ಹಿಮಾಚಲದಲ್ಲಿ ಆಡಳಿತರೂಢ ಕಾಂಗ್ರೆಸ್‌ಗೆ ಮುಖಭಂಗ!; ೪ ಮಹಾನಗರ ಪಾಲಿಕೆಗಳ ಪೈಕಿ ೩ರಲ್ಲಿ ಬಿಜೆಪಿ ಜಯಭೇರಿ!
ಶಿಮ್ಲಾ: ಮುಂದಿನ ವರ್ಷ ನಡೆಯಲಿರುವ ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣೆಗೆ ಮುನ್ನವೇ ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಚಾಟಿ ಬೀಸಿರುವ ಅಲ್ಲಿನ ಮತದಾರ ಪ್ರಭು, ಭೀಕರ ಆಘಾತ ನೀಡಿದ್ದಾನೆ. ಮೇ 17 ರಂದು ನಡೆದಿದ್ದ ರಾಜ್ಯದ ೪ ಪ್ರಮುಖ ಮಹಾನಗರ ಪಾಲಿಕೆಗಳ ಚುನಾವಣಾ ಫಲಿತಾಂಶ(Himachal Pradesh Local Body Elections) ಭಾನುವಾರ ಪ್ರಕಟವಾಗಿದ್ದು, ಆಡಳಿತರೂಢ ಕಾಂಗ್ರೆಸ್ ಅನ್ನು ಧೂಳೀಪಟ ಮಾಡಿರುವ ಭಾರತೀಯ ಜನತಾ ಪಾರ್ಟಿ (BJP) ಬರೋಬ್ಬರಿ 3 ಮಹಾನಗರ ಪಾಲಿಕೆಗಳನ್ನು ತನ್ನ ಮುಷ್ಟಿಗೆ ತೆಗೆದುಕೊಂಡಿದೆ. ಕಾಂಗ್ರೆಸ್ ಕೇವಲ ಒಂದು ಪಾಲಿಕೆಗೆ ತೃಪ್ತಿಪಡಬೇಕಾಗಿ ಬಂದಿದೆ.
ಹಿಮಾಚಲ ಪ್ರದೇಶದ ರಾಜ್ಯ ಚುನಾವಣಾ ಆಯೋಗ (SEC) ಬಿಡುಗಡೆ ಮಾಡಿರುವ ಅಧಿಕೃತ ಅಂಕಿ-ಅಂಶಗಳ ಪ್ರಕಾರ, ಕೇಸರಿ ಪಡೆ ಮಂಡಿ, ಧರ್ಮಶಾಲಾ ಮತ್ತು ಸೋಲನ್ ಮಹಾನಗರ ಪಾಲಿಕೆಗಳಲ್ಲಿ ಭರ್ಜರಿ ಬಹುಮತದೊಂದಿಗೆ ವಿಜಯಮಾಲೆ ಧರಿಸಿದೆ. ಕಾಂಗ್ರೆಸ್ ಕೇವಲ ಪಾಲಂಪುರ ಪಾಲಿಕೆಯನ್ನು ಮಾತ್ರ ಉಳಿಸಿಕೊಳ್ಳಲು ಯಶಸ್ವಿಯಾಗಿದೆ.
ವಾರ್ಡ್‌ವಾರು ಫಲಿತಾಂಶದ ಕಂಪ್ಲೀಟ್ ರಿಪೋರ್ಟ್: ಕಾಂಗ್ರೆಸ್ ಕೋಟೆಗಳು ಧ್ವಂಸ!
ರಾಜ್ಯದ ಪ್ರಮುಖ ನಗರಗಳಲ್ಲಿ ಕಾಂಗ್ರೆಸ್ ನಾಯಕರ ಪ್ರಭಾವವನ್ನು ಕಂಪ್ಲೀಟ್ ಆಗಿ ಮಣ್ಣುಮುಕ್ಕಿಸಿರುವ ಬಿಜೆಪಿ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ.
ಮಂಡಿ ಮಹಾನಗರ ಪಾಲಿಕೆ: ಒಟ್ಟು 15 ವಾರ್ಡ್‌ಗಳ ಪೈಕಿ ಬಿಜೆಪಿ ಬರೋಬ್ಬರಿ 12 ವಾರ್ಡ್‌ಗಳನ್ನು ಗೆದ್ದು ಬೀಗಿದೆ. ಆಡಳಿತರೂಢ ಕಾಂಗ್ರೆಸ್ ಕೇವಲ 1 ಸ್ಥಾನಕ್ಕೆ ಸಿಕ್ಕಿಬಿದ್ದಿದ್ದು, ಉಳಿದ ಸ್ಥಾನಗಳು ಪಕ್ಷೇತರರ ಪಾಲಾಗಿವೆ.
ಸೋಲನ್ ಮಹಾನಗರ ಪಾಲಿಕೆ: ಒಟ್ಟು ೧೭ ವಾರ್ಡ್‌ಗಳ ಪೈಕಿ ಬಿಜೆಪಿ 10 ಸ್ಥಾನಗಳನ್ನು ಭರ್ಜರಿಯಾಗಿ ಮುಡಿಗೇರಿಸಿಕೊಂಡಿದೆ. ಇಲ್ಲಿ ಕಾಂಗ್ರೆಸ್ ಕೇವಲ 6 ಸ್ಥಾನಗಳನ್ನು ಗೆಲ್ಲಲಷ್ಟೇ ಶಕ್ತವಾಗಿದ್ದು, ಒಂದು ಸ್ಥಾನ ಪಕ್ಷೇತರ ಅಭ್ಯರ್ಥಿ ಪಾಲಾಗಿದೆ.
ಧರ್ಮಶಾಲಾ ಮಹಾನಗರ ಪಾಲಿಕೆ: ಇಲ್ಲೂ ಸಹ ಒಟ್ಟು 17 ವಾರ್ಡ್‌ಗಳ ಪೈಕಿ ಬಿಜೆಪಿ 11 ಸ್ಥಾನಗಳನ್ನು ಕಸಿದುಕೊಂಡಿದ್ದು, ಕಾಂಗ್ರೆಸ್ ಕೇವಲ 5 ಸ್ಥಾನಗಳಿಗೆ ಧೂಳೀಪಟವಾಗಿದೆ. ಇಲ್ಲೂ ಒಂದು ಸ್ಥಾನ ಪಕ್ಷೇತರರ ಪಾಲಾಗಿದೆ.
ಪಾಲಂಪುರ ಮಹಾನಗರ ಪಾಲಿಕೆ: ಈ ಒಂದು ಪಾಲಿಕೆಯಲ್ಲಿ ಮಾತ್ರ ಕಾಂಗ್ರೆಸ್ ತನ್ನ ಅಸ್ತಿತ್ವ ಉಳಿಸಿಕೊಂಡಿದ್ದು, ೧೫ ವಾರ್ಡ್‌ಗಳ ಪೈಕಿ 11 ರಲ್ಲಿ ಜಯಗಳಿಸಿದೆ. ಬಿಜೆಪಿ ಕೇವಲ 4 ಸ್ಥಾನಗಳನ್ನಷ್ಟೇ ಪಡೆದಿದೆ.
"ಮುಂದಿನ ವರ್ಷ ಕಾಂಗ್ರೆಸ್ ಕಂಪ್ಲೀಟ್ ವಾಶ್‌ಔಟ್" -ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರ ಹುಂಕಾರ!
ಈ ವಿಜಯದಿಂದ ಬೀಗುತ್ತಿರುವ ಬಿಜೆಪಿ ನಾಯಕರು, 2027 ರ ದ್ವಿತೀಯಾರ್ಧದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಮಲ ಅರಳುವುದು ಶತಸ್ಸಿದ್ಧ ಎಂದು ಭವಿಷ್ಯ ನುಡಿದಿದ್ದಾರೆ. ಫಲಿತಾಂಶದ ಕುರಿತು ಮಾತನಾಡಿದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ರಾಜೀವ್ ಬಿಂದಾಲ್, ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಹಿಮಾಚಲದ ಜನತೆ ಕಂಪ್ಲೀಟ್ ಆಗಿ ತಿರಸ್ಕರಿಸಿದ್ದಾರೆ ಎಂಬುದಕ್ಕೆ ಈ ಫಲಿತಾಂಶವೇ ಸಾಕ್ಷಿ. ಮುಂದಿನ ವರ್ಷದ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರದಿಂದ ಸಂಪೂರ್ಣವಾಗಿ ವಾಶ್‌ಔಟ್ ಆಗಲಿದೆ ಎಂದು ಲೇವಡಿ ಮಾಡಿದ್ದಾರೆ.
ಈ ಬಗ್ಗೆ ANIನೊಂದಿಗೆ ಮಾತನಾಡಿದ ಬಿಂದಾಲ್, ನಗರ ಸ್ಥಳೀಯ ಸಂಸ್ಥೆಗಳ (ULB) ಒಟ್ಟು 25 ಮುನ್ಸಿಪಲ್ ಕೌನ್ಸಿಲ್‌ಗಳ ಪೈಕಿ 18 ರಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಭೀಕರ ಜಯ ದಾಖಲಿಸಿದ್ದಾರೆ ಮತ್ತು 22 ನಗರ ಪಂಚಾಯತ್‌ಗಳ ಪೈಕಿ 12 ರಲ್ಲಿ ಬಿಜೆಪಿ ವಿಜಯಶಾಲಿಯಾಗಿದೆ ಎಂದು ಅಂಕಿ-ಅಂಶ ನೀಡಿದ್ದಾರೆ. ಸುಖು ಸರ್ಕಾರದ ಕುಶಾಸನ, ಯುವ ವಿರೋಧಿ, ಮಹಿಳಾ ವಿರೋಧಿ ಮತ್ತು ರೈತ ವಿರೋಧಿ ನೀತಿಗಳಿಗೆ ಮತದಾರರು ತಕ್ಕ ಪಾಠ ಕಲಿಸಿದ್ದಾರೆ ಎಂದು ಬಿಂದಾಲ್ ಘರ್ಜಿಸಿದ್ದಾರೆ.
ಕಳೆದ ೨೦೨೧ ರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಮಂಡಿ ಮತ್ತು ಧರ್ಮಶಾಲಾವನ್ನು ಮಾತ್ರ ಗೆದ್ದಿದ್ದರೆ, ಕಾಂಗ್ರೆಸ್ ಸೋಲನ್ ಮತ್ತು ಪಾಲಂಪುರವನ್ನು ತನ್ನದಾಗಿಸಿಕೊಂಡಿತ್ತು. ಆದರೆ ಈ ಬಾರಿ ಸೋಲನ್ ಕೋಟೆಯನ್ನೂ ಕಾಂಗ್ರೆಸ್ ಕೈಯಿಂದ ಬಿಜೆಪಿ ಕಸಿದುಕೊಂಡಿದ್ದು, ಸಿಎಂ ಸುಖು ಅವರ ಆಡಳಿತ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಈ ಫಲಿತಾಂಶವು ರಾಷ್ಟ್ರ ರಾಜಕಾರಣದಲ್ಲೂ ಭಾರಿ ಸಂಚಲನ ಮೂಡಿಸಿದ್ದು, ಹಿಮಾಚಲದಲ್ಲಿ ಕಾಂಗ್ರೆಸ್ ಅಸ್ತಿತ್ವಕ್ಕೆ ಭೀಕರ ಕುತ್ತು ತಂದಿದೆ,(ಏಜೆನ್ಸೀಸ್).