ಇ20 ಇಂಧನ ವಿರುದ್ಧ 'ಗಾಡಿ ಮಾರ್ಚ್'​  
ದೇಶ

ಸಿಜೆಪಿ ಹೋರಾಟ ಅಂತ್ಯ ಬೆನ್ನಲ್ಲೇ ಇ20 ಇಂಧನ ವಿರುದ್ಧ 'ಗಾಡಿ ಮಾರ್ಚ್'​ ಕೂಗು! ಬೃಹತ್ ರ‍್ಯಾಲಿಗೆ 'ಟೀಮ್ ಭಾರತ್' ಕರೆ

ಪ್ರಮುಖ ಮುಖ್ಯಾಂಶಗಳು

  • ನೀಟ್​ ಸೋರಿಕೆ ವಿರುದ್ಧ ಸಿಜೆಪಿ ಪ್ರತಿಭಟನೆ ಮುಗಿದ ಬೆನ್ನಲ್ಲೇ ಗಾಡಿ ಮಾರ್ಚ್​
  • ದೆಹಲಿಯಲ್ಲಿ ಬೃಹತ್ ವಾಹನಗಳ ರ‍್ಯಾಲಿಗೆ 'ಟೀಮ್ ಭಾರತ್' ಕರೆ
  • ಕೇಂದ್ರ ಸರ್ಕಾರಕ್ಕೆ ಮತ್ತೊಂದು ತಲೆಬಿಸಿ ಭಯ
ನವದೆಹಲಿ: ಕೇಂದ್ರ ಸರ್ಕಾರದ ಇ20 (ಶೇ.20ರಷ್ಟು ಎಥನಾಲ್ ಮಿಶ್ರಿತ) ಪೆಟ್ರೋಲ್ ನೀತಿಯನ್ನು ವಿರೋಧಿಸಿ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬೃಹತ್ ವಾಹನಗಳ ರ‍್ಯಾಲಿಗೆ 'ಟೀಮ್ ಭಾರತ್' ಕರೆ ನೀಡಿದೆ. ಇದು ಕೇಂದ್ರ ಸರ್ಕಾರಕ್ಕೆ ಮತ್ತೊಂದು ತಲೆಬಿಸಿಯಾಗಿ ಕಾಡುವ ಮುನ್ಸೂಚನೆ ಎದುರಾಗಿದೆ.
'ಲೇಟೆಸ್ಟ್ಲಿ' ವರದಿ ಪ್ರಕಾರ, ನೀಟ್​ ಸೋರಿಕೆ ಹಾಗೂ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಪಟ್ಟು ಹಿಡಿದಿದ್ದ ಸಿಜೆಪಿ ಮತ್ತು ವಿದ್ಯಾರ್ಥಿಗಳ ಪ್ರತಿಭಟನೆ ಅಂತ್ಯಗೊಂಡ ಬೆನ್ನಲ್ಲೇ ಇದೇ ಜುಲೈ 31ರಂದು ದೆಹಲಿಯಲ್ಲಿ ಇ20 ಪೆಟ್ರೋಲ್ ನೀತಿಯನ್ನು ವಿರೋಧಿಸಿ ಬೃಹತ್ ವಾಹನ ಪ್ರತಿಭಟನೆಗೆ ಕರೆ ನೀಡಲಾಗಿದೆ. 'ಟೀಮ್ ಭಾರತ್' ಎಂಬ ನಾಗರಿಕ ಸಂಘಟನೆಯು 'ಗಾಡಿ ಮಾರ್ಚ್, ಗಾಂಧಿ ಮಾರ್ಚ್' (Gaadi March, Gandhi March) ಹೆಸರಿನಲ್ಲಿ ಈ ವಿನೂತನ ರ‍್ಯಾಲಿಯನ್ನು ಆಯೋಜಿಸಿದೆ.
ರಾಜಕೀಯ ವಿಶ್ಲೇಷಕ ಹಾಗೂ 'ಟೀಮ್ ಭಾರತ್'ನ ರೂವಾರಿ ತಹ್ಸೀನ್ ಪೂನಾವಾಲಾ ಈ ಕುರಿತಂತೆ ತಮ್ಮ 'ಎಕ್ಸ್' (ಟ್ವಿಟರ್) ಖಾತೆಯಲ್ಲಿ ಬೃಹತ್ ಪ್ರತಿಭಟನೆಯ ವಿವರಗಳನ್ನು ಹಂಚಿಕೊಂಡಿದ್ದಾರೆ ಮುಖ್ಯವಾಗಿ, ರ‍್ಯಾಲಿಯಲ್ಲಿ ಕಾರು ಹಾಗೂ ಬೈಕ್ ಸವಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಆಯೋಜಕರು ವಿನಂತಿಸಿದ್ದಾರೆ.

ಪ್ರತಿಭಟನಾ ಮಾರ್ಗ

ಸಂಸದೀಯ ಪ್ರದೇಶದ ಇಂಡಿಯಾ ಗೇಟ್‌ನಿಂದ ಪ್ರಾರಂಭವಾಗಲಿರುವ ಈ ರ‍್ಯಾಲಿಯು ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಮತ್ತು ಹರ್ದೀಪ್ ಸಿಂಗ್ ಪುರಿ ಅವರ ಅಧಿಕೃತ ನಿವಾಸ ಹಾಗೂ ಕಚೇರಿಗಳ ಮಾರ್ಗದಲ್ಲಿ ಸಾಗಿ, ಅಂತಿಮವಾಗಿ ಸಂಸತ್ ಭವನ ರಸ್ತೆಯಲ್ಲಿ ಕೊನೆಗೊಳ್ಳಲಿದೆ ಎಂದು ತಿಳಿಸಲಾಗಿದೆ.

ಘೋಷಣೆಗಳು

ನನ್ನ ಗಾಡಿ, ನನ್ನ ಅಧಿಕಾರ ಮತ್ತು ಅವರ ವಾಹನ, ಅವರ ಆಯ್ಕೆ, ಅವರ ಹಕ್ಕು ಎಂಬ ಪ್ರಮುಖ ಘೋಷಣೆಗಳನ್ನು ಮುನ್ನಲೆಗೆ ತರಲಾಗುವುದು. ವಿಶೇಷವೆಂದರೆ, ಇ20 ಪೆಟ್ರೋಲ್ ನೀತಿಯು ಒಂದು ಪ್ರಯೋಗ ಎಂದು ಅಟಾರ್ನಿ ಜನರಲ್ ಅವರು ಸುಪ್ರೀಂ ಕೋರ್ಟ್‌ನಲ್ಲಿ ಒಪ್ಪಿಕೊಂಡಿರುವ ವಿಡಿಯೋ ಸಾಕ್ಷ್ಯವನ್ನು ತಹ್ಸೀನ್ ಪೂನಾವಾಲಾ ಹಂಚಿಕೊಂಡಿದ್ದು, ಸರ್ಕಾರದ ನಿರ್ಧಾರವನ್ನು ತೀವ್ರವಾಗಿ ಪ್ರಶ್ನಿಸಿದ್ದಾರೆ.

ಆಯೋಜಕರ 6 ಪ್ರಮುಖ ಬೇಡಿಕೆಗಳು

ಶಿಸ್ತುಬದ್ಧ ಪ್ರತಿಭಟನೆಗೆ ಮನವಿ

ಈ ಕರೆಯು ಕೇವಲ ಇಂಧನ ನೀತಿಗೆ ಸಂಬಂಧಿಸಿದ ಕಳಕಳಿಗಳಿಗೆ ಮಾತ್ರ ಸೀಮಿತವಾಗಿದ್ದು, ಸಂಪೂರ್ಣವಾಗಿ ಶಾಂತಿಯುತವಾಗಿ ನಡೆಯಲಿದೆ ಎಂದು ಆಯೋಜಕರು ಸ್ಪಷ್ಟಪಡಿಸಿದ್ದಾರೆ. ಪ್ರತಿಭಟನೆಯಲ್ಲಿ ಭಾಗವಹಿಸುವ ಎಲ್ಲ ಚಾಲಕರು ಮತ್ತು ಸವಾರರು ದೆಹಲಿಯ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಮತ್ತು ಆಡಳಿತ ಮಂಡಳಿಗೆ ಸಂಪೂರ್ಣ ಸಹಕಾರ ನೀಡಬೇಕು ಎಂದು ಮನವಿ ಮಾಡಲಾಗಿದೆ,(ಏಜೆನ್ಸೀಸ್).