷದಿಂದ ಅಸ್ಲಂ, ಆನ್‌ಲೈನ್‌ನಲ್ಲಿ 'How to Kill' ವಿಡಿಯೋಗಳನ್ನು ನೋಡಿ ಕೊಲೆ ನಡೆಸುವ ವಿಧಾನ ಹಾಗೂ ಪೊಲೀಸರಿಂದ ತಪ್ಪಿಸಿಕೊಳ್ಳುವ ಮಾರ್ಗಗಳನ್ನು ಕಲಿತಿದ್ದ. ಜೂನ್ 19ರ ಮುಂಜಾನೆ ಹಸೀನಾ ಮನೆಗೆ ನುಗ್ಗಿದ ಅಸ್ಲಂ ಮೊದಲು ಹಸೀನಾಳನ್ನು ಚಾಕುವಿನಿಂದ ಇರಿದು ಕೊಂದಿದ್ದಾನೆ. ಬಳಿಕ ಅವರ ಪತಿ ಸುಲ್ತಾನ್ ಹಾಗೂ ಇಬ್ಬರು ಮಕ್ಕಳ ಮೇಲೂ ದಾಳಿ ನಡೆಸಿದ್ದಾನೆ. ಮರಣೋತ್ತರ ಪರೀಕ್ಷೆಯಲ್ಲಿ ಸುಲ್ತಾನ್ ದೇಹದ ಮೇಲೆ 6, ಹಸೀನಾಳ ಮೇಲೆ 7, ಪುತ್ರಿ ಅಫ್ಸರಾಳ ಮೇಲೆ 9 ಹಾಗೂ ಪುತ್ರ ಮುಜಮ್ಮಿಲ್ ದೇಹದ ಮೇಲೆ 16 ಚಾಕು ಇರಿತದ ಗಾಯಗಳು ಪತ್ತೆಯಾಗಿವೆ.
ಮುಜಮ್ಮಿಲ್ ಪ್ರತಿರೋಧಿಸಲು ಯತ್ನಿಸಿದ್ದರಿಂದ ಆತನ ಮೇಲೆ ಹೆಚ್ಚು ಬಾರಿ ದಾಳಿ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಅಫ್ಸರಾ ಹಾಸಿಗೆಯ ಕೆಳಗೆ ಅಡಗಿಕೊಳ್ಳಲು ಯತ್ನಿಸಿದ್ದರೂ ಎಳೆದು ಹೊರತೆಗೆದು ಹತ್ಯೆ ಮಾಡಲಾಗಿದೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಕೊಲೆ ಬಳಿಕ ಚಿನ್ನ, ಹಣ ದೋಚಿದ ಆರೋಪಿಗಳು
ಹತ್ಯೆಯ ನಂತರ ಆರೋಪಿಗಳು ಮನೆಯಲ್ಲಿದ್ದ ನಗದು, ಚಿನ್ನಾಭರಣ ಹಾಗೂ ಆಸ್ತಿ ದಾಖಲೆಗಳನ್ನು ಕದ್ದೊಯ್ದಿದ್ದರು. ಬಳಿಕ ಕದ್ದ ಚಿನ್ನವನ್ನು ಅಡಮಾನ ಇಟ್ಟು ₹5.30 ಲಕ್ಷ ಹಣ ಪಡೆದಿದ್ದರು. ತನಿಖೆ ವೇಳೆ ₹3 ಲಕ್ಷ ನಗದು, ಚಿನ್ನಾಭರಣ, ಕೊಲೆಗೆ ಬಳಸಿದ ಚಾಕುಗಳು, ರಕ್ತಸಿಕ್ತ ಬಟ್ಟೆಗಳು, ಮೊಬೈಲ್ ಫೋನ್‌ಗಳು ಹಾಗೂ ಬಳಸಿದ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ನಾಲ್ವರು ಬಂಧನ, ಇಬ್ಬರಿಗಾಗಿ ಹುಡುಕಾಟ
ಈ ಪ್ರಕರಣದಲ್ಲಿ ಸಯ್ಯದ್ ಅಸ್ಲಂ, ಆತನ ಪತ್ನಿ ತಬಸ್ಸುಮ್, ಮೊಹಮ್ಮದ್ ಸೋಹೈಲ್ ಹಾಗೂ ಹೇಮಂತ್ ಕುಮಾರ್ ಅವರನ್ನು ಬಂಧಿಸಲಾಗಿದೆ. ಪ್ರಕರಣಕ್ಕೆ ಸಹಕರಿಸಿದ ಆರೋಪದಡಿ ಇನ್ನಿಬ್ಬರು ಪರಾರಿಯಾಗಿದ್ದು, ಅವರಿಗಾಗಿ ವಿಶೇಷ ತಂಡಗಳು ಶೋಧ ಕಾರ್ಯ ಮುಂದುವರಿಸಿವೆ.
ಪೊಲೀಸರು ಸುಮಾರು 20 ಮಂದಿಯನ್ನು ವಿಚಾರಣೆ ನಡೆಸಿ, ಸಿಸಿಟಿವಿ ದೃಶ್ಯಗಳು, ಮೊಬೈಲ್ ಕರೆ ವಿವರಗಳು, ವೈಜ್ಞಾನಿಕ ಸಾಕ್ಷ್ಯಗಳು ಹಾಗೂ ತಾಂತ್ರಿಕ ಮಾಹಿತಿ ಆಧರಿಸಿ ನಾಲ್ಕೇ ದಿನಗಳಲ್ಲಿ ಪ್ರಕರಣವನ್ನು ಭೇದಿಸಿದ್ದಾರೆ,(ಏಜೆನ್ಸೀಸ್).