ಈಗ ರಸ್ತೆಯಲ್ಲಿ ವೇಪ್ ಸೇದುತ್ತಿರುವ ಬಾಲಕನ ವಿಡಿಯೋ ವೈರಲ್
- ಐಪಿಎಲ್ ಪಂದ್ಯದಲ್ಲಿ ಇ-ಸಿಗರೇಟ್ ಸೇದಿದ ರಿಯಾನ್ ಪರಾಗ್
- ಈಗ ರಸ್ತೆಯಲ್ಲಿ ವೇಪ್ ಸೇದುತ್ತಿರುವ ಬಾಲಕನ ವಿಡಿಯೋ ವೈರಲ್
- ಇದಕ್ಕೆ ಕ್ರಿಕೆಟ್ ಆಟಗಾರನೇ ಕಾರಣ ಎಂದ ನೆಟ್ಟಿಗರು
ವೈರಲ್: ಕಳೆದ ಕೆಲ ದಿನಗಳಿಂದ ಭಾರತದಲ್ಲಿ ಇ- ಸಿಗರೇಟ್ (E Cigarette) ಅಥವಾ ವೇಪ್ ಕುರಿತಾದ ಚರ್ಚೆ ಮುನ್ನಲೆಗೆ ಬಂದಿದೆ. ಏಪ್ರಿಲ್ 28 ರಂದು ನಡೆದ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ರಿಯಾನ್ ಪರಾಗ್ ಈ ಕೆಲಸವನ್ನು ಮಾಡಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿತ್ತು.
ಈದೀಗ ಸರಿಯಾಗಿ 18 ವರ್ಷವನ್ನು ದಾಟದ ಹುಡುಗನೊಬ್ಬ ರಸ್ತೆಯಲ್ಲಿ ನಿಷೇಧಿತ ಇ-ಸಿಗರೇಟನ್ನು ಸೇದುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾನಲ್ಲಿ ವೈರಲ್ (Viral Video) ಆಗುತ್ತಿದೆ.
ವಿಡಿಯೋನಲ್ಲೇನಿದೆ?
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋನಲ್ಲಿ ಹೆಚ್ಚು ಕಡಿಮೆ 14-15 ವಯಸ್ಸಿನ ಬಾಲಕನೊಬ್ಬ ಕೈಯಲ್ಲಿ ಇ-ಸಿಗರೇಟ್ (ವೇಪ್) ನ್ನು ಬಾಯಲ್ಲಿ ಇಟ್ಟುಕೊಂಡು ಹೊಗೆ ಬೀಡುತ್ತಿರುವುದನ್ನು ನೋಡಬಹುದಾಗಿದೆ. ಈ ಕೆಲಸವನ್ನು ಬಾಲಕ ಯಾವುದೋ ಗಪ್ತ ಸ್ಥಳದಲ್ಲಿ ಅಲ್ಲ; ನೂರಾರು ವಾಹನಗಳು ಮತ್ತು ಸಾರ್ವಜನಿಕರು ಓಡಾಡುವ ರಸ್ತೆಯಲ್ಲೇ ಸೇದುತ್ತಾ ನಿಂತಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ನೆಟ್ಟಿಗರು ಏನಂತಾರೆ?
ಈ ವಿಡಿಯೋ ಸೋಷಿಯಲ್ ಮೀಡಿಯಾನಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರ ಪಿತ್ತ ನೆತ್ತಿಗೇಡರಿದೆ. ಈ ವಿಡಿಯೋ ನೋಡಿದರೆ, ಯಾರೋ ಈ ಹುಡುಗನಿಗೆ ಸಿಗರೇಟನ್ನು ಕೊಟ್ಟು ಸೇದು ಎಂಬತಿದೆ ಎಂದು ಒಬ್ಬರು ಅನುಮಾನ ವ್ಯಕ್ತ ಪಡಿಸಿದ್ದರೆ.
ನನ್ನ ಪ್ರಕಾರ ಈ ಬಾಲಕ, ಆ ರಿಯಾನ್ ಪರಾಗ್ನನ್ನೇ ಅನುಕರಣೆ ಮಾಡಿದ್ದಾನೆ ಅನ್ನಿಸುತ್ತದೆ ಎಂದು ಇನ್ನೊಬ್ಬರು ಹೇಳಿದ್ದಾರೆ. ನಮ್ಮ ದೇಶದಲ್ಲಿ ಕಾನೂನಿಗೆ ಬೆಲೆಯೇ ಇಲ್ಲವಾಗಿದೆ ಎಂದು ಮತ್ತೊಬ್ಬರು ಆಕ್ರೋಶವನ್ನು ಹೊರಹಾಕಿದ್ದಾರೆ.
ರಿಯಾನ್ನಿಂದ ವೇಪಿಂಗ್!
ಏಪ್ರಿಲ್ 28 ರಂದು, ಪಂಜಾಬ್ನ ಪಿಸಿಎ ಕ್ರೀಡಾಂಗಣದಲ್ಲಿ ನಡೆದ 19 ನೇ ಸಾಲಿನ ಐಪಿಎಲ್ನ 40 ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ, ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸುವ ಮೂಲಕ ಪಂಜಾಬ್ನ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿತು.
ಆದರೆ ಇದೇ ಪಂದ್ಯಾವಳಿಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ರಿಯಾನ್ ಪರಾಗ್ ಡ್ರೆಸಿಂಗ್ ರೂಮ್ನಲ್ಲಿ ವೇಪ್ (ಇಲೆಕ್ಟ್ರಾನಿಕ್ ಸಿಗರೇಟ್) ಸೇದುತ್ತಿರುವ ದೃಶ್ಯವೊಂದು ಕ್ಯಾಮರಾದ ಕಣ್ಣಿನಲ್ಲಿ ಸೆರೆಯಾಗಿದ್ದು, ಈ ವಿಡಿಯೋ ಸೋಷಿಯಲ್ ಮೀಡಿಯಾನಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿತ್ತು.
ಈ ಘಟನೆಯಿಂದ ಎಚ್ಚೆತ್ತ ಬಿಸಿಸಿಐ, ರಿಯಾನ್ ಪರಾಗ್ಗೆ ಪಂದ್ಯದ ಶೇ. 25 ರಷ್ಟು ಮೊತ್ತವನ್ನು ದಂಡದ ರೂಪದಲ್ಲಿ ಪಾವತಿಸುವಂತೆ ಹೇಳಿತ್ತು. ಮತ್ತೆ ಈ ರೀತಿಯ ಘಟನೆಗಳು ನಡೆಯದಂತೆ ನೋಡಿಕೊಳ್ಳಲಾಗುವುದು ಎನ್ನುವುದು, ಬಿಸಿಸಿಐನ ವಾಗ್ದಾನವಾಗಿದೆ.
ಕಾನೂನು ಏನು ಹೇಳುತ್ತದೆ?
ಭಾರತ ಸರ್ಕಾರವು 2019ರಲ್ಲಿ ಎಲೆಕ್ಟ್ರಾನಿಕ್ ಸಿಗರೇಟ್ ನಿಷೇಧ ಕಾಯ್ದೆ (PECA - Prohibition of Electronic Cigarettes Act) ಅಡಿಯಲ್ಲಿ ಇ-ಸಿಗರೇಟ್ ಮತ್ತು ವೇಪ್‌ಗಳನ್ನು ಸಂಪೂರ್ಣವಾಗಿ ನಿಷೇಧಿಸಿದೆ.
ಈ ಕಾಯ್ದೆಯ ಪ್ರಕಾರ, ಇ-ಸಿಗರೇಟ್ ಮತ್ತು ವೇಪ್‌ಗಳ ಉತ್ಪಾದನೆ ಮತ್ತು ತಯಾರಿಕೆ, ಆಮದು ಮತ್ತು ರಫ್ತು, ಸಂಗ್ರಹಣೆ ಮತ್ತು ಮಾರಾಟ ಅಂತೆಯೇ ಯಾವುದೇ ರೀತಿಯ ಜಾಹೀರಾತನ್ನು ಮಾಡುವಂತಿಲ್ಲ ಎಂಬ ನಿಯಮವಿದೆ.
ಮೊದಲ ಬಾರಿಗೆ ಈ ನಿಯಮಗಳನ್ನು ಮೀರಿದರೆ 1 ವರ್ಷದವರೆಗೆ ಜೈಲು ಶಿಕ್ಷೆ ಅಥವಾ 1 ಲಕ್ಷ ರೂಪಾಯಿವರೆಗೆ ದಂಡ, ಎರಡಕ್ಕಿಂತ ಹೆಚ್ಚು ಬಾರಿ ಉಲ್ಲಂಘಿಸಿದರೆ 3 ವರ್ಷದವರೆಗೆ ಜೈಲು ಶಿಕ್ಷೆ ಮತ್ತು 5 ಲಕ್ಷ ರೂಪಾಯಿವರೆಗೆ ದಂಡ ವಿಧಿಸಲಾಗುತ್ತದೆ. ಹಾಗೆಯೇ ಇ-ಸಿಗರೇಟ್ ಮತ್ತು ವೇಪ್‌ಗಳ ಸಂಗ್ರಹಣೆಯನ್ನು ಮಾಡಿದಲ್ಲಿ, 6 ತಿಂಗಳವರೆಗೆ ಜೈಲು ಶಿಕ್ಷೆ ಅಥವಾ 50,000 ರೂಪಾಯಿ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ, (ಏಜನ್ಸೀಸ್).