ಕಂಗೆಟ್ಟ ದೀದಿಗೆ ಶತ್ರುವಿನಿಂದಲೇ ಬಂಪರ್ ಆಫರ್! ಮಮತಾ ಒಪ್ಪಿದರೆ ನನ್ನ ಶಾಸಕ ಸ್ಥಾನಕ್ಕೆ ರಿಸೈನ್ ಮಾಡ್ತೀನಿ ಎಂದ ಮಾಜಿ ಟಿಎಂಸಿ ನಾಯಕ! 
ದೇಶ

ಕಂಗೆಟ್ಟ ದೀದಿಗೆ ಶತ್ರುವಿನಿಂದಲೇ ಬಂಪರ್ ಆಫರ್! ಮಮತಾ ಒಪ್ಪಿದರೆ ನನ್ನ ಶಾಸಕ ಸ್ಥಾನಕ್ಕೆ ರಿಸೈನ್ ಮಾಡ್ತೀನಿ ಎಂದ ಮಾಜಿ ಟಿಎಂಸಿ ನಾಯಕ! Humayun Kabir

ಕೋಲ್ಕತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಸೋಲು ಮತ್ತು ಸ್ವಂತ ಪಕ್ಷದೊಳಗಿನ ಆಂತರಿಕ ಬಂಡಾಯದಿಂದ ರಾಜಕೀಯವಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ತೃಣಮೂಲ ಕಾಂಗ್ರೆಸ್ (TMC) ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರಿಗೆ ಯಾರೂ ಊಹಿಸದ ಕಡೆಯಿಂದ ದೊಡ್ಡದೊಂದು ರಾಜಕೀಯ ಕೊಡುಗೆ ಬಂದಿದೆ. ಮಮತಾ ಸರ್ಕಾರವನ್ನು ಪತನಗೊಳಿಸಲೇಬೇಕು ಎಂದು ಪಣತೊಟ್ಟು ಪಕ್ಷದಿಂದ ಹೊರಬಂದಿದ್ದ ಕಡು ವಿರೋಧಿ, 'ಆಮ್ ಜನತಾ ಉನ್ನಯನ್ ಪಾರ್ಟಿ' (AJUP) ಸಂಸ್ಥಾಪಕ ಹುಮಾಯೂನ್ ಕಬೀರ್(Humayun Kabir) ಈಗ ದೀದಿಗೆ ಸಹಾಯ ಹಸ್ತ ಚಾಚಿದ್ದಾರೆ.
ಇತ್ತೀಚೆಗೆ ನಡೆದ 2026ರ ವಿಧಾನಸಭಾ ಚುನಾವಣೆಯಲ್ಲಿ ಮುರ್ಶಿದಾಬಾದ್ ಜಿಲ್ಲೆಯ ನೌಡಾ ಮತ್ತು 'ರೇಜಿನಗರ್' ಎಂಬ ಎರಡೂ ಕ್ಷೇತ್ರಗಳಿಂದ ಭರ್ಜರಿ ಜಯ ಸಾಧಿಸಿರುವ ಹುಮಾಯೂನ್ ಕಬೀರ್, ಮಮತಾ ಅವರು ಮರಳಿ ವಿಧಾನಸಭೆ ಪ್ರವೇಶಿಸಲು ತಾವು ಗೆದ್ದಿರುವ ರೇಜಿನಗರ್ ಕ್ಷೇತ್ರವನ್ನು ಬಿಟ್ಟುಕೊಡಲು ಸಿದ್ಧರಿರುವುದಾಗಿ ಘೋಷಿಸಿದ್ದಾರೆ.

ನಂದಿಗ್ರಾಮದಲ್ಲಿ ನಿಂತರೆ ದೀದಿ ಗೆಲ್ಲಲ್ಲ!

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಹುಮಾಯೂನ್ ಕಬೀರ್, ಬಂಗಾಳ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸುವಂತಹ ಹೇಳಿಕೆ ನೀಡಿದ್ದಾರೆ. ಮಮತಾ ಅವರು ನನ್ನ ಬಳಿ ಬಂದರೆ, ನಾನು ಅವರನ್ನು ರೇಜಿನಗರ್ ಕ್ಷೇತ್ರದಿಂದ ಗೆಲ್ಲಿಸಿ ವಿಧಾನಸಭೆಗೆ ಕಳುಹಿಸುತ್ತೇನೆ. ಒಂದು ವೇಳೆ ಅವರು ಹಠ ಮಾಡಿ ಮತ್ತೆ ನಂದಿಗ್ರಾಮದಿಂದ ಸ್ಪರ್ಧಿಸಿದರೆ ಖಂಡಿತ ಗೆಲ್ಲುವುದಿಲ್ಲ. ಆದರೆ ಅವರು ಬಯಸಿದರೆ, ನಾನು ತಕ್ಷಣವೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಅಲ್ಲಿ ನಡೆಯುವ ಉಪಚುನಾವಣೆಯಲ್ಲಿ ದೀದಿ ಅವರ ಭರ್ಜರಿ ಗೆಲುವನ್ನು ನಾನೇ ಖುದ್ದಾಗಿ ನಿಂತು ಜವಾಬ್ದಾರಿಯಿಂದ ಖಚಿತಪಡಿಸುತ್ತೇನೆ ಎಂದು ಆಫರ್ ನೀಡಿದ್ದಾರೆ.
ಪ್ರಸ್ತುತ ಬಂಗಾಳದ ರಾಜಕೀಯ ಪರಿಸ್ಥಿತಿ ಅತ್ಯಂತ ರೋಮಾಂಚನಕಾರಿಯಾಗಿದೆ. ಮುಖ್ಯಮಂತ್ರಿ ಸುವೇಂದು ಅಧಿಕಾರಿಯವರು ತಾವು ಗೆದ್ದಿದ್ದ ನಂದಿಗ್ರಾಮ ಕ್ಷೇತ್ರವನ್ನು ತೆರವುಗೊಳಿಸಿ, ದೀದಿ ಅವರನ್ನು ಸೋಲಿಸಿದ್ದ ಭವಾನಿಪುರ ಕ್ಷೇತ್ರವನ್ನು ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ. ಹೀಗಾಗಿ ಮಮತಾ ಅವರಿಗೆ ವಿಧಾನಸಭೆ ಪ್ರವೇಶಿಸಲು ಸುರಕ್ಷಿತ ಕ್ಷೇತ್ರದ ಹುಡುಕಾಟ ತೀವ್ರಗೊಂಡಿರುವಾಗ ಕಬೀರ್ ಅವರ ಈ ಹೇಳಿಕೆ ಪ್ರಾಮುಖ್ಯತೆ ಪಡೆದಿದೆ.

ದ್ವೇಷ ಮರೆತು ಭಾವುಕರಾದ ಮಾಜಿ ಆಪ್ತ

ಕಳೆದ ವರ್ಷ ತೃಣಮೂಲ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡ ನಂತರ ಹುಮಾಯೂನ್ ಕಬೀರ್ ಅವರು ಮಮತಾ ಸರ್ಕಾರದ ವಿರುದ್ಧ ಗುಡುಗಿದ್ದರು. ಹೊಸದಾಗಿ 'ಎಜೆಯುಪಿ' ಪಕ್ಷ ಕಟ್ಟಿ ಟಿಎಂಸಿ ಕೋಟೆಯನ್ನು ನಡುಗಿಸಿದ್ದರು. ಆದರೆ ಇಂದು ದೀದಿ ಅವರ ಒಂಟಿತನ ಕಂಡು ಕಬೀರ್ ಭಾವುಕರಾಗಿದ್ದಾರೆ.
ನನ್ನ ಇಂದಿನ ಬೆಳವಣಿಗೆಗೆ ಅವರೇ ಕಾರಣ: "ಮಮತಾ ಅವರು ಇಂದು ತಲುಪಿರುವ ಅಸಹಾಯಕ ಸ್ಥಿತಿಯನ್ನು ನೋಡಿ ನನಗೆ ವೈಯಕ್ತಿಕವಾಗಿ ತುಂಬಾ ನೋವಾಗುತ್ತಿದೆ. ನಾನು ಇಂದು ರಾಜಕೀಯವಾಗಿ ಏನೇ ಆಗಿದ್ದರೂ ಅದಕ್ಕೆ ಅವರೇ ಕಾರಣ. ಇಂದು ಪಕ್ಷದಲ್ಲಿ ಅವರ ಮಾತನ್ನು ಯಾರೂ ಕೇಳುತ್ತಿಲ್ಲ ಇರಬಹುದು, ಆದರೆ ರೇಜಿನಗರ್ ಕ್ಷೇತ್ರದಲ್ಲಿ ಹುಮಾಯೂನ್ ಕಬೀರ್ ಆಡುವ ಮಾತೇ ಅಂತಿಮ ಎಂದು ಹೇಳುವ ಮೂಲಕ ತಮ್ಮ ಹಳೆಯ ನಾಯಕಿಯ ಮೇಲಿನ ಗೌರವವನ್ನು ವ್ಯಕ್ತಪಡಿಸಿದ್ದಾರೆ.
ಮೂರು ದಶಕಗಳ ಕಾಲ ಬಂಗಾಳವನ್ನು ಆಳಿದ ಮಮತಾ ಬ್ಯಾನರ್ಜಿ ಅವರು ತಮ್ಮ ಮಾಜಿ ಆಪ್ತನ ಈ ಆಫರ್ ಅನ್ನು ಸ್ವೀಕರಿಸಿ ರೇಜಿನಗರ್ ಕಡೆ ಮುಖ ಮಾಡುತ್ತಾರಾ ಅಥವಾ ಹೊಸ ತಂತ್ರ ಹೂಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ,(ಏಜೆನ್ಸೀಸ್​).