ಮಹಿಳೆಯರಿಗೆ ಮೀಸಲಿರುವ ಬೋಗಿ ಏರಿರುವ ಬುರ್ಖಾಧಾರಿ ಪುರುಷ
- ಮಹಿಳೆಯರ ಬೋಗಿ ಏರಿದ ಬುರ್ಖಾಧಾರಿ ಪುರುಷ
- ಮುಂಬೈ ಲೋಕಲ್ ರೈಲಿನಲ್ಲಿ ಸೆರೆಯಾದ ದೃಶ್ಯ
- ಮಹಿಳೆಯರ ಸುರಕ್ಷತೆ ಬಗ್ಗೆ ಹೆಚ್ಚಾದ ಆತಂಕ
ಮುಂಬೈ: ಮುಂಬೈನ ಜೀವನಾಡಿ ಎನಿಸಿಕೊಂಡಿರುವ ಲೋಕಲ್ ಟ್ರೈನ್‌ನಲ್ಲಿ ಮಹಿಳೆಯರ ಸುರಕ್ಷತೆಯನ್ನು ಪ್ರಶ್ನಿಸುವಂತಹ ಆಘಾತಕಾರಿ ಘಟನೆಯೊಂದು ಘಾಟ್ಕೋಪರ್ ರೈಲ್ವೆ ನಿಲ್ದಾಣದ ಬಳಿ ನಡೆದಿದೆ. ಬುರ್ಖಾ (Burqa Man) ಧರಿಸಿ ಮಹಿಳೆಯ ಸೋಗಿನಲ್ಲಿ ಲೇಡೀಸ್ ಬೋಗಿ ಏರಿದ್ದ ವ್ಯಕ್ತಿಯೊಬ್ಬ ಮಹಿಳಾ ಪ್ರಯಾಣಿಕರ ಕೆಂಗಣ್ಣಿಗೆ ಗುರಿಯಾಗಿದ್ದಾನೆ.
ನಡೆದದ್ದೇನು?
ಸೆಂಟ್ರಲ್ ರೈಲ್ವೆಯ ಘಾಟ್ಕೋಪರ್ ನಿಲ್ದಾಣದ ಬಳಿ ಈ ಘಟನೆ ನಡೆದಿದೆ. ಮುಂಬೈ ಲೋಕಲ್ ಟ್ರೈನ್‌ನ ಮಹಿಳೆಯರ ವಿಭಾಗಕ್ಕೆ ಬುರ್ಖಾ ಧರಿಸಿದ ವ್ಯಕ್ತಿಯೊಬ್ಬ ಪ್ರವೇಶಿಸಿದ್ದಾನೆ. ಹೊರನೋಟಕ್ಕೆ ಆತ ಮಹಿಳೆಯಂತೆ ಕಂಡರೂ, ಆತನ ಅನುಮಾನಾಸ್ಪದ ನಡವಳಿಕೆ ಮತ್ತು ನಡಿಗೆ ಕಂಡು ಬೋಗಿಯಲ್ಲಿದ್ದ ಪ್ರಯಾಣಿಕರಿಗೆ ಅನುಮಾನ ಮೂಡಿದೆ. ಬೋಗಿಯಲ್ಲಿ ಜನದಟ್ಟಣೆ ಹೆಚ್ಚಿದ್ದನ್ನು ಕಂಡು, ಯಾರೂ ಗಮನಿಸುವುದಿಲ್ಲ ಎಂಬ ಧೈರ್ಯದಲ್ಲಿ ಆತ ಒಳಗೆ ನುಗ್ಗಿದ್ದ ಎನ್ನಲಾಗಿದೆ.
ಮಹಿಳೆಯರ ಸಮಯಪ್ರಜ್ಞೆ
ಬೋಗಿಯಲ್ಲಿದ್ದ ಮಹಿಳೆಯರು ಆತನನ್ನು ಪ್ರಶ್ನಿಸಲು ಶುರು ಮಾಡಿದಾಗ ಆತ ತಬ್ಬಿಬ್ಬಾಗಿದ್ದಾನೆ. ಈ ವೇಳೆ ಅಲ್ಲಿದ್ದ ಪ್ರಯಾಣಿಕರೊಬ್ಬರು ಆತನನ್ನು ಎದುರಿಸುತ್ತಿರುವ ವಿಡಿಯೋವನ್ನು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ. ಮಹಿಳೆಯರು ಆತನ ವಿರುದ್ಧ ಕೂಗಾಡಲು ಮತ್ತು ಸುರಕ್ಷತೆಯ ಬಗ್ಗೆ ಆತಂಕ ವ್ಯಕ್ತಪಡಿಸಲು ಶುರು ಮಾಡಿದಾಗ, ಆತ ಭಯಗೊಂಡು ರೈಲು ನಿಲ್ಲುವ ಮೊದಲೇ ಹಾರಿ ಪರಾರಿಯಾಗಿದ್ದಾನೆ.
ಮುಂದುವರಿದ ಪೊಲೀಸರ ಕಾರ್ಯಾಚರಣೆ
ವಿಷಯ ತಿಳಿದ ತಕ್ಷಣ ರೈಲ್ವೆ ಪೊಲೀಸ್ (GRP) ಮತ್ತು ರೈಲ್ವೆ ರಕ್ಷಣಾ ಪಡೆ (RPF) ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಆದರೆ ಅಷ್ಟರಲ್ಲೇ ಆ 'ಬುರ್ಖಾಧಾರಿ' ಕಿರಾತಕ ತಪ್ಪಿಸಿಕೊಂಡಿದ್ದ. ಸದ್ಯ ಪೊಲೀಸರು ನಿಲ್ದಾಣ ಮತ್ತು ರೈಲಿನಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಜಾಲಾಡುತ್ತಿದ್ದು, ಆತ ಯಾರು? ಯಾವ ಉದ್ದೇಶಕ್ಕಾಗಿ ಲೇಡೀಸ್ ಬೋಗಿ ಏರಿದ್ದ? ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಮಹಿಳೆಯರಲ್ಲಿ ಹೆಚ್ಚಿದ ಆತಂಕ
ಮಹಿಳೆಯರಿಗಾಗಿಯೇ ಮೀಸಲಾದ ಬೋಗಿಯಲ್ಲಿ ಇಂತಹ ಘಟನೆಗಳು ನಡೆಯುತ್ತಿರುವುದು ಪ್ರಯಾಣಿಕರಲ್ಲಿ ಆತಂಕ ಮೂಡಿಸಿದೆ. ನಾವು ಸುರಕ್ಷಿತವಾಗಿ ಪ್ರಯಾಣಿಸಬಹುದು ಎಂದು ನಂಬುತ್ತೇವೆ, ಆದರೆ ಇಂತಹ ವೇಷಧಾರಿಗಳು ಒಳಗೆ ಬಂದರೆ ನಮಗೆ ರಕ್ಷಣೆ ಯಾರು? ಎಂದು ಮಹಿಳಾ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯ ಪತ್ತೆಗಾಗಿ ವಿಶೇಷ ತಂಡಗಳನ್ನು ರಚಿಸಿದ್ದಾರೆ ಎಂದು ಹೇಳಿದ್ದಾರೆ,(ಏಜನ್ಸೀಸ್).