Uddhav ShivSena | ಶಿವಸೇನೆ ಉದ್ಧವ್ ಠಾಕ್ರೆ ಬಣದ ಸಂಜಯ್ ರಾವತ್-ರಾಹುಲ್ ಗಾಂಧಿ ಭೇಟಿ
Uddhav ShivSena: ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶ ಹೊರಬಿದ್ದ ಕೇವಲ 24 ಗಂಟೆಗಳಲ್ಲಿ ಮಹಾರಾಷ್ಟ್ರದ ರಾಜಕೀಯ ಚಿತ್ರಣವೇ ಬದಲಾಗಿದ್ದು, ಬಿಜೆಪಿ ನೇತೃತ್ವದ ಮೈತ್ರಿಕೂಟದ ದಿಗ್ವಿಜಯ ವಿಪಕ್ಷಗಳ ಮನಸ್ಥಿತಿಯನ್ನೇ ಬದಲಾಗುವಂತೆ ಮಾಡಿದೆ.
ಮಹಾರಾಷ್ಟ್ರದ ವಿಧಾನಸಭೆ ಚುನಾವಣೆ ಮುಗಿದು ಬರೊಬ್ಬರಿ 13 ತಿಂಗಳುಗಳ ಬಳಿಕ ನಡೆದ ರಾಜ್ಯದ ಮುನ್ಸಿಪಲ್ ಮತ್ತು ಕೌನ್ಸಿಲ್ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಪ್ರದರ್ಶನ ನೀಡಿದೆ, ಇದು ವಿಪಕ್ಷಗಳ ನಿದ್ದೆಗೆಡಿಸಿದ್ದು, ಮೈತ್ರಿಕೂಟದಲ್ಲಿನ ಬಿರುಕುಗಳನ್ನು ಸರಿಪಡಿಸಿಕೊಳ್ಳಲು ಯೋಚಿಸುವಂತೆ ಮಾಡಿದೆ.
ಶಿವಸೇನೆ ಉದ್ಧವ್ ಠಾಕ್ರೆ ಬಣದ ಸಂಜಯ್ ರಾವತ್ ರಾಹುಲ್ ಗಾಂಧಿಯನ್ನು ಭೇಟಿ ಮಾಡಿ ಮುಂಬರುವ ಮುಂಬೈ ನಾಗರಿಕ ಸಂಸ್ಥೆ ಚುನಾವಣೆಗೆ ಜಂಟಿ ಕಾರ್ಯತಂತ್ರದ ಕುರಿತು ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿದ್ದು, ಇತ್ತೀಚಿನ ಸ್ಥಳೀಯ ಚುನಾವಣೆಯ ಫಲಿತಾಂಶ ಈ ಕ್ರಮಕ್ಕೆ ಮುಂದಾಗುವಂತೆ ಮಾಡಿದೆ. ಇಗಿನ ಪರಿಸ್ಥಿತಿಯನ್ನು ಗಮನಿಸಿದರೆ, ಈ ಭೇಟಿ ಸೌಜನ್ಯಕ್ಕಿಂತ ಹೆಚ್ಚಿನದ್ದಾಗಿದೆ ಎಂದು ವಿಶ್ಲೇಷಿಸಲಾಗುತ್ತಿದ್ದು, ಜನವರಿ 15 ರಂದು ನಡೆಯಲಿರುವ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಗೆ ಮುಂಚಿತವಾಗಿ ತಮ್ಮ ಅಸ್ತಿತ್ವವನ್ನು ಪುನಸ್ಥಾಪಿಸುವ ಪ್ರಯತ್ನಕ್ಕೆ ಇದು ನಾಂದಿ ಹಾಡಿದ್ದು, ಈ ಚರ್ಚೆಯ ಸಮಯದಲ್ಲಿ, ರಾವತ್ ಬಿಜೆಪಿ ವಿರುದ್ಧ ಸಾಮೂಹಿಕ ಹೋರಾಟಕ್ಕೆ ಒತ್ತಾಯಿಸಿದರು ಎಂದು ವರದಿಯಾಗಿದೆ.
ನಿಲುವಿನಲ್ಲಿ ಬದಲಾವಣೆ
ಇಲ್ಲಿಯವರೆಗೆ ಶಿವಸೇನೆ (ಯುಬಿಟಿ) ಮತ್ತು ಕಾಂಗ್ರೆಸ್ ಎರಡೂ ಮುಂಬರುವ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುವ ಉದ್ದೇಶವನ್ನು ವ್ಯಕ್ತಪಡಿಸಿದ್ದವು. ಯಾರು ಜೊತೆಯಾಗುತ್ತಾರೋ ಆಗಲಿ, ಇಲ್ಲದಿದ್ದರೆ, ನಾವು ಏಕಾಂಗಿಯಾಗಿ ಹೋರಾಡುತ್ತೇವೆ ಎನ್ನುವ ಮೂಲಕ ರಾವತ್ ಏಕಾಂಗಿಯಾಗಿ ಸ್ಪರ್ಧಿಸಲು ಸಿದ್ಧ ಎಂದು ಈ ಹಿಂದೆ ಹೇಳಿಕೆ ನೀಡಿದ್ದರು.
ರಾಹುಲ್-ರಾವತ್ ಭೇಟಿಯ ಹಿಂದೆ ಏಕನಾಥ್ ಶಿಂಧೆ ಶಿವಸೇನೆಯ ವೇಗವನ್ನು ತಡೆಯುವ ಉದ್ದೇಶವಿದ್ದು, ಇದಕ್ಕೆ ಕಾಂಗ್ರೆಸ್ ಕೈ ಜೋಡಿಸುವುದು ಉದ್ಧವ್ ಬಣಕ್ಕೆ ಅನಿವಾರ್ಯವಾಗಿದೆ. ರಾಜ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವನಿರ್ಮಾಣ ಸೇನೆ ಜೊತೆ ಪಾಲುದಾರಿಕೆಯನ್ನು ಸಮತೋಲನಗೊಳಿಸುವುದು ಮತ್ತು ಕಾಂಗ್ರೆಸ್ ಜೊತೆ ಮೈತ್ರಿ ಕಾಯ್ದುಕೊಳ್ಳುವುದು ಸಂಜಯ್ ರಾವತ್ ಕಾರ್ಯತಂತ್ರದ ಭಾಗವಾಗಿದ್ದು, ಇತ್ತ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿಂದಾಗಿ ಎಂಎನ್‌ಎಸ್ ಜೊತೆ ವೇದಿಕೆ ಹಂಚಿಕೊಳ್ಳುವುದಿಲ್ಲ ಎಂದು ಘಂಟಾಗೋಷವಾಗಿ ಹೇಳಿದೆ.
ಭಾನುವಾರ ಹೊರಬಿದ್ದಿರುವ ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶಗಳು ಕಾಂಗ್ರೆಸ್ ಜೊತೆ ಕೈ ಜೊಡಿಸದಿದ್ದರೆ ಮಹಾಯುತಿ ಮೈತ್ರಿಕೂಟವನ್ನು ಸೋಲಿಸುವುದು ಅಸಾಧ್ಯ ಎನ್ನುವುದನ್ನು ಸಾರಿ ಹೇಳುತ್ತಿದ್ದು, ಆದ್ದರಿಂದಲೇ ರಾವತ್ ನಾವು ಒಟ್ಟಾಗಿ ಹೋರಾಡಬೇಕು ಎಂಬ ಹೊಸ ಬೇಡಿಕೆಯನ್ನು ಮುಂದಿಟ್ಟಿದ್ದಾರೆ.
ಬಿಎಂಸಿ ಕೈ ತಪ್ಪುವ ಆತಂಕ..
ಶಿವಸೇನೆ ಇಬ್ಬಾಗವಾಗುವ ಮೊದಲು 25 ವರ್ಷಗಳ ಕಾಲ ಬಿಎಂಸಿಯಲ್ಲಿ ಅಧಿಕಾರ ನಡೆಸಿತ್ತು. ಮಹಾರಾಷ್ಟ್ರ ರಾಜಕೀಯವನ್ನು ಗಮನಿಸಿ ಹೇಳುವುದಾದರೆ ಬಿಎಂಸಿಯ ಬಜೆಟ್, ಒಂದು ರಾಜ್ಯದ ಬಜೆಟ್ಗೆ ಸಮ ಎನ್ನುವ ಮಾತಿದೆ, ಹೀಗಾಗಿ ತಮ್ಮ ಹಳೆ ಮಾದರಿಯ ನಿಯಂತ್ರಣ ಸಾಧಿಸಬೇಕಾದರೆ ಒಗ್ಗಟ್ಟು ತುಂಬಾ ಮುಖ್ಯ ಎನ್ನುವುದು ಉದ್ಧವ್ ಬಣಕ್ಕೆ ಮನವರಿಕೆಯಾಗಿದೆ. ಒಂದು ವೇಳೆ ಮುಂಬರುವ ಬಿಎಂಸಿ ಚುನಾವಣೆಯಲ್ಲಿ ಶಿವಸೇನೆ ಸೋತಿದ್ದೇ ಆದಲ್ಲಿ, ಅದರ ಅಸ್ತಿತ್ವವೇ ಡೋಲಾಯಮಾನ ಸ್ಥಿತಿಗೆ ತಲುಪುತ್ತದೇ, ಇದು ರಾಜ್ಯ ಮತ್ತು ರಾಷ್ಟ್ರಮಟ್ಟದ ದೃವೀಕರಣಕ್ಕೂ ಕಾರಣವಾಗಬಹುದು(ಏಜೆನ್ಸೀಸ್).