ಆಗಸದಲ್ಲಿ ಕಂಡ ತೇಲುವ ಕಪ್ಪು ಆಕೃತಿ...ಸತ್ತವನ ಆತ್ಮವೇ ನೀಡಿತು ಕೊಲೆಗಾರನ ಸುಳಿವು: ಶಾಕಿಂಗ್​ ಸಂಗತಿ ಬಿಚ್ಚಿಟ್ಟ ಮಾಜಿ ಡಿಜಿಪಿ! Ghost 
ದೇಶ

ಆಗಸದಲ್ಲಿ ಕಂಡ ತೇಲುವ ಕಪ್ಪು ಆಕೃತಿ...ಸತ್ತವನ ಆತ್ಮವೇ ನೀಡಿತು ಕೊಲೆಗಾರನ ಸುಳಿವು: ಶಾಕಿಂಗ್​ ಸಂಗತಿ ಬಿಚ್ಚಿಟ್ಟ ಮಾಜಿ ಡಿಜಿಪಿ! Ghost

ಪ್ರಮುಖ ಮುಖ್ಯಾಂಶಗಳು

  • ತಮಗೆ ಐದು ಬಾರಿ ಭೂತದ ಅನುಭವವಾಗಿದೆ ಎಂದ ಕೇರಳದ ಮಾಜಿ ಡಿಜಿಪಿ ಅಲೆಕ್ಸಾಂಡರ್ ಜೇಕಬ್
  • ಇತ್ತೀಚೆಗೆ '24 ನ್ಯೂಸ್' ವಾಹಿನಿಯ 'ತಮ್ಮಿಲ್ ತಮ್ಮಿಲ್' ಚರ್ಚಾ ಕಾರ್ಯಕ್ರಮದಲ್ಲಿ ಜೇಕಬ್​ ಅಚ್ಚರಿ ಹೇಳಿಕೆ
  • ಆತ್ಮವೊಂದನ್ನು ಆಹ್ವಾನಿಸುವ ಮೂಲಕ ತಮ್ಮ ಕೊಲೆ ಪ್ರಕರಣವನ್ನು ಭೇದಿಸಿದ್ದಾಗಿ ತಿಳಿಸಿದ ಮಾಜಿ ಅಧಿಕಾರಿ
  • ತನಿಖೆಯಲ್ಲಿ ಯಾವುದೇ ಸುಳಿವು ಸಿಗದಿದ್ದಾಗ ಅತೀಂದ್ರಿಯ ಶಕ್ತಿಗಳ ಮೊರೆ ಹೋದ ಅಪರೂಪದ ಘಟನೆ
Ghost : ಕೇರಳ ರಾಜಧಾನಿ ತಿರುವನಂತಪುರದ ಮಾಜಿ ಡಿಜಿಪಿ ಅಲೆಕ್ಸಾಂಡರ್ ಜೇಕಬ್ ಅವರು ತಮಗೆ ಐದು ಬಾರಿ ಭೂತದ ಅನುಭವವಾಗಿದೆ ಎಂದು ಬಹಿರಂಗವಾಗಿ ಹೇಳಿಕೊಳ್ಳುವ ಮೂಲಕ ಸಾರ್ವಜನಿಕರಲ್ಲಿ ಕುತೂಹಲ ಮೂಡಿಸಿದ್ದಾರೆ.
ಇತ್ತೀಚೆಗೆ '24 ನ್ಯೂಸ್' ವಾಹಿನಿಯ 'ತಮ್ಮಿಲ್ ತಮ್ಮಿಲ್' ಚರ್ಚಾ ಕಾರ್ಯಕ್ರಮದಲ್ಲಿ ಜೇಕಬ್​ ಅವರು ಈ ವಿಷಯವನ್ನು ಬಹಿರಂಗಪಡಿಸಿದರು. ಆತ್ಮವೊಂದನ್ನು ಆಹ್ವಾನಿಸುವ ಮೂಲಕ ತಮ್ಮ ಕೊಲೆ ಪ್ರಕರಣವನ್ನು ಭೇದಿಸಿದ್ದಾಗಿ ತಿಳಿಸಿದ್ದಾರೆ. ಮನುಷ್ಯನ ಪಂಚೇಂದ್ರಿಯಗಳಿಗೆ ನೋಡುವ ಮತ್ತು ಕೇಳುವ ಕೆಲವು ಮಿತಿಗಳಿದ್ದು, ಈ ಇಂದ್ರಿಯಗಳಿಗೆ ನಿಲುಕದ ಅದೃಶ್ಯ ಪ್ರಪಂಚದಿಂದ ಇಂತಹ ಅನುಭವಗಳು ಉಂಟಾಗುತ್ತವೆ ಎಂಬುದು ಜೇಕಬ್​ ಅವರ ಅಭಿಪ್ರಾಯವಾಗಿದೆ. ಒಬ್ಬ ಉನ್ನತ ಪೊಲೀಸ್ ಅಧಿಕಾರಿಯಾಗಿದ್ದವರು ಇಂತಹ ಅಲೌಕಿಕ ವಿಷಯಗಳ ಬಗ್ಗೆ ಮಾತನಾಡಿರುವುದು ಈಗ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ತನಿಖೆಯಲ್ಲಿ ಯಾವುದೇ ಸುಳಿವು ಸಿಗದಿದ್ದಾಗ ಅತೀಂದ್ರಿಯ ಶಕ್ತಿಗಳ ಮೊರೆ ಹೋದ ಅಪರೂಪದ ಘಟನೆಯನ್ನು ಜೇಕಬ್ ಬಹಿರಂಗಪಡಿಸಿದ್ದಾರೆ. ಪಯ್ಯನ್ನೂರಿನಲ್ಲಿ ನಡೆದ ಅಂಗಡಿಕಾರನ ಕೊಲೆ ಪ್ರಕರಣದಲ್ಲಿ ಐದು ದಿನಗಳ ತನಿಖೆಯ ನಂತರವೂ ಯಾವುದೇ ಸಾಕ್ಷ್ಯ ಸಿಗದಿದ್ದಾಗ, ಅಂದಿನ ಡಿ.ವೈ.ಎಸ್.ಪಿ ಅವರ ಸೂಚನೆಯಂತೆ ಮುಂಡಕ್ಕಾಯಂನಿಂದ ಬಂದ ವ್ಯಕ್ತಿಗಳು ಮೃತನ ಆತ್ಮವನ್ನು ಬಾಲಕನೊಬ್ಬನ ದೇಹಕ್ಕೆ ಆವಾಹಿಸುವ ಮೂಲಕ ಕೊಲೆಗಾರರ ಬಗ್ಗೆ ಮಾಹಿತಿ ಪಡೆದಿದ್ದರು. ಈ ರೀತಿಯ ಮಾಹಿತಿಯನ್ನು ನ್ಯಾಯಾಲಯದಲ್ಲಿ ಸಾಕ್ಷ್ಯವಾಗಿ ಬಳಸಲು ಸಾಧ್ಯವಿಲ್ಲದಿದ್ದರೂ, ಅದರ ಆಧಾರದ ಮೇಲೆ ನಡೆಸಿದ ಮುಂದಿನ ತನಿಖೆ ಮತ್ತು ವೈಜ್ಞಾನಿಕ ಪುರಾವೆಗಳಿಂದ ಕೊನೆಗೆ ಆರೋಪಿಗಳನ್ನು ಬಂಧಿಸಲು ಸಾಧ್ಯವಾಯಿತು. ಇಂತಹ ಐದು ಅನುಭವಗಳು ತಮ್ಮ ಜೀವನದಲ್ಲಿ ನಡೆದಿವೆ ಎಂದು ಜೇಕಬ್ ಅವರು ವಿವರಿಸಿದ್ದಾರೆ.
ಪಯ್ಯನೂರು ಬಳಿಕ ನಂತರ ಅಟ್ಟಿಂಗಲ್‌ನಲ್ಲಿಯೂ ಒಂದು ಘಟನೆ ನಡೆಯಿತು. ಅಟ್ಟಿಂಗಲ್​ ಪೊಲೀಸ್ ಸ್ಟೇಷನ್ ವ್ಯಾಪ್ತಿಯ ಮನೆಯೊಂದರಲ್ಲಿ ರಾತ್ರಿಯ ವೇಳೆ ನಿಗೂಢವಾಗಿ ಬೆಲ್ ಮೊಳಗುತ್ತಿದ್ದ ಘಟನೆಯನ್ನು ಸಿಸಿಟಿವಿ ಕ್ಯಾಮೆರಾದಲ್ಲಿ ಪರಿಶೀಲಿಸಿದಾಗ, ಕಪ್ಪು ಆಕೃತಿಯೊಂದು ಗಾಳಿಯಲ್ಲಿ ತೇಲುತ್ತಾ ಬಂದು ಬೆಲ್ ಒತ್ತುತ್ತಿರುವುದು ಕಂಡುಬಂದಿತು. ಈ ದೃಶ್ಯವು ಸ್ಥಳೀಯರಲ್ಲಿ ತೀವ್ರ ಆತಂಕ ಮೂಡಿಸಿತ್ತು. ತನಿಖೆಯ ನಂತರ, ಆ ಮನೆಯಲ್ಲಿದ್ದ ಮಹಿಳೆಯನ್ನು ಪ್ರೀತಿಸಿ ವಿಫಲನಾಗಿ ಆತ್ಮಹತ್ಯೆ ಮಾಡಿಕೊಂಡಿದ್ದ ವ್ಯಕ್ತಿಯ ಆತ್ಮವೇ ಈ ಕೃತ್ಯ ಎಸಗುತ್ತಿದೆ ಎಂದು ಗೊತ್ತಾಯಿತು ಎಂದು ಜೇಕಬ್​ ಹೇಳಿದ್ದಾರೆ.
ಎಟ್ಟುಮನೂರಿನಲ್ಲೂ ಒಂದು ಘಟನೆ ನಡೆದಿದೆ. ಮನೆಯಲ್ಲಿ ದೆವ್ವ ಇದೆ ಎಂದು ಪೊಲೀಸರಿಗೆ ಮಾಹಿತಿ ನೀಡಿದಾಗ, ಪೊಲೀಸರು ಒಂದು ಕ್ಯಾಮೆರಾ ಅಳವಡಿಸಿದರು. ಸಾಯುವ ಮೊದಲು, ಸತ್ತ ವ್ಯಕ್ತಿಯ ಆತ್ಮವು ಅಲ್ಲಿಗೆ ಬಂದು, ಒಂದು ಪುಸ್ತಕವನ್ನು ತೆರೆದು ಓದಿತು. ಈ ಎಲ್ಲಾ ಘಟನೆಗಳನ್ನು ನಾನು ನೇರವಾಗಿ ನೋಡಿದೆ ಎಂದು ಅಲೆಕ್ಸಾಂಡರ್ ಜೇಕಬ್ ಅವರು ಹೇಳಿದ್ದಾರೆ. ಜೇಕಬ್​ ಅವರ ಮಾತುಗಳು ಇದೀಗ ಸಾರ್ವಜನಿಕವಾಗಿ ಭಾರಿ ಚರ್ಚಗೆ ಗ್ರಾಸವಾಗಿದೆ, (ಏಜೆನ್ಸೀಸ್​).